
ಮಶ್ರೂಮ್‌ಗಳು ರುಚಿಕರವಾಗಿರುವುದರ ಜೊತೆಗೆ ಪ್ರೋಟೀನ್, ಫೈಬರ್, ಬಿ-ವಿಟಮಿನ್‌ಗಳು ಸೇರಿದಂತೆ ಹಲವು ಪೋಷಕಾಂಶಗಳನ್ನು ಹೊಂದಿರುವ ಆಹಾರ. ಆದರೆ ಇವುಗಳಲ್ಲಿ ನೀರಿನ ಅಂಶ ಹೆಚ್ಚಿರುವುದರಿಂದ ಸರಿಯಾಗಿ ಸಂಗ್ರಹಿಸದಿದ್ದರೆ ಬೇಗನೆ ಮೆತ್ತಗಾಗುವುದು, ಕಪ್ಪಾಗುವುದು ಅಥವಾ ಬೂಸ್ಟ್ ಹಿಡಿಯುವುದು ಸಾಮಾನ್ಯ. ಮಾರುಕಟ್ಟೆಯಿಂದ ತಂದ ಮಶ್ರೂಮ್‌ಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲೇ ಫ್ರಿಜ್‌ಗೆ ಇಡುವುದು ತೇವಾಂಶ ಹೆಚ್ಚಿಸಿ ಅವು ಬೇಗ ಹಾಳಾಗಲು ಕಾರಣವಾಗಬಹುದು. ಹಾಗಾದರೆ ಮಶ್ರೂಮ್‌ಗಳನ್ನು ಹೆಚ್ಚು ದಿನ ಫ್ರೆಶ್ ಆಗಿಡುವುದು ಹೇಗೆ ಮತ್ತು ಮಶ್ರೂಮ್‌ಗಳು ಹಾಳಾಗಿರುವುದನ್ನು ಗುರುತಿಸುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಮಶ್ರೂಮ್‌ಗಳನ್ನು ಪ್ಲಾಸ್ಟಿಕ್ ಕವರ್‌ನಿಂದ ತೆಗೆದು ಪೇಪರ್ ಬ್ಯಾಗ್‌ನಲ್ಲಿ ಇಟ್ಟು ಫ್ರಿಜ್‌ನಲ್ಲಿ ಸಂಗ್ರಹಿಸುವುದು ಉತ್ತಮ ವಿಧಾನ. ಪೇಪರ್ ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಮಶ್ರೂಮ್‌ಗಳಿಗೆ ಗಾಳಿ ಸಿಗುವಂತೆ ಮಾಡುತ್ತದೆ. ಮಶ್ರೂಮ್‌ಗಳನ್ನು ಸಂಪೂರ್ಣವಾಗಿ ಗಾಳಿಯಾಡದ ಪ್ಲಾಸ್ಟಿಕ್ ಅಥವಾ ಏರ್‌ಟೈಟ್ ಕಂಟೇನರ್‌ನಲ್ಲಿ ಇಡುವುದನ್ನು ತಪ್ಪಿಸುವುದು ಉತ್ತಮ.
ಮಶ್ರೂಮ್‌ಗಳನ್ನು ಬಳಸುವ ಮುನ್ನವೇ ಸ್ವಚ್ಛಗೊಳಿಸುವುದು ಉತ್ತಮ. ಮುಂಚಿತವಾಗಿ ನೀರಿನಲ್ಲಿ ತೊಳೆದು ಸಂಗ್ರಹಿಸಿದರೆ ಅವುಗಳಲ್ಲಿ ಹೆಚ್ಚುವರಿ ತೇವಾಂಶ ಉಳಿದು ಬೇಗ ಹಾಳಾಗುವ ಸಾಧ್ಯತೆ ಹೆಚ್ಚಬಹುದು. ಅಡುಗೆ ಮಾಡುವ ಸಮಯದಲ್ಲಿ ಮಾತ್ರ ಅವುಗಳನ್ನು ತ್ವರಿತವಾಗಿ ತೊಳೆದು ಅಥವಾ ಸ್ವಚ್ಛಗೊಳಿಸಿ ಬಳಸಬಹುದು. ಆದರೆ ಮಶ್ರೂಮ್‌ಗಳ ಮೇಲೆ ಮಣ್ಣು ಅಥವಾ ಕಸ ಹೆಚ್ಚಿದ್ದರೆ, ಸ್ವಚ್ಛಗೊಳಿಸಿದ ನಂತರ ಚೆನ್ನಾಗಿ ಒಣಗಿಸಿ ತಕ್ಷಣ ಬಳಸುವುದು ಉತ್ತಮ.
ಇದನ್ನೂ ಓದಿ: ಜಗಳವಿಲ್ಲ, ಮಾತುಕತೆಯೂ ಇಲ್ಲ! ಹಾಗಿದ್ರೆ ಈ ಸೈಲೆಂಟ್ ಡಿವೋರ್ಸ್ ಬಗ್ಗೆ ತಿಳಿದುಕೊಳ್ಳಲೇಬೇಕು
ಕಂಟೇನರ್ ಬಳಸಬೇಕಾದರೆ ಅದರೊಳಗೆ ಟಿಷ್ಯೂ ಅಥವಾ ಪೇಪರ್ ಟವೆಲ್ ಹಾಕಿ ಮಶ್ರೂಮ್‌ಗಳನ್ನು ಇಡಬಹುದು. ಇದು ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಕಂಟೇನರ್ ಸಂಪೂರ್ಣ ಏರ್‌ಟೈಟ್ ಆಗಿರಬಾರದು. ಗಾಳಿಯಾಡುವ ವ್ಯವಸ್ಥೆ ಇರುವ ಕಂಟೇನರ್ ಅಥವಾ ಪೇಪರ್ ಬ್ಯಾಗ್ ಉತ್ತಮ ಆಯ್ಕೆ.
ಮಶ್ರೂಮ್‌ಗಳನ್ನು ಕೆಲವು ದಿನಗಳಲ್ಲಿ ಬಳಸಲು ಸಾಧ್ಯವಾಗದಿದ್ದರೆ ಫ್ರೀಜರ್‌ನಲ್ಲಿ ಸಂಗ್ರಹಿಸಬಹುದು. ಬಳಸುವ ಮೊದಲು ಅವುಗಳನ್ನು ಸ್ವಚ್ಛಗೊಳಿಸಿ, ಸ್ಲೈಸ್ ಮಾಡಿ ಸ್ವಲ್ಪ ಎಣ್ಣೆಯಲ್ಲಿ ಅಥವಾ ನೀರಿನಲ್ಲಿ ಹಗುರವಾಗಿ ಬೇಯಿಸಿ, ಸಂಪೂರ್ಣ ತಣ್ಣಗಾದ ಬಳಿಕ ಫ್ರೀಜರ್-ಸೇಫ್ ಬ್ಯಾಗ್ ಅಥವಾ ಕಂಟೇನರ್‌ನಲ್ಲಿ ಇಡಬಹುದು. ಫ್ರೀಜ್ ಮಾಡಿದ ಮಶ್ರೂಮ್‌ಗಳ ರುಚಿ ಮತ್ತು ವಿಶೇಷವಾಗಿ ಟೆಕ್ಸ್ಚರ್ ತಾಜಾ ಮಶ್ರೂಮ್‌ಗಳಿಗಿಂತ ಸ್ವಲ್ಪ ಬದಲಾಗಬಹುದು. ಆದ್ದರಿಂದ ಸೂಪ್, ಗ್ರೇವಿ, ಸ್ಟಿರ್-ಫ್ರೈ ಮುಂತಾದ ಅಡುಗೆಗಳಿಗೆ ಬಳಸುವುದು ಸೂಕ್ತ.
ಮಶ್ರೂಮ್‌ಗಳು ಅತಿಯಾಗಿ ಜಿಗುಟಾಗಿದ್ದರೆ, ದುರ್ವಾಸನೆ ಬರುತ್ತಿದ್ದರೆ, ಬಣ್ಣ ಬದಲಾಗಿದ್ದರೆ ಅಥವಾ ಬೂಸ್ಟ್ ಹಿಡಿದಿದ್ದರೆ ಅವುಗಳನ್ನು ಬಳಸಬೇಡಿ. ಬೂಸ್ಟ್ ಹಿಡಿದ ಮಶ್ರೂಮ್‌ನ ಹಾಳಾದ ಭಾಗವನ್ನು ಮಾತ್ರ ತೆಗೆದು ಉಳಿದದ್ದನ್ನು ಬಳಸುವುದು ಸುರಕ್ಷಿತ ವಿಧಾನವಲ್ಲ. ಒಟ್ಟಿನಲ್ಲಿ, ಮಶ್ರೂಮ್‌ಗಳನ್ನು ಪೇಪರ್ ಬ್ಯಾಗ್‌ನಲ್ಲಿ ಫ್ರಿಜ್‌ನಲ್ಲಿ ಇಡುವುದು, ಅಡುಗೆ ಮಾಡುವ ಮುನ್ನ ಸ್ವಚ್ಛಗೊಳಿಸುವುದು ಮತ್ತು ಹೆಚ್ಚು ದಿನ ಉಳಿಸಬೇಕಾದರೆ ಬೇಯಿಸಿ ಫ್ರೀಜ್ ಮಾಡುವುದು ಉತ್ತಮ ಸಂಗ್ರಹ ವಿಧಾನಗಳು. ಸರಿಯಾದ ಸ್ಟೋರೇಜ್ ಮೂಲಕ ಆಹಾರದ ವ್ಯರ್ಥತೆಯನ್ನು ಕಡಿಮೆ ಮಾಡಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ