
ಮದುವೆ (marriage) ಎನ್ನುವುದು ಜೀವನದ ಬಹು ಮುಖ್ಯವಾದ ನಿರ್ಧಾರ ಮತ್ತು ಅತ್ಯಂತ ಮಹತ್ವದ ಘಟ್ಟ. ಮದುವೆಯ ನಂತರ ಗಂಡು-ಹೆಣ್ಣಿನ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತದೆ. ಜವಾಬ್ದಾರಿಗಳು ಹೆಚ್ಚುತ್ತವೆ. ಈ ಜವಾಬ್ದಾರಿಗಳನ್ನು ಸರಿದೂಗಿಸಿಕೊಂಡು ಹೋಗುತ್ತಾ ಉತ್ತಮವಾಗಿ ಬಾಳ್ವೆ ನಡೆಸಲು ಮದುವೆಗೂ ಮುನ್ನ ಕುಲ ಗೋತ್ರದ ಜೊತೆಗೆ ಸಂಗಾತಿಗಳಿಬ್ಬರು ತಮ್ಮ ಆದಾಯದ ಬಗ್ಗೆ ಮುಕ್ತವಾಗಿ ಚರ್ಚಿಸುತ್ತಾ ಆ ಬಗ್ಗೆ ತಿಳಿಯಬೇಕು. ಇದು ಮದುವೆಯ ನಂತರದ ಆರ್ಥಿಕ ಸಮಸ್ಯೆಗಳನ್ನು ಸರಿದೂಗಿಸಿಕೊಂಡು ಹೋಗಲು ಸಹಾಯ ಮಾಡುತ್ತದೆ. ಹಾಗಿದ್ರೆ ಆದಾಯದ ಜೊತೆ ಜೊತೆಗೆ ಗಂಡು-ಹೆಣ್ಣು ಮದುವೆಗೂ ಮುನ್ನ ಯಾವೆಲ್ಲಾ ವಿಷಯಗಳನ್ನು ಅಗತ್ಯವಾಗಿ ಚರ್ಚಿಸಬೇಕು ಎಂಬುದನ್ನು ತಿಳಿದುಕೊಳ್ಳಿ.
ಸಂಬಂಧದಲ್ಲಿ ಹಣಕಾಸಿನ ವಿಷಯ ಏಕೆ ಬರಬೇಕು ಎಂಬುದು ಅನೇಕರ ಭಾವನೆಯಾಗಿದೆ ಆದರೆ ವಾಸ್ತವದಲ್ಲಿ, ಹಣಕಾಸಿನ ವಿವಾದಗಳು ಹೆಚ್ಚಾಗಿ ಸಂಬಂಧಗಳಲ್ಲಿ ಬಿರುಕು ಮೂಡಲು ದೊಡ್ಡ ಕಾರಣವಾಗಿದೆ. ಹೀಗಿರುವಾಗ ಹಣಕಾಸಿನ ಸ್ಥಿತಿಗತಿಗಳ ಬಗ್ಗೆ ಮುಂಚೆಯೇ ಸ್ಪಷ್ಟವಾಗಿದ್ದಾಗ, ಭವಿಷ್ಯದಲ್ಲಿ ಈ ವಿಚಾರಕ್ಕೆ ಯಾವುದೇ ಮನಸ್ತಾಪಗಳು ತಲೆದೋರುವುದಿಲ್ಲ. ಇದಲ್ಲದೆಭಾವಿ ಪತಿ ಅಥವಾ ಪತ್ನಿಯ ಬಳಿ ಅವರ ಆದಾಯ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳುವುದು ನಿಮ್ಮ ಭವಿಷ್ಯದ ಖರ್ಚುಗಳನ್ನು ಅಂದಾಜು ಮಾಡಲು ಸಹಾಯ ಮಾಡುತ್ತದೆ. ಅನೇಕರು ಇದನ್ನು ದುರಾಸೆ ಎಂದು ಭಾವಿಸುತ್ತಾರೆ. ಆದರೆ ಹಣಕಾಸಿನ ಬಗ್ಗೆ ಚರ್ಚಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಈ ಒಂದು ಚರ್ಚೆ ಹಣಕಾಸಿನ ಬಿನ್ನಾಭಿಪ್ರಾಯಗಳು ಮತ್ತುಅನಿರೀಕ್ಷಿತ ವೆಚ್ಚಗಳು ಅಥವಾ ಸಾಲಗಳ ಕುರಿತು ಭವಿಷ್ಯದಲ್ಲಿ ಉಂಟಾಗುವ ವಾದಗಳನ್ನು ತಪ್ಪಿಸಲು ಸಹಕಾರಿಯಾಗಿದೆ. ಆದಾಯದ ಜೊತೆಗೆ ಬಾಡಿಗೆ, ಮನೆಯ ಖರ್ಚು ವೆಚ್ಚ, ಪ್ರಯಾಣ, ಮಕ್ಕಳ ಭವಿಷ್ಯದಂತಹ ವಿಷಯಗಳನ್ನು ಮುಂಚಿತವಾಗಿ ಚರ್ಚಿಸಬೇಕು. ಮುಖ್ಯವಾಗಿ ನಿಮ್ಮ ಜೀವನಶೈಲಿ ಮತ್ತು ಆರ್ಥಿಕ ನಿರೀಕ್ಷೆಗಳು ಹೋಲುತ್ತವೆಯೇ ಎಂಬುದನ್ನು ನೋಡಬೇಕು.
ಸಂಗಾತಿಯ ಉಳಿತಾಯ ಮತ್ತು ಹೂಡಿಕೆಯ ಅಭ್ಯಾಸದ ಬಗ್ಗೆಯೂ ತಿಳಿಯಬೇಕು. ಈ ಮೂಲಕ ಅವರು ಜವಾಬ್ದಾರಿಯುತರೇ, ತುರ್ತು ಪರಿಸ್ಥಿತಿಗಳಿಗಾಗಿ ಉಳಿತಾಯ ಮಾಡುತ್ತಿದ್ದಾರೆಯೇ ಎಂಬುದರ ಬಗ್ಗೆ ಅರ್ಥಮಾಡಲು ಸಾಧ್ಯವಾಗುತ್ತದೆ. ಇದು ಮಾತ್ರವಲ್ಲ ನೀವು ಹೂಡಿಕೆಗಳು, ವಿಮೆ ಮತ್ತು ದೀರ್ಘಾವಧಿಯ ಆರ್ಥಿಕ ಗುರಿಗಳ ಬಗ್ಗೆಯೂ ಮಾತನಾಡಬೇಕು. ಇವೆಲ್ಲವೂ ನಿಮ್ಮ ಭವಿಷ್ಯಕ್ಕೆ ತುಂಬಾನೇ ಮುಖ್ಯ.
ಮದುವೆಗೆ ಮುನ್ನ ಸಾಲಗಳ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡುವುದು ಸಹ ತುಂಬಾನೇ ಮುಖ್ಯ. ಶಿಕ್ಷಣ ಸಾಲ, ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್ ಬಾಕಿಗಳಿವೆಯೇ ಎಂಬುದನ್ನು ತಿಳಿದುಕೊಳ್ಳಿ. ಸಾಲಗಳಿದ್ದರೆ ಅವುಗಳ ಮಾಸಿಕ ಪಾವತಿಗಳು ಎಷ್ಟು ಎಂಬುದರ ಬಗ್ಗೆಯೂ ತಿಳಿದುಕೊಳ್ಳಿ. ಇವೆಲ್ಲವೂ ಮದುವೆಯ ನಂತರ ಅನಿರೀಕ್ಷಿತ ಆರ್ಥಿಕ ಒತ್ತಡವನ್ನು ತಪ್ಪಿಸಲು ಮುಂಚಿತವಾಗಿ ಯೋಜನೆ ರೂಪಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಚಾಣಕ್ಯರ ಪ್ರಕಾರ ಹುಡುಗಿಯರಿಗೆ ಈ ರೀತಿಯ ಹುಡುಗ್ರು ಇಷ್ಟವಾಗೋದಂತೆ
ಸಂಗಾತಿಗಳಿಬ್ಬರೂ ಕೆಲಸ ಮಾಡುತ್ತಿದ್ದರೆ ಮದುವೆಗೆ ಮುಂಚೆಯೇ ಇಬ್ಬರೂ ಮನೆಯ ಖರ್ಚುಗಳನ್ನು ಹೇಗೆ ನಿಭಾಯಿಸಬೇಕೆಂಬುದನ್ನು ಚರ್ಚಿಸಬೇಕು. ವಿದ್ಯುತ್ ಮತ್ತು ನೀರಿನ ಬಿಲ್ಗಳು ಮತ್ತು ದಿನಸಿ ಸೇರಿದಂತೆ ದೈನಂದಿನ ಮನೆಯ ವೆಚ್ಚಗಳ ಹಂಚಿಕೆ, ಹಣ ಉಳಿತಾಯ, ಖರ್ಚುಗಳು, ಹೂಡಿಕೆ ಇವುಗಳಿಗೆ ಹಣ ಹಂಚಿಕೆ ಮಾಡುವುದು ಹೇಗೆ ಎಂಬುದನ್ನು ಚರ್ಚಿಸಬೇಕು. ಹಣಕಾಸಿನ ಬಗ್ಗೆ ಸಂಗಾತಿಗಳಿಬ್ಬರು ಪಾರದರ್ಶಕವಾಗಿದ್ದಾಗ ಭವಿಷ್ಯದಲ್ಲಿ ಇಬ್ಬರ ನಡುವೆ ಹಣದ ವಿಚಾರಕ್ಕೆ ಯಾವುದೇ ಮನಸ್ತಾಪಗಳು ಏರ್ಪಡುವುದಿಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ