Ganesha Chaturthi 2024 : ಗಣೇಶ ಚತುರ್ಥಿಗೆ ನೈವೇದ್ಯಕ್ಕಾಗಿ ಮಾಡಿ ಕಡಲೆಕಾಳಿನ ಉಸ್ಲಿ, ರೆಸಿಪಿ ಇಲ್ಲಿದೆ
ಗಣೇಶ ಚತುರ್ಥಿ ಹಬ್ಬಕ್ಕೆ ಇನ್ನು ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. ಈ ಬಾರಿ ಸೆಪ್ಟೆಂಬರ್ 7 ರಂದು ಗಣೇಶ ಚರ್ತುಥಿಯನ್ನು ಆಚರಿಸಲಾಗುತ್ತಿದೆ. ಈಗಾಗಲೇ ಹೆಚ್ಚಿನವರ ಮನೆಯಲ್ಲಿ ಹಬ್ಬದ ತಯಾರಿಯೂ ಶುರುವಾಗಿದ್ದು, ನೈವೇದ್ಯಗಳನ್ನು ತಯಾರಿಸುವುದರಿಂದ ಹಿಡಿದು ಎಲ್ಲಾ ರೀತಿಯ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಗಣಪನಿಗೆ ನೈವೇದ್ಯವಾಗಿ ಮನೆಯಲ್ಲೇ ಸುಲಭವಾಗಿ ಕಡಲೆಕಾಳಿನ ಉಸ್ಲಿಯನ್ನು ಮಾಡಬಹುದಾಗಿದೆ. ಹಾಗಾದ್ರೆ ಈ ರೆಸಿಪಿಯ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಹಬ್ಬ ಅಂದಮೇಲೆ ಅಲಂಕಾರ ಹಾಗೂ ಸಿಹಿ ತಿಂಡಿಗಳ ತಯಾರಿಯಿದ್ದೆ ಇರುತ್ತದೆ. ಅದರಲ್ಲಿ ಗಣೇಶ ಹಬ್ಬ ಅಂದಮೇಲೆ ತಯಾರಿಯೂ ಸ್ವಲ್ಪ ಹೆಚ್ಚೇ ಇರುತ್ತದೆ ಎಂದೇಳಬಹುದು. ಗಣೇಶ ಚತುರ್ಥಿಗೆ ವಿಘ್ನ ನಿವಾರಕನಿಗೆ ಮೋದಕ, ಪಂಚ ಕಜ್ಜಾಯ, ಲಡ್ಡು, ಕರ್ಚಿಕಾಯಿ ಹೀಗೆ ವಿವಿಧ ಸಿಹಿ ತಿಂಡಿಗಳನ್ನು ಮಾಡಿ ನೈವೇದ್ಯವಾಗಿ ಇಡಲಾಗುತ್ತದೆ. ಅದಲ್ಲದೇ ಗಣೇಶನಿಗೆ ಪ್ರಿಯಾವಾದ ಕಡಲೆಕಾಳಿನ ಉಸ್ಲಿ ಇಲ್ಲದಿದ್ದರೆ ಹೇಗೆ ಅಲ್ಲವೇ, ಈ ವಿಶೇಷ ದಿನದಂದು ಹತ್ತೇ ನಿಮಿಷದಲ್ಲಿ ಕಡಲೆಕಾಳಿನ ಉಸ್ಲಿ ಮಾಡಿ ನೈವೇದ್ಯವಾಗಿ ಇಡಬಹುದಾಗಿದೆ.
ಕಡಲೆಕಾಳಿನ ಉಸ್ಲಿ ಮಾಡಲು ಬೇಕಾಗುವ ಸಾಮಗ್ರಿಗಳು:
* ಒಂದು ಕಪ್ ಕೆಂಪು ಕಡಲೆ
* ಎರಡು ಹಸಿಮೆಣಸಿನಕಾಯಿ
* ಅರ್ಧ ಕಪ್ ತೆಂಗಿನ ತುರಿ
* ಚಿಟಿಕೆ ಹಿಂಗು
* ಚಿಟಿಕೆ ಅರಿಶಿನ
* ಸ್ವಲ್ಪ ಬೆಲ್ಲ
* ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು
* ಎಣ್ಣೆ
* ಸಾಸಿವೆ
* ಜೀರಿಗೆ
* ಕಡಲೆ ಬೇಳೆ
* ಉದ್ದಿನ ಬೇಳೆ
* ಕರಿಬೇವು
ಇದನ್ನೂ ಓದಿ: ಗಣೇಶನಿಗೆ ಬಲುಪ್ರಿಯ ಈ ಮೋದಕ, ಮಾಡೋದು ಹೇಗೆ?
ಮಾಡುವ ವಿಧಾನ
* ಮೊದಲು ಕೆಂಪು ಕಡಲೆಯನ್ನು ಚೆನ್ನಾಗಿ ತೊಳೆದು ಕುಕ್ಕರ್ ಗೆ ಹಾಕಿಕೊಳ್ಳಿ. ಅದಕ್ಕೆ ಬೆಲ್ಲ, ಅರಶಿನ ಹುಡಿ, ಉಪ್ಪು ಸೇರಿಸಿ ಬೇಯಿಸಿಕೊಳ್ಳಿ.
* ಚೆನ್ನಾಗಿ ಬೆಂದ ಕಡಲೆಯನ್ನು ನೀರು ಬಸಿದು ಬೇರೆ ಪಾತ್ರೆಗೆ ವರ್ಗಾಯಿಸಿಕೊಳ್ಳಿ.
* ಒಲೆಯ ಮೇಲೆ ಬಾಣಲೆಯಿಟ್ಟು ಸಾಸಿವೆ, ಜೀರಿಗೆ, ಹಸಿ ಮೆಣಸು, ಉದ್ದಿನ ಬೇಳೆ, ಕಡಲೆ ಬೇಳೆ ಕರಿಬೇವು ಹಾಗೂ ಇಂಗು ಹಾಕಿ ಒಗ್ಗರಣೆಗೆ ಸಿದ್ಧ ಮಾಡಿಕೊಳ್ಳಿ.
* ಈಗಾಗಲೇ ಬೇಯಿಸಿದ ಕಡಲೆಗೆ ಒಗ್ಗರಣೆ ಹಾಕಿ ಐದು ನಿಮಿಷಗಳ ಕಾಲ ಸಣ್ಣಗೆ ಹುರಿಯಲ್ಲಿ ಮತ್ತೆ ಬೇಯಲು ಬಿಡಿ.
* ಆ ಬಳಿಕ ಇದಕ್ಕೆ ತೆಂಗಿನ ತುರಿಯನ್ನು ಸೇರಿಸಿದರೆ ರುಚಿಕರವಾದ ಕಡಲೆಕಾಯಿ ಉಸ್ಲಿ ನೈವೇದ್ಯಕ್ಕೆ ಸಿದ್ಧ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ