World Environment Day 2023: ವಿಶ್ವ ಪರಿಸರ ದಿನದ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

ಪರಿಸರ ಪ್ರತಿಯೊಂದು ಜೀವಿಗೆ ಎಷ್ಟು ಮುಖ್ಯ ಎನ್ನುವುದರ ಬಗ್ಗೆ ಅರಿವು ಮೂಡಿಸಲು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದ ಇತಿಹಾಸ, ಮಹತ್ವದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

World Environment Day 2023: ವಿಶ್ವ ಪರಿಸರ ದಿನದ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 05, 2023 | 9:49 AM

ಈ ಗ್ರಹವು ನಮ್ಮೆಲ್ಲರ ಮನೆ. ಮುಂದಿನ ಪೀಳಿಗೆಗೆ ಅದನ್ನು ಉಳಿಸುವುದು ನಮ್ಮ ಕರ್ತವ್ಯ. ಹಸಿರಾದ ಭೂಮಿ ಈಗ ಕಡಿಮೆಯಾಗುತ್ತಿದೆ. ಹಾಗಾಗಿ ಎಚ್ಚರಿಕೆಯಿಂದ ಪರಿಸರವನ್ನು ಕಾಪಾಡಿಕೊಳ್ಳಬೇಕಾಗಿದೆ. 50 ವರ್ಷಗಳ ಹಿಂದಿನ ಉದ್ದೇಶ ಇಂದಿಗೂ ಹಾಗೆಯೇ ಇದೆ. ಹಾಗಾಗಬಾರದು, ಪ್ರತಿ ವರ್ಷ ಪರಿಸರ ನಾಶವಾಗದೇ ಹಿಂದೆ ಅಳಿದು ಹೋದ ಅರ್ಧದಷ್ಟು ಹಸಿರನ್ನಾದರೂ ಬೆಳೆಸಬೇಕು. ಹಾಗಾದಲ್ಲಿ ಮಾತ್ರ ನಮ್ಮ ಪರಿಸರವನ್ನು ಉಳಿಸಿಕೊಳ್ಳಲು ಸಾಧ್ಯ. ಜೊತೆಗೆ ಜಾಗತಿಕ ತಾಪಮಾನ ಏರಿಕೆಯು ಒಂದು ದೊಡ್ಡ ಸವಾಲಾಗಿದ್ದು ಆರೋಗ್ಯಕರ ಜೀವನ ನಡೆಸಲು ಮತ್ತು ಪ್ರಕೃತಿಯ ರಕ್ಷಣೆ ಮಾಡಲು ಹರಸಾಹಸ ಪಡಬೇಕಾಗಿದೆ. ಇವೆಲ್ಲ ಕಾರಣದಿಂದ ಜನರನ್ನು ಜಾಗೃತಗೊಳಿಸಲು ವರ್ಷದ ಒಂದು ದಿನ ಪರಿಸರ ದಿನವನ್ನಾಗಿ ಆಚರಿಸಲಾಗುತ್ತದೆ.

ವಿಶ್ವ ಪರಿಸರ ದಿನದ ಇತಿಹಾಸ:

1972 ರಲ್ಲಿ ವಿಶ್ವಸಂಸ್ಥೆಯ ಮಾನವ ಪರಿಸರದ ಸ್ಟಾಕ್ ಹೋಮ್ ಸಮ್ಮೇಳನದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸುವುದಾಗಿ ಘೋಷಣೆ ಮಾಡಿತು. ಆದ್ದರಿಂದ ಯುಎನ್ಇಪಿ (UNEP) ನೇತೃತ್ವದಲ್ಲಿ ಪ್ರತಿ ವರ್ಷ ಜೂನ್ 5ರಂದು ವಿಶ್ವ ಪರಿಸರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಮೊದಲ ಬಾರಿಗೆ 1974 ರಲ್ಲಿ ಯುನೈಟೆಡ್ ಸ್ಟೇಟ್ಸ್ ನಲ್ಲಿ ಈ ದಿನವನ್ನು ಆಚರಿಸಲಾಯಿತು. ಇದು ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮೂಡಿಸಲು ಮತ್ತು ಪರಿಸರ ರಕ್ಷಣೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಈ ದಿನದ ಮುಖ್ಯ ಉದ್ದೇಶ:

ವಿಶ್ವ ಪರಿಸರ ದಿನವನ್ನು ಆಚರಿಸುವುದರಿಂದ ನಮ್ಮ ಪ್ರಕೃತಿಗೆ ಹಲವಾರು ಉಪಯೋಗಗಳಿವೆ. ಪರಿಸರಕ್ಕೆ ಸಂಬಂಧಿಸಿದಂತೆ ಜನತೆಯಲ್ಲಿ ಜಾಗೃತಿ ಮೂಡಿಸುವುದು, ಪರಿಸರ ಸ್ನೇಹಿ ಅಭಿವೃದ್ಧಿ ಪಡಿಸಲು ಅಭಿಯಾನ ಆರಂಭಿಸುವುದು. ಗಿಡ, ಮರಗಳನ್ನು ಬೆಳೆಸುವಂತೆ ಜನರನ್ನು ಪ್ರೇರೆಪಿಸುವುದು. ಪರಿಸರವನ್ನು ನಾಶ ಮಾಡದಂತೆ ಜಾಗೃತಿ ಮೂಡಿಸುವುದು. ಪರಿಸರ ಪ್ರತಿಯೊಂದು ಜೀವಿಗೆ ಎಷ್ಟು ಮುಖ್ಯ ಎನ್ನುವುದರ ಬಗ್ಗೆ ಅರಿವು ಮೂಡಿಸುವುದು ಈ ದಿನದ ಆಚರಣೆಯ ಹಿಂದಿರುವ ಮುಖ್ಯ ಉದ್ದೇಶವಾಗಿದೆ.

2023 ಥೀಮ್: “ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರಗಳು”

ಈ ವರ್ಷ ವಿಶ್ವ ಪರಿಸರ ದಿನಾಚರಣೆಯ 50ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಇದು ಹ್ಯಾಶ್ಟ್ಯಾಗ್ #BeatPlasticPollution ಮತ್ತು ಘೋಷವಾಕ್ಯವನ್ನು ಬಳಸಿಕೊಂಡು “ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರಗಳು” ಎಂಬ ಥೀಮ್ ಮೇಲೆ ಕೇಂದ್ರೀಕೃತವಾಗಿದೆ. ವಿಶ್ವದಾದ್ಯಂತ ಪ್ರತಿ ವರ್ಷ 430 ಮಿಲಿಯನ್ ಟನ್ ಗಳಿಗಿಂತ ಹೆಚ್ಚು ಪ್ಲಾಸ್ಟಿಕ್ ಅನ್ನು ಉತ್ಪಾದಿಸಲಾಗುತ್ತದೆ, ಅದರಲ್ಲಿ ಅರ್ಧದಷ್ಟು ಒಮ್ಮೆ ಮಾತ್ರ ಬಳಸಲು ವಿನ್ಯಾಸಗೊಳಿಸಲಾಗಿದೆ. ಅದರಲ್ಲಿ, ಶೇಕಡಾ 10 ಕ್ಕಿಂತ ಕಡಿಮೆ ಮರುಬಳಕೆ ಮಾಡಲಾಗುತ್ತದೆ. ಅಂದಾಜು 19-23 ಮಿಲಿಯನ್ ಟನ್ ಗಳು ಸರೋವರಗಳು, ನದಿಗಳು ಮತ್ತು ಸಮುದ್ರಗಳಿಗೆ ಕೊಚ್ಚಿ ಹೋಗುತ್ತವೆ. ಮೈಕ್ರೋಪ್ಲಾಸ್ಟಿಕ್ಗಳು 5 ಮಿಮೀ ವ್ಯಾಸದವರೆಗಿನ ಸಣ್ಣ ಪ್ಲಾಸ್ಟಿಕ್ ಕಣಗಳು ಆಹಾರ, ನೀರು ಮತ್ತು ಗಾಳಿಯಲ್ಲಿ ವಿಲೀನಗೊಳ್ಳುತ್ತದೆ. ಗ್ರಹದ ಪ್ರತಿಯೊಬ್ಬ ವ್ಯಕ್ತಿಯು ವರ್ಷಕ್ಕೆ 50,000 ಕ್ಕಿಂತ ಹೆಚ್ಚು ಪ್ಲಾಸ್ಟಿಕ್ ಕಣಗಳನ್ನು ಸೇವಿಸುತ್ತಾನೆ ಎಂದು ಅಂದಾಜಿಸಲಾಗಿದೆ. ಬಿಸಾಡಿದ ಅಥವಾ ಸುಡಲಾದ ಏಕ ಬಳಕೆಯ ಪ್ಲಾಸ್ಟಿಕ್ ಮಾನವನ ಆರೋಗ್ಯ ಮತ್ತು ಜೀವವೈವಿಧ್ಯತೆಗೆ ಹಾನಿ ಮಾಡುತ್ತದೆ ಮತ್ತು ಪರ್ವತದ ತುದಿಯಿಂದ ಸಾಗರ ತಳದವರೆಗೆ ಪ್ರತಿಯೊಂದು ಪರಿಸರ ವ್ಯವಸ್ಥೆಯನ್ನು ಕಲುಷಿತಗೊಳಿಸುತ್ತದೆ. ಸಮಸ್ಯೆಯನ್ನು ನಿಭಾಯಿಸಲು ಲಭ್ಯವಿರುವ ವಿಜ್ಞಾನ ಮತ್ತು ಪರಿಹಾರಗಳೊಂದಿಗೆ, ಸರ್ಕಾರಗಳು, ಕಂಪನಿಗಳು ಮತ್ತು ಇತರ ಮಧ್ಯಸ್ಥಗಾರರು ಈ ಬಿಕ್ಕಟ್ಟನ್ನು ಪರಿಹರಿಸಲು ಕ್ರಮಗಳನ್ನು ಹೆಚ್ಚಿಸಬೇಕು ಮತ್ತು ವೇಗಗೊಳಿಸಬೇಕು. ಇಲ್ಲವಾದಲ್ಲಿ ನಮ್ಮ ಮುಂದಿನ ಪೀಳಿಗೆ ಇನ್ನು ಕಷ್ಟ ಅನುಭವಿಸ ಬೇಕಾಗುತ್ತದೆ.

ಇದನ್ನೂ ಓದಿ:World Environment day 2022: ಬಾಲ್ಯದ ಶ್ರೀಮಂತ ನೈಸರ್ಗಿಕ ಜೀವನದ ಸವಿನೆನಪು

ಭೂಮಿಯಲ್ಲಿ ವಾಸಿಸುತ್ತಿರುವ ನಾವು ಸಂಪನ್ಮೂಲದ ಬಳಕೆಯನ್ನು ಸರಿಯಾಗಿ ಮಾಡಿಕೊಳ್ಳುವುದರ ಜೊತೆಗೆ ಅದನ್ನು ಉಳಿಸಿ ಬೆಳಸಬೇಕು. ಇತ್ತೀಚಿನ ವರ್ಷಗಳಲ್ಲಿ ಪರಿಸರವು ಅತ್ಯಂತ ಕಲುಷಿತಗೊಂಡಿದೆ ಮತ್ತು ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ವಿಷಕಾರಿ ಅಂಶಗಳಿಂದ ತುಂಬಿದೆ. ನಮ್ಮ ಅನುಕೂಲತೆಗಳಿಗಾಗಿ ಪರಿಸರವನ್ನು ನಾವು ಹಾಳು ಮಾಡುತ್ತಿದ್ದೇವೆ. ಇದರಿಂದಾಗಿ ಮಣ್ಣು, ಗಾಳಿ, ನೀರು ಹೀಗೆ ಸಂಪೂರ್ಣ ಪರಿಸರ ನಾಶವಾಗುತ್ತಿದೆ. ಜೊತೆಗೆ ಹವಾಮಾನ ವೈಪರಿತ್ಯದಿಂದಾಗಿ ಆರೋಗ್ಯದ ಸಮಸ್ಯೆಗಳು ಸಹ ಗಣನೀಯವಾಗಿ ಹೆಚ್ಚಳವಾಗಿದೆ. ಇನ್ನಾದರೂ ಜಾಗೃತೆ ವಹಿಸಿ ನಮ್ಮ ಪರಿಸರವನ್ನು ಉಳಿಸಿಕೊಳ್ಳಬೇಕಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: