ಈ ಸಲಹೆ ಅನುಸರಿಸಿದರೆ ಎಸಿ, ಕೂಲರ್ ಇಲ್ಲದೆಯೂ ಸುಡು ಬೇಸಿಗೆಯಲ್ಲಿ ಮನೆಯನ್ನು ತಂಪಾಗಿರಿಸಬಹುದು
ಈ ಬೇಸಿಗೆಯಲ್ಲಿನ ವಿಪರೀತ ಸೆಕೆಗೆ ಎಸಿ ಕೂಲರ್ ಇಲ್ಲದೆ ಮನೆಯೊಳಗೆ ಕುಳಿತುಕೊಳ್ಳುವುದೇ ಕಷ್ಟಸಾಧ್ಯ ಎಂಬಂತಿರುತ್ತದೆ. ಬಹುತೇಕ ಹೆಚ್ಚಿನವರು ದಿನದ 24 ಗಂಟೆಯೂ ಎಸಿ, ಫ್ಯಾನ್ ಆನ್ ಮಾಡಿಯೇ ಇಡುತ್ತಾರೆ. ಇದರಿಂದಾಗಿ ಕರೆಂಟ್ ಬಿಲ್ ಕೂಡ ಜಾಸ್ತಿ ಬರುತ್ತೆ. ಹೀಗಿರುವಾಗ ಈ ಕೆಲವೊಂದು ಐಡಿಯಾಗಳನ್ನು ಪಾಲಿಸುವ ಮೂಲಕ ಎಸಿ ಮತ್ತು ಕೂಲರ್ ಇಲ್ಲದೆಯೂ ಮನೆಯನ್ನು ತಂಪಾಗಿರಿಸಬಹುದು.

ಬೇಸಿಗೆಯಲ್ಲಿನ (summer) ಉರಿ ಬಿಸಲು, ಸೆಕೆಯ ಅಬ್ಬರಕ್ಕೆ ಜನ ಹೈರಾಣಾಗುತ್ತಿದ್ದಾರೆ. ಅನೇಕ ಜನರು ಬಿಸಿಲ ಬೇಗೆ ಹಾಗೂ ಸೆಕೆಯಿಂದ ತಪ್ಪಿಸಿಕೊಳ್ಳಲು ಮನೆಯೊಳಗೆ ಹಗಲು ರಾತ್ರಿ ಎಸಿ, ಕೂಲರ್ ಆನ್ ಮಾಡಿಯೇ ಇಟ್ಟು ಬಿಡುತ್ತಾರೆ. ಇದರಿಂದ ಭಾರೀ ವಿದ್ಯುತ್ ಖರ್ಚು ಆಗುತ್ತೆ ಜೊತೆಗೆ ಕರೆಂಟ್ ಬಿಲ್ ಕೂಡ ಜಾಸ್ತಿ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವೊಂದು ಸ್ಮಾರ್ಟ್ ಟಿಪ್ಸ್‌ಗಳನ್ನು ಪಾಲಿಸುವ ಮೂಲಕ ಎಸಿ, ಕೂಲರ್ ಇಲ್ಲದೆಯೂ ಈ ಸುಡು ಬೇಸಿಗೆಯಲ್ಲಿ ಮನೆಯನ್ನು ಕೂಲ್ ಆಗಿ ಇಟ್ಟುಕೊಳ್ಳಬಹುದು. ಎಸಿ ಇಲ್ಲದೆಯೂ ಮನೆಯನ್ನು ನೈಸರ್ಗಿಕವಾಗಿ ತಂಪಾಗಿರಿಸಿಕೊಳ್ಳುವುದು ಹೇಗೆ ಎಂಬ ಸರಳ ಸಲಹೆ ಇಲ್ಲಿದೆ.
ಎಸಿ, ಕೂಲರ್ ಇಲ್ಲದೆಯೂ ಮನೆಯನ್ನು ಕೂಲ್ ಆಗಿ ಇಡುವುದೇಗೆ?
ಸರಿಯಾದ ಸಮಯದಲ್ಲಿ ಕಿಟಕಿ ತೆರೆದಿಡಿ: ಹೊರಗಿನಿಂದ ಚೆನ್ನಾಗಿ ಗಾಳಿ ಬರುತ್ತದೆ ಎಂಬ ಕಾರಣಕ್ಕೆ ಹೆಚ್ಚಿನವರು ದಿನದ ಎಲ್ಲಾ ಸಮಯದಲ್ಲಿಯೂ ಕಿಟಕಿ ಬಾಗಿಲುಗಳನ್ನು ತೆರೆದೇ ಇಡುತ್ತಾರೆ. ಈ ರೀತಿ ಮಾಡುವುದರಿಂದ ಹೊರಗಿನ ಬಿಸಿ ಗಾಳಿ ಒಳಗೆ ಬರಲು ಅನುವು ಮಾಡಿಕೊಡುತ್ತದೆ. ಆದ್ದರಿಂದ ಮನೆಯನ್ನು ತಂಪಾಗಿಡಲು, ಬೆಳಿಗ್ಗೆ 8 ಗಂಟೆಯ ಮೊದಲು ಮತ್ತು ಸಂಜೆ ಸೂರ್ಯಾಸ್ತದ ನಂತರ ಮಾತ್ರ ಕಿಟಕಿಗಳನ್ನು ತೆರೆಯಿರಿ. ಮಧ್ಯಾಹ್ನದ ಸಮಯದಲ್ಲಿ ಕಿಟಕಿಗಳನ್ನು ಮುಚ್ಚಿಡುವುದು ಮತ್ತು ದಪ್ಪ ಪರದೆಗಳನ್ನು ಹಾಕುವುದರಿಂದ ನೇರ ಸೂರ್ಯನ ಬೆಳಕು ಒಳಗೆ ಬರುವುದನ್ನು ತಡೆಯಬಹುದು.
ಒಳಾಂಗಣ ಸಸ್ಯಗಳು ನೈಸರ್ಗಿಕ ಗಾಳಿಯನ್ನು ಒದಗಿಸುತ್ತವೆ: ಮನೆಯಲ್ಲಿ ಸ್ನೇಕ್ ಪ್ಲಾಂಟ್, ಅಲೋವೆರಾ, ಮನಿ ಪ್ಲಾಂಟ್ ಅಥವಾ ಅರೇಕಾ ಪಾಮ್ ನಂತಹ ಒಳಾಂಗಣ ಸಸ್ಯಗಳನ್ನು ಇಡುವುದರಿಂದ ಮನೆಯಲ್ಲಿ ಆಮ್ಲಜನಕದ ಅಂಶ ಹೆಚ್ಚಾಗುತ್ತದೆ ಮತ್ತು ವಾತಾವರಣವು ತಂಪಾಗಿರುತ್ತದೆ. ಈ ಸಸ್ಯಗಳು ನೈಸರ್ಗಿಕವಾಗಿ ಗಾಳಿಯನ್ನು ಶುದ್ಧೀಕರಿಸುತ್ತವೆ ಮತ್ತು ಶಾಖವನ್ನು ಹೀರಿಕೊಳ್ಳಲು ಕೆಲಸ ಮಾಡುತ್ತವೆ. ಆದ್ದರಿಂದ, ಮನೆಯ ಸುತ್ತಲೂ ಅಥವಾ ಮನೆಯ ಒಳ ಭಾಗದಲ್ಲಿ ಈ ಗಿಡಗಳನ್ನು ನೆಡುವ ಮೂಲಕ ನೀವು ಶಾಖದಿಂದ ರಕ್ಷಣೆ ಪಡೆಯಬಹುದು.
ವಿದ್ಯುತ್ ಉಪಕರಣಗಳ ಕಡಿಮೆ ಬಳಕೆ: ಮನೆಯಲ್ಲಿ ಚಾಲನೆಯಲ್ಲಿರುವ ಎಲೆಕ್ಟ್ರಾನಿಕ್ ಉಪಕರಣಗಳು ಸಹ ಶಾಖವನ್ನು ಉತ್ಪಾದಿಸುತ್ತವೆ. ಹಾಗಾಗಿ ಮಧ್ಯಾಹ್ನದ ಸಮಯದಲ್ಲಿ ಲೈಟ್, ಟಿವಿ ಅಥವಾ ಕಂಪ್ಯೂಟರ್ ಅನ್ನು ಆಫ್ ಮಾಡಿ. ವಿಶೇಷವಾಗಿ ಹಳೆಯ ಬಲ್ಬ್‌ಗಳ ಬದಲಿಗೆ ಎಲ್‌ಇಡಿ ಬಲ್ಬ್‌ಗಳನ್ನು ಬಳಸಿ, ಏಕೆಂದರೆ ಅವು ಕಡಿಮೆ ಶಾಖವನ್ನು ಉತ್ಪಾದಿಸುತ್ತವೆ. ಅಡುಗೆಮನೆಯಲ್ಲಿ ಎಕ್ಸಾಸ್ಟ್ ಫ್ಯಾನ್ ಅನ್ನು ಚಾಲನೆಯಲ್ಲಿ ಇರಿಸಿ ಇದರಿಂದ ಅಡುಗೆಯಿಂದ ಬರುವ ಶಾಖ ಹೊರಗೆ ಹೋಗುತ್ತವೆ.
ಇದನ್ನೂ ಓದಿ: ಬಾತ್‌ರೂಮ್‌ನಿಂದ ಬರುವ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಈ ನೈಸರ್ಗಿಕ ಪರಿಹಾರಗಳನ್ನು ಟ್ರೈ ಮಾಡಿ
ಮೇಲ್ಛಾವಣಿಯ ಮೇಲೆ ಬಿಳಿ ಸುಣ್ಣ ಅಥವಾ ಶಾಖ ಪ್ರತಿಫಲಿತ ಬಣ್ಣ ಹಚ್ಚಿ: ಮೇಲ್ಛಾವಣಿಯ ಮೇಲೆ ಬಿಳಿ ಸುಣ್ಣ ಅಥವಾ ವಿಶೇಷ ಶಾಖ ಪ್ರತಿಫಲಿತ ಬಣ್ಣವನ್ನು ಹಚ್ಚುವುದರಿಂದ ಸೂರ್ಯನ ಕಿರಣಗಳು ಪ್ರತಿಫಲಿಸುತ್ತದೆ, ಇದರಿಂದಾಗಿ ಮನೆಯೊಳಗಿನ ತಾಪಮಾನವು ಕಡಿಮೆಯಾಗುತ್ತದೆ. ಪರಿಣಾಮವಾಗಿ, ಕೊಠಡಿಗಳು ತುಲನಾತ್ಮಕವಾಗಿ ತಂಪಾಗಿರುತ್ತವೆ, ಫ್ಯಾನ್‌ಗಳು ಅಥವಾ ಏರ್ ಕೂಲರ್‌ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
ತಿಳಿ ಬಣ್ಣದ ಪರದೆಗಳನ್ನು ಬಳಸಿ: ಗಾಢ ಬಣ್ಣದ ಕಿಟಕಿ ಪರದೆಗಳು ಶಾಖವನ್ನು ಬೇಗನೆ ಹೀರಿಕೊಳ್ಳುತ್ತವೆ, ಇದರಿಂದಾಗಿ ಕೋಣೆ ಬೇಗನೆ ಬಿಸಿಯಾಗುತ್ತದೆ. ಆದ್ದರಿಂದ, ಕಿಟಕಿಗಳು ಮತ್ತು ಬಾಗಿಲುಗಳಿಗೆ ತಿಳಿ ಬಣ್ಣದ ಹಾಗೂ ಪರದೆಗಳನ್ನು ಅಳವಡಿಸಬೇಕು. ಏಕೆಂದರೆ ತಿಳಿ ಬಣ್ಣಗಳು ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತವೆ, ಹೀಗಾಗಿ ಕೋಣೆಯ ಉಷ್ಣತೆಯನ್ನು ಕಡಿಮೆಯಾಗುತ್ತದೆ.
ಈ ಸಣ್ಣ ವಿಷಯಗಳನ್ನು ಪಾಲಿಸುವ ಮೂಲಕ ಮನೆಯನ್ನು ತಂಪಾಗಿಟ್ಟುಕೊಳ್ಳುವುದು ಮಾತ್ರವಲ್ಲ ವಿದ್ಯುತ್ ಕೂಡ ಉಳಿಸಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
