ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನ: ಹೆಣ್ಣಿನ ಮೇಲಿನ ದೌರ್ಜನ್ಯ ನಿಲ್ಲಲಿ
ಬಹಳ ಹಿಂದಿನಿಂದಲೂ ಈ ಸಮಾಜದಲ್ಲಿ ಮಹಿಳೆಯರು, ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ, ಕಿರುಕುಳ ನಡೆಯುತ್ತಲೇ ಬಂದಿದೆ. ಹೆಣ್ಣುಮಕ್ಕಳ ಮೇಲಾಗುತ್ತಿರುವ ಮಾನಸಿಕ ಮತ್ತು ದೈಹಿಕ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಪಂಚದಾದ್ಯಂತ ಈ ಬಗ್ಗೆ ಜಾಗೃತಿ ಮೂಡಿಸಲು ನವೆಂಬರ್ 25 ರಂದು ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನವನ್ನು ಆಚರಿಸಲಾಗುತ್ತದೆ.

ಹೆಣ್ಣನ್ನು ಪೂಜಿಸುವ ನಾಡು ನಮ್ಮದು. ವಿಪರ್ಯಾಸ ಏನಂದ್ರೆ ಹೆಣ್ಣನ್ನು ಪೂಜಿಸುವ ನಾಡಿನಲ್ಲಿಯೇ ಹೆಣ್ಣಿನ ಮೇಲೆ ಪ್ರತಿನಿತ್ಯ ಒಂದಲ್ಲಾ ಒಂದು ದೌರ್ಜನ್ಯ ನಡೆಯುತ್ತಲೇ ಇವೆ. ಜಗತ್ತಿನಾದ್ಯಂತ ಅದೆಷ್ಟೋ ಮಹಿಳೆಯರು (Women) ಹಿಂಸೆಗೆ ಬಲಿಯಾಗುತ್ತಿದ್ದಾರೆ. ಪ್ರಪಂಚ ಎಷ್ಟೇ ಮುಂದುವರೆದಿದ್ದರೂ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಇನ್ನೂ ನಿಂತಿಲ್ಲ. ಮಹಿಳೆಯರ ಮೇಲಾಗುತ್ತಿರುವ ಈ ದೌರ್ಜನ್ಯವನ್ನು ನಿಲ್ಲಿಸಲು, ಅವರ ಹಕ್ಕುಳ ಬಗ್ಗೆ ಅರಿವು ಮೂಡಿಸಲು ಪ್ರತಿವರ್ಷ ನವೆಂಬರ್ 25 ರಂದು ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನವನ್ನು ಆಚರಿಸಲಾಗುತ್ತದೆ.
ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನದ ಇತಿಹಾಸವೇನು?
1960 ನವೆಂಬರ್ 25 ರಲ್ಲಿ ಮೂವರು ಸಹೋದರಿಯರಾದ ಪ್ಯಾಟ್ರಿಯಾ ಮರ್ಸಿಡಿಸ್ ಮೆರಾಬೆಲ್, ಮರಿಯಾ ಅರ್ಜೆಂಟೀನಾ ಮಿನಾರ್ವಾ ಮೆರಾಬೆಲ್ ಮತ್ತು ಆಂಟೋನಿಯಾ ಮಾರಿಯಾ ತೆರೇಸಾ ಮೆರಾಬೆಲ್ ಅವರನ್ನು ಡೊಮಿನಿಕನ್ ರಿಪಬ್ಲಿಕ್ ಆಡಳಿತಗಾರ ರಾಫೆಲ್ ಟ್ರುಜೆಲ್ಲೊನ ಆದೇಶದ ಮೇರೆಗೆ ಕ್ರೂರವಾಗಿ ಕೊಲ್ಲಲಾಯಿತು. ಏಕೆಂದರೆ ಆ ಮೂವರು ಸಹೋದರಿಯರು ಈತನ ಸರ್ವಾಧಿಕಾರವನ್ನು ವಿರೋಧಿಸಿದ್ದರು. ಈ ಮೂವರು ದಿಟ್ಟ ಮಹಿಳೆಯರನ್ನು ಸ್ಮರಿಸುವ ಸಲುವಾಗಿ 1981 ರಲ್ಲಿ ಲ್ಯಾಟಿನ್ ಅಮೆರಿಕ ಮತ್ತು ಕೆರೆಬಿಯನ್ ಸ್ತ್ರೀವಾದಿ ಕಾರ್ಯಕರ್ತರು ಈ ದಿನವನ್ನು ಆಚರಿಸಲು ನಿರ್ಧರಿಸಿದರು.ನಂತರ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಮಾಣ ತೀವ್ರವಾಗಿ ಹೆಚ್ಚಾದ ಕಾರಣ 1999 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಪ್ರತಿ ವರ್ಷ ನವೆಂಬರ್ 25 ರಂದು ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನವನ್ನು ಆಚರಿಸಲಾಗುವುದು ಎಂದು ಘೋಷಿಸಿತು.
ಇದನ್ನೂ ಓದಿ: ಗೋಡಂಬಿ ದಿನದ ಆಚರಣೆಯ ಹಿಂದಿನ ಇಂಟರೆಸ್ಟಿಂಗ್ ಕಥೆಯ ಬಗ್ಗೆ ತಿಳಿಯಿರಿ
ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನದ ಮಹತ್ವವೇನು?
- ಇದು ಮಹಿಳೆಯರ ಅಸ್ತಿತ್ವ ಮತ್ತು ಸಮಾಜದಲ್ಲಿ ಅವರ ಗುರುತಿಗೆ ಸಂಬಂಧಿಸಿದ ದಿನವಾಗಿದೆ.
- ಮಹಿಳೆಯರ ಮೇಲಾಗುವ ದೈಹಿಕ ಮತ್ತು ಮಾನಸಿಕ ಹಿಂಸಾಚಾರಗಳನ್ನು ತಡೆಗಟ್ಟಲು ಮತ್ತು ಮಹಿಳೆಯರು ಹಾಗೂ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು, ಮುಖ್ಯವಾಗಿ ಮಹಿಳೆಯರಿಗೆ ಈ ಸಮಾಜದಲ್ಲಿ ಮುಕ್ತವಾಗಿ ಬದುಕಲು ಅವಕಾಶ ನೀಡಬೇಕು ಎನ್ನುವ ನಿಟಿನಲ್ಲಿ ವಿಶ್ವ ಮಹಿಳಾ ದೌರ್ಜನ್ಯ ವಿರೋಧಿ ದಿನದಂದು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




