ಅತಿಯಾದ ಒತ್ತಡದಿಂದ ಮುಕ್ತಿ ಪಡೆಯಲು ನೀವು ಕುಡಿಯಬೇಕಾದ ಪಾನೀಯಗಳಿವು

ಇಂದಿನ ಈ ವೇಗದ ಜೀವನದಲ್ಲಿ ಒತ್ತಡವು ಸಾಮಾನ್ಯ ಸಮಸ್ಯೆಯಾಗಿದ್ದು, ಅತಿಯಾದ ಒತ್ತಡವು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು. ಆದ್ದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಅನೇಕರು ಧ್ಯಾನ, ಯೋಗದ ಮೊರೆ ಹೋಗ್ತಾರೆ. ಇದರ ಜೊತೆ ಜೊತೆಗೆ ಈ ಕೆಲವು ಪಾನೀಯಗಳು ಸಹ ಒತ್ತಡದಿಂದ ಮುಕ್ತಿ ಪಡೆಯಲು ನಿಮಗೆ ಸಹಾಯ ಮಾಡುತ್ತದೆ.

ಅತಿಯಾದ ಒತ್ತಡದಿಂದ ಮುಕ್ತಿ ಪಡೆಯಲು ನೀವು ಕುಡಿಯಬೇಕಾದ ಪಾನೀಯಗಳಿವು
ಸಾಂದರ್ಭಿಕ ಚಿತ್ರ
Image Credit source: Freepik

Updated on: Nov 06, 2025 | 10:04 AM

ಇಂದು ಬಹುತೇಕ ಮಂದಿ ಒತ್ತಡದ ಜೀವನ ನಡೆಸುತ್ತಿದ್ದಾರೆ. ವೈಯಕ್ತಿಕ ಜೀವನದ ಸಮಸ್ಯೆಗಳು, ವೃತ್ತಿ ಜೀವನ ಇವೆಲ್ಲದರ ಜಂಜಾಟದಿಂದ ಬಹುತೇಕ ಮಂದಿ ಒತ್ತಡದಲ್ಲಿಯೇ ಬದುಕುತ್ತಿದ್ದಾರೆ. ಈ ಒತ್ತಡವನ್ನು (stress) ಕಡಿಮೆ ಮಾಡಿಕೊಳ್ಳದಿದ್ದರೆ ಮುಂದೊಂದು ದಿನ ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ಒತ್ತಡದಿಂದ ಆಚೆ ಬರಲು ಆರೋಗ್ಯಕ ಆಹಾರ, ವ್ಯಾಯಾಮ, ಸರಿಯಾದ ನಿದ್ರೆ, ಧ್ಯಾನ, ದೈಹಿಕ ಚಟುವಟಿಕೆ ಈ ಎಲ್ಲಾ ಆರೋಗ್ಯಕರ ಅಭ್ಯಾಸಗಳು ಸಹಾಯ ಮಾಡುತ್ತದೆ. ಇದರ ಜೊತೆಗೆ ಈ ಕೆಲವೊಂದು ಪಾನೀಯಗಳನ್ನು ಸೇವನೆ ಮಾಡುವ ಮೂಲಕವೂ ನೀವು ಒತ್ತಡದಿಂದ ಮುಕ್ತರಾಗಬಹುದು. ಹಾಗಿದ್ದರೆ ಒತ್ತಡದಿಂದ ಮುಕ್ತಿ ಪಡೆಯಲು ಯಾವೆಲ್ಲಾ ಪಾನೀಯಗಳು ಸಹಕಾರಿ ಎಂಬುದನ್ನು ನೋಡೋಣ ಬನ್ನಿ.

ಒತ್ತಡ ನಿವಾರಿಸಲು ಸಹಕಾರಿ ಈ ಪಾನೀಯಗಳು:

ಗ್ರೀನ್‌ ಟೀ: ನೀವು ಒತ್ತಡದಿಂದ ಬಳಲುತ್ತಿದ್ದರೆ, ಗ್ರೀನ್ ಟೀ ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ. ಈ ಗ್ರೀನ್‌ ಟೀಯಲ್ಲಿ  ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಇದು ಮೆದುಳಿಗೆ ತುಂಬಾನೇ ಪ್ರಯೋಜನಕಾರಿಯಾಗಿದೆ. ಅಲ್ಲದೆ ಇದರಲ್ಲಿ ಎಲ್-ಥಿಯಾನೈನ್ ಮತ್ತು ಕೆಫೀನ್ ಸಂಯೋಜನೆಯಿದ್ದು, ಇದು ಆತಂಕ ಮತ್ತು ಒತ್ತಡವನ್ನು ಕಡಿಮೆ ಸಹಾಯ ಮಾಡುತ್ತದೆ.

ಸಿಟ್ರಸ್ ಹಣ್ಣಿನ ರಸ: ಕಿತ್ತಳೆ, ನಿಂಬೆ ಮತ್ತು ದ್ರಾಕ್ಷಿಹಣ್ಣಿನಂತಹ ಸಿಟ್ರಸ್ ಹಣ್ಣಿನ ಜ್ಯೂಸ್ ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಹಣ್ಣುಗಳು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದ್ದು, ಇದು ಒತ್ತಡ ಮತ್ತು ಆತಂಕವನ್ನು ಉಂಟುಮಾಡುವ ಮತ್ತು ಉದ್ವೇಗದ ಭಾವನೆಗಳಿಗೆ ಕಾರಣವಾಗುವ  ಕಾರ್ಟಿಸೋಲ್  ಹಾರ್ಮೋನ್‌ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕ್ಯಾಮೊಮೈಲ್ ಚಹಾ: ಕ್ಯಾಮೊಮೈಲ್ ಚಹಾವು ಬಹಳ ಜನಪ್ರಿಯವಾದ ಗಿಡಮೂಲಿಕೆ ಚಹಾವಾಗಿದ್ದು, ಒತ್ತಡ, ಆತಂಕ ಮತ್ತು ನಿದ್ರಾಹೀನತೆಗೆ ಚಿಕಿತ್ಸೆ ನೀಡಲು ಇದು ಉಪಯುಕ್ತವೆಂದು ಪರಿಗಣಿಸಲಾಗಿದೆ. ಇದು ನಿಮ್ಮ ನರಮಂಡಲವನ್ನು ಶಾಂತಗೊಳಿಸುತ್ತದೆ, ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ಉತ್ತಮ ನಿದ್ರೆಯನ್ನು ಪಡೆಯಲು ಕೂಡ ಸಹಕಾರಿಯಾಗಿದೆ.

ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಈ 5 ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ ಒತ್ತಡದಿಂದ ಮುಕ್ತರಾಗಿ

ಬೆಚ್ಚಗಿನ ಹಾಲು: ಬೆಚ್ಚಗಿನ ಹಾಲಿನಲ್ಲಿ ಟ್ರಿಪ್ಟೊಫಾನ್ ಎಂಬ ಅಮೈನೋ ಆಮ್ಲವಿದ್ದು, ಇದು ದೇಹವು ಸಿರೊಟೋನಿನ್ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ, ಇದು ವಿಶ್ರಾಂತಿ ಮತ್ತು ಶಾಂತತೆಯನ್ನು ಉತ್ತೇಜಿಸುವ ನರಪ್ರೇಕ್ಷಕವಾಗಿದೆ. ಬೆಚ್ಚಗಿನ ಹಾಲು ನಿದ್ರೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಹಾಗಾಗಿ  ಮಲಗುವ ಮುನ್ನ ಹಾಲು ಕುಡಿಯುವುದರಿಂದ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಉತ್ತಮ ನಿದ್ರೆಯನ್ನು ಪಡೆಯಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ