World Rainforest Day 2024 : ಜೀವ ವೈವಿಧ್ಯದ ಉಳಿವಿಗೆ ಕಾಡು ಬೆಳೆಸಿ ನಾಡು ಉಳಿಸೋಣ
ಮುಂದಿನ ಪೀಳಿಗೆಗಾಗಿ ಮಳೆಕಾಡುಗಳನ್ನು ಉಳಿಸುವ ನಿಟ್ಟಿನಲ್ಲಿ ಜಾಗತಿಕವಾಗಿ ಪ್ರತಿ ವರ್ಷ ಜೂನ್ 22 ರಂದು ವಿಶ್ವ ಮಳೆಕಾಡು ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಕುರಿತಾದ ಮಾಹಿತಿಯೂ ಇಲ್ಲಿದೆ.
ಪ್ರಪಂಚದ ಸಸ್ಯಗಳ ಮತ್ತು ಪ್ರಾಣಿಗಳ ಜಾತಿಗಳಲ್ಲೇ ಅರ್ಧದಷ್ಟು ಜಾತಿಗಳು ಈ ಮಳೆಕಾಡಿನಲ್ಲಿ ಕಂಡುಬರುತ್ತವೆ. ಮಳೆಕಾಡುಗಳು, ಸಸ್ತನಿಗಳು, ಸರೀಸೃಪಗಳು, ಪಕ್ಷಿಗಳು ಮತ್ತು ಅಕಶೇರುಕಗಳನ್ನು ಒಳಗೊಂಡಂತೆ ಪ್ರಾಣಿಸಂಕುಲದ ಅತಿ ದೊಡ್ಡ ಆಶ್ರಯ ತಾಣವಾಗಿದೆ. ಅದಲ್ಲದೇ ಅಪಾರವಾದ ಸಸ್ಯ ಸಂಪತ್ತು ಹಾಗೂ ಗಿಡಮೂಲಿಕೆಯ ಔಷಧಗಳು ಲಭ್ಯವಿರುವುದೇ ಇಲ್ಲಿಯೇ. ದಟ್ಟವಾದ ಕಾಡುಗಳು ಅತ್ಯಾಧಿಕ ಪ್ರಮಾಣದ ಆಮ್ಲಜನಕವನ್ನು ಉತ್ಪಾದಿಸುತ್ತವೆ. ಮಳೆಕಾಡುಗಳು ಕಾರ್ಬನ್ ಸಿಂಕ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ವಾತಾವರಣದಿಂದ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುವ ಮೂಲಕ ಹವಾಮಾನ ಬದಲಾವಣೆಯನ್ನು ತಗ್ಗಿಸಲು ಸಹಾಯ ಮಾಡುತ್ತದೆ.
ಆದರೆ ಇಂದು ಮಾನವ ಚಟುವಟಿಕೆಗಳಾದ ಅರಣ್ಯನಾಶ, ಕೃಷಿ ವಿಸ್ತರಣೆ, ಕೈಗಾರಿಕ ಅಭಿವೃದ್ಧಿ, ಗಣಿಗಾರಿಕೆಯಿಂದಾಗಿ ಪ್ರಪಂಚದಾದ್ಯಂತದ ಮಳೆಕಾಡುಗಳು ಅಪಾಯದ ಅಂಚಿನಲ್ಲಿದೆ. ಅರಣ್ಯ ನಾಶದಿಂದಾಗಿ, ಆವಾಸ ಸ್ಥಾನದ ಕೊರತೆಯಿಂದಾಗಿ ಹಾಗೂ ವಾಯುಮಂಡಲಕ್ಕೆ ಜೀವ ರಾಸಾಯನಿಕ ಸೇರಿಕೊಳ್ಳುತ್ತಿರುವುದರಿಂದ ಈ ಕಾಡುಗಳು ತೀವ್ರಗತಿಯಲ್ಲಿ ಕಣ್ಮರೆಯಾಗುತ್ತಿವೆ. ಮಳೆಕಾಡುಗಳ ನಾಶವು ಪರಿಸರ ಮತ್ತು ತಮ್ಮ ಜೀವನೋಪಾಯಕ್ಕಾಗಿ ಈ ಪರಿಸರ ವ್ಯವಸ್ಥೆಗಳನ್ನು ಅವಲಂಬಿಸಿರುವ ಸ್ಥಳೀಯ ಸಮುದಾಯಗಳಿಗೆ ವಿನಾಶಕಾರಿ ಪರಿಣಾಮಗಳನ್ನು ಉಂಟುಮಾಡುತ್ತದೆ. ಈ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜೂನ್ 22 ರಂದು ವಿಶ್ವ ಮಳೆಕಾಡು ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಮಳೆಕಾಡು ದಿನದ ಇತಿಹಾಸ:
ಉಷ್ಣವಲಯದ ಮಳೆಕಾಡುಗಳನ್ನು ರಕ್ಷಿಸಲು ಮತ್ತು ಪುನರುತ್ಪಾದಿಸಲು ಮೀಸಲಾಗಿರುವ ಲಾಭರಹಿತ ಸಂಸ್ಥೆಯಾದ ರೈನ್‌ಫಾರೆಸ್ಟ್ ಪಾಲುದಾರಿಕೆಯಿಂದ ವಿಶ್ವ ಮಳೆಕಾಡು ದಿನವನ್ನು ಪ್ರಾರಂಭಿಸಲಾಯಿತು. ಹೌದು, 2017 ಜೂನ್ 22 ರಿಂದ ವಿಶ್ವ ಮಳೆಕಾಡು ದಿನವನ್ನು ಆಚರಿಸಲಾಯಿತು. ಮಳೆಕಾಡುಗಳಿಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳತ್ತ ಗಮನ ಹರಿಸುವ ಉದ್ದೇಶವನ್ನು ಹೊಂದಿದೆ.
ವಿಶ್ವ ಮಳೆಕಾಡು ದಿನದ ಮಹತ್ವ:
ಮಳೆಕಾಡುಗಳು ಲಕ್ಷಾಂತರ ಸಸ್ಯ ಮತ್ತು ಪ್ರಾಣಿ ಪ್ರಭೇದಗಳಿಗೆ ನೆಲೆಯಾಗಿದೆ. ಹಲವಾರು ಬಗೆಯ ಸಸ್ಯ ಸಂಪತ್ತುಗಳನ್ನು ಹೊಂದಿದೆ. ಭೂಮಿಯ ಜೀವವೈವಿಧ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಈ ದಿನದಂದು ಮಳೆಕಾಡುಗಳ ಮಹತ್ವದ ಬಗ್ಗೆ ಅರಿವು ಮೂಡಿಸಲು, ಅವುಗಳನ್ನು ರಕ್ಷಿಸಲು ಹಾಗೂ ಸಂರಕ್ಷಿಸಲು ಕ್ರಿಯೆಯನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ಈ ದಿನದಂದು ಸಮುದಾಯಗಳು, ಸಂಸ್ಥೆಗಳು ಮತ್ತು ಸರ್ಕಾರವು, ಮಳೆಕಾಡುಗಳನ್ನು ಸಂರಕ್ಷಿಸಲು ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: