AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Eid al-Adha 2021: ಕರ್ನಾಟಕದಲ್ಲಿ ಬಕ್ರೀದ್ ಹಬ್ಬ ಯಾವಾಗ..? ಇಲ್ಲಿದೆ ಮಾಹಿತಿ

Bakrid Festival Guidelines: ಸಾಮಾನ್ಯವಾಗಿ ಮುಸ್ಲಿಮರು ಬಕ್ರೀದ್ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಅದರಂತೆ ಬೆಳಿಗ್ಗೆ ಮಸೀದಿ ಹಾಗೂ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಾರೆ. ಆದರೆ ಈ ಬಾರಿ ಕೂಡ ಕೋವಿಡ್ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಬ್ಬ ಆಚರಣೆಗೆ ಮಾರ್ಗಸೂಚಿಯೊಂದನ್ನು ಹೊರಡಿಸಿದೆ.

Eid al-Adha 2021: ಕರ್ನಾಟಕದಲ್ಲಿ ಬಕ್ರೀದ್ ಹಬ್ಬ ಯಾವಾಗ..? ಇಲ್ಲಿದೆ ಮಾಹಿತಿ
Eid Al Adha
TV9 Web
| Edited By: |

Updated on:Jul 19, 2021 | 6:33 PM

Share

ಮುಸ್ಲಿಮರು ಆಚರಿಸುವ ಎರಡು ಪ್ರಮುಖ ಹಬ್ಬಗಳೆಂದರೆ ರಂಜಾನ್ ಮತ್ತು ಬಕ್ರೀದ್. ರಂಜಾನ್ ಹಬ್ಬವನ್ನು ಈದುಲ್ ಫಿತ್ರ್ ಎಂದು ಕರೆದರೆ, ಬಕ್ರೀದ್ ಅನ್ನು ಈದ್ ಉಲ್ ಅಧಾ ಎನ್ನಲಾಗುತ್ತದೆ. ಇಸ್ಲಾಮಿಕ್ ಕ್ಯಾಲೆಂಡರ್‌ನ 12ನೇ ತಿಂಗಳು ಧು ಅಲ್-ಹಿಜ್ಜಾ( ದುಲ್​-ಹಜ್) ನ 10ನೇ ದಿನದಂದು ಈದ್ ಉಲ್-ಅಧಾವನ್ನು ಆಚರಿಸಲಾಗುತ್ತದೆ. ತ್ಯಾಗ-ಬಲಿದಾನದ ಪ್ರತೀಕವಾಗಿ ಆಚರಿಸಲಾಗುವ ಈ ಹಬ್ಬವನ್ನು ಸೌದಿ ಅರೇಬಿಯಾದಲ್ಲಿ ಜುಲೈ 20ಕ್ಕೆ ಹಾಗೂ ಭಾರತದಲ್ಲಿ ಜುಲೈ 21 ರಂದು ಆಚರಿಸಲಾಗುತ್ತದೆ.

ಬಕ್ರೀದ್ ಹಬ್ಬದ ಮಹತ್ವವೇನು? ಮುಸ್ಲಿಮರಿಗೆ ಒಟ್ಟು ಐದು ಕಡ್ಡಾಯವಾಗಿ ಅನುಸರಿಸಬೇಕಾದ ಕಾರ್ಯಗಳಿವೆ. ಅವುಗಳಲ್ಲಿ ಹಜ್​ ಕೂಡ ಒಂದು. ಹಜ್ ಯಾತ್ರೆಯ ಮೊದಲ ದಿನ ಅರಫಾತ್ ದಿನವನ್ನಾಗಿ ಆಚರಿಸಿದರೆ, 2ನೇ ದಿನವೇ ಬಕ್ರೀದ್. ಹೀಗಾಗಿಯೇ ಮುಸ್ಲಿಮರ ಪಾಲಿಗೆ ಈದ್ ಉಲ್ ಅಧಾ ಮಹತ್ವದ ಹಬ್ಬವಾಗಿದೆ.

ಈ ಹಬ್ಬವನ್ನೇಕೆ ತ್ಯಾಗ ಬಲಿದಾನದ ಹಬ್ಬ ಅಥವಾ ಬಕ್ರೀದ್ ಎನ್ನಲಾಗುತ್ತೆ? ಸುಮಾರು 1400 ವರ್ಷಗಳ ಹಿಂದೆ ಪ್ರವಾದಿ ಇಬ್ರಾಹೀಮ್ ಅವರನ್ನು ಅಲ್ಲಾಹ್ ಪರೀಕ್ಷೆಗೆ ಒಳಪಡಿಸುತ್ತಾರೆ. ತಮ್ಮ ಅತ್ಯಂತ ಪ್ರೀತಿ ಪಾತ್ರರಾದ ಮಗ ಇಸ್ಮಾಯೀಲ್ ರನ್ನೂ ದೇವರಿಗಾಗಿ ಬಲಿದಾನ ಕೊಡಲು ಆಜ್ಞಾಪಿಸುತ್ತಾರೆ. ಸ್ವಂತ ಮಗನನ್ನೇ ದೇವರಿಗೆ ಅರ್ಪಿಸಲು ಮುಂದಾದ ಪ್ರವಾದಿಯವರ ಭಕ್ತಿ, ಶ್ರದ್ಧೆ ಮತ್ತು ತ್ಯಾಗಕ್ಕೆ ಮೆಚ್ಚಿದ ದೇವರು ಅವರ ಮಗನ ಸ್ಥಾನದಲ್ಲಿ ಕುರಿಯೊಂದನ್ನು ಬಲಿನೀಡುವಂತೆ ತಿಳಿಸುತ್ತಾರೆ. ಅದರಂತೆ ಇಬ್ರಾಹಿಂ ಅವರು ಕುರಿಯನ್ನು ಬಲಿ ನೀಡುತ್ತಾರೆ. ಅಂದು ಕುರಿಯನ್ನು ಬಲಿ ನೀಡಿದ್ದರಿಂದ ಈ ಹಬ್ಬವನ್ನು ಬಕ್ರೀದ್ ಎನ್ನಲಾಗುತ್ತದೆ. ಅಂದರೆ ಇಲ್ಲಿ ಬಕ್ರ್ ಅಂದರೆ ಕುರಿ, ಈದ್ ಎಂದರೆ ಹಬ್ಬ. ಬಕ್ರ್+ಈದ್ ಬಕ್ರೀದ್ ಆಗಿದೆ.

ಈ ತ್ಯಾಗದ ಕುರುಹಾಗಿ ಮುಸ್ಲಿಮರು ಈದ್ ಉಲ್ ಅಧಾ ದಿವಸ ಮೇಕೆ ಅಥವಾ ಕುರಿಯನ್ನು ಬಲಿ ನೀಡುತ್ತಾರೆ. ಸಂಪ್ರದಾಯದ ಪ್ರಕಾರ, ಬಲಿ ನೀಡಲಾದ ಮಾಂಸವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಒಂದು ಭಾಗವು ಕುಟುಂಬ ವರ್ಗ, ಸ್ನೇಹಿತರು ಮತ್ತು ನೆರೆಹೊರೆಯವರಿಗೆ, ಎರಡನೇ ಭಾಗವನ್ನು ಬಡವರು ಮತ್ತು ನಿರ್ಗತಿಕರಿಗೆ ವಿತರಿಸಲಾಗುತ್ತದೆ. ಹಾಗೆಯೇ ಮೂರನೇ ಭಾಗವನ್ನು ಕುಟುಂಬಕ್ಕೆ ಮೀಸಲಿಡಲಾಗುತ್ತದೆ. ಆದರೆ ವಾಸ್ತವವಾಗಿ ಇಲ್ಲಿ ಕುರಿ ಸಾಂಕೇತಿಕವಷ್ಟೇ. ಬದಲಾಗಿ ಈ ಹಬ್ಬವು ಮನುಷ್ಯನ ಮನಸ್ಸಿನಲ್ಲಿರುವ ಮತ್ಸರ, ಲೋಭ, ಮೋಹ ಮೊದಲಾದವುಗಳನ್ನು ಬಲಿ ನೀಡಬೇಕೆಂಬುದನ್ನು ಸೂಚಿಸುತ್ತದೆ.

ಸರಳ ಆಚರಣೆಗೆ ಸೂಚನೆ: ಸಾಮಾನ್ಯವಾಗಿ ಮುಸ್ಲಿಮರು ಬಕ್ರೀದ್ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಅದರಂತೆ ಬೆಳಿಗ್ಗೆ ಮಸೀದಿ ಹಾಗೂ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಾರೆ. ಆದರೆ ಈ ಬಾರಿ ಕೂಡ ಕೋವಿಡ್ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಬ್ಬ ಆಚರಣೆಗೆ ಮಾರ್ಗಸೂಚಿಯೊಂದನ್ನು ಹೊರಡಿಸಿದೆ. ಸರ್ಕಾರದ ಈ ಆದೇಶದಂತೆ ಈ ಬಾರಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿಷೇಧ ಹೇರಲಾಗಿದೆ. ಹಾಗೆಯೇ ಮಸೀದಿಗಳಲ್ಲಿ ಒಂದು ಬಾರಿ 50 ಜನರು ಮಾತ್ರ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಪ್ರಾರ್ಥನಾ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯವಾಗಿದ್ದು, ಪ್ರಾರ್ಥನೆ ನಿರ್ವಹಿಸುವಾಗ ಪ್ರತಿಯೊಬ್ಬರು ಕನಿಷ್ಠ ಆರು ಅಡಿಗಳ ಅಂತರ ಕಾಯ್ದುಕೊಳ್ಳಬೇಕು. ಪ್ರಾರ್ಥನೆ ಮಾಡಲು ಬೇಕಿರುವ ಮುಸಲ್ಲಾವನ್ನು (ಬಟ್ಟೆ) ಮನೆಯಿಂದಲೇ ತೆಗೆದುಕೊಂಡು ಹೋಗಬೇಕು. ಇನ್ನು ಪರಸ್ಪರ ಆಲಿಂಗನ ಮತ್ತು ಹಸ್ತಲಾಘವ ಮಾಡಬಾರದು. ಅಲ್ಲದೆ 65 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಈದ್ಗಾ ಅಥವಾ ಮಸೀದಿಗೆ ತೆರಳುವಂತಿಲ್ಲ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್‌ ಮತ್ತು ವಕ್ಫ್‌ ಇಲಾಖೆ ಸೂಚನೆ ನೀಡಿದೆ.

Published On - 4:54 pm, Mon, 19 July 21