ಬೇಸಿಗೆ ರಜೆಯಲ್ಲಿ ಮಂತ್ರಾಲಯಕ್ಕೆ ಭೇಟಿ ನೀಡುವ ಯೋಚನೆ ಇದ್ಯಾ? ಹಾಗಿದ್ರೆ ಉಪಯುಕ್ತ ಮಾಹಿತಿ ಇಲ್ಲಿದೆ
ಪರೀಕ್ಷೆಗಳೆಲ್ಲಾ ಮುಗಿದು ಬೇಸಿಗೆ ರಜೆ ಇನ್ನೇನು ಆರಂಭವಾಗಲಿದೆ. ಬೇಸಿಗೆ ರಜೆಯಲ್ಲಿ ಮಂತ್ರಾಲಯಕ್ಕೆ ಭೇಟಿ ನೀಡಲು ಯೋಚಿಸುತ್ತಿದ್ದೀರಾ? ಬೆಂಗಳೂರಿನಿಂದ ಮಂತ್ರಾಲಯಕ್ಕೆ ವಿವಿಧ ಪ್ರಯಾಣ ಸೌಲಭ್ಯಗಳಿವೆ. ವಂದೇ ಭಾರತ್ ಎಕ್ಸ್ಪ್ರೆಸ್, ಇತರ ರೈಲುಗಳು, ಬಸ್ ಮತ್ತು ವಿಮಾನ ಮೂಲಕ ಹೋಗಬಹುದು. ವಿಮಾನದ ಮೂಲಕ ಹೈದರಾಬಾದ್ ಮೂಲಕ ಹೋಗಬೇಕಾಗುತ್ತದೆ. ಈ ಲೇಖನದಲ್ಲಿ ಪ್ರಯಾಣದ ವಿವರಗಳು, ವೆಚ್ಚ ಮತ್ತು ಸಮಯದ ಬಗ್ಗೆ ಮಾಹಿತಿ ನೀಡಲಾಗಿದೆ.

ಬೇಸಿಗೆ ರಜೆ ಇನ್ನೇನು ಆರಂಭವಾಗಲಿದೆ. ಬೇಸಿಗೆಯಲ್ಲಿ ಸಾಕಷ್ಟು ಮಂದಿ ಪ್ರವಾಸದ ಸಿದ್ಧತೆಯಲ್ಲಿರುತ್ತಾರೆ. ಯಾಕೆಂದರೆ ಮಕ್ಕಳಿಗೂ ರಜೆ ಇರುವುದರಿಂದ ಒಂದೊಳ್ಳೆ ತಾಣಕ್ಕೆ ಮಕ್ಕಳೊಂದಿಗೆ ಭೇಟಿ ನೀಡಬೇಕು ಎಂಬುದು ಸಾಕಷ್ಟು ಜನರ ಕನಸು. ಆದರೆ ಈ ಬೇಸಿಗೆ ರಜೆಯಲ್ಲಿ ನೀವು ಧಾರ್ಮಿಕ ಪ್ರದೇಶಕ್ಕೆ ಭೇಟಿ ನೀಡಲು ಬಯಸಿದರೆ ಮಂತ್ರಾಲಯವನ್ನು ಆಯ್ಕೆ ಮಾಡಿ. ಕುಟುಂಬ ಸಮೇತರಾಗಿ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾದರೆ ಮಂತ್ರಾಲಯದಕ್ಕೆ ಭೇಟಿ ನೀಡಿ. ಮಂತ್ರಾಲಯಕ್ಕೆ ಹೋಗುವ ಸಾರಿಗೆ ವ್ಯವಸ್ಥೆಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.
ಮಂತ್ರಾಲಯವು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಿಂದ 74 ಕಿ.ಮೀ ಮತ್ತು ಹೈದರಾಬಾದ್ ನಿಂದ 250 ಕಿ.ಮೀ ದೂರದಲ್ಲಿದೆ. ಇದು ಕರ್ನಾಟಕದ ಗಡಿಯ ಬಳಿ ಮತ್ತು ತುಂಗಭದ್ರಾ ನದಿಯ ದಡದಲ್ಲಿದೆ. ಮಂತ್ರಾಲಯದಲ್ಲಿ ಗುರು ರಾಘವೇಂದ್ರ ಸ್ವಾಮಿಯನ್ನು ಪೂಜಿಸಲಾಗುತ್ತಿದ್ದು, ಬೆಳಗ್ಗೆ 6ಗಂಟೆಯಿಂದ ಮಧ್ಯಾಹ್ನ 2ಗಂಟೆಯ ವರೆಗೆ ಹಾಗೂ ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಈ ದೇವಾಲಯ ತೆರೆದಿರುತ್ತದೆ.
ಬೆಂಗಳೂರಿನಿಂದ ಮಂತ್ರಾಲಯಕ್ಕೆ ರೈಲುಗಳು:
ವಂದೇ ಭಾರತ್ ಎಕ್ಸ್ ಪ್ರೆಸ್:
ಈ ವಂದೇ ಭಾರತ್ ರೈಲು ಮಂತ್ರಾಲಯ ರೋಡ್ ನಿಲ್ದಾಣದಿಂದ ನಿಲ್ಲುವುದರಿಂದ ನೀವು ಇದರಲ್ಲಿ ಪ್ರಯಾಣಿಸಬಹುದು. ಬೆಂಗಳೂರಿನಿಂದ ಮಧ್ಯಾಹ್ನ ಸಂಚಾರ ಶುರು ಮಾಡಿ ರಾತ್ರಿ 8.15ರ ಸುಮಾರಿಗೆ ಮಂತ್ರಾಲಯ ರೋಡ್ ತಲುಪುತ್ತದೆ. ಚೇರ್ ಕೋಚ್ನಲ್ಲಿ ಪ್ರಯಾಣಿಸಲು ಒಂದು ಟಿಕೇಟ್ಗೆ 1175 ರೂ ಪಾವತಿಸಬೇಕು.
ಇದನ್ನೂ ಓದಿ: Summer Vacation: ಕಡಲತೀರಗಳ ಸೌಂದರ್ಯ ಸವಿಯಲು ಬೇಸಿಗೆ ರಜೆಯಲ್ಲಿ ಮಕ್ಕಳೊಂದಿಗೆ ಇಲ್ಲಿಗೆ ಭೇಟಿ ನೀಡಿ
ಯಶವಂತಪುರ ರೈಲ್ವೆ ಸ್ಟೇಷನ್:
YPR LUR EXP(16583) ರೈಲು ಯಶವಂತಪುರ ಜಂಕ್ಷನ್ನಿಂದ ರಾತ್ರಿ 7.15ಕ್ಕೆ ಹೊರಡುವ ಈ ರೈಲು ರಾತ್ರಿ 1.25 ಮಂತ್ರಾಲಯವನ್ನು ತಲುಪಲಿದೆ. ರೈಲು ಟಿಕೇಟ್ ದರ 235. ಇದಲ್ಲದೇ ನೀವು ಸಾಕಷ್ಟು ರೈಲುಗಳ ಮೂಲಕ ಬೆಂಗಳೂರಿನಿಂದ ಮಂತ್ರಾಲಯವನ್ನು ತಲುಪಬಹುದು.
ವಿಮಾನ ಪ್ರಯಾಣ:
ನೀವು ಮಂತ್ರಾಲಯಕ್ಕೆ ವಿಮಾನದಲ್ಲಿ ಪ್ರಯಾಣಿಸಲು ಬಯಸಿದರೆ ನೇರ ವಿಮಾನ ಸಂಪರ್ಕವಿಲ್ಲ. ಬೆಂಗಳೂರು ವಿಮಾನ ನಿಲ್ದಾಣದಿಂದ ಹೋಗಿ ಸುಮಾರು 250 ಕಿ.ಮೀ ದೂರದಲ್ಲಿ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಬೇರೆ ವಾಹನದಲ್ಲಿ ಹೋಗಬಹುದು.
ಬಸ್ ಪ್ರಯಾಣ:
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅಥವಾ ಕೆಎಸ್‌ಟಿಡಿಸಿ A/c ಡಿಲಕ್ಸ್ ಕೋಚ್ ಬಸ್‌ಗಳಲ್ಲಿ ನೀವು ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗಬಹುದು. ಪ್ರತಿ ಶುಕ್ರವಾರ ಮಂತ್ರಾಲಯ ದರ್ಶನ ಪ್ಯಾಕೇಜ್ ಲಭ್ಯವಿದ್ದು, ಶುಕ್ರವಾರ ರಾತ್ರಿ 8 ಗಂಟೆಗೆ ಯಶವಂತಪುರದ ಬಿಎಂಟಿಸಿ ಬಸ್ ನಿಲ್ದಾಣದಿಂದ ಬಸ್ ಹೊರಡುತ್ತದೆ. ಮರುದಿನ ಬೆಳಗ್ಗೆ 5.30 ಮಂತ್ರಾಲಯ ತಲುಪಲಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:20 pm, Sun, 16 March 25