ಸೊಳ್ಳೆ, ಕೀಟಗಳನ್ನು ಓಡಿಸಲು ಪರಿಣಾಮಕಾರಿ ಈ ಬೆಳ್ಳುಳ್ಳಿ ಸ್ಪ್ರೇ
ಸೊಳ್ಳೆಗಳು, ಕೀಟಗಳು ಮನೆಯೊಳಗೆ ಸೇರಿಕೊಂಡರೆ ಕಿರಿಕಿರಿಯನ್ನು ಉಂಟುಮಾಡುತ್ತವೆ. ಇವುಗಳನ್ನು ಓಡಿಸಲು ಹಲವರು ಮಾರುಕಟ್ಟೆಯಲ್ಲಿ ಲಭ್ಯವಿರುವಂತಹ ದುಬಾರಿ ಸ್ಪ್ರೇಗಳನ್ನು ಬಳಕೆ ಮಾಡುತ್ತಾರೆ. ಆದರೆ ಇವುಗಳು ನಮ್ಮ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮವನ್ನು ಬೀರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕೀಟ, ಸೊಳ್ಳೆಗಳನ್ನು ಓಡಿಸಲು ಅಡುಗೆಮನೆಯಲ್ಲಿ ಸುಲಭವಾಗಿ ಲಭ್ಯವಿರುವಂತಹ ಬೆಳ್ಳುಳ್ಳಿಯನ್ನು ಬಳಸಿ ಸ್ಪ್ರೇ ತಯಾರಿಸಬಹುದು.

ಮಳೆಗಾಲದಂತೆ ಚಳಿಗಾಲದಲ್ಲಿಯೂ ವಾತಾವರಣ ಆಹ್ಲಾದಕರವಾಗಿರುವುದರಿಂದ ಸೊಳ್ಳೆ ಮತ್ತು ಕೀಟಗಳು (insects) ಮನೆಯೊಳಗೆ ಪ್ರವೇಶಿಸುತ್ತವೆ. ಅದರಲ್ಲೂ ಈ ಕೀಟಗಳು ಮನೆಯೊಳಗೆ ಸೇರಿಕೊಂಡರೆ ಕಿರಿಕಿರಿಯನ್ನು ಉಂಟುಮಾಡುತ್ತವೆ. ಹಾಗಾಗಿ ಇವುಗಳನ್ನು ತೊಡೆದುಹಾಕಲು ಅನೇಕರು ಮಾರುಕಟ್ಟೆಯಲ್ಲಿ ಲಭ್ಯವಿರುರ ರಾಸಾಯನಿಕಯುಕ್ತ ಸ್ಪ್ರೇಗಳನ್ನು ಬಳಸುತ್ತಾರೆ. ಈ ಸ್ಪ್ರೇಗಳ ಬಲವಾದ ವಾಸನೆ ಮತ್ತು ವಿಷಕಾರಿ ಅಂಶಗಳು ಮಕ್ಕಳು, ಸಾಕುಪ್ರಾಣಿಗಳಿಗೆ ಹಾನಿಕಾರಕವಾಗಬಹುದು. ಹೀಗಿರುವಾಗ ಮನೆಯಲ್ಲಿಯೇ ಸುಲಭವಾಗಿ ಸಿಗುವಂತಹ ಬೆಳ್ಳುಳ್ಳಿಯನ್ನು ಬಳಸಿಕೊಂಡು ನೀವು ನೈಸರ್ಗಿಕ ಸ್ಪ್ರೇ ತಯಾರಿಸಬಹುದು. ಈ ಬೆಳ್ಳುಳ್ಳಿ ಸ್ಪ್ರೇ ಮನೆಯಲ್ಲಿ ಸೇರಿಕೊಂಡಂತಹ ಕೀಟಗಳನ್ನು ಪರಿಣಾಮಕಾರಿಯಾಗಿ ಓಡಿಸುತ್ತವೆ.
ಕೀಟಗಳನ್ನು ಓಡಿಸಲು ಬೆಳ್ಳುಳ್ಳಿ ಸ್ಪ್ರೇ ಹೇಗೆ ಪರಿಣಾಮಕಾರಿಯಾಗಿದೆ?
ಬೆಳ್ಳುಳ್ಳಿಯಲ್ಲಿರುವ ನೈಸರ್ಗಿಕ ಸಂಯುಕ್ತವಾದ ಆಲಿಸಿನ್, ಕೀಟಗಳು ಇಷ್ಟಪಡದ ಬಲವಾದ ವಾಸನೆಯನ್ನು ಉತ್ಪಾದಿಸುತ್ತದೆ. ಅದಕ್ಕಾಗಿಯೇ ಸೊಳ್ಳೆಗಳು, ನೊಣಗಳು, ಇರುವೆಗಳು ಮತ್ತು ಇತರ ಅನೇಕ ಸಣ್ಣ ಕೀಟಗಳನ್ನು ಓಡಿಸಲು ಬೆಳ್ಳುಳ್ಳಿಯನ್ನು ಉಪಯೋಗಿಸಬಹುದು. ಜೊತೆಗೆ ಬೆಳ್ಳುಳ್ಳಿ ಸ್ಪ್ರೇಗೆ ಸೇರಿಸಲಾಗುವ ಒಣ ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸೈಸಿನ್ ಅಂಶ ಕೀಟಗಳ ಮೇಲೆ ಸುಡುವ ಪರಿಣಾಮವನ್ನು ಬೀರುತ್ತದೆ, ಈ ಮೂಲಕ ನೀವು ಸುಲಭವಾಗಿ ಕೀಟಗಳನ್ನು ಓಡಿಸಬಹುದು. ಮತ್ತು ಯಾವುದೇ ರಾಸಾಯನಿಕ ಸ್ಪ್ರೇ ಬಳಸುವ ಅಗತ್ಯವಿಲ್ಲ.
ಬೆಳ್ಳುಳ್ಳಿ ಸ್ಪ್ರೇ ತಯಾರಿಸುವ ವಿಧಾನ:
ಬೇಕಾಗುವ ಸಾಮಗ್ರಿಗಳು: 5-6 ಬೆಳ್ಳುಳ್ಳಿ ಎಸಳುಗಳು, 2-3 ಕೆಂಪು ಮೆಣಸಿನಕಾಯಿ ಅಥವಾ 1 ಟೀಚಮಚ ಮೆಣಸಿನ ಪುಡಿ, 1 ಲೀಟರ್ ನೀರು
ಮೊದಲಿಗೆ ಬೆಳ್ಳುಳ್ಳಿ ಮತ್ತು ಮೆಣಸಿನಕಾಯಿಯನ್ನು ಬ್ಲೆಂಡರ್‌ನಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಗ್ಯಾಸ್ ಒಲೆ ಮೇಲಿ ಪಾತ್ರೆಯಲ್ಲಿ ಒಂದು ಲೀಟರ್ ನೀರು ಹಾಕಿ ಅದಕ್ಕೆ ರುಬ್ಬಿಟ್ಟ ಬೆಳ್ಳುಳ್ಳಿ, ಮೆಣಸಿನಕಾಯಿ ಮಿಶ್ರಣವನ್ನು ಸೇರಿಸಿ ಕಡಿಮೆ ಉರಿಯಲ್ಲಿ 5-10 ನಿಮಿಷಗಳ ಕಾಲ ಕುದಿಸಿ. ತಣ್ಣಗಾದ ನಂತರ, ಮಿಶ್ರಣವನ್ನು ಸೋಸಿ ಸ್ಪ್ರೇ ಬಾಟಲಿಗೆ ಸುರಿಯಿರಿ.
ಕೀಟಗಳು ಮತ್ತು ಜೇಡಗಳು ಕಾಣುವಲ್ಲೆಲ್ಲಾ ಈ ನೈಸರ್ಗಿಕ ಸ್ಪ್ರೇ ಸಿಂಪಡಿಸಿ . ಅಲ್ಲದೆ ನೀವು ಇದನ್ನು ಕಿಟಕಿಗಳು, ಬಾಗಿಲುಗಳು, ಗೋಡೆಗಳು, ಅಡುಗೆಮನೆಯ ಕೌಂಟರ್‌ಗಳು ಮತ್ತು ಕಸದ ತೊಟ್ಟಿಗಳ ಸುತ್ತಲೂ ಸಿಂಪಡಿಸಬಹುದು. ಉತ್ತಮ ಫಲಿತಾಂಶಗಳಿಗಾಗಿ ದಿನಕ್ಕೆ ಕನಿಷ್ಠ 2 ರಿಂದ 3 ಬಾರಿ ಇದನ್ನು ಬಳಸಿ. ನೀವು ಬಯಸಿದರೆ, ಈ ಸ್ಪ್ರೇ ಮಿಶ್ರಣಕ್ಕೆ ಕೆಲವು ಹನಿ ಸಿಟ್ರೊನೆಲ್ಲಾ, ಪುದೀನಾ ಅಥವಾ ಯೂಕಲಿಪ್ಟಸ್ ಸಾರಭೂತ ತೈಲವನ್ನು ಸೇರಿಸಬಹುದು. ಇದು ಪರಿಮಳವನ್ನು ಹೆಚ್ಚಿಸುತ್ತದೆ ಮತ್ತು ಅದರ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ಅಡುಗೆ ಮನೆಯ ಸಿಂಕ್ ಡ್ರೈನ್‌ನಿಂದ ಬರುವ ಕೆಟ್ಟ ವಾಸನೆಯನ್ನು ತೊಡೆದು ಹಾಕಲು ಈ ಸಿಂಪಲ್ ಟಿಪ್ಸ್ ಪಾಲಿಸಿ
ಕೀಟಗಳನ್ನು ಓಡಿಸಲು ಈ ಸಲಹೆಗಳು ಸಹ ಕೆಲಸ ಮಾಡುತ್ತವೆ:
- ನೊಣಗಳು ಮತ್ತು ಕೀಟಗಳನ್ನು ಓಡಿಸಲು, ವಿನೆಗರ್ ಮತ್ತು ನಿಂಬೆ ರಸವನ್ನು ನೀರಿನೊಂದಿಗೆ ಬೆರೆಸಿ ಸ್ಪ್ರೇ ಬಾಟಲಿಯಲ್ಲಿ ಹಾಕಿ, ನೊಣಗಳು ಓಡಾಡುವ ಜಾಗದಲ್ಲಿ ಸಿಂಪಡಿಸಿ. ಇದರಲ್ಲಿರುವ ಆಮ್ಲೀಯ ಗುಣಗಳು ಕೀಟಗಳು ಮನೆಗೆ ಬರದಂತೆ ತಡೆಯುತ್ತದೆ.
- ಕೀಟಗಳನ್ನು ಓಡಿಸಲು ಬೇವು ಮತ್ತು ಲವಂಗ ಕೂಡ ಕೀಟಗಳನ್ನು ಸಹಾಯ ಮಾಡುತ್ತದೆ. ಈ ಎರಡನ್ನು ಒಟ್ಟಿಗೆ ಪುಡಿಮಾಡಿ ನೀರಿನೊಂದಿಗೆ ಬೆರೆಸಿ, ಕೀಟಗಳು ಹಾರಾಡುವ ಜಾಗದಲ್ಲಿ ಸ್ಪ್ರೇ ಮಾಡಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




