ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನವನ್ನು ಪರಾಕ್ರಮ ದಿನವನ್ನಾಗಿ ಆಚರಿಸುವುದು ಏಕೆ? ಇಲ್ಲಿದೆ ಮಾಹಿತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 23, 2025 | 10:17 AM

Netaji Subhash Chandra Bose Jayanti 2025: ನನಗೆ ನಿಮ್ಮ ರಕ್ತವನ್ನು ನೀಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ” ಎನ್ನುವ ನೇತಾಜಿಯವರ ಘೋಷವಾಕ್ಯವು ಯುವಕರ ಮೈಯಲ್ಲಿನ ನೆತ್ತರು ರಕ್ತವು ಕುದಿಯುವಂತೆ ಮಾಡುತ್ತದೆ. ಹೌದು, ಸುಭಾಷ್ ಚಂದ್ರ ಬೋಸ್ ಭಾರತದ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರರು, ಬ್ರಿಟಿಷರ ದಾಸ್ಯದಿಂದ ಮುಕ್ತರಾಗಲು ನೇತಾಜಿ ನೀಡಿದ ಕೊಡುಗೆ ಅಪಾರವಾದದ್ದು. ಜನವರಿ 23 ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನವಾಗಿದ್ದು, ಅವರ ಜನ್ಮ ದಿನದಂದು ಪರಾಕ್ರಮ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವ ಸೇರಿದಂತೆ ಇನ್ನಿತ್ತರ ಮಾಹಿತಿ ಇಲ್ಲಿದೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನವನ್ನು ಪರಾಕ್ರಮ ದಿನವನ್ನಾಗಿ ಆಚರಿಸುವುದು ಏಕೆ? ಇಲ್ಲಿದೆ ಮಾಹಿತಿ
ನೇತಾಜಿ ಸುಭಾಷ್ ಚಂದ್ರ ಬೋಸ್
Follow us on

ಬಂಗಾಳದ ಶೌರ್ಯದ ಮಗ, ಬ್ರಿಟೀಷರ ನಿದ್ದೆಗೆಡಿಸಿದ್ದವರು ನೇತಾಜಿ ಸುಭಾಷ್ ಚಂದ್ರ ಬೋಸ್. ಹೌದು, ತಮ್ಮ ಘೋಷವಾಕ್ಯದಿಂದಲೇ ಯುವಕರಲ್ಲಿ ಹೋರಾಟದ ಕಿಚ್ಚನ್ನು ಹಚ್ಚಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕೊಡುಗೆ ಅಪಾರವಾದದ್ದು. ಹೀಗಾಗಿ ದೇಶದ ಜನರು ಇಂದಿಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಗೌರವದಿಂದ ಸ್ಮರಿಸುತ್ತಾರೆ. ಇದೇ ಜನವರಿ 23ರಂದು ಸುಭಾಷ್ ಚಂದ್ರ ಬೋಸ್ ಅವರ 128 ನೇ ಜನ್ಮ ದಿನಾಚರಣೆ ಆಚರಿಸಲಾಗುತ್ತಿದೆ. ಅದಲ್ಲದೇ, ಸ್ವಾತಂತ್ರ್ಯ ಹೋರಾಟದಲ್ಲಿ ಒಬ್ಬರಾಗಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ವಿಶೇಷ ಸ್ಮರಣಾರ್ಥ ದಿನದಂದು ಗೌರವಿಸುವ ಪರಾಕ್ರಮ ದಿನವನ್ನಾಗಿ ಆಚರಿಸಲಾಗುತ್ತಿದೆ.

ಹೌದು, ಒರಿಸ್ಸಾದ ಕಟಕ್‌ನಲ್ಲಿ ಬಂಗಾಳಿ ಕುಟುಂಬದಲ್ಲಿ 1897ರ ಜನವರಿ 23ರಂದು ಜನಿಸಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಶ್ರೀಮಂತ ಕುಟುಂಬದಿಂದ ಬಂದವರು. ಆದರೆ ದೇಶದ ಮೇಲೆ ಇದ್ದ ಅಪಾರ ಪ್ರೇಮವು ಇವರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕುವಂತೆ ಮಾಡಿತ್ತು. ಹೀಗಾಗಿ ತಮ್ಮ ಇಡೀ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಸಿದರು. ಇಂಗ್ಲೆಂಡ್ ನಿಂದ ಐಸಿಎಸ್ ಪದವಿಯನ್ನು ಪಡೆದ ಬೋಸ್ 1921 ರಲ್ಲಿ ಭಾರತಕ್ಕೆ ಮರಳಿದರು. ತದನಂತರದಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾದರು.

ಆದರೆ ಈ ಸುಭಾಷ್ ಚಂದ್ರ ಬೋಸ್ ಅವರಿಗೆ ಮಂದಗಾಮಿ ಚಿಂತನೆಯಲ್ಲಿ ನಂಬಿಕೆ ಇರಲಿಲ್ಲ. ಹೀಗಾಗಿ ನೇತಾಜಿಯವರ ಹೋರಾಟ ಹಾದಿಯೂ ತೀಕ್ಷತೆಯಿಂದ ಕೂಡಿತ್ತು. ಆ ಕಾರಣಕ್ಕಾಗಿಯೇ ಇಂಡಿಯನ್ ನ್ಯಾಶನಲ್ ಆರ್ಮಿ ಸ್ಥಾಪಿಸಿ, ಸ್ವಾತಂತ್ರ್ಯ ಹೋರಾಟಕ್ಕೆ ಮತ್ತಷ್ಟು ಬೆಂಬಲ ನೀಡಿದರು. ಬ್ರಿಟಿಷರನ್ನು ಭಾರತದಿಂದ ಓಡಿಸಲು ಮಿಲಿಟರಿ ಕಾರ್ಯಾಚರಣೆಯಿಂದ ಮಾತ್ರ ಸಾಧ್ಯ ಎಂದು ನಂಬಿದ್ದರು. ತಮ್ಮ ಹೋರಾಟದ ಹಾದಿಯಲ್ಲಿ ಒಂದಷ್ಟು ಬದಲಾವಣೆಯ ತಂದರು. ಹೀಗೆ ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಸ್ ಚಂದ್ರರವರ ಹೋರಾಟ ಹಾದಿಯೂ ಎಲ್ಲರಿಗೂ ಪ್ರೇರಣೆದಾಯಕವಾಗಿದೆ.

ಇದನ್ನೂ ಓದಿ: ಈ ವರ್ಷ ಹೋಳಿ ಯಾವಾಗ? ಹೋಲಿಕಾ ದಹನ ಯಾವ ದಿನ ನಡೆಯುತ್ತದೆ?

ಪರಾಕ್ರಮ ದಿನವನ್ನು ಆಚರಿಸುವುದು ಏಕೆ?

ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸುಭಾಷ್ ಚಂದ್ರ ಬೋಸ್ ನೀಡಿದ ಕೊಡುಗೆಗಳನ್ನು ಗೌರವಿಸಲು 2021 ರಿಂದ ಅವರ ಹುಟ್ಟುಹಬ್ಬದ ದಿನವೇ ಪರಾಕ್ರಮ ದಿನ ಆಚರಿಸಲು ನಿರ್ಧರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಜನವರಿ 23 ರಂದು ಪರಾಕ್ರಮ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ಪರಾಕ್ರಮ ದಿನ ಆಚರಣೆಯ ಮೂಲ ಉದ್ದೇಶವೇ ಸ್ವಾತಂತ್ರ ಹೋರಾಟಕ್ಕಾಗಿ ಮಾಡಿದ ತ್ಯಾಗವನ್ನು ಮುಂದಿನ ಪೀಳಿಗೆಗೆ ತಲುಪಿಸುವುದಾಗಿದೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ಫೂರ್ತಿದಾಯಕ ನುಡಿಮುತ್ತುಗಳು

* ಅನ್ಯಾಯವನ್ನು ಸಹಿಸಿಕೊಳ್ಳುವುದು ಮತ್ತು ತಪ್ಪುಗಳೊಂದಿಗೆ ರಾಜಿ ಮಾಡಿಕೊಳ್ಳುವುದು ನಮ್ಮ ದೊಡ್ಡ ಅಪರಾಧ ಎಂಬುದು ನೆನಪಿಡಿ.

* ತಾಯಿಯ ಪ್ರೀತಿ ಅತ್ಯಂತ ಆಳವಾದದ್ದು ಏಕೆಂದರೆ ಅದರಲ್ಲಿ ಯಾವುದೇ ಸ್ವಾರ್ಥವಿಲ್ಲ ಮತ್ತು ನಾವು ಅದನ್ನು ಎಂದಿಗೂ ಹೋಲಿಸಲಾಗುವುದಿಲ್ಲ.

* ಒಬ್ಬ ವ್ಯಕ್ತಿ ತನ್ನ ಸಿದ್ಧಾಂತಕ್ಕಾಗಿ ಸಾವನ್ನಪ್ಪಬಹುದು. ಆದರೆ, ಆತನ ಮರಣಾನಂತರವೂ ಉಳಿಯುವ ಆ ಸಿದ್ಧಾಂತ ಸಾವಿರ ಜನರಲ್ಲಿ ಅವತರಿಸುತ್ತದೆ.

* ಸ್ವಾತಂತ್ರ್ಯವನ್ನು ಯಾರೂ ಕೊಡುವುದಿಲ್ಲ, ಅದನ್ನು ನಾವೇ ಪಡೆದುಕೊಳ್ಳಬೇಕು.

* ನೀವು ನನಗೆ ರಕ್ತಕೊಡಿ, ನಾನು ನಿಮಗೆ ಸ್ವಾತಂತ್ರ್ಯ ನೀಡುತ್ತೇನೆ.

* ಹೋರಾಟ ನಡೆಸದಿದ್ದರೆ, ಸವಾಲನ್ನು ಎದುರಿಸಲು ಮುಂದಾಗದಿದ್ದರೆ ಜೀವನ ಅರ್ಧದಷ್ಟು ಆಸಕ್ತಿಯನ್ನು ಕಳೆದುಕೊಳ್ಳುತ್ತದೆ.

* ಸಂಘರ್ಷವು ನನ್ನನ್ನು ಮನುಷ್ಯನನ್ನಾಗಿ ರೂಪಿಸಿತು. ನನ್ನಲ್ಲಿ ಆತ್ಮವಿಶ್ವಾಸವು ಸೃಷ್ಟಿಯಾಯಿತು, ನನ್ನಲ್ಲಿ ಅದು ಮೊದಲು ಇರಲಿಲ್ಲ.

* ಇತಿಹಾಸದ ಯಾವುದೇ ಮಹತ್ವದ ಬದಲಾವಣೆಗಳನ್ನು ಮಾತುಕತೆ ಮೂಲಕ ಸಾಧಿಸಲಾಗಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 10:16 am, Thu, 23 January 25