Teachers Day 2024: ರಾಜ್ಯಸಭೆಯಲ್ಲಿ ಸಂಸ್ಕೃತ ಶ್ಲೋಕಗಳಿಂದಲೇ ಸದಸ್ಯರನ್ನು ಶಾಂತಗೊಳಿಸಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್
ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನದ ಗೌರವಾರ್ಥವಾಗಿ ದೇಶಾದ್ಯಂತ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಪ್ರತಿಯೊಂದು ಶಾಲಾ-ಕಾಲೇಜುಗಳಲ್ಲೂ ವಿದ್ಯಾರ್ಥಿಗಳು ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಹಾಗಾದ್ರೆ ಸೆಪ್ಟೆಂಬರ್ 5 ರಂದು ಆಚರಿಸಲಾಗುವ ಶಿಕ್ಷಕರ ದಿನದ ಇತಿಹಾಸ ಹಾಗೂ ಮಹತ್ವದ ಬಗೆಗಿನ ಮಾಹಿತಿಯೂ ಇಲ್ಲಿದೆ.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುವ ಮಾತಿನಂತೆ ಬೆಳೆಯುವ ಹಂತದಲ್ಲಿಯೇ ಮಕ್ಕಳಿಗೆ ಸರಿಯಾದ ಮಾರ್ಗದರ್ಶನವನ್ನು ನೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿಯೂ ಶಿಕ್ಷಕರದ್ದು. ತಂದೆ ತಾಯಿಯ ನಂತರ ಮಕ್ಕಳ ಜೀವನದಲ್ಲಿ ಬಹಳಷ್ಟು ಪಾತ್ರವಹಿಸುವವರೇ ಈ ಶಿಕ್ಷಕರು. ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸುವ ಶಿಕ್ಷಕರಿಗೆ ಗೌರವ ಸಲ್ಲಿಸಲುವ ಸಲುವಾಗಿ ನಮ್ಮ ಭಾರತದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 05 ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ಶಿಕ್ಷಕರ ದಿನಾಚರಣೆಯ ಇತಿಹಾಸ
ರಾಧಕೃಷ್ಣನ ಅತ್ಯುತ್ತಮ ಶಿಕ್ಷಕ, ತತ್ವಜ್ಞಾನಿ, ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಆಗಿದ್ದವರು. 1952 ರಿಂದ 1962 ರವರೆಗೆ ಭಾರತದ ಮೊದಲ ಉಪರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ ಅವರು 1962 ರಲ್ಲಿ ಭಾರತದ ಎರಡನೇಯ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಭಾರತದ ಅಧ್ಯಕ್ಷರಾದಾಗ, ಅವರ ಕೆಲವು ವಿದ್ಯಾರ್ಥಿಗಳು ಅವರ ಜನ್ಮದಿನವನ್ನು ಆಚರಿಸಲು ಬಯಸಿದರು. ಅವರು “ನನ್ನ ಜನ್ಮದಿನವನ್ನು ಆಚರಿಸಲು ಬದಲಾಗಿ 5 ಸೆಪ್ಟೆಂಬರ್ ಅನ್ನು ಶಿಕ್ಷಕರ ದಿನವಾಗಿ ಆಚರಿಸಿದರೆ ಅದು ನನಗೆ ಹೆಮ್ಮೆಯಾಗುತ್ತದೆ” ಎಂದು ಉತ್ತರಿಸಿದ್ದರು. ಹೀಗಾಗಿ ಸೆಪ್ಟೆಂಬರ್ 5 , 1962 ರಲ್ಲಿ ಮೊದಲ ಬಾರಿಗೆ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಅಂದಿನಿಂದ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಣೆ ಮಾಡಲಾಗುತ್ತಿದೆ.
ಶಿಕ್ಷಕರ ದಿನಾಚರಣೆಯ ಮಹತ್ವ ಹಾಗೂ ಆಚರಣೆ
ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯವನ್ನು ಉತ್ತಮವಾಗಿ ರೂಪಿಸುವಲ್ಲಿ ಹಾಗೂ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ಕೊಡುಗೆಯಾಗಿ ನೀಡುವಲ್ಲಿ ಶಿಕ್ಷಕರ ಪಾತ್ರವು ಬಹುದೊಡ್ಡದಿದೆ. ಈ ಶಿಕ್ಷಕರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈ ದಿನವು ಮಹತ್ವದ್ದಾಗಿದೆ. ಶಾಲಾ ಕಾಲೇಜುಗಳಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸುವ ಮೂಲಕ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ಶಿಕ್ಷಕರ ದಿನಾಚರಣೆಯ ಸಲುವಾಗಿ ರಾಷ್ಟ್ರಪತಿಗಳಿಂದ ಪ್ರತಿಭಾನ್ವಿತ ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಇದನ್ನೂ ಓದಿ: ನಿಮ್ಮ ಕೈಯಾರೆ ಈ ಗ್ರೀಟಿಂಗ್ ಕಾರ್ಡ್ ಮಾಡಿ ಶಿಕ್ಷಕರಿಗೆ ಶುಭಾಶಯ ತಿಳಿಸಿ
ಡಾ. ರಾಧಾಕೃಷ್ಣನ್ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಬಗೆಗಿನ ಆಸಕ್ತಿದಾಯಕ ವಿಚಾರಗಳಿವು
- 1936ರಲ್ಲಿ ಎಚ್. ಎನ್. ಸ್ಪಾಲ್ಡಿಂಗ್ ಆಕ್ಸ್‌ಫರ್ಡ್‌ನಲ್ಲಿ ಪೌರಾತ್ಯ ಧಾರ್ಮಿಕ ಮತ್ತು ನೈತಿಕ ಅಧ್ಯಯನ ಪೀಠವನ್ನು ಸ್ಥಾಪಿಸಿದರು. ಲಂಡನ್‌ನಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಉಪನ್ಯಾಸ ಕೇಳಿ ಪ್ರಭಾವಿತರಾಗಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದರು.
- ಉಪಾಧ್ಯಕ್ಷರಾಗಿದ್ದಾಗ ರಾಧಾಕೃಷ್ಣನ್ ರಾಜ್ಯಸಭೆ ಅಧಿವೇಶನಗಳ ಅಧ್ಯಕ್ಷತೆ ವಹಿಸಬೇಕಾದ ಸಂದರ್ಭ ಒದಗಿತ್ತು. ಆ ವೇಳೆಯಲ್ಲಿ ಚರ್ಚೆಯ ಸಮಯದಲ್ಲಿ, ರಾಧಾಕೃಷ್ಣನ್ ಅವರು ಸಂಸ್ಕೃತ ಶ್ಲೋಕಗಳಿಂದಲೇ ಸಭಾಸದಸ್ಯರನ್ನು ಶಾಂತಗೊಳಿಸಿದ್ದರು.
- ಮೈಸೂರಿನ ವಿಶ್ವವಿದ್ಯಾನಿಲಯವನ್ನು ಬಿಟ್ಟು ಕಲ್ಕತ್ತಾದಲ್ಲಿ ಪ್ರೊಫೆಸರ್ ಆಗಿ ಸೇರಿಕೊಂಡ ಸಂದರ್ಭದಲ್ಲಿ ಮೈಸೂರಿನ ವಿದ್ಯಾರ್ಥಿಗಳು ರೈಲು ನಿಲ್ದಾಣದವರೆಗೆ ಹೂವಿನಿಂದ ಅಲಂಕರಿಸಲಾದ ಪಲ್ಲಕ್ಕಿಯೊಂದಿಗೆ ಹೊತ್ತೊಯ್ದಿದ್ದರಂತೆ.
- ಡಾ.ಸರ್ವಪಲ್ಲಿ ರಾಧಾಕೃಷ್ಣನ್ 27 ಬಾರಿ ನೋಬೆಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. 16 ಬಾರಿ ಸಾಹಿತ್ಯ ಕ್ಷೇತ್ರದಲ್ಲಿ, 11 ಬಾರಿ ನೋಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.
- 1931ರಲ್ಲಿ ಇವರು ನೈಟ್ ಬ್ಯಾಚುಲರ್ ಆಗಿ ಆಯ್ಕೆಯಾಗಿದ್ದರು. ಆದರೆ 1938ರಲ್ಲಿ ಬ್ರಿಟಿಷ್ ಅಕಾಡೆಮಿಯ ಫೆಲೋ ಆಗಿ ನೇಮಕಗೊಂಡಿದ್ದರು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ