Navaratri 2024 : ನವರಾತ್ರಿ ಹಬ್ಬಕ್ಕೆ ಸಾಂಪ್ರದಾಯಿಕ ಲುಕ್ ನೀಡುವ ಉಡುಗೆಗಳಿವು
ಹಬ್ಬ ಬಂತೆಂದರೆ ಸಾಕು, ಪೂಜೆ, ವಿಶೇಷ ತಿನಿಸುಗಳು, ಬಟ್ಟೆಗಳು ಹಾಗೂ ಆಭರಣಗಳ ತಯಾರಿ ಜೋರಾಗಿಯೇ ಇರುತ್ತದೆ. ನವರಾತ್ರಿಯ ಮೊದಲ ದಿನದಿಂದ ಆರಂಭವಾಗಿ ವಿಜಯದಶಮಿಯವರೆಗೆ ದಿನಕ್ಕೊಂದು ಉಡುಗೆ ತೊಟ್ಟು ಕಂಗೊಳಿಸಬಹುದು. ಹೀಗಾಗಿ ನವರಾತ್ರಿಯ ಒಂಬತ್ತು ದಿನಗಳ ವಿಶೇಷ ಪೂಜೆಯಿರುವ ಕಾರಣ ಸಾಂಪ್ರದಾಯಿಕ ಉಡುಗೆಯನ್ನು ಹೇಳಿ ಮಾಡಿಸಿದ್ದಾಗಿದ್ದು, ಹಬ್ಬದ ಉಡುಗೆ ಹೆಚ್ಚಿಸಲು ಇಲ್ಲಿದೆ ಸಲಹೆಗಳು
ಹಬ್ಬವೆಂದರೆ ಸಂಭ್ರಮ, ಸಡಗರ. ಮನೆ ಮಂದಿಯೆಲ್ಲಾ ಜೊತೆ ಸೇರಿ ಹಬ್ಬದಡುಗೆಯನ್ನು ಸವಿದು ಖುಷಿಯಿಂದ ಕಾಲ ಕಳೆಯುತ್ತಾರೆ. ಆದರೆ ನವರಾತ್ರಿಯ ಹಬ್ಬವು ಹಿಂದೂಗಳಲ್ಲಿ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಒಂಬತ್ತು ದಿನಗಳವರೆಗೆ ಹಬ್ಬದ ವಾತಾವರಣವು ಇರುತ್ತದೆ. ಹೀಗಾಗಿ ಪ್ರತಿ ದಿನವು ಯಾವ ರೀತಿಯ ಉಡುಗೆಯನ್ನು ಧರಿಸುವುದು ಎನ್ನುವ ಪ್ರಶ್ನೆ ಕಾಡುವುದು ಸಹಜ. ಹಬ್ಬಕ್ಕೆ ಸಾಂಪ್ರದಾಯಿಕವಾಗಿ ಕಾಣಿಸಿಕೊಳ್ಳಬೇಕೆನ್ನುವವರಿಗೆ ಹಲವಾರು ಆಯ್ಕೆಗಳಿವೆ. ದಿನಾಲು ಒಂದೊಂದು ಬಗೆಯ ಸ್ಟೈಲಿಶ್ ಹಾಗೂ ಸಾಂಪ್ರದಾಯಿಕ ಉಡುಗೆ ತೊಟ್ಟು ಕಂಗೊಳಿಸಬಹುದು.
- ಸೀರೆ : ಹಬ್ಬವಿರಲಿ, ಪೂಜೆಯಿರಲಿ ಅದಕ್ಕೆ ಹೇಳಿ ಮಾಡಿಸಿದ ಉಡುಗೆಯೆಂದರೆ ಅದುವೇ ಸೀರೆ. ಹೆಣ್ಣು ಮಕ್ಕಳು ಇಷ್ಟ ಪಡುವ ಈ ಸೀರೆಯಲ್ಲಿ ಸಾಂಪ್ರದಾಯಿಕ ನೋಟವನ್ನು ನೀಡುವುದಲ್ಲದೇ ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು. ವಿವಿಧ ವಿನ್ಯಾಸದ ರೇಷ್ಮೆ ಸೀರೆಗಳು ಹೊಸ ಲುಕ್ ನೀಡುತ್ತದೆ. ಹೀಗಾಗಿ ಸೀರೆಯನ್ನು ಮೊದಲ ಆಯ್ಕೆಯಾಗಿಟ್ಟುಕೊಳ್ಳಬಹುದು.
- ಚನಿಯ ಚೋಲಿ : ಹಬ್ಬದ ಸಮಯಕ್ಕೆ ಸಾಂಪ್ರದಾಯಿಕ ಚನಿಯ ಚೋಲಿವು ನಿಮ್ಮ ಲುಕ್ ಬದಲಾಯಿಸುವುದಂತೂ ಖಂಡಿತ. ಬಣ್ಣ ಬಣ್ಣದ ಚೋಲಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಮೈ ಬಣ್ಣಕ್ಕೆ ಹೊಂದುವ ಈ ಬಟ್ಟೆಗಳ ಆಯ್ಕೆಯಿರಲಿ. ಹಗಲಿನಲ್ಲಿ ಈ ಚೋಲಿ ಡ್ರೆಸ್ ಧರಿಸುವಿರಿಯಾದರೆ ತಿಳಿ ಬಣ್ಣ ಹಾಗೂ ರಾತ್ರಿ ವೇಳೆ ಗಾಢ ಬಣ್ಣದ ಉಡುಗೆಯನ್ನು ಧರಿಸಿ ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು.
- ಪಲಾಝೋ ಸೆಟ್ : ಸ್ಟೈಲಿಶ್ ಜೊತೆಗೆ ಸಾಂಪ್ರದಾಯಿಕವಾಗಿ ಕಾಣಿಸಿಕೊಳ್ಳಬೇಕೆಂದು ಬಯಸುತ್ತಿದ್ದರೆ ಅಂತಹವರಿಗೆ ಈ ಪಲಾಝೋ ಸೆಟ್ ಹೇಳಿ ಮಾಡಿಸಿದ್ದಾಗಿದೆ. ಆರಾಮದಾಯಕವಾದ ಉಡುಗೆಯಾಗಿದ್ದು, ವಿವಿಧ ಬಣ್ಣಗಳಲ್ಲಿ ಲಭ್ಯವಿದ್ದು ಹಬ್ಬಕ್ಕೆ ಈ ಉಡುಗೆ ಧರಿಸಿ ಎಲ್ಲರನ್ನು ಸೆಳೆಯಬಹುದು.
- ಲೆಹಂಗಾ ಸೆಟ್ ಗಳು : ನವರಾತ್ರಿ ಹಬ್ಬಕ್ಕೆ ಮಿಂಚಲು ಸಜ್ಜಾಗಿದ್ದರೆ ಲೆಹಂಗಾ ಸೆಟ್ ಗಳು ಬೆಸ್ಟ್ ಆಯ್ಕೆ ಎನ್ನಬಹುದು. ಈ ಉಡುಗೆಯೂ ಸಾಂಪ್ರದಾಯಿಕ ನೋಟವನ್ನು ನೀಡುವುದರೊಂದಿಗೆ ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು. ಆಧುನಿಕ ಫ್ಯಾಷನ್‌ನ ಗೆ ಹೊಂದುವಂತೆ ಇರುವ ಈ ಲೆಹಂಗಾದಲ್ಲಿ ವಿವಿಧ ಸ್ಲೀವ್ ಮತ್ತು ನೆಕ್‌ಲೈನ್ ಮಾದರಿಗಳಿದ್ದು, ಸ್ಟೈಲಿಶ್ ಲುಕ್ ನೀಡುತ್ತವೆ.
- ಕುರ್ತಾ ಸೆಟ್ : ಕುರ್ತಾ ಸೆಟ್ ಅಥವಾ ಚೂಡಿದಾರ್ ಆರಾಮದಾಯಕ ಉಡುಪಾಗಿದೆ. ಧರಿಸಲು ಅಷ್ಟೇ ಸುಲಭದಾಯಕವಾಗಿದೆ. ಹೀಗಾಗಿ ಸಿಂಪಲ್ ಆಗಿರಬೇಕೆನ್ನುವವರು ಈ ಕುರ್ತಾ ಸೆಟ್ ಆಯ್ಕೆ ಮಾಡಿಕೊಳ್ಳಬಹುದು.
- ಕ್ರಾಪ್ ಟಾಪ್ ಮತ್ತು ಸ್ಕರ್ಟ್‌ಗಳು : ನವರಾತ್ರಿ ಹಬ್ಬಕ್ಕೆ ರೋಮಾಂಚಕ ಬಣ್ಣದ ಸ್ಕರ್ಟ್‌ನೊಂದಿಗೆ ಕಾಂಟ್ರಾಸ್ ಬಣ್ಣದ ಕ್ರಾಪ್ ಟಾಪ್ ಧರಿಸಿ ಅದಕ್ಕೆ ಒಪ್ಪುವ ಆಭರಣ ಧರಿಸಿದರೆ ವಿಶೇಷ ನೋಟವನ್ನು ನಿಮ್ಮದಾಗಿಸಿಕೊಳ್ಳಬಹುದು. ಹೀಗಾಗಿ ಹಬ್ಬದ ರಂಗು ಹೆಚ್ಚಿಸಲು ಉಡುಗೆಗಳ ಆಯ್ಕೆಯ ಕಡೆಗೂ ಹೆಚ್ಚು ಗಮನ ಕೊಡುವುದು ಉತ್ತಮ.
ಬಟ್ಟೆಗಳ ಆಯ್ಕೆಯೊಂದಿಗೆ ಈ ವಿಷಯಗಳ ಬಗ್ಗೆ ಗಮನವಿರಲಿ
ಆಭರಣಗಳು : ಉಡುಗೆಗೆ ತಕ್ಕಂತೆ ಮ್ಯಾಚಿಂಗ್ ಕಿವಿಯೋಲೆ, ಕೈ ಬಳೆಗಳು ಮತ್ತು ಸರವು ಔಟ್‌ಫಿಟ್‌ಗೆ ಹೊಸ ಲುಕ್ ನೀಡುತ್ತದೆ. ಹೀಗಾಗಿ ಸೀರೆಗೆ ಸಾಂಪ್ರದಾಯಿಕ ಆಭರಣವನ್ನು ಆಯ್ಕೆ ಮಾಡಿಕೊಂಡರೆ ನಿಮ್ಮ ನೋಟವನ್ನು ಇಮ್ಮಡಿಗೊಳಿಸುತ್ತದೆ.
ಪಾದರಕ್ಷೆಗಳು : ಸಾಂಪ್ರದಾಯಿಕ ಉಡುಪಿಗೆ ತಕ್ಕ ಹಾಗೆ ಪಾದರಕ್ಷೆ ಧರಿಸುವುದು ಬಹಳ ಮುಖ್ಯ. ನಿಮ್ಮ ನಿಲುವಿಗೆ ತಕ್ಕಂತೆ ಫ್ಲಾಟ್ ಗಳು ಅಥವಾ ಬ್ಲಾಕ್ ಹೀಲ್ಸ್ ಆಯ್ಕೆಮಾಡಿ. ಪಾದರಕ್ಷೆಯ ಬಗ್ಗೆ ಗಮನಹರಿಸದೇ ಹೋದರೆ ನಿಮ್ಮ ಒಟ್ಟಾರೆ ನೋಟವೇ ಹಾಳಾಗುತ್ತದೆ.