Holi 2025 : ಹೋಳಿ ಹಬ್ಬಕ್ಕೆ ಕಡಿಮೆ ಖರ್ಚಿನಲ್ಲಿ ಮನೆಯನ್ನು ಅಲಂಕರಿಸುವುದು ಹೇಗೆ? ಇಲ್ಲಿದೆ ಟಿಪ್ಸ್
ಹಿಂದೂಗಳ ಪಾಲಿನ ಪ್ರಮುಖ ಹಬ್ಬಗಳಲ್ಲಿ ಹೋಳಿ ಕೂಡ ಒಂದು. ಬಣ್ಣಗಳ ಹಬ್ಬ ಎಂದ ಮೇಲೆ ಬಣ್ಣಗಳೇ ಇಲ್ಲದೇ ಹೋದರೆ ಅಪೂರ್ಣ. ಹೀಗಾಗಿ ಈ ಓಕುಳಿ ಹಬ್ಬ ಅಥವಾ ಹೋಳಿ ಹಬ್ಬವು ಬಣ್ಣಗಳಿಂದ ಕೂಡಿದ ಹಬ್ಬ ಎನ್ನುವುದರಲ್ಲಿ ಎರಡು ಮಾತಿಲ್ಲ. ಬಣ್ಣಗಳ ಎರಚಾಟದ ನಡುವೆ ಹಬ್ಬದ ಸಂಭ್ರಮ ಹೆಚ್ಚಿಸಿ ಹಬ್ಬದ ಕಳೆ ತರುವುದೇ ಅಲಂಕಾರ. ಹೀಗಾಗಿ ರಂಗು ತುಂಬಿದ ಬಣ್ಣಗಳ ಹಬ್ಬಕ್ಕೆ ಮನೆಯನ್ನು ಅಲಂಕರಿಸುವುದು ಅಷ್ಟೇ ಮುಖ್ಯ. ಈ ಬಾರಿಯ ಹೋಳಿ ಹಬ್ಬಕ್ಕೆ ಕಡಿಮೆ ಖರ್ಚಿನಲ್ಲಿ ಮನೆಯನ್ನು ಅಲಂಕರಿಸಲು ಇಲ್ಲಿದೆ ಕೆಲ ಟಿಪ್ಸ್.

ಸಾಂದರ್ಭಿಕ ಚಿತ್ರ
ರಂಗು ರಂಗಿನ ಹೋಳಿ ಹಬ್ಬ (Holi Festivals), ಬಣ್ಣಗಳ ಎರಚಾಟದ ಮೂಲಕ ಮೈ ಮನವೆಲ್ಲವೂ ಪುಳಕಿತಗೊಳಿಸುವ ಹಬ್ಬವಾಗಿದೆ. ದಕ್ಷಿಣ ಭಾರತೀಯರಿಗಿಂತ ಉತ್ತರ ಭಾರತೀಯರಿಗೆ ಈ ಹಬ್ಬ ಬಹಳಷ್ಟು ವಿಶೇಷ ಎನ್ನಬಹುದು. ಪ್ರತಿ ವರ್ಷ ಫಾಲ್ಗುಣ ಮಾಸದ ಶುಕ್ಲ ಪಕ್ಷದ ಪ್ರತಿಪದ ತಿಥಿಯಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಹೋಳಿ ಹಬ್ಬವನ್ನು ಮಾರ್ಚ್ 14 ರಂದು ಆಚರಿಸಲಾಗುತ್ತಿದ್ದು, ಹೋಳಿಕಾ ದಹನ ಮಾರ್ಚ್ 13 ರಂದು ನಡೆಯಲಿದೆ. ಈ ಹಬ್ಬದ ರಂಗು ಹೆಚ್ಚಿಸಲು ಮನೆಯನ್ನು ಅಲಂಕರಿಸಿ (Decoration) ಕೊಳ್ಳುವುದು ಮುಖ್ಯ. ಈ ಕೆಲವು ಸಲಹೆ ಪಾಲಿಸಿದ್ರೆ ಕಡಿಮೆ ಖರ್ಚಿನಲ್ಲಿ ಮನೆಯನ್ನು ಸುಂದರವಾಗಿ ಅಲಂಕರಿಸಿಕೊಳ್ಳಬಹುದು.
ಮನೆಯ ಅಲಂಕಾರಕ್ಕಾಗಿ ಇಲ್ಲಿದೆ ಸಿಂಪಲ್ ಟಿಪ್ಸ್
- ವರ್ಣರಂಜಿತ ಪೋಸ್ಟರ್‌ಗಳು ಅಥವಾ ಕಲಾಕೃತಿಗಳಿರಲಿ : ಹೋಳಿ ಹಬ್ಬಕ್ಕೆ ನಿಮ್ಮ ಮನೆಯನ್ನು ಅಲಂಕರಿಸಲು ಸುಲಭವಾದ ಮಾರ್ಗವೆಂದರೆ ಮಸುಕಾದ ಗೋಡೆಗಳ ಮೇಲೆ ವರ್ಣರಂಜಿತ ಪೋಸ್ಟರ್‌ಗಳನ್ನು ನೇತು ಹಾಕುವುದು. ವರ್ಣರಂಜಿತ ಕಲಾಕೃತಿ ಅಥವಾ ವಾಲ್ ಹ್ಯಾಂಗಿಂಗ್ ಗಳನ್ನು ಬಳಸಬಹುದು. ಇದು ನಿಮ್ಮ ಮನೆಯ ನೋಟವನ್ನೇ ಬದಲಾಯಿಸುತ್ತದೆ.
- ಬಾಲ್ಕನಿ ಪ್ರದೇಶವನ್ನು ಹೈಲೈಟ್ ಮಾಡಿ : ನಿಮ್ಮ ಮನೆಯ ಒಳಾಂಗಣದಲ್ಲಿ ಮುಕ್ತ ಸ್ಥಳವಿದ್ದರೆ ಅಲಂಕಾರಕ್ಕಾಗಿ ಬಳಸಿಕೊಳ್ಳಬಹುದು. ಅದಲ್ಲದೇ, ಬಾಲ್ಕನಿ ಪ್ರದೇಶಕ್ಕೆ ರಗ್ಗುಗಳನ್ನು ಸೇರಿಸಿ, ಹೂವಿನ ಕುಂಡಗಳಿಗೆ ಬಣ್ಣ ಬಳಿಯಿರಿ. ಕೃತಕ ದೀಪಗಳು, ಬಜೆಟ್ ಸ್ನೇಹಿ ರಗ್ಗುಗಳು ಹಾಗೂ ಮೇಣದ ಬತ್ತಿಗಳಿಂದ ಸಿಂಗಾರ, ತಾಜಾ ಹಾಗೂ ಪರಿಮಳಯುಕ್ತ ಹೂವುಗಳಿಂದ ಅಲಂಕರಿಸುವ ಮೂಲಕ ಸ್ಥಳವನ್ನು ಇನ್ನಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಬಹುದು. ಅಲಂಕಾರಕ್ಕಾಗಿ ಕಾಲ್ಪನಿಕ ಮಾರಿಗೋಲ್ಡ್ ಹಾಗೂ ಇನ್ನಿತ್ತರ ನೇಯ್ದ ಹೂಮಾಲೆಗಳನ್ನು ನೇತುಹಾಕಬಹುದು.
- ವರ್ಣರಂಜಿತ ದೀಪಗಳು ಮತ್ತು ಪರದೆಗಳನ್ನು ಬಳಸಿ : ಬಣ್ಣ ಬಣ್ಣದ ದೀಪಗಳು ಬಣ್ಣಗಳ ಹಬ್ಬಕ್ಕೆ ಮತ್ತಷ್ಟು ರಂಗು ತಂದು ಕೊಡುವುದರಲ್ಲಿ ಎರಡು ಮಾತಿಲ್ಲ. ಆಕರ್ಷಕವಾದ ಪರದೆಗಳೊಂದಿಗೆ ವರ್ಣರಂಜಿತ ಹ್ಯಾಂಗಿಂಗ್ ಲೈಟ್‌ಗಳು ಮನೆಯ ನೋಟವನ್ನೇ ಬದಲಾಯಿಸುತ್ತದೆ. ಅದಲ್ಲದೇ ವರ್ಣರಂಜಿತ ಬೆಡ್‌ಶೀಟ್, ಪರದೆ ಹಾಗೂ ಕುಶನ್ ಗಳನ್ನು ಅಲಂಕಾರಕ್ಕಾಗಿ ಬಳಸುವುದು ಉತ್ತಮ.
- ಮನೆಯ ಮುಂದೆ ಸಾಂಪ್ರದಾಯಿಕ ರಂಗೋಲಿವಿರಲಿ : ಹಬ್ಬವೆಂದ ಮೇಲೆ ರಂಗೋಲಿ ಹಾಕದಿದ್ದರೆ ಹೇಗೆ ಅಲ್ಲವೇ. ಹಬ್ಬದ ಕಳೆ ತರುವುದೇ ಈ ರಂಗೋಲಿ. ಸಾಂಪ್ರದಾಯಿಕ ಶೈಲಿಯಲ್ಲಿ ಚಿತ್ತಾರವನ್ನು ಬಿಡಿಸುವುದರಿಂದ ಮನೆಯ ಪ್ರವೇಶದ್ವಾರವು ಆಕರ್ಷಕವಾಗಿ ಕಾಣುತ್ತದೆ. ಅಷ್ಟೇ ಅಲ್ಲದೆ ಮನೆಯಲ್ಲಿ ಧನಾತ್ಮಕ ಕಳೆಯೂ ಬರುತ್ತದೆ.
- ಅಲಂಕಾರಕ್ಕಾಗಿ ಬಲೂನ್ ಬಳಸಿ : ಹೋಳಿ ಹಬ್ಬಕ್ಕೆ ಮನೆಯನ್ನು ಕಲರ್ ಫುಲ್ ಮಾಡಲು ಬಲೂನ್ ಗಳು ಬಳಸಿಕೊಳ್ಳಬಹುದು. ಬಣ್ಣಬಣ್ಣದ ಬಲೂನುಗಳು ಮನೆಯ ಅಂದವನ್ನು ಹೆಚ್ಚಿಸುವುದಲ್ಲದೆ ಹೋಳಿ ಹಬ್ಬದ ಅಲಂಕಾರಕ್ಕಾಗಿ ಬೆಸ್ಟ್ ಎನ್ನಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ