Navaratri 2023: ನವರಾತ್ರಿಯ ಐದನೇ ದಿನ ಬಾಳೆಹಣ್ಣಿನ ಪಂಚಾಮೃತವನ್ನು ತಯಾರಿಸಿ, ದೇವಿಗೆ ನೈವೇದ್ಯ ಅರ್ಪಿಸಿ
ನವರಾತ್ರಿ ಹಬ್ಬದ 9 ದಿನವೂ ಜಗನ್ಮಾತೆಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಐದನೇ ದಿನ ಸ್ಕಂದ ಮಾತೆಯನ್ನು ಪೂಜಿಸಲಾಗುತ್ತದೆ. ಈ ದಿನ ದೇವರಿಗೆ ಬಾಳೆಹಣ್ಣಿನ ಪಂಚಾಮೃತವನ್ನು ತಯಾರಿಸಿದ ನೈವೇದ್ಯ ರೂಪದಲ್ಲಿ ನೀಡಬಹುದು.
ನವರಾತ್ರಿ ಹಬ್ಬ ದೇಶಾದ್ಯಂತ ಬಹಳ ವಿಜೃಂಭನೆಯಿಂದ ನಡೆಯುತ್ತಿದೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ಜಗನ್ಮಾತೆಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ನವರಾತ್ರಿಯ 5 ದಿನದಂದು ದೇವಿಯ ಸ್ಕಂದಮಾತೆ ಅವತಾರವನ್ನು ಪೂಜಿಸಲಾಗುತ್ತದೆ. ಈ ದಿನ ಸ್ಕಂದ ಮಾತೆಗೆ ಪ್ರಿಯವಾದ ಹಳದಿ ಬಣ್ಣದ ಉಡುಗೆಯನ್ನು ತೊಟ್ಟು ಮಂತ್ರಗಳನ್ನು ಪಠಿಸುತ್ತಾ ವಿಧಿವಿಧಾನದ ಪ್ರಕಾರ ದೇವಿಯನ್ನು ಪೂಜಿಸಿದರೆ, ದೇವಿಯು ಸಂತುಷ್ಟಳಾಗಿ ಭಕ್ತರಿಗೆ ಸಕಲ ಅಭಿವೃದ್ಧಿಯನ್ನು ಅನುಗ್ರಹಿಸುವಳು ಎಂಬ ನಂಬಿಕೆಯಿದೆ. ನವರಾತ್ರಿಯ 9 ದಿನವೂ ಒಂದೊಂದು ಬಗೆಯ ನೈವೇದ್ಯಯವನ್ನು ದೇವರಿಗೆ ಅರ್ಪಿಸುವ ಪದ್ಧತಿಯಿದೆ. ನವರಾತ್ರಿ ಪೂಜೆಯ ಐದನೇ ದಿನದಂದು ದೇವಿಗೆ ಬಾಳೆಹಣ್ಣಿನಿಂದ ತಯಾರಿಸಿದ ನೈವೇದ್ಯ ಪ್ರಸಾದವನ್ನು ಅರ್ಪಿಸಬೇಕು ಎಂದು ಹೇಳಲಾಗುತ್ತದೆ. ಏಕೆಂದರೆ ಬಾಳೆಹಣ್ಣು ಸ್ಕಂದಮಾತೆಗೆ ಪ್ರಿಯಾವಾದ ಹಣ್ಣು. ಹಾಗಾಗಿ ಈ ದಿನ ಸ್ಕಂದ ಮಾತೆಗೆ ಪ್ರಿಯವಾದ ಬಾಳೆಹಣ್ಣಿನಿಂದ ತಯಾರಿಸಿದ ನೈವೇದ್ಯ ಅರ್ಪಿಸಿದರೆ ಶ್ರೇಷ್ಠ ಎಂದು ಹೇಳಲಾಗುತ್ತದೆ. ಹಾಗಾದರೆ ನೀವು ಸ್ಕಂದಮಾತೆಯ ಪೂಜೆಗೆ ಬಾಳೆಹಣ್ಣಿನ ಪಂಚಾಮೃತವನ್ನು ತಯಾರಿಸಬಹುದು. ಪಂಚಾಮೃತವನ್ನು ತಯಾರಿಸುವುದು ಹೇಗೆ, ಅದರ ಪಾಕವಿಧಾನದ ಮಾಹಿತಿ ಇಲ್ಲಿದೆ.
ಬಾಳೆಹಣ್ಣಿನ ಪಂಚಾಮೃತವನ್ನು ತಯಾರಿಸಲು ಬೇಕಾಗಿರುವ ಸಾಮಾಗ್ರಿಗಳು:
- ಮಾಗಿದ ಬಾಳೆಹಣ್ಣು – 4 ರಿಂದ 6
- ಸೇಬು – 1
- ಖರ್ಜೂರ – 4
- ಒಣದ್ರಾಕ್ಷಿ – 2 ಟೀಸ್ಪೂನ್
- ಬೆಲ್ಲದ ಪುಡಿ – 4 ಟೀಸ್ಪೂನ್
- ಜೇನುತುಪ್ಪ – 1 ಟೀಸ್ಪೂನ್
- ಕಲ್ಲು ಸಕ್ಕರೆ – 2 ಟೀಸ್ಪೂನ್
- ಏಲಕ್ಕಿ ಪುಡಿ – 1 ಟೀಸ್ಪೂನ್
- ತುಪ್ಪ
ಇದನ್ನೂ ಓದಿ: ನವರಾತ್ರಿಯ ನಾಲ್ಕನೇ ದಿನ ಕೂಷ್ಮಂಡಾ ದೇವಿಗೆ ಮಾಲ್ಪುರಿ ನೈವೇದ್ಯ ಅರ್ಪಿಸಿ: ಸುಲಭ ಪಾಕವಿಧಾನ ಇಲ್ಲಿದೆ
ಬಾಳೆಹಣ್ಣಿನ ಪಂಚಾಮೃತವನ್ನು ತಯಾರಿಸುವ ವಿಧಾನ:
- ಮೊದಲಿಗೆ ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಬಾಳೆಹಣ್ಣುಗಳನ್ನು ಕತ್ತರಿಸಿ ಹಾಕಿಕೊಳ್ಳಿ, ನಂತರ ಸೇಬು ಹಣ್ಣನ್ನು ಸಣ್ಣಗೆ ಕತ್ತರಿಸಿ ಹಾಕಿಕೊಳ್ಳಿ, ಹಾಗೂ ಒಣಹಣ್ಣುಗಳನ್ನು ಕೂಡಾ ಸೇರಿಸಿಕೊಳ್ಳಿ ಮತ್ತು ಈ ಎಲ್ಲವನ್ನು ಒಂದು ಬಾರಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
- ನಂತರ ಈ ಮಿಶ್ರಣಕ್ಕೆ ಬೆಲ್ಲದ ಪುಡಿ, ಏಲಕ್ಕಿ ಪುಡಿ, ತುಪ್ಪ, ಜೇನುತುಪ್ಪವನ್ನು ಸೇರಿಸಿ ಈ ಎಲ್ಲಾ ಮಿಶ್ರಣವನ್ನು ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳಿ. ನಂತರ ಕೊನೆಯಲ್ಲಿ ಸಣ್ಣ ಸಣ್ಣ ಗಾತ್ರದ ಕಲ್ಲು ಸಕ್ಕರೆಯನ್ನು ಅದಕ್ಕೆ ಸೇರಿಸಿದರೆ, ಸ್ಕಂದ ಮಾತೆಗೆ ಅರ್ಪಿಸಲು ನೈವೇದ್ಯ ಸಿದ್ಧ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: