Autobiography : ‘ಗಿರಿಜವ್ವನ ಮಗ’ನ ನವ್ಯಕಲೆ ತಗಣಿ ಪೇಂಟಿಂಗ್ ಮತ್ತು ಮಾರವಾಡಿಗಳ ಅಹಿಂಸಾ ತತ್ವ

|

Updated on: Dec 03, 2021 | 10:13 AM

Non Violence : ‘ತಗಣಿಗಳನ್ನು ಕೊಲ್ಲಬಾರದು, ಹಾಗೆ ಮಾಡಿದರೆ ಹಿಂಸೆಯಾಗುತ್ತದೆ, ಅವನು ಸುಮ್ಮನೇ ಮಲಗಿ ತಗಣಿ ಕಡಿಸಿಕೊಳ್ಳಬೇಕು; ತಗಣಿಗಳಿಗೆ ಆಹಾರವಾಗುವುದೇ ಕಾಯಕ, ಅವುಗಳಿಗೆ ರಕ್ತದಾನ ನೀಡಿ ಉಪಕಾರ ಮಾಡುವುದೇ ಕರ್ತವ್ಯ.’

Autobiography : ‘ಗಿರಿಜವ್ವನ ಮಗ’ನ ನವ್ಯಕಲೆ ತಗಣಿ ಪೇಂಟಿಂಗ್ ಮತ್ತು ಮಾರವಾಡಿಗಳ ಅಹಿಂಸಾ ತತ್ವ
ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ
Follow us on

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಪ್ರಸಂಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ.
ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com 

*

ಸಾಹಿತಿ ಅನುವಾದಕ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಆತ್ಮಕಥನ ಗಿರಿಜವ್ವನ ಮಗ ಕೃತಿಯಿಂದ ‘ತಗಣಿ ಪೇಂಟಿಂಗ್’ ಪ್ರಸಂಗ.

*

ಮನಗುಂಡಿಯ ಅಜ್ಜ ಏನೂ ಕೊಟ್ಟಿರಲಿಲ್ಲ. ಯಾದವಾಡದ ಅಜ್ಜನಲ್ಲಿ ಕೊಡುವ ಶಕ್ತಿ ಇರಲಿಲ್ಲ. ನನ್ನ ಬಿ.ಎ. ಮುಗಿಯುವವರೆಗೆ ಅವ್ವ, ನಾನು ಇಬ್ಬರೂ ಒಂದೊಂದು ಗೋಣಿ ಚೀಲದ ಮೇಲೆ ಮಲಗಿದ್ದು ನೆನಪಿದೆ. ನಂತರ ಒಂದು ಕಡ್ಡಿ ಚಾಪೆ ಕೊಂಡೆವು. ಆಗಲೂ ಚಾಪೆಯ ಮೇಲೆ ನಾನು, ಚೀಲದ ಮೇಲೆ ಅವ್ವ. ಆ ಮನೆಯಲ್ಲಿ ನಾವು ಕಂಡಷ್ಟು ನಮೂನೆಯ ತಗಣಿಗಳನ್ನು ಮುಂದೆ ಎಲ್ಲೆಲ್ಲಿಯೂ ಕಾಣಲಿಲ್ಲ. ದಿನಾ ರಾತ್ರಿ ದೀಪ ಆರಿಸಿ ಸ್ವಲ್ಪ ಹೊತ್ತು ಮಲಗುತ್ತಿದ್ದಂತೆಯೇ, ಎಲ್ಲಿಂದಲೋ ಪುತುಪುತು ಬಂದು ದಾಳಿಗೆ ಅಣಿಯಾಗುತ್ತಿದ್ದವು ತಗಣಿ. ಅವುಗಳನ್ನು ಒರೆದು, ಕೊಂದು, ಕೈತುಂಬ ಅವು ಹೀರಿದ ನಮ್ಮದೇ ರಕ್ತ ಮೆತ್ತಿಕೊಂಡು, ಆಗ ಹರಡುತ್ತಿದ್ದ ದುರ್ವಾಸನೆಗೆ ನಿಧಾನ ಯಾವಾಗಲೋ ನಿದ್ದೆ ಬರುತ್ತಿತ್ತು. ಗೋಡೆಯ ಮೇಲೆ ಅಲ್ಲಲ್ಲಿ, ನಾವು ಅಲ್ಲೇ ಹತ್ತಿಕ್ಕಿ ಒರೆದ ಅಥವಾ ಅವನ್ನು ಕೊಂದು ಎಳೆದಾಡಿದಾಗ ಎತ್ತೆತ್ತಾರ ಮೂಡಿದ ರಕ್ತದ ಗೆರೆಗಳು ನಾವು ಹಚ್ಚಿದ್ದ ಸುಣ್ಣಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಎದ್ದು ಕಾಣುತ್ತಿದ್ದವು. ಗೋಡೆಯ ಮೇಲೆ ತಗಣಿ ವರ್ಣ ವಿನಿರ್ಮಿತ ನವ್ಯಕಲೆಯ ಪೇಂಟಿಂಗ್ಸ್ ಹಾಕಿಸಿಕೊಂಡಂತೆ ಇರುತ್ತಿದ್ದವು ಹಾಸಿಗೆ ಸುರುಳಿ ಮಡಿಚಿಟ್ಟು ಅಂಗಿ ಚಣ್ಣ, ನಾವು ಬಳಸುತ್ತಿದ್ದ ಊಟದ ಮಣೆ, ಅಡ್ಡಣಿಗೆ ಹೀಗೆ ಎಲ್ಲ ಕಡೆ ಸುಂಬಿದ್ದ ಅವುಗಳ ಮನೆಯಲ್ಲಿಯೇ ನಾವು ವಾಸವಾಗಿದ್ದ ಹಾಗೆ ಅನಿಸುತ್ತಿತ್ತು. ತಗಣಿಗಳನ್ನು ಕೊಲ್ಲಲೆಂದೇ ಸಿಗುತ್ತಿದ್ದ ತಗಣೀಪುಡಿಯನ್ನು ಒದೆರಡು ಸಲ ಕೊಂಡುತಂದೆವು. ಆ ಮಹಾಪ್ರಚಂಡ ತಗಣೀಸೈನ್ಯದ ಮುಂದೆ ನಮ್ಮ ನಿರಂತರ ಶ್ರಮ ಮತ್ತು ಸೀಮಿತ ಹಣದ ಹೋರಾಟ ಸೋಲು ಕಂಡಿತು. ಕೆಲ ಕಾಲದ ನಂತರ ಅವುಗಳ ಜೊತೆಗೆ ಸಂಘರ್ಷರಹಿತ ಮೌನ ಸಹಜೀವನದ ನಿರ್ಧಾರ ಮಾಡುವುದು ಅನಿವಾರ್ಯವಾಯಿತು; ಆಗಿನಿಂದ ಅವು ಕಡಿಯುತ್ತಿದ್ದಂತೆಯೇ ನಿದ್ದೆ ಮಾಡುವ ರೂಢಿ ಮಾಡಿಕೊಂಡೆವು. ಅಂದಿನಿಂದ ತಗಣಿಗಳಿಗೂ ನಮಗೂ ಏಕಕಾಲಕ್ಕೆ ಶಾಂತಿ, ನೆಮ್ಮದಿಯ ಬದುಕು ಸಾಧ್ಯವಾಯಿತು.

ನಮ್ಮ ಮನೆಯ ಎದುರುಗಡೆ ಇದ್ದ ಗರಗದಿಂದ ಬಂದಿದ್ದ, ಗಂಗವ್ವ ತನ್ನ ಪತಿಗೆ ಎಂಥದೋ ವಾಚಮನ್ ಕೆಲಸ ಸಿಕ್ಕಿತೆಂದು, ಇಬ್ಬರು ಚಿಕ್ಕಮಕ್ಕಳನ್ನು ಕಟ್ಟಿಕೊಂಡು ಸಪ್ತಾಪುರಕ್ಕೆ ಹೋದಳು. ನಾಗಪ್ಪ ಕಾಕಾನ ಆ ಮನೆಗೆ ಅವನ ಪರಿಚಯದ ಒಂದು ಮಾರವಾಡಿ ಕುಟುಂಬ ವಾಸಕ್ಕೆ ಬಂದಿತು. ಹೀಗಾಗಿ ನಾವು ಆ ಮನೆಯವರನ್ನು ಮಾತಾಡಿಸುವ ಹಾಗಿರಲಿಲ್ಲ. ಅಲ್ಲದೆ, ಅವರ ಭಾಷೆ ಗೊತ್ತಿಲ್ಲದ ನನ್ನ ಅವ್ವ ಅವರೊಂದಿಗೆ ಸಂಭಾಷಿಸುವುದು ಸಾಧ್ಯವೇ ಇರಲಿಲ್ಲ. ಆದರೆ ಮಾರವಾಡೀ ಯಜಮಾನನ ಮಗ ಸಾರಂಗಮಠ ಗುರುಗಳಲ್ಲಿ ಹಿಂದೀ ಕಲಿಯಲು ಬರುತ್ತಿದ್ದ, ಈಗ ಆ ವಿದ್ಯಾಲಯದಲ್ಲಿ ಶಿಕ್ಷಕನಾಗಿ ಕಲಿಸುತ್ತಿದ್ದ ನನ್ನೊಡನೆ ಅವರು ಆಗಾಗ ಮಾತಾಡುತ್ತಿದ್ದರು.

ಪಟ್ಟಣಶೆಟ್ಟಿಯವರ ಆತ್ಮಕಥನ

ಅವರ ಮನೆಯಲ್ಲಿಯೂ ನಮ್ಮಥದೇ ತಗಣಿತಾಪತ್ರಯವಿತ್ತು. ಕಟ್ಟಾ ಅಹಿಂಸಾತತ್ವ ಪಾಲಕರಾದ ಆ ಕುಟುಂಬದ ಜನರು ತಗಣಿಗಳನ್ನು ಕೊಲ್ಲದೆಯೇ, ಅವುಗಳಿಂದ ಕಡಿಸಿಕೊಳ್ಳದೆಯೇ ಬದುಕಿದ್ದು ಕಂಡು ಅಚ್ಚರಿಪಟ್ಟಿದ್ದೆವು. ಮೊದಮೊದಲು ಮಲಗಿದೊಡನೆ ವಾಸನೆ ಎದ್ದು ಬರುತ್ತಿದ್ದ ತಗಣಿಗಳನ್ನು ಕೊಲ್ಲಲಾಗದೇ ದೀಪ ಹಚ್ಚಿಕೊಂಡು ಎದ್ದು ಕೂಡುವುದನ್ನು ರೂಢಿಸಿಕೊಳ್ಳಲು ಯತ್ನಿಸಿದರು. ತಗಣಿಗಳನ್ನು ಅವುಗಳಿಗೆ ನೋವಾಗದಂತೆ ಹಿಡಿದು, ಎತ್ತಿ, ಅವುಗಳಿಗೆ ಮೇಲೆ ಹತ್ತಲು ಸಾಧ್ಯವಾಗದಂಥ ಒಂದು ಎತ್ತರದ ಲೋಟಾದಲ್ಲಿ ಹಾಕಿ, ಬೆಳಗ್ಗೆ ಎದ್ದೊಡನೆ ಆ ಲೋಟಾ ಎತ್ತಿಕೊಂಡು ಮುಖ್ಯ ರಸ್ತೆಯ ಬದಿಗಿದ್ದ ದೊಡ್ಡ ಗಟಾರದಲ್ಲಿ ಕುಕ್ಕಿ, ಝಾಡಿಸಿ ಅವನ್ನು ಚೆಲ್ಲಿ ಬರುತ್ತಿದ್ದರು. ನಾವು ಮಾಡಿದಂತೆ ತಗಣಿ ಒರೆಯುವುದಾಗಲಿ, ತಗಣೀಪುಡಿ ಹಾಕಿ ಕೊಲ್ಲುವುದಾಗಲಿ ಅವರು ಹೇಗೆ ಮಾಡಿಯಾರು? ಅಂಗಡಿ, ವ್ಯಾಪಾರ ಇತ್ಯಾದಿ ಮುಗಿಸಿಕೊಂಡು ದಣಿದು ತಡವಾಗಿ ಮನೆಗೆ ಬರುತ್ತಿದ್ದ ಅವರಿಗೆ ಒಂದು ಕಷ್ಟದ ಕೆಲಸವೆನಿಸಿರಬೇಕು. ಅವರಿಗಿಂತ ಮೊದಲೇ, ಮನೆಯಲ್ಲಿಯೇ ಇರುತ್ತಿದ್ದ ಹೆಣ್ಣುಮಕ್ಕಳ ಮತ್ತು ಸಣ್ಣಮಕ್ಕಳ ಗತಿಯೇನು? ಆಗ ಅವರು ಹುಡುಕಿಕೊಂಡ ಒಂದು ಉಪಾಯ ನಮ್ಮ ಕಲ್ಪನೆಗೂ ಮೀರಿದ್ದಾಗಿತ್ತು; ಅಲ್ಲದೆ, ನಮ್ಮಂಥ ಬಡವರಿಗೆ ನಿಲುಕಲಾರದ್ದಾಗಿತ್ತು. ಅಹಿಂಸಾಪಾಲಕರಾದ ಅವರು ಒಬ್ಬ ವ್ಯಕ್ತಿಯನ್ನು, ಪಗಾರ ಕೊಟ್ಟು, ತಮ್ಮ ಮನೆಯಲ್ಲಿ ಮಲಗುವುದಕ್ಕಾಗಿಯೇ ನೇಮಿಸಿಕೊಂಡರು.

ಅವನು ಜೈನರ ಪೈಕಿ ಇದ್ದಿರಲಿಕ್ಕಿಲ್ಲ. ದಿನಾ ರಾತ್ರಿ ಸರಿಯಾಗಿ ಎಂಟರ ಹೊತ್ತಿಗೆ ಬಂದು, ಆ ಮನೆಯಲ್ಲಿಯ ಮೊದಲ ಹುಸಿ ದಾಟಿದೊಡನೆ ಇದ್ದ ಕಟ್ಟೆಯ ಮುಂತುದಿಗೆ, ಮುಂಬಾಗಿಲ ಕಡೆಗೆ ಮುಖ ಮಾಡಿಕೊಂಡು ಮಲಗುವುದು ಅವನ ಕೆಲಸವಾಗಿದ್ದಿತು. ಅರ್ಥಾತ್, ಆಗ ಇದ್ದ ಆ ಚಿಕ್ಕ ಮನೆಯೊಳಗಿನ ಎಲ್ಲ ತಗಣಿಗಳು ಆ ಮನುಷ್ಯ ಶರೀರದ ವಾಸನೆಗೆ ಅವನ ಕಡೆಗೆ ಧಾವಿಸಿ ಬರುತ್ತಿದ್ದವು. ಅವನ್ನು ಕೊಲ್ಲಬಾರದು, ಹಾಗೆ ಮಾಡಿದರೆ ಹಿಂಸೆಯಾಗುತ್ತದೆ, ಅವನು ಸುಮ್ಮನೇ ಮಲಗಿ ತಗಣಿ ಕಡಿಸಿಕೊಳ್ಳಬೇಕು; ತಗಣಿಗಳಿಗೆ ಆಹಾರವಾಗುವುದೇ ಕಾಯಕ, ಅವುಗಳಿಗೆ ರಕ್ತದಾನ ನೀಡಿ ಉಪಕಾರ ಮಾಡುವುದೇ ಕರ್ತವ್ಯ. ಅಥವಾ ಬಹಳ ಅನಿವಾರ್ಯವಾದರೆ ಅವನ್ನು ಹಿಡಿದು ಲೋಟಾದಲ್ಲಿ ಹಾಕಬೇಕು. ಹೀಗೆ ಮನೆಯ ಜನರು ಮತ್ತು ನಂತರ ಬರುವ ಮಾಲಕರು ಊಟ ಮಾಡಿ ಸುಖದ ನಿದ್ದೆಗೆ ತೆರಳಲು ಅನುಕೂಲ ಮಾಡಿಕೊಡಬೇಕು. ಆಗ ಮಾಲಕರು ಸಹ ರಾತ್ರಿಯೆಲ್ಲಾ ಬೇರೆ ಲೋಟಾದಲ್ಲಿ ಸಂಗ್ರಹಿಸಿ ಇಡಬಹುದಾದ ತಗಣಿಗಳನ್ನು ಬೆಳಗ್ಗೆ ಹೊರಚೆಲ್ಲಿ, ಆ ಮಲಗುಮನುಷ್ಯ ಹೊರಟುಬಿಡಬೇಕು. ಬಹಳ ಸಜ್ಜನ ಕುಟುಂಬದ ಆ ಗಾಂಧೀ ಮನೆಯವರು, ಅವರ ಮಗ ಕಾಂತಿಲಾಲ ಮುಂತಾದವರು ನನಗೆ ಪ್ರಿಯರಾಗಿದ್ದರಿಂದ ಆ ಪ್ರಸಂಗ ಮರೆಯಲಾಗಲಿಲ್ಲ.

(ಸೌಜನ್ಯ : ಅನನ್ಯ ಪ್ರಕಾಶನ, ಧಾರವಾಡ. 9448861604)

ಇದನ್ನೂ ಓದಿ : Hindu Muslim : ‘ನಾನು ಅವನನ್ನು ಬಿಡುಗಡೆಗೊಳಿಸುವೆ ನೀನು ಅವನನ್ನು ಇಸ್ಲಾಮಿಗೆ ಮತಾಂತರಿಸಿದರೆ ಮಾತ್ರ’