ರಾಮಮಂದಿರ ಉದ್ಘಾಟನೆಯಂದು ಮನೆಯಲ್ಲಿ ಕಜ್ಜಾಯ ಮಾಡಿ, ಇಲ್ಲಿದೆ ಸುಲಭ ವಿಧಾನ
ಹಿಂದೂಗಳ ಬಹುಕಾಲದ ಕನಸು ಈ ಶ್ರೀರಾಮ ಮಂದಿರ ನಿರ್ಮಾಣ. ಈಗಾಗಲೇ ಈ ಶ್ರೀರಾಮ ಮಂದಿರ ನಿರ್ಮಾಣವಾಗಿದ್ದು, ಜನವರಿ 22ರಂದು ಭವ್ಯವಾದ ರಾಮ ಮಂದಿರವನ್ನು ಉದ್ಘಾಟನೆಯೂ ನಡೆಯಲಿದ್ದು, ಕೆಲವೇ ದಿನಗಳಷ್ಟೆ ಬಾಕಿಯಿವೆ. ಅದಕ್ಕೂ ಮುಂಚಿತವಾಗಿ ದೇವಾಲಯದಲ್ಲಿ ನಡೆಯಬೇಕಾಗಿರುವ ಪೂಜಾ ವಿಧಿವಿಧಾನಗಳು ನಡೆಯುತ್ತಿವೆ. ಹಿಂದೂಗಳು ತಮ್ಮ ತಮ್ಮ ಮನೆಯಲ್ಲಿ ರಾಮಮಂದಿರ ಉದ್ಘಾಟನೆಯ ದಿನವನ್ನು ಹಬ್ಬದಂತೆ ಆಚರಿಸಲು ಮುಂದಾಗಿದ್ದಾರೆ. ಈ ದಿನವನ್ನು ಮತ್ತಷ್ಟು ರಂಗಾಗಿಸಬೇಕೆಂದುಕೊಂಡವರು ಮನೆಯಲ್ಲಿ ಕಜ್ಜಾಯವನ್ನು ಮಾಡಿ ಮನೆ ಮಂದಿಯ ಬಾಯಲ್ಲಿ ಸಿಹಿಯಾಗಿಸಿರಿ. ಹಾಗಾದ್ರೆ ಈ ಕಜ್ಜಾಯ ಮಾಡುವ ಸಿಂಪಲ್ ರೆಸಿಪಿ ಬಗ್ಗೆ ತಿಳಿಯೋಣ ಬನ್ನಿ.
ಸಿಹಿತಿಂಡಿಗಳು ಯಾರಿಗೆ ಇಷ್ಟ ಆಗಲ್ಲ ಹೇಳಿ, ಎಲ್ಲರೂ ಕೂಡ ಸಿಹಿತಿಂಡಿಗಳನ್ನು ಬಾಯಿ ಚಪ್ಪರಿಸಿಕೊಂಡು ಸವಿಯುತ್ತಾರೆ. ಈ ಹಬ್ಬದ ಸಮಯದಲ್ಲಿ ಸಿಹಿ ತಿಂಡಿಗಳು ಇಲ್ಲದಿದ್ದರೆ ಹಬ್ಬಕ್ಕೆ ಕಳೆನೇ ಇಲ್ಲದಂತಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಮನೆಯಲ್ಲಿ ಹಬ್ಬದ ಸಮಯದಲ್ಲಿ ಬಗೆ ಬಗೆಯ ಸಿಹಿ ತಿಂಡಿಗಳನ್ನು ಮಾಡಿ ಸವಿಯುತ್ತಾರೆ. ಇದೀಗ ಎಲ್ಲರೂ ಕೂಡ ಕಾತುರದಿಂದ ಕಾಯುತ್ತಿರುವ ರಾಮ ಮಂದಿರ ಉದ್ಘಾಟನೆಯೂ ಹಿಂದೂಗಳ ಪಾಲಿಗೆ ದೊಡ್ಡ ಹಬ್ಬವೇ. ಈ ದಿನ ಸಿಹಿ ತಿಂಡಿಯನ್ನು ಮಾಡಿ ಸವಿಯಬೇಕೆನ್ನುವವರು ಸುಲಭವಾಗಿ ಕಜ್ಜಾಯವನ್ನು ಮಾಡಿ ಸವಿಯಿರಿ.
ಕಜ್ಜಾಯ ಮಾಡಲು ಬೇಕಾಗುವ ಸಾಮಗ್ರಿಗಳು :
ಅಕ್ಕಿ- 1 ಬಟ್ಟಲು, ಬೆಲ್ಲ – ಮುಕ್ಕಾಲು ಕಪ್, ಬಿಳಿ ಎಳ್ಳು- ಸ್ವಲ್ಪ, ಗಸಗಸೆ – ಒಂದು ಚಮಚ, ಏಲಕ್ಕಿ ಪುಡಿ, ಹಾಗೂ ಎಣ್ಣೆ.
ಇದನ್ನೂ ಓದಿ:ರಾಮಮಂದಿರ ಉದ್ಘಾಟನೆಯಂದು ಮನೆಯಲ್ಲಿ ಮಾಡಿ ಗೋಧಿ ಹಿಟ್ಟಿನ ಹಲ್ವಾ
ಕಜ್ಜಾಯ ಮಾಡುವ ವಿಧಾನ
* ಮೊದಲಿಗೆ ಒಂದು ಕಪ್ ಅಕ್ಕಿಯನ್ನು 4 ಗಂಟೆಗಳ ಕಾಲ ನೆನೆಸಿಡಿ. ಆ ಬಳಿಕ ಕಾಟನ್ ಬಟ್ಟೆಯಲ್ಲಿ ನೆನೆಸಿಟ್ಟ ಅಕ್ಕಿಯನ್ನು ಒಣಗಿಸಿಕೊಳ್ಳಿ. ಒಣಗಿದ ಅಕ್ಕಿಯನ್ನು ಮಿಕ್ಸಿ ಜಾರಿಗೆ ಹಾಕಿಕೊಂಡು ಪುಡಿ ಮಾಡಿಕೊಳ್ಳಿ.
* ಇನ್ನೊಂದೆಡೆ ತವಾದಲ್ಲಿ ಒಂದು ಚಮಚ ಎಳ್ಳು ಹಾಗೂ ಒಂದು ಚಮಚ ಗಸಗಸೆಯನ್ನು ಹುರಿದುಕೊಳ್ಳಿ.
* ದೊಡ್ಡ ಬಾಣಲೆಯನ್ನಿಟ್ಟು ಬೆಲ್ಲದ ಪಾಕವನ್ನು ರೆಡಿ ಮಾಡಿಕೊಳ್ಳಿ. ಮುಕ್ಕಾಲು ಕಪ್ ಬೆಲ್ಲಕ್ಕೆ ಕಾಲು ಕಪ್ ನೀರನ್ನು ಹಾಕಿ, ಕೈಯಾಡಿಸುತ್ತಾ ಇರಿ. ಬೆಲ್ಲ ಪಾಕವಾಗುತ್ತಿದ್ದಂತೆ ಅಕ್ಕಿ ಹಿಟ್ಟನ್ನು ಸೇರಿಸಿಕೊಳ್ಳುತ್ತಾ ಕೈಯಾಡಿಸಿ.
* ಈ ಮಿಶ್ರಣಕ್ಕೆ ಎಳ್ಳು ಹಾಗೂ ಗಸಗಸೆ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಹೀಗೆ ರೆಡಿಯಾದ ಮಿಶ್ರಣವನ್ನು ಒಂದು ರಾತ್ರಿ ಹಾಗೆಯೇ ಬಿಡಿ. ಮರುದಿನ ನೋಡಿದರೆ ಈ ಮಿಶ್ರಣವು ಸ್ವಲ್ಪ ಗಟ್ಟಿಯಾಗಿರುತ್ತದೆ.
* ದೊಡ್ಡ ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಎಣ್ಣೆ ಕಾಯಲು ಬಿಡಿ. ಈ ಹಿಟ್ಟನ್ನು ಉಂಡೆಗಳನ್ನಾಗಿ ಮಾಡಿ ಕಜ್ಜಾಯದ ಆಕಾರದಲ್ಲಿ ತಟ್ಟಿಕೊಂಡು ಕಾದ ಎಣ್ಣೆಯಲ್ಲಿ ಬಿಡಿ. ಎರಡು ಬದಿಯಲ್ಲಿಯೂ ಕಂದು ಬಣ್ಣ ಬರುವವರೆಗೂ ಕರಿಯಿರಿ. ತಣ್ಣಗಾದ ಬಳಿಕ ರುಚಿ ರುಚಿಯಾದ ಕಜ್ಜಾಯವು ಸವಿಯಲು ಸಿದ್ಧವಾಗಿರುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ