
ತುಳಸಿ ಗಿಡ (Tulsi Plant) ಒಂದು ಪವಿತ್ರವಾದ ಸಸ್ಯ. ಪ್ರತಿಯೊಬ್ಬ ಹಿಂದೂವಿನ ಮನೆಯಲ್ಲೂ ಈ ಗಿಡ ಇದ್ದೆ ಇರುತ್ತದೆ. ಮಾತ್ರವಲ್ಲ ಶಾಸ್ತ್ರದಲ್ಲಿಯೂ ತುಳಸಿ ಗಿಡವನ್ನು ನೆಟ್ಟು ಬೆಳೆಸಿ, ಪೂಜಿಸಬೇಕು ಎನ್ನಲಾಗುತ್ತದೆ. ಇದು ಧಾರ್ಮಿಕ ದೃಷ್ಟಿಕೋನದಿಂದ ಮಾತ್ರವಲ್ಲದೆ, ವಾಸ್ತು ಮತ್ತು ಆರೋಗ್ಯದ ದೃಷ್ಟಿಕೋನದಿಂದಲೂ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ನೀವು ಕೂಡ ಬಾಲ್ಯದಿಂದ ತುಳಸಿ ಗಿಡಕ್ಕೆ ಸಂಬಂಧಿಸಿದ ಸಾಕಷ್ಟು ಕಥೆಗಳನ್ನು ಕೇಳಿರಬಹುದು. ಸಾಕ್ಷಾತ್ ಲಕ್ಷ್ಮೀ ದೇವಿಯೇ ಆ ಗಿಡದಲ್ಲಿ ವಾಸಿಸುತ್ತಾಳೆ ಎಂಬ ನಂಬಿಕೆ ಇದೆ. ಮಾತ್ರವಲ್ಲ ತುಳಸಿಯನ್ನು ಬೆಳೆಸಿದ ಮನೆಯಲ್ಲಿ ಸಂತೋಷ, ಸಮೃದ್ಧಿ, ಶಾಂತಿ ಮತ್ತು ದೇವರ ಆಶೀರ್ವಾದ ಸಿಗುತ್ತವೆ ಎಂದು ಹೇಳಲಾಗುತ್ತದೆ. ಆದರೆ ಅನೇಕರು ತಮ್ಮ ಮನೆಗಳಲ್ಲಿ ರಾಮ ತುಳಸಿಯನ್ನು ನೆಡಬೇಕೇ ಅಥವಾ ಶ್ಯಾಮ ತುಳಸಿಯನ್ನೋ (Ram Or Shyam Tulsi) ಎಂಬ ಗೊಂದಲದಲ್ಲಿರುತ್ತಾರೆ. ಆದರೆ ವಾಸ್ತು ಪ್ರಕಾರ, ಯಾವ ತುಳಸಿ ಸಸ್ಯ ಮನೆಗೆ ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಎರಡೂ ತುಳಸಿ ಗಿಡಗಳು ತಮ್ಮದೇ ಆದ ರೀತಿಯಲ್ಲಿ ಪವಿತ್ರ ಮತ್ತು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದ್ದು, ಶಾಸ್ತ್ರಗಳಲ್ಲಿಯೂ ಇವೆರಡನ್ನು ಕೂಡ ಪೂಜನೀಯ ಎಂದೇ ಹೇಳಲಾಗಿದೆ. ಆದರೆ ಈ ಎರಡು ಗಿಡಗಳು ತಮ್ಮದೆ ವಿಶೇಷತೆ ಅಥವಾ ವೈಶಿಷ್ಯವನ್ನು ಹೊಂದಿದೆ. ಅಂದರೆ ಒಂದು ಶಾಂತಿ ಮತ್ತು ಸಮೃದ್ಧಿಯ ಸಂಕೇತವಾಗಿದ್ದರೆ, ಇನ್ನೊಂದನ್ನು ಶಕ್ತಿಯ ಮೂಲವೆಂದು ಪರಿಗಣಿಸಲಾಗುತ್ತದೆ.
ಸಾಮಾನ್ಯವಾಗಿ ರಾಮ ತುಳಸಿಯ ಎಲೆಗಳು ತಿಳಿ ಹಸಿರು ಬಣ್ಣದಲ್ಲಿರುತ್ತವೆ ಮತ್ತು ಸೌಮ್ಯವಾದ ಪರಿಮಳವನ್ನು ಹೊಂದಿರುತ್ತವೆ. ಇದು ಬಹುತೇಕ ಎಲ್ಲಾ ಮನೆಯಲ್ಲೂ ಕಂಡುಬರುವ ಸಾಮಾನ್ಯ ತುಳಸಿಯಾಗಿದೆ. ಶ್ಯಾಮ ತುಳಸಿಯ ಎಲೆಗಳು ಕಡು ಹಸಿರು, ನೇರಳೆ ಬಣ್ಣದಲ್ಲಿದ್ದು ಅವುಗಳಿಂದ ಬರುವ ಪರಿಮಳ ಸ್ವಲ್ಪ ಗಾಢವಾಗಿರುತ್ತದೆ. ಎರಡೂ ತುಳಸಿ ಗಿಡಗಳು ಕೂಡ ಪವಿತ್ರವಾಗಿವೆ. ಆದರೆ ಅವುಗಳ ಧಾರ್ಮಿಕ ಮಹತ್ವವು ವಿಭಿನ್ನವಾಗಿದೆ. ರಾಮ ತುಳಸಿಯನ್ನು ಸೌಮ್ಯತೆ ಮತ್ತು ಶಾಂತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮತ್ತೊಂದೆಡೆ, ಶ್ಯಾಮ ತುಳಸಿ ಶ್ರೀಕೃಷ್ಣನಿಗೆ ಹೆಚ್ಚು ಪ್ರೀಯ ಎನ್ನಲಾಗುತ್ತದೆ ಮತ್ತು ಶಕ್ತಿ, ರಕ್ಷಣೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಇವೆರಡೂ ಗಿಡಗಳು ಮನೆಗೆ ತರುವುದು ಬಹಳ ಒಳ್ಳೆಯದು.
ಇದನ್ನೂ ಓದಿ: ತುಳಸಿ ಎಲೆಗಳನ್ನು ಈ ರೀತಿ ಸೇವನೆ ಮಾಡಿದರೆ ಯಾವ ರೋಗವೂ ಬರುವುದಿಲ್ಲ
ಯಾವುದೇ ತುಳಸಿ ಗಿಡವಾಗಲಿ ಅದನ್ನು ಶುಭ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ನೀವು ರಾಮ ತುಳಸಿಯನ್ನಾಗಲಿ ಅಥವಾ ಶ್ಯಾಮ ತುಳಸಿಯನ್ನಾಗಲಿ ಯಾವುದನ್ನೂ ನೆಟ್ಟರೂ, ಎರಡೂ ಗಿಡವು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ನಕಾರಾತ್ಮಕ ಶಕ್ತಿಗಳು ಬರುವುದನ್ನು ತಡೆಯುತ್ತದೆ. ಆದರೆ ಈ ಗಿಡಗಳನ್ನು ಇಡುವ ದಿಕ್ಕು ಬಹಳ ಮುಖ್ಯವಾಗುತ್ತದೆ. ರಾಮ ತುಳಸಿ ಗಿಡವನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡುವುದರಿಂದ ಮನೆಯಲ್ಲಿ ಶಾಂತಿ ಮತ್ತು ಸಂತೋಷ ನೆಲೆಸುತ್ತದೆ. ಶ್ಯಾಮ ತುಳಸಿಯನ್ನು ಅಂಗಳ ಅಥವಾ ಬಾಲ್ಕನಿಯಲ್ಲಿ ಇರಿಸಿದರೆ, ಅದು ಕುಟುಂಬದ ಏಕತೆ ಮತ್ತು ಆತ್ಮವಿಶ್ವಾಸವನ್ನು ಉತ್ತೇಜಿಸುತ್ತದೆ.
ಮನೆಯಲ್ಲಿ ಸಾಕಷ್ಟು ಉದ್ವಿಗ್ನತೆ, ಸಂಘರ್ಷ ಅಥವಾ ಭಿನ್ನಾಭಿಪ್ರಾಯ ಇದ್ದಾಗ, ಶ್ಯಾಮ ತುಳಸಿ ನೆಡುವುದು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಏಕೆಂದರೆ ಇದು ಶಾಂತ ಮತ್ತು ಸಮತೋಲಿತ ವಾತಾವರಣವನ್ನು ಸೃಷ್ಟಿಸುತ್ತದೆ. ಮಾತ್ರವಲ್ಲ ಸಂಪತ್ತು ಮತ್ತು ಸಮೃದ್ಧಿಯನ್ನು ಬಯಸುವವರು ರಾಮ ತುಳಸಿ ಗಿಡವನ್ನು ನೆಡಬೇಕು, ಏಕೆಂದರೆ ಇದನ್ನು ನೆಡುವುದರಿಂದ ಲಕ್ಷ್ಮೀ ದೇವಿಯ ಆಶೀರ್ವಾದ ಸಿಗುತ್ತದೆ. ಜೊತೆಗೆ ಮನೆಯಲ್ಲಿ ಸಿರಿತನ ಎಂದಿಗೂ ಕಡಿಮೆಯಾಗುವುದಿಲ್ಲ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ