ಮೂಡ್ ಹಾಳಾಗಲು ನೀವು ಸೇವಿಸಿದ ಆಹಾರವೂ ಕಾರಣವಾಗಿರಬಹುದು
ಅತಿಯಾದ ಸಕ್ಕರೆಯುಕ್ತ ಆಹಾರ ಸೇವಿಸಿದರೆ ಕರುಳಿನ ಸೂಕ್ಷ್ಮಾಣುಜೀವಿಯಲ್ಲಿ ಅಸಮತೋಲನವನ್ನು ಉಂಟುಮಾಡಬಹುದು, ಇದು ಮನಸ್ಥಿತಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ.
ಆರೋಗ್ಯವನ್ನು ಕಾಪಾಡಿಕೊಳ್ಳಲು ಡಯೆಟ್ ಎಷ್ಟು ಮುಖ್ಯ ಎಂದು ಎಲ್ಲರಿಗೂ ತಿಳಿದಿದೆ. ಯಾವ ಆಹಾರ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎನ್ನುವ ಲೆಕ್ಕಾಚಾರದಲ್ಲಿ ತಿಂದರೆ ಮಾತ್ರ ದೇಹ ಆರೊಗ್ಯಯುತವಾಗಿರುತ್ತದೆ. ನೀವು ತಿನ್ನುವ ಆಹಾರದ ಆಧಾರದ ಮೇಲೆ ನಿಮ್ಮ ಆರೋಗ್ಯ ನಿಂತಿರುತ್ತದೆ. ಅದೇ ರೀತಿ ನಿಮ್ಮ ಆಹಾರ ಪದ್ಧತಿಯಿಂದಲೇ ಮೂಡ್ ಅಥವಾ ಮನಸ್ಥಿತಿ ಕೂಡ ನಿರ್ಧಾರವಾಗುತ್ತದೆ ಎಂದರೆ ನೀವು ನಂಬಲೇಬೇಕು. ಕೆಲವೊಮ್ಮೆ ಯಾಕೋ ಇವತ್ತು ಮೂಡ್ ಸರಿ ಇಲ್ಲ ಎನ್ನುತ್ತೇವೆ. ಇದಕ್ಕೆ ಹಲವು ಕಾರಣಗಳಿರಬಹುದು. ಅದರಲ್ಲಿ ನೀವು ಸೇವಿಸಿದ ಆಹಾರ ಕೂಡ ಒಂದು. ದೇಹದಲ್ಲಿ ಜಡ ಆವರಿಸಿಯೋ ಅಥವಾ ಇನ್ನಿತರ ಅರೋಗ್ಯ ಸಮಸ್ಯೆ ಉಂಟಾಗಿ ಇಡೀ ದಿನದ ಮೂಡ್ ಕೆಡುತ್ತದೆ. ಹಾಗಾದರೆ ಯಾವೆಲ್ಲ ಆಹಾರಗಳ ಸೇವನೆಯಿಂದ ನಿಮ್ಮ ಮೂಡ್ ಕೆಡಬಹುದು ಎಂದು ಯೋಚಿಸುತ್ತಿದ್ದಿರಾ? ಇಲ್ಲಿದೆ ಮಾಹಿತಿ
ಸಕ್ಕರೆಯುಕ್ತ ಆಹಾರ ಹೆಚ್ಚು ಸಕ್ಕರೆ ಅಂಶವಿರುವ ಆಹಾರಗಳು ನಿಮ್ಮ ಮೂಡ್ನ್ನು ಕೆಡಿಸಬಹುದು. ಸಕ್ಕರೆಯುಕ್ತ ಸಿಹಿ ಆಹಾರಗಳನ್ನು ತ್ಯಜಿಸುವುದು ಅಷ್ಟು ಸುಲಭವಲ್ಲ. ಆದರೂ ಆ ರೀತಿಯ ಆಹಾರ ಪದಾರ್ಥಗಳ ಸೇವನೆಗೆ ಕಡಿವಾಣ ಹಾಕುವುದು ಉತ್ತಮ. ಅತಿಯಾದ ಸಕ್ಕರೆಯುಕ್ತ ಆಹಾರ ಸೇವಿಸಿದರೆ ಕರುಳಿನ ಸೂಕ್ಷ್ಮಾಣುಜೀವಿಯಲ್ಲಿ ಅಸಮತೋಲನವನ್ನು ಉಂಟುಮಾಡಬಹುದು, ಇದು ಮನಸ್ಥಿತಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ.
ಅಂಟಿನ ಆಹಾರ ಹೊಟ್ಟೆಯಲ್ಲಿ ರಬ್ಬರ್ನಂತೆ ಸಿಲುಕಿಕೊಳ್ಳುವ ಮೈದಾದಂತಹ ಅಂಟಿನ ಆಹಾರಗಳನ್ನು ಸೇವಿಸಬೇಡಿ. ಇವು ನಿಮ್ಮ ಹೊಟ್ಟೆಯಲ್ಲಿ ಸಮಸ್ಯೆ ಉಂಟು ಮಾಡಿ ನಿಮ್ಮ ಮನಸ್ಥಿತಿಯನ್ನು ಕೆಡಿಸಬಹುದು. ಅಲ್ಲದೆ ದೇಹದಲ್ಲಿನ ಉಷ್ಣತೆಯನ್ನು ಹೆಚ್ಚು ಮಾಡಿ ಕಿರಿಕಿರಿ ಉಂಟು ಮಾಡುತ್ತವೆ.
ಫ್ರೆಂಚ್ ಫ್ರೈಸ್ ಆಲೂಗಡ್ಡೆಯಿಂದ ತಯಾರಿಸುವ, ಬಾಯಲ್ಲಿ ನೀರೂರಿಸುವ ತಿಂಡಿ ಎಂದರೆ ಅದು ಫ್ರೆಂಚ್ ಫ್ರೈಸ್. ಇದರಲ್ಲಿ ಬಳಸುವ ಅತಿಯಾದ ಉಪ್ಪು ಮತ್ತು ಎಣ್ಣೆಯಲ್ಲಿ ಕರಿದ ಪರಿಣಾಮ ನಿಮ್ಮ ಆರೋಗ್ಯ ಹದಗೆಟ್ಟು ಮೂಡ್ ಕೂಡ ಕೆಡಬಹುದು. ಆದ್ದರಿಂದ ಫ್ರೆಂಚ್ ಫ್ರೈಸ್ ಸೇವನೆಗೆ ಆದಷ್ಟು ಕಡಿವಾಣವಿರಲಿ. ನೆನಪಿಡಿ ಹಸಿದ ಹೊಟ್ಟೆಯಲ್ಲಿ ಮಾತ್ರ ಫ್ರೆಂಚ್ ಫ್ರೈಸ್ ಅನ್ನು ಸೇವಿಸಲೇಬೇಡಿ.
ಸಂಸ್ಕರಿಸಿದ ಆಹಾರಗಳು ದಿನನಿತ್ಯ ಬಳಸುವ ಬಿಸ್ಕತ್, ಚೀಸ್ನಂತಹ ಸಂಸ್ಕರಿಸಿದ ಆಹಾರಗಳು ನಿಮ್ಮನ್ನು ಖಿನ್ನತೆಗೆ ದೂಡಬಹುದು. ಅಲ್ಲದೆ ದೀರ್ಘಕಾಲ ಸಂಸ್ಕರಿಸಿದ ಆಹಾರ ಸೇವೆನೆಯಿಂದ ಆರೋಗ್ಯ ಕೆಟ್ಟು ನಿಮ್ಮ ಮೂಡ್ ಕೂಡ ಹಾಳಾಗುತ್ತದೆ. ಇವು ನಿಮ್ಮ ಆರೋಗ್ಯಕ್ಕೂ ಒಳಿತಲ್ಲ.
ಅನ್ನ ಹೆಚ್ಚು ಸಂಸ್ಕರಿಸಿದ ಕಾರ್ಬೋಹೈಡ್ರೆಟ್ ಆಹಾರ ಸೇವನೆ ನಿಮ್ಮ ಮೂಡ್ಅನ್ನು ಹಾಳುಮಾಡುತ್ತದೆ. ಅದರಲ್ಲಿ ಅನ್ನ ಕೂಡ ಒಂದು. ಹೀಗಾಗಿ ಅತಿಯಾದ ಅನ್ನದ ಸೇವನೆಯಿಂದಲೂ ನಿಮ್ಮ ಮೂಡ್ ಹಾಳಾಗುತ್ತದೆ. ಆದ್ದರಿಂದ ಮಿತವಾದ ಅನ್ನದ ಸೇವನೆ ಆರೋಗ್ಯಯುತ ಜೀವನಕ್ಕೆ ಸಹಾಯಕವಾಗಿದೆ.
ಇದನ್ನೂ ಓದಿ:
Diet Tips: ಪ್ರತಿದಿನ ಸೇವಿಸುವ ಆಹಾರದ ಪಟ್ಟಿಯಲ್ಲಿ ಈ ಪೋಷಕಾಂಶಗಳನ್ನು ಸೇರಿಸಿಕೊಳ್ಳಿ