ಕರ್ನಾಟಕದ ಪ್ರಮುಖ ಹಬ್ಬಗಳಲ್ಲಿ ಒಂದಾದ ಶಿವರಾತ್ರಿಯನ್ನು ಎಲ್ಲರೂ ಭಕ್ತಿ ಭಾವದೊಂದಿಗೆ ಆಚರಿಸಲಾಗುತ್ತದೆ. ಶಿಶಿರ ಋತುವಿನ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಈ ಹಬ್ಬದಂದು ಶಿವನ ದೇವಾಲಯದ ವಿಶೇಷ ಪೂಜೆಗಳಿರುತ್ತದೆ. ಆದರೆ ಈ ಬಾರಿ ಬೆಂಗಳೂರು ಹೊರವಲಯದ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಮಹಾ ಶಿವರಾತ್ರಿ ಉತ್ಸವವನ್ನು ಬಹಳ ಸಡಗರ ಸಂಭ್ರಮದೊಂದಿಗೆ ಉತ್ಸಾಹದಿಂದ ಆಚರಿಸಲಾಗುತ್ತಿದೆ. ಹೌದು, ಈ ವರ್ಷದ ಶಿವರಾತ್ರಿಯ ಮತ್ತೊಂದು ವಿಶೇಷತೆಯೆಂದರೆ 1000 ವರ್ಷಗಳ ನಂತರ ಪುರಾತನ ಸೋಮನಾಥ ಜ್ಯೋತಿರ್ಲಿಂಗದ ಬಹಿರಂಗ ಪ್ರಕಟಣೆಯಾಗುತ್ತಿದೆ.
ದಾಳಿಗೆ ನಾಶವಾಗಿದ್ದ ಪುರಾತನ ಸೋಮನಾಥ ಜ್ಯೋತಿರ್ಲಿಂಗದ ಪುನರ್ ಉದಯ
ಕ್ರಿ.ಶ.1025 ರಲ್ಲಿ ಮಹ್ಮದ್ ಘಜ್ನಿಯು ಸೋಮನಾಥ ದೇವಾಲಯವನ್ನು ಧ್ವಂಸಗೊಳಿಸಿದನು. ಆದರೆ ಆ ಲಿಂಗವು ಸಂಪೂರ್ಣ ನಾಶವಾಗಿರಲಿಲ್ಲ. ಸೋಮನಾಥ ಜ್ಯೋತಿರ್ಲಿಂಗ ಒಂದು ವಿಶೇಷವಾದ ಶಿಲೆಯಿಂದ ಮಾಡಲ್ಪಟ್ಟಿದ್ದು, ಭೂಮಿಯಿಂದ 2 ಅಡಿ ಎತ್ತರದಲ್ಲಿ ಅದು ತೇಲುತ್ತಿತ್ತು. ಘಜ್ನಿಯ ದಾಳಿಯ ಬಳಿಕ ಅಗ್ನಿಹೋತ್ರಿ ಬ್ರಾಹ್ಮಣರು ಈ ಪವಿತ್ರ ಜ್ಯೋತಿರ್ಲಿಂಗದ ತುಂಡುಗಳನ್ನು ಕೊಂಡೊಯ್ದು, ದಕ್ಷಿಣ ಭಾರತದಲ್ಲಿ ರಹಸ್ಯವಾಗಿ ಆರಾಧಿಸುತ್ತಿದ್ದರು. ಹೀಗೆ ಅದೆಷ್ಟೋ ಪೀಳಿಗೆಗಳ ಬಳಿಕ ಈ ಲಿಂಗವು ಸೀತಾರಾಮ ಶಾಸ್ತ್ರಿಗಳ ಕೈಗೆ ಸೇರಿತು. ಹೀಗಿರುವಾಗ ಕಳೆದ 20 ವರ್ಷಗಳಿಂದ ಸೋಮನಾಥ ಜ್ಯೋತಿರ್ಲಿಂಗದ ಪುನಃ ಪ್ರತಿಷ್ಠಾಪನೆಯ ನಿರೀಕ್ಷೆಯಲ್ಲಿದ್ದರು.
ಅದಲ್ಲದೇ ಈ ಹಿಂದೆ ಸಂತ ಶ್ರೀ ಪ್ರಣವೇಂದ್ರ ಸರಸ್ವತಿಯವರು 1924ರಲ್ಲಿ ಈ ಪವಿತ್ರ ಜ್ಯೋತಿರ್ಲಿಂಗದ ತುಂಡುಗಳನ್ನು ಕಂಚಿ ಶಂಕರಾಚಾರ್ಯ ಸ್ವಾಮಿ ಚಂದ್ರಶೇಖರೇಂದ್ರ ಸರಸ್ವತಿಯವರಿಗೆ ಅರ್ಪಿಸಿದ್ದರು. ಅವರು “ಇದನ್ನು ಪ್ರತಿಷ್ಠಾಪಿಸಲು ಇನ್ನೂ 100 ವರ್ಷಗಳು ಬೇಕಾಗುತ್ತದೆ” ಎಂದು ಭವಿಷ್ಯವಾಣಿ ನುಡಿದಿದ್ದರು. 2024ರಲ್ಲಿ ಇವಾಗಿನ ಕಂಚಿ ಶಂಕರಾಚಾರ್ಯರ ಆಶೀರ್ವಾದ ಪಡೆದು, ಈ ಪವಿತ್ರ ಲಿಂಗವನ್ನು ಶ್ರೀ ಶ್ರೀ ರವಿಶಂಕರರ ಬಳಿಗೆ ತರಲು ಮುಂದಾದರು. ಇದೇ ಜನವರಿಯಲ್ಲಿ, ಪವಿತ್ರ ಜ್ಯೋತಿರ್ಲಿಂಗವನ್ನು ಆರ್ಟ್ ಆಫ್ ಲಿವಿಂಗ್ ಇಂಟರ್ನ್ಯಾಷನಲ್ ಕೇಂದ್ರಕ್ಕೆ ತಂದು ಸಾವಿರಾರು ಭಕ್ತರ ಎದುರು ಗುರುದೇವರು ಸಾವಿರ ವರ್ಷಗಳ ಹಳೆಯ ಲಿಂಗವನ್ನು ಅನಾವರಣ ಮಾಡಿದರು. ಈ ಲಿಂಗವನ್ನು ಕೈಯಲ್ಲಿ ಹಿಡಿದು, ಇದರಲ್ಲಿರುವ ಅದ್ಭುತ ಅಯಸ್ಕಾಂತ ಶಕ್ತಿಯನ್ನು ಎಲ್ಲರಿಗೂ ತೋರಿಸಿದರು.
ಇದನ್ನೂ ಓದಿ: ಮಹಾಶಿವರಾತ್ರಿ ಉಪವಾಸದ ಸಮಯದಲ್ಲಿ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು?
ಸಾವಿರ ವರ್ಷಗಳ ಹಳೆಯ ಲಿಂಗದ ಕುರಿತು 2007ರಲ್ಲಿ ನಡೆಸಿದ ಭೌಗೋಳಿಕ ಅಧ್ಯಯನ ನಡೆಸಲಾಯಿತು. ಈ ವೇಳೆಯಲ್ಲಿ ಈ ವಿಶೇಷ ಲಿಂಗದಲ್ಲಿ ಸಾಮಾನ್ಯ ಭೌತಿಕಶಾಸ್ತ್ರಕ್ಕೆ ನಿಲುಕದ, ವಿಶೇಷ ಚುಂಬಕೀಯ ಶಕ್ತಿಯ ಗುಣಗಳು ಇವೆ ಎನ್ನುವುದು ಪತ್ತೆಯಾಗಿತ್ತು. ಈ ಲಿಂಗದಲ್ಲಿರುವ ಲೋಹದ ಅಂಶವು ಅಯಸ್ಕಾಂತತೆಗೆ ಸಾಕಷ್ಟು ಕಡಿಮೆಯಾಗಿದ್ದು, ಇದರ ಬಗ್ಗೆ ತಿಳಿಯಲು ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲ. ಈ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸುತ್ತಲೇ ಇದ್ದಾರೆ.
Original Somnath Jyotirlinga
ಈ ಮಹಾ ಶಿವರಾತ್ರಿ ಉತ್ಸವದಂದು ಆಶ್ರಮದಲ್ಲಿ 1000 ವರ್ಷಗಳ ನಂತರ ಮೂಲ ಸೋಮನಾಥ ಜ್ಯೋತಿರ್ಲಿಂಗದ ದರ್ಶನವನ್ನು ಪಡೆಯಬಹುದಾಗಿದೆ. ಇಂತಹ ಅಪರೂಪದ ಅವಕಾಶವನ್ನು ಭಕ್ತರಿಗೆ ಒದಗಿಸಲಾಗಿದೆ. ಫೆಬ್ರವರಿ 26ರ ಸಂಜೆ 6:30 ಗಂಟೆಗೆ ಮಹಾ ರುದ್ರಾಭಿಷೇಕ ಮತ್ತು ಮಹಾ ಸತ್ಸಂಗದೊಂದಿಗೆ ಈ ಉತ್ಸವವು ಪ್ರಾರಂಭವಾಗಲಿದೆ. ಫೆಬ್ರವರಿ 27ರ ಮುಂಜಾನೆ 4:00 ಗಂಟೆಗೆ ಮಹಾ ರುದ್ರ ಹೋಮ ನಡೆಯಲಿದೆ. ಈ ಬಾರಿಯ ಮಹಾ ಶಿವರಾತ್ರಿಯಂದು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಿ ಭಕ್ತಿ ಭಾವದೊಂದಿಗೆ ಈ ಐತಿಹಾಸಿಕ ಕ್ಷಣಕ್ಕೆ ನೀವು ಸಾಕ್ಷಿಯಾಗಬಹುದು.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ