Relationship Tips : ಲೇಡಿಸ್… ನಿಮ್ಮ ಗಂಡ ನಿಮ್ಮ ಮಾತು ಕೇಳುತ್ತಿಲ್ಲವೇ, ಹೀಗೆ ಮಾಡಿ
ಬಹುತೇಕರು ಮಹಿಳೆಯರು ನನ್ನ ಗಂಡ ನನ್ನ ಮಾತನ್ನೇ ಕೇಳುತ್ತಿಲ್ಲ ಎಂದು ಹೇಳುವುದನ್ನು ಕೇಳಿರಬಹುದು. ಕೆಲ ಹೆಣ್ಣು ಮಕ್ಕಳು ನನ್ನ ಗಂಡ ನಾನೇನು ಹೇಳಿದರೂ ಕೂಡ ಕಿವಿಗೆ ಹಾಕಿಕೊಳ್ಳಲ್ಲ ಎಂದು ಮನಸ್ಸಲ್ಲೇ ನೊಂದುಕೊಳ್ಳುತ್ತಾರೆ. ಆದರೆ ಈ ಕೆಲವು ಸಲಹೆಗಳನ್ನು ಪಾಲಿಸಿದರೆ ನಿಮ್ಮ ಗಂಡ ನಿಮ್ಮ ಮಾತನ್ನು ಚಾಚು ತಪ್ಪದೇ ಪಾಲಿಸುತ್ತಾರೆ.
ಮದುವೆ ಎನ್ನುವ ಎರಡು ಪದದಿಂದ ಗಂಡ ಹೆಂಡತಿ ಸಂಬಂಧವು ಆರಂಭವಾಗುತ್ತದೆ. ಸಣ್ಣ ವಿಷಯಗಳನ್ನು ದೊಡ್ಡದು ಮಾಡದೇ ಅರ್ಥ ಮಾಡಿಕೊಂಡು ಸಾಗಿಸಿದರೆ ಬದುಕು ಸ್ವರ್ಗವೇ. ಆದರೆ ಕೆಲವೊಮ್ಮೆ ಸಣ್ಣ ಪುಟ್ಟ ವಿಷಯಗಳಲ್ಲಿ ಮನಸ್ತಾಪಗಳಾಗುವುದು ಸಹಜ. ಇಬ್ಬರೂ ಕೂತು ಮಾತನಾಡಿ ಬಗೆಹರಿಸಿಕೊಳ್ಳುವುದು ಸೂಕ್ತ. ಸಂಸಾರದಲ್ಲಿ ಕೆಲವು ಗಂಡಸರಿಗೆ ಹೆಂಡತಿಯ ಮಾತನ್ನು ಕೇಳಿಸಿಕೊಳ್ಳುವ ತಾಳ್ಮೆ ಇರುವುದಿಲ್ಲ. ಹೀಗಾಗಿ ಎಷ್ಟೋ ಹೆಣ್ಣು ಮಕ್ಕಳು ತಮ್ಮ ಗಂಡ ನನ್ನ ಮಾತನ್ನು ಕೇಳುವುದಿಲ್ಲ ಎಂದು ಕೊರಗುತ್ತಾರೆ. ಅಂತಹವರಿಗಾಗಿಯೇ ಕೆಲವು ಸಲಹೆಗಳು ಇಲ್ಲಿವೆ.
* ಪ್ರೀತಿಯನ್ನು ವ್ಯಕ್ತಪಡಿಸುವ ಕಲೆ ಗೊತ್ತಿರಲಿ : ಯಾವುದೇ ವ್ಯಕ್ತಿಯೇ ಇರಲಿ ಪ್ರೀತಿಗೆ ಸೋಲುತ್ತಾನೆ. ಹೀಗಾಗಿ ನಿಮ್ಮ ಗಂಡನ ಮುಂದೆ ವಿಷಯಗಳನ್ನು ಪ್ರಸ್ತಾಪಿಸುವಾಗ ನಿಮ್ಮ ಮಾತಿನಲ್ಲಿ ಪ್ರೀತಿಯ ಭಾವನೆಯು ವ್ಯಕ್ತವಾಗಲಿ. ಪ್ರೀತಿಪೂರ್ವಕ ಮಾತುಕತೆಯಿಂದ ಗಂಡನ ಮನಸ್ಸನ್ನು ಗೆಲ್ಲುವುದು ಮಾತ್ರವಲ್ಲ, ನಿಮ್ಮ ಮಾತನ್ನು ಕೇಳುವಂತೆ ಮಾಡಬಹುದು.
* ಮುಕ್ತವಾದ ಸಂಭಾಷಣೆ ಇರಲಿ : ಸಂಬಂಧವು ಚೆನ್ನಾಗಿರಬೇಕಾದರೆ ಮನಸ್ಸು ಬಿಚ್ಚಿ ಮಾತನಾಡುವುದು ಬಹಳ ಮುಖ್ಯ. ಸಣ್ಣ ಸಂಭಾಷಣೆಯು ಎಂತಹ ಮನಸ್ತಾಪವನ್ನು ದೂರವಾಗಿಸುತ್ತದೆ. ಹೀಗಾಗಿ ಶಾಂತವಾದ ವಾತಾವರಣವನ್ನು ಆರಿಸಿಕೊಂಡು, ಇದ್ದ ವಿಷಯಗಳನ್ನು ಸೂಕ್ಷ್ಮವಾಗಿ ಪತಿಗೆ ತಿಳಿಸಿ. ಹೀಗೆ ಮಾಡಿದ್ದಲ್ಲಿ ನಿಮ್ಮ ಭಾವನೆಯು ಗಂಡನಿಗೆ ಅರ್ಥವಾಗುತ್ತದೆ. ಬ್ಯುಸಿಯಿರುವ ಸಂದರ್ಭದಲ್ಲಿ ಇಂತಹ ವಿಷಯಗಳನ್ನು ಮಾತನಾಡಿದರೆ, ನಿಮ್ಮ ಮಾತನ್ನು ಕಿವಿಗೆ ಹಾಕಿಕೊಳ್ಳದೇ ಇರಬಹುದು.
* ನಿಮ್ಮ ಕಾಳಜಿಯನ್ನು ಪತಿಗೆ ಮನವರಿಕೆ ಮಾಡಿಸಿ : ಸಂಬಂಧದಲ್ಲಿ ಪ್ರೀತಿ ನಂಬಿಕೆಯೊಂದಿಗೆ ಕಾಳಜಿಯು ಮುಖ್ಯ. ಹೀಗಾಗಿ ನೀವು ಗಂಡನ ಮಾತಿಗೆ ಬೆಲೆ ಕೊಡುವುದರೊಂದಿಗೆ ಕಾಳಜಿ ವಹಿಸುತ್ತೀರಿ ಎನ್ನುವುದನ್ನು ಅರ್ಥ ಮಾಡಿಸಿ. ಇದರಿಂದ ನಿಮ್ಮ ಗಂಡನಿಗೆ ಪ್ರೀತಿಯು ಹೆಚ್ಚಾಗಿ ನಿಮ್ಮ ಮಾತಿಗೆ ಕಿವಿಗೊಡುತ್ತಾನೆ.
* ಪತಿಯ ಮಾತನ್ನು ಆಲಿಸುವ ತಾಳ್ಮೆ ನಿಮಗಿರಲಿ : ಪ್ರತಿಯೊಬ್ಬ ಹೆಣ್ಣು ತನ್ನ ಮಾತನ್ನು ಗಂಡ ಕೇಳಬೇಕು ಎಂದುಕೊಳ್ಳುತ್ತಾಳೆ. ಆದರೆ ಹೆಚ್ಚಿನ ಸಮಯದಲ್ಲಿ ಪತ್ನಿಯು ಗಂಡನ ಮಾತಿಗೆ ಪ್ರತಿಕ್ರಿಯೆ ನೀಡುವುದೇ ಇಲ್ಲ. ಇದೇ ಕಾರಣದಿಂದ ನಿಮ್ಮ ಮಾತನ್ನು ಪತಿಯು ನಿಮ್ಮ ಮಾತನ್ನು ಕೇಳದೆ ಇರಬಹುದು. ಹೀಗಾಗಿ ಇಬ್ಬರೂ ಒಬ್ಬರಿಗೊಬ್ಬರು ಗೌರವ ಕೊಟ್ಟು ಸಂಗಾತಿಯು ಮಾತನಾಡುತ್ತಿದ್ದರೆ ಕಣ್ಣಿನಲ್ಲಿ ಕಣ್ಣಿಟ್ಟು ತಲೆಯಲ್ಲಾಡಿಸುವ ಮೂಲಕ ಪ್ರತಿಕ್ರಿಯಿಸಿ. ನೀವು ಈ ರೀತಿಯಾಗಿ ನಡೆದುಕೊಂಡರೆ ಪತಿಯು ನಿಮ್ಮ ಮಾತನ್ನು ಖಂಡಿತವಾಗಿಯೂ ಕೇಳುತ್ತಾನೆ.
ಇದನ್ನೂ ಓದಿ: ಗಂಡ- ಹೆಂಡಿರ ನಡುವೆ ಹೆಚ್ಚು ವಯಸ್ಸಿನ ಅಂತರ ಇರಬಾರದು ಏಕೆ ಗೊತ್ತಾ?
* ವಿಷಯಗಳನ್ನು ನೇರವಾಗಿ ಹೇಳುವುದು ಸೂಕ್ತ : ಹೆಣ್ಣು ಮಕ್ಕಳ ದೊಡ್ಡ ಸಮಸ್ಯೆಯೆಂದರೆ ವಿಷಯಗಳನ್ನು ಸುತ್ತಿ ಬಳಸಿ ಹೇಳುವುದು. ಇದು ನಿಮ್ಮ ಗಂಡನಿಗೆ ಇಷ್ಟವಾಗದೇ ಇರಬಹುದು. ಹೀಗಾಗಿ ನೀವು ಏನೇ ಹೇಳಿದರೂ ಅದನ್ನು ಕೇಳಿಸಿಕೊಳ್ಳುವ ತಾಳ್ಮೆ ಆತನಲ್ಲಿ ಇರುವುದಿಲ್ಲ. ಕೆಲವು ಗಂಡಸರು ಅರ್ಥವಾಗುವ ರೀತಿಯಲ್ಲಿ ಹೇಳು ಎನ್ನುತ್ತಾರೆ. ನೀವು ಹೇಳಬೇಕಾಗಿರುವ ವಿಷಯಗಳನ್ನು ನೇರವಾಗಿ ಹಾಗೂ ಸ್ಪಷ್ಟವಾಗಿ ಹೇಳುವುದರಿಂದ ಎದುರಿಗಿರುವ ವ್ಯಕ್ತಿಯು ಕೇಳಿಸಿಕೊಳ್ಳುತ್ತಾರೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:00 pm, Tue, 25 June 24