
ಮುಸ್ಲಿಂ ಬಾಂಧವರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಈದ್-ಉಲ್-ಫಿತರ್ (Eid-ul-Fitr) ಹಬ್ಬ ಪ್ರಮುಖವಾದದ್ದು. ಒಂದು ತಿಂಗಳ ಪವಿತ್ರ ರಂಜಾನ್ ಉಪವಾಸದ ಬಳಿಕ ಬರುವ ಹಬ್ಬವೇ ಇದು. ಈ ಹಬ್ಬವು ಪವಿತ್ರ ರಂಜಾನ್ ಮಾಸದ ಅಂತ್ಯವನ್ನು ಸೂಚಿಸುತ್ತದೆ. ಮೂವತ್ತು ದಿನಗಳ ರಂಜಾನ್ ವ್ರತಾಚರಣೆ ಪೂರ್ಣಗೊಂಡ ಸಂತೋಷವನ್ನು ಈದ್ ಉಲ್ ಫಿತರ್ ((Eid-ul-Fitr) ಹಬ್ಬದ ಮೂಲಕ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ದಿನ ಮನೆ ಮಂದಿಯೆಲ್ಲಾ ಸೇರಿ ಹೊಸ ಉಡುಪು ಧರಿಸಿ, ನಮಾಜ್ ಮಾಡಿ, ಪರಸ್ಪರ ಶುಭಾಶಯ ವಿನಿಮಯ ಮಾಡಿ ಬಳಿಕ ವಿಶೇಷ ಖಾದ್ಯವನ್ನು ಸವಿದು ಹಬ್ಬವನ್ನು ಆಚರಿಸುತ್ತಾರೆ. ಅಷ್ಟೇ ಅಲ್ಲದೆ ಈ ದಿನ ಬಡವರಿಗೆ ದಾನ-ಧರ್ಮವನ್ನು ಮಾಡುವುದು ಕೂಡಾ ಈ ಹಬ್ಬದ ವಿಶೇಷವಾಗಿದೆ. ಈ ಬಾರಿ ರಂಜಾನ್ ಹಬ್ಬ ಯಾವಾಗ? ಈ ಹಬ್ಬದ ಹಿನ್ನೆಲೆ ಏನು? ಈ ಎಲ್ಲದರ ಮಾಹಿತಿಯನ್ನು ತಿಳಿಯಿರಿ.
ಈದ್-ಉಲ್-ಫಿತರ್ ಹಬ್ಬದ ನಿಖರವಾದ ದಿನಾಂಕ ಮತ್ತು ಸಮಯವನ್ನು ಅರ್ಧ ಚಂದ್ರ ದರ್ಶನದ ನಂತರ ದೃಢೀಕರಿಸಲಾಗುತ್ತದೆ. ಎಲ್ಲಾ ದೇಶಗಳಲ್ಲಿ ಹಬ್ಬದ ಸಮಯ ಮತ್ತು ದಿನಾಂಕಗಳು ಭಿನ್ನವಾಗಿರುತ್ತವೆ. ಮಾರ್ಚ್ 31 ಅಥವಾ ಏಪ್ರಿಲ್ 01 ಈ ಬಾರಿಯ ಹಬ್ಬ ಯಾವಾಗ ಎಂದು ಹಲವರಲ್ಲಿ ಗೊಂದಲವಿದೆ. ಇಂದು ಶವ್ವಾಲ್ ಅರ್ದಚಂದ್ರ ಬರಿಗಣ್ಣಿಗೆ ಗೋಚರಿಸುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ. ಒಂದು ವೇಳೆ ಮಾರ್ಚ್ 30 ರಂದು ಅಂದರೆ ಇಂದು ಅರ್ಧಚಂದ್ರ ದರ್ಶನವಾದರೆ ಮಾರ್ಚ್ 31 ರಂದು ಈದ್ ಉಲ್ ಫಿತರ್ ಹಬ್ಬವನ್ನು ಆಚರಿಸಲಾಗುತ್ತದೆ.
ಪ್ರವಾದಿ ಮಹಮ್ಮದ್ ಅವರು ಮೆಕ್ಕಾವನ್ನು ತೊರೆದ ನಂತರ ಮದೀನಾದಲ್ಲಿ ಈದ್ ಅಲ್-ಫಿತರ್ ಹಬ್ಬವನ್ನು ಮೊದಲ ಬಾರಿಗೆ ಪ್ರಾರಂಭಿಸಿದರು ಎಂಬ ನಂಬಿಕೆಯಿದೆ. ಇಸ್ಲಾಮಿಕ್ ಇತಿಹಾಸದ ಪ್ರಕಾರ ಪ್ರವಾದಿ ಮಹಮ್ಮದ್ ಮದೀನಾಕ್ಕೆ ವಲಸೆ ಬಂದ ನಂತರ ಕ್ರಿ.ಶ. 622 ರಲ್ಲಿ ಈದ್-ಉಲ್-ಫಿತರ್ ಹಬ್ಬವನ್ನು ಆಚರಿಸಲು ಪ್ರಾರಂಭಿಸಿದರು. ಅದಕ್ಕಿಂತ ಮೊದಲ ಮದೀನಾದ ಜನರು ತಮ್ಮದೇ ಆದ ಹಬ್ಬವನ್ನು ಹೊಂದಿದ್ದರು. ಬಳಿಕ ಪ್ರವಾದಿ ಮೊಹಮ್ಮದ್ ಈದ್-ಉಲ್-ಫಿತರ್ ಮತ್ತು ಈದ್-ಉಲ್-ಅಧಾ ಈ ಎರಡು ಮಹತ್ವದ ಹಬ್ಬವನ್ನು ಪರಿಚಯಿಸಿದರು.
ಇದನ್ನೂ ಓದಿ: ಸ್ಟೈಲಿಶ್ ಆಗಿ ಕಾಣಲು ಬೇಸಿಗೆಯಲ್ಲಿ ಶೂ ಧರಿಸ್ತೀರಾ? ಹಾಗಾದ್ರೆ ಈ ವಿಷಯ ತಿಳಿದಿರಲಿ
ಈದ್‌ನ ಇತಿಹಾಸವು ಇಸ್ಲಾಂನ ತತ್ವಗಳೊಂದಿಗೆ ಆಳವಾಗಿ ಹೆಣೆದುಕೊಂಡಿದೆ. ರಂಜಾನ್ ತಿಂಗಳು ಆತ್ಮಾವಲೋಕನ, ಆಧ್ಯಾತ್ಮಿಕ ಶುದ್ಧೀಕರಣ ಮತ್ತು ಜನರ ಬಗ್ಗೆ ಸಹಾನುಭೂತಿಯನ್ನು ಹೆಚ್ಚಿಸುವ ಸಮಯ. ಈ ಅವಧಿಯಲ್ಲಿ, ಜನ ಆಹಾರ ಮತ್ತು ಇತರ ಲೌಕಿಕ ಸುಖಗಳಿಂದ ದೂರವಿರುತ್ತಾರೆ ಮತ್ತು ಅಲ್ಲಾಹನೊಂದಿಗಿನ ಸಂಬಂಧವನ್ನು ಬಲಪಡಿಸಲು ಸ್ವಯಂ ಶಿಸ್ತನ್ನು ಬೆಳೆಸಿಕೊಳ್ಳುತ್ತಾರೆ. ಈ ಕಷ್ಟಕರವಾದ ಆಧ್ಯಾತ್ಮಿಕ ತಪಸ್ಸಿನ ಯಶಸ್ವಿ ಪೂರ್ಣಗೊಳಿಸುವಿಕೆಯ ಆಚರಣೆಯೇ ಈದ್-ಉಲ್-ಫಿತರ್ ಹಬ್ಬವಾಗಿದೆ.
ಈದ್ ಉಲ್ ಫಿತರ್ ಒಂದು ಪ್ರಮುಖ ಇಸ್ಲಾಮಿಕ್ ಆಚರಣೆಯಾಗಿದ್ದು, ಇದು ರಂಜಾನ್ ಉಪವಾಸವನ್ನು ಪೂರ್ಣಗೊಳಿಸಲು ಅವಕಾಶ ಮಾಡಿಕೊಟ್ಟ ಅಲ್ಲಾಹನಿಗೆ ಕೃತಜ್ಞತೆಯನ್ನು ಸಲ್ಲಿಸುವ ಸಲುವಾಗಿ ಮುಸಲ್ಮಾನರು ಈ ಹಬ್ಬವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸುತ್ತಾರೆ. ಅಷ್ಟೇ ಅಲ್ಲದೆ ಈ ಹಬ್ಬವು ರಂಜಾನ್ ಸಮಯದಲ್ಲಿ ಬೆಳೆಸಿಕೊಂಡ ಸಕಾರಾತ್ಮಕ ಅಭ್ಯಾಸಗಳ ಮುಂದುವರಿಕೆಯನ್ನು ಪ್ರತಿನಿಧಿಸುತ್ತದೆ. ಈ ಹಬ್ಬವು ಸಮುದಾಯದ ಏಕತೆಯನ್ನು ಒತ್ತಿಹೇಳುತ್ತದೆ, ಜಕಾತ್ ಅಲ್-ಫಿತರ್ ಮೂಲಕ ದಾನ ಮತ್ತು ಔದಾರ್ಯವನ್ನು ಜನರಲ್ಲಿ ಬೆಳೆಸುತ್ತದೆ ಮತ್ತು ಕ್ಷಮೆ ಹಾಗೂ ಸಾಮರಸ್ಯವನ್ನು ಈ ಹಬ್ಬ ಪ್ರೋತ್ಸಾಹಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ