Engineer’s Day 2025: ದೇಶದ ಅಭಿವೃದ್ಧಿ ಕಾರ್ಯದಲ್ಲಿ ಇಂಜಿನಿಯರ್‌ಗಳ ಪಾತ್ರ ಹಿರಿದು
ದೇಶದ ಅಭಿವೃದ್ಧಿಯಲ್ಲಿ, ತಾಂತ್ರಿಕ ಪ್ರಗತಿಯಲ್ಲಿ ಇಂಜಿನಿಯರ್‌ಗಳ ಪಾತ್ರ ಮಹತ್ವದ್ದಾಗಿದೆ. ಇಂಜಿನಿಯರ್‌ಗಳ ಈ ಕೊಡುಗೆಯನ್ನು ಗೌರವಿಸುವ ಸಲ್ಲಿಸುವ ಸಲುವಾಗಿ ಪ್ರತಿವರ್ಷ ಸೆಪ್ಟೆಂಬರ್ 15 ರಂದು ಭಾರತದಲ್ಲಿ ಇಂಜಿನಿಯರ್ಸ್ ದಿನವನ್ನು ಆಚರಿಸಲಾಗುತ್ತದೆ. ಸೆಪ್ಟೆಂಬರ್ 15 ರಂದೇ ಏಕೆ ಈ ದಿನವನ್ನು ಆಚರಿಸಲಾಗುತ್ತದೆ? ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಯಾವುದೇ ದೇಶದ ಅಭಿವೃದ್ಧಿ ಕಾರ್ಯಗಳಲ್ಲಿ, ತಾಂತ್ರಿಕ ಪ್ರಗತಿಯಲ್ಲಿ, ಮೂಲ ಸೌಕರ್ಯದ ಸುಧಾರಣೆಯಲ್ಲಿ ಇಂಜಿನಿಯರ್‌ಗಳ (Engineers) ಪಾತ್ರ ಮತ್ತು ಕೊಡುಗೆ ಅಪಾರವಾದದ್ದು. ರಸ್ತೆ, ಸೇತುವೆ, ಬೃಹತ್ ಕಟ್ಟಡ ನಿರ್ಮಾಣಗಳಿಂದ ಹಿಡಿದು ವಿವಿಧ ಯಂತ್ರೋಪಕರಣಗಳ ತಯಾರಿಕೆಯವರೆಗೆ ನಾವು ಅವಲಂಬಿಸಿರುವ ಪ್ರತಿಯೊಂದು ಸೌಕರ್ಯವನ್ನು ರೂಪಿಸುವುದು ಇಂಜಿನಿಯರ್‌ಗಳು. ಅದಕ್ಕಾಗಿಯೇ ಇಂಜಿನಿಯರ್‌ಗಳನ್ನು ಆಧುನಿಕ ಸಮಾಜದ ಬೆನ್ನೆಲುಬು ಎಂದು ಕರೆಯಲಾಗುತ್ತದೆ. ಇಂತಹ ಶ್ರೇಷ್ಠ ಇಂಜಿನಿಯರ್‌ಗಳಲ್ಲಿ ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಡಾ. ಸರ್. ಎಂ. ವಿಶ್ವೇಶ್ವರಯ್ಯನವರು (Sir M Visvesvaraya) ಮೊದಲಿಗರು ಅಂತಾನೇ ಹೇಳಬಹುದು. ಇಂಜಿನಿಯರಿಂಗ್ ಕ್ಷೇತ್ರ ಹಾಗೂ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಸಾಧನೆಯನ್ನು ಶ್ಲಾಘಿಸುವ ಸಲುವಾಗಿ, ದೇಶದ ಅಭಿವೃದ್ಧಿ ಕಾರ್ಯದಲ್ಲಿ ಇಂಜಿನಿಯರ್‌ಗಳ ಕೊಡುಗೆಯನ್ನು ಗೌರವಿಸುವ ಸಲುವಾಗಿ ಭಾರತದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 15 ರಂದು ಇಂಜಿನಿಯರ್ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯಿರಿ.
ಸೆಪ್ಟೆಂಬರ್ 15 ರಂದೇ ಏಕೆ ಇಂಜಿನಿಯರ್ ದಿನವನ್ನು ಆಚರಿಸಲಾಗುತ್ತದೆ?
ಭಾರತವು ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ರಾಷ್ಟ್ರೀಯ ಇಂಜಿನಿಯರ್‌ಗಳ ದಿನವನ್ನು ಆಚರಿಸುತ್ತದೆ. ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಹಾಗೂ ಶ್ರೇಷ್ಠ ಇಂಜಿನಿಯರ್ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಜನ್ಮ ವಾರ್ಷಿಕೋತ್ಸವದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಒಬ್ಬ ಶ್ರೇಷ್ಠ ಇಂಜಿನಿಯರ್ ಎಂದಾಗ ಮೊದಲಿಗೆ ನೆನಪಿಗೆ ಬರುವುದೇ ಸರ್. ಎಂ. ವಿಶ್ವೇಶ್ವರಯ್ಯನವರು. ಆಧುನಿಕ ಮೈಸೂರಿನ ಪಿತಾಮಹ ಎಂದು ಕರೆಯಲ್ಪಡುವ ಇವರು ಒಬ್ಬ ಇಂಜಿನಿಯರ್ ಆಗಿ ರಾಷ್ಟ್ರ ನಿರ್ಮಾಣದ ಅಭಿವೃದ್ಧಿಯಲ್ಲಿ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ. ಹೈದರಾಬಾದ್‌ದ ಪ್ರವಾಹ ನಿಯಂತ್ರಣ ವ್ಯವಸ್ಥೆ, ಮೈಸೂರಿನ ಕೃಷ್ಣರಾಜ ಸಾಗರ ಅಣೆಕಟ್ಟು ಮುಂತಾದ ಜನಸಾಮಾನ್ಯರಿಗೆ ಉಪಯುಕ್ತವಾಗುವಂತಹ ಕಾರ್ಯಗಳಿಂದ ಹಿಡಿದು ಮೈಸೂರು ಸೋಪ್ ಫ್ಯಾಕ್ಟರಿ, ಉಕ್ಕಿನ ಕಾರ್ಖಾನೆ, ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯ ಮತ್ತು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಿದ್ದಾರೆ. ಹೀಗೆ ದೇಶದ, ಮೂಲಸೌಕರ್ಯ ಮತ್ತು ಆರ್ಥಿಕ ಯೋಜನೆಗಳಿಗೆ, ರಾಷ್ಟ್ರದ ಅಭಿವೃದ್ಧಿಗೆ ಇವರು ಅದ್ಭುತ ಕೊಡುಗೆಗಳನ್ನು ನೀಡಿದ್ದಾರೆ. ಇವರ ಈ ಅಪಾರ ಕೊಡುಗೆಗಳನ್ನು ಶ್ಲಾಘಿಸಲು ಇವರ ಜನ್ಮ ದಿನವಾದ ಸೆಪ್ಟ್ರಂಬರ್ 15 ರಂದು ಇಂಜಿನಿಯರ್ ದಿನವನ್ನು ಆಚರಿಸಲಾಗುತ್ತದೆ.
ಇಂಜಿನಿಯರ್ ದಿನದ ಇತಿಹಾಸ:
ಒಬ್ಬ ಶ್ರೇಷ್ಠ ಇಂಜಿನಿಯರ್ ಆಗಿ ಡಾ. ಸರ್. ಎಂ. ವಿಶ್ವೇಶ್ವರಯ್ಯನವರು ದೇಶಕ್ಕೆ ಹಾಗೂ ದೇಶದ ಅಭಿವೃದ್ಧಿಗೆ ಅದ್ಭುತ ಕೊಡುಗೆಗಳನ್ನು ನೀಡಿದ್ದಾರೆ. ಇವರ ಈ ಅತ್ಯದ್ಭುತ ಕೊಡುಗೆಗಳನ್ನು ಗುರುತಿಸಿ 1955 ರಲ್ಲಿ ಭಾರತ ಸರ್ಕಾರವು ಸರ್. ಎಂ. ವಿಶ್ವೇಶ್ವರಯ್ಯನವರಿಗೆ “ಭಾರತ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಜೊತೆಗೆ ರಾಷ್ಟ್ರ ನಿರ್ಮಾಣದ ಅಭಿವೃದ್ಧಿ ಕಾರ್ಯದಲ್ಲಿ ಇವರ ಕೊಡುಗೆಯನ್ನು ಶ್ಲಾಘಿಸಲು 1968 ರಲ್ಲಿ ಭಾರತ ಸರ್ಕಾರವು ಸರ್. ಎಂ. ವಿಶ್ವೇಶ್ವರಯ್ಯನವರ ಜನ್ಮ ದಿನವಾದ ಸೆಪ್ಟೆಂಬರ್ 15 ರಂದು ಇಂಜಿನಿಯರ್ ದಿನವನ್ನು ಆಚರಿಸಲು ನಿರ್ಧರಿಸಿತು. ಅಂದಿನಿಂದ ದೇಶದ ಅಭಿವೃದ್ಧಿ ಕಾರ್ಯದಲ್ಲಿ ಇಂಜಿನಿಯರ್‌ಗಳ ಕೊಡುಗೆಯನ್ನು ಗೌರವಿಸಲು ಇಂಜಿನಿಯರ್ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಇದನ್ನೂ ಓದಿ: ಗುರುಭ್ಯೋ ನಮಃ; ಶಿಕ್ಷಕರ ದಿನದ ಆಚರಣೆಯ ಹಿನ್ನೆಲೆಯ ಬಗ್ಗೆ ತಿಳಿಯಿರಿ
ಇಂಜಿನಿಯರ್‌ಗಳ ದಿನದ ಮಹತ್ವ:
ತಂತ್ರಜ್ಞಾನ, ಮೂಲಸೌಕರ್ಯ, ಪರಿಸರ ಅಥವಾ ಬಾಹ್ಯಾಕಾಶ ಸಂಶೋಧನೆ ಯಾವುದೇ ಕ್ಷೇತ್ರವಿರಲಿ ಇರಲಿ, ಎಂಜಿನಿಯರ್‌ಗಳು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಒಂದು ಲೆಕ್ಕದಲ್ಲಿ ಇಂಜಿನಿಯರ್‌ಗಳಿಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ ಅಂತಾನೇ ಹೇಳಬಹುದು. ಇಂತಹ ಇಂಜಿನಿಯರ್‌ಗಳು ಯಂತ್ರಗಳು ಮತ್ತು ಯೋಜನೆಗಳ ಸೃಷ್ಟಿಕರ್ತರು ಮಾತ್ರವಲ್ಲ, ದೇಶದ ಪ್ರಗತಿಯ ಆಧಾರವೂ ಆಗಿದ್ದಾರೆ ಎಂಬುದನ್ನು ನೆನಪಿಸುವುದು ಹಾಗೂ ಇಂಜಿನಿಯರ್‌ಗಳು ಮತ್ತು ಅವರ ಕೊಡುಗೆಗಳನ್ನು ಗುರುತಿಸುವುದು ಇಂಜಿನಿಯರ್ ದಿನದ ಆಚರಣೆಯ ಮುಖ್ಯ ಉದ್ದೇಶವಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:36 am, Mon, 15 September 25








