Rose Facepack: ಹೊಳೆಯುವ ತ್ವಚೆಗೆ ಗುಲಾಬಿ ಹೂವಿನ ಫೇಸ್ಪ್ಯಾಕ್ ಹಚ್ಚಿ ನೋಡಿ
Skin Care: ಗುಲಾಬಿ ಹೂವುಗಳು ಪ್ರೀತಿಯ ಸಂಕೇತ. ರೋಸ್ ಡೇ ಪ್ರಯುಕ್ತ ಇಂದು ಅನೇಕರು ತಮ್ಮ ಸಂಗಾತಿಗೆ ಗುಲಾಬಿ ಹೂವುಗಳನ್ನು ನೀಡಿರುತ್ತಾರೆ. ಆ ಹೂವುಗಳನ್ನು ಒಣಗಿಸುವ ಬದಲು ಅದರಿಂದ ನಿಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡಬಹುದು. ಗುಲಾಬಿ ಹೂವುಗಳ ಎಸಳನ್ನು ಬಳಸಿ ಯಾವ ರೀತಿಯಲ್ಲಿ ಫೇಸ್ಪ್ಯಾಕ್ ಮಾಡಿಕೊಳ್ಳಬಹುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ತ್ವಚೆಯ ಆರೈಕೆ, ಸೌಂದರ್ಯಕ್ಕೆ ಮಾರುಕಟ್ಟೆಯಲ್ಲಿ ಹಲವು ರೀತಿಯ ಫೇಸ್ಪ್ಯಾಕ್ಗಳು (Facepack) ಸಿಗುತ್ತವೆ. ಆದರೆ, ಮನೆಯಲ್ಲೇ ನೀವು ನಿಮ್ಮ ತ್ವಚೆಯ ಆರೈಕೆ ಮಾಡಿಕೊಳ್ಳಬಹುದು. ಗುಲಾಬಿ ಹೂವು ನಿಮ್ಮ ಚರ್ಮದ ಆರೋಗ್ಯ ಕಾಪಾಡುವ ಅನೇಕ ಗುಣಗಳನ್ನು ಹೊಂದಿದೆ ಎಂದು ನಿಮಗೆ ತಿಳಿದಿದೆಯೇ? ಗುಲಾಬಿ ದಳಗಳ ರೂಪದಲ್ಲಿರಲಿ, ಅಥವಾ ರೋಸ್ ವಾಟರ್ (Rose Water) ಆಗಿರಲಿ ಗುಲಾಬಿ ಹೂವಿನಲ್ಲಿರುವ ವಿವಿಧ ವಿಟಮಿನ್‌ಗಳು, ಖನಿಜಗಳು ಮತ್ತು ತೈಲಗಳು ನಿಮ್ಮ ಚರ್ಮಕ್ಕೆ ಉತ್ತಮ ಹೊಳಪು ನೀಡುತ್ತವೆ.
ಸೌಂದರ್ಯ ಮತ್ತು ಸುಗಂಧದ ಹೊರತಾಗಿ ಗುಲಾಬಿ ಹೂವು ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಗುಲಾಬಿ ಹೂವುಗಳನ್ನು ಬಳಸಿ ಮಾಡಿಕೊಳ್ಳಬಹುದಾದ 5 ಫೇಸ್ಪ್ಯಾಕ್ಗಳ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ತ್ವಚೆಯ ಸೌಂದರ್ಯಕ್ಕೆ ಪಪ್ಪಾಯ ಹಣ್ಣು ಬಳಸಿ; ನಿಮ್ಮ ಚರ್ಮಕ್ಕೆ ಯಾವ ಫೇಸ್ಪ್ಯಾಕ್ ಬೆಸ್ಟ್?
ಜೇನುತುಪ್ಪ ಮತ್ತು ಗುಲಾಬಿ ಫೇಸ್ ಪ್ಯಾಕ್:
ತಾಜಾ ಗುಲಾಬಿಯಿಂದ ದಳಗಳನ್ನು ತೆಗೆದುಕೊಂಡು ಅವುಗಳನ್ನು ಚೆನ್ನಾಗಿ ತೊಳೆಯಿರಿ. ಅವುಗಳನ್ನು 3-4 ಗಂಟೆಗಳ ಕಾಲ ಸ್ವಲ್ಪ ರೋಸ್ ವಾಟರ್‌ನಲ್ಲಿ ನೆನೆಸಿಡಿ. ನಂತರ, ನೆನೆಸಿದ ಗುಲಾಬಿ ದಳಗಳು ಮತ್ತು ರೋಸ್ ವಾಟರ್ ಅನ್ನು ನುಣ್ಣಗೆ ಪೇಸ್ಟ್ ಆಗಿ ರುಬ್ಬಿಕೊಳ್ಳಿ. ಅದಕ್ಕೆ ಜೇನುತುಪ್ಪ ಸೇರಿಸಿ. ಆ ಮಿಶ್ರಣವನ್ನು 20-30 ನಿಮಿಷಗಳ ಕಾಲ ಫ್ರೀಜ್ ಮಾಡುವ ಮೂಲಕ ತಣ್ಣಗಾಗಿಸಿ. ಈ ಫೇಸ್ ಪ್ಯಾಕ್ ಅನ್ನು ಚರ್ಮದ ಮೇಲೆ ನಿಧಾನವಾಗಿ ಹಚ್ಚಿ, ನಿಮ್ಮ ಬೆರಳ ತುದಿಯಿಂದ ಮಸಾಜ್ ಮಾಡಿ. 15-20 ನಿಮಿಷಗಳ ನಂತರ ಮುಖ ತೊಳೆಯಿರಿ.
ಹಸಿ ಹಾಲು ಮತ್ತು ಗುಲಾಬಿ ಫೇಸ್ ಪ್ಯಾಕ್:
ತಾಜಾ ಗುಲಾಬಿಯ ಕೆಲವು ದಳಗಳನ್ನು ಚೆನ್ನಾಗಿ ತೊಳೆಯಿರಿ. ಅದನ್ನು ಪೇಸ್ಟ್ ಮಾಡಿ. ಈ ಪೇಸ್ಟ್‌ಗೆ 2 ಟೀಸ್ಪೂನ್ ಹಸಿ ಹಾಲು ಸೇರಿಸಿ. ಅದಕ್ಕೆ ಕಡಲೆಹಿಟ್ಟು ಮಿಕ್ಸ್ ಮಾಡಿ. ಅದನ್ನು ನಿಮ್ಮ ಮುಖ ಮತ್ತು ಕುತ್ತಿಗೆಯ ಮೇಲೆ ಹಚ್ಚಿ 15-20 ನಿಮಿಷಗಳ ಕಾಲ ಬಿಡಿ. 20 ನಿಮಿಷಗಳ ನಂತರ ಅದನ್ನು ತೊಳೆಯಿರಿ.
ಶ್ರೀಗಂಧದ ಪುಡಿ- ರೋಸ್ ಫೇಸ್ ಪ್ಯಾಕ್:
2 ತಾಜಾ ಗುಲಾಬಿಗಳಿಂದ ದಳಗಳನ್ನು ತೆಗೆದುಕೊಂಡು ಅವುಗಳನ್ನು ಪೇಸ್ಟ್ ಮಾಡಲು ಪುಡಿ ಮಾಡಿ. ಈ ಪೇಸ್ಟ್‌ಗೆ 1-2 ಚಮಚ ಶ್ರೀಗಂಧದ ಪುಡಿ ಮತ್ತು ಹಸಿ ಹಾಲನ್ನು ಸೇರಿಸಿ. ಫೇಸ್ ಪ್ಯಾಕ್ ತಯಾರಿಸಲು ಚೆನ್ನಾಗಿ ಮಿಶ್ರಣ ಮಾಡಿ. ಈ ಫೇಸ್ ಪ್ಯಾಕ್‌ಗೆ ಸ್ವಲ್ಪ ತಾಳ್ಮೆ ಬೇಕು. ಇದನ್ನು ಮುಖಕ್ಕೆ ಹಚ್ಚಿದ ನಂತರ ಸಂಪೂರ್ಣವಾಗಿ ಒಣಗುವವರೆಗೆ ನಿಮ್ಮ ಮುಖದ ಮೇಲೆ ಇರಲಿ. ಆಗ ಮಾತ್ರ ನೀವು ಅದನ್ನು ತೊಳೆಯಬಹುದು.
ಇದನ್ನೂ ಓದಿ: ಸ್ನಾನ ಮಾಡುವ ಮೊದಲು ಫೇಸ್ಪ್ಯಾಕ್ ಮಾಡಿಕೊಳ್ಳಬೇಕಾ? ಸ್ನಾನದ ನಂತರವಾ?
ಅಲೋವೆರಾ ಮತ್ತು ರೋಸ್ ಪ್ಯಾಕ್:
2 ತಾಜಾ ಗುಲಾಬಿಗಳಿಂದ ದಳಗಳನ್ನು ಪುಡಿ ಮಾಡಿ ಮತ್ತು ಎರಡು ಟೀಸ್ಪೂನ್ ಅಲೋವೆರಾ ಜೆಲ್ ಸೇರಿಸಿ. ಅದನ್ನು ನಯವಾದ ಪೇಸ್ಟ್ ಮಾಡಿ. ಆ ಪೇಸ್ಟ್ ತುಂಬಾ ದಪ್ಪವಾಗಿದ್ದರೆ, ಅದಕ್ಕೆ ಸ್ವಲ್ಪ ರೋಸ್ ವಾಟರ್ ಸೇರಿಸಿ. ಇತರ ಫೇಸ್ ಪ್ಯಾಕ್‌ಗಳಂತೆ, ಇದನ್ನು ನಿಮ್ಮ ಮುಖ ಮತ್ತು ಕುತ್ತಿಗೆಯ ಮೇಲೆ 20 ನಿಮಿಷಗಳ ಕಾಲ ಬಿಟ್ಟು ನಂತರ ತೊಳೆಯಿರಿ.
ಮೊಸರು ಮತ್ತು ರೋಸ್ ಪ್ಯಾಕ್:
ಗುಲಾಬಿ ದಳಗಳನ್ನು ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಅದಕ್ಕೆ ಅ ಚಮಚ ಜೇನುತುಪ್ಪ ಹಾಕಿ ಮಿಕ್ಸ್ ಮಾಡಿ. ಅದರ ಜೊತೆಗೆ ಮೊಸರು ಹಾಕಿ ಕಲೆಸಿ. ಇದು ತ್ವಚೆಯ ಕಲೆಯನ್ನು ಹೋಗಲಾಡಿಸಿ, ಚರ್ಮವನ್ನು ಮೃದುವಾಗಿಡುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ