Column: ಹಾದಿಯೇ ತೋರಿದ ಹಾದಿ: ‘ಎಂಟನೇ ತಲೆಮಾರಿನವಳಾದ ನಾನು ‘ದೇವದಾಸಿ ಪದ್ಧತಿ’ಯಿಂದ ಹೊರಬಂದೆ’

Column: ಹಾದಿಯೇ ತೋರಿದ ಹಾದಿ: ‘ಎಂಟನೇ ತಲೆಮಾರಿನವಳಾದ ನಾನು ‘ದೇವದಾಸಿ ಪದ್ಧತಿ’ಯಿಂದ ಹೊರಬಂದೆ’
ಮಂಜುಳಾ ಮಾಳ್ಗೆ

Woman Empowerment : ಬಾಲ್ಯದಲ್ಲಿ ಆಟಕ್ಕೆ ಸಮಯವಿಲ್ಲ. ಸಮವಸ್ತ್ರಕ್ಕೆ ಹಣವಿಲ್ಲ. ಶೂ ಇಲ್ಲದ್ದಕ್ಕೆ ಕ್ಲಾಸಿನಿಂದ ಹೊರಗೆ. ಶೇಂಗಾ ಕೀಳುವುದು, ಬೇವಿನ ಬೀಜ ಆರಿಸುವುದರೊಂದಿಗೇ ಕಾಲೇಜು ಓದು ಸಾಗಿತು. ಸ್ವಾವಲಂಬಿಯಾದ ನಂತರವೇ 31ನೇ ವಯಸ್ಸಿನಲ್ಲಿ ಪ್ರೀತಿಸಿ ಮದುವೆಯಾದೆ.

ಶ್ರೀದೇವಿ ಕಳಸದ | Shridevi Kalasad

|

Jun 16, 2022 | 11:25 AM

ಹಾದಿಯೇ ತೋರಿದ ಹಾದಿ : ದೇವದಾಸಿ ಪದ್ಧತಿಯ ವಿರುದ್ಧ ಹೋರಾಟ, ಜಾಗೃತಿ ಕಾರ್ಯಕ್ರಮ ಮತ್ತು ದೇವದಾಸಿ ಪದ್ಧತಿ ನಿಷೇಧ ಕಾಯ್ದೆಯ ಪರಿಣಾಮವಾಗಿ ಈ ಪದ್ಧತಿ ಇಂದು ಕ್ರಮೇಣ ನಶಿಸಿ ಹೋಗುತ್ತಿರುವುದು ಖುಷಿಯ ವಿಚಾರ. ಆದರೆ ಇಂತಹ ಪದ್ಧತಿಗಳಿಗೆ ಒಳಗಾದವರನ್ನು ಸಮಾಜಮುಖಿಯಾಗಿ ಬದುಕುವಂತೆ ಮಾಡಲು ಇನ್ನಷ್ಟು ತಿಳಿವಳಿಕೆಯ ಅಗತ್ಯವಿದೆ. ಈ ಪದ್ಧತಿಯಿಂದ ಹೊರಬಂದು ಚೆಂದದ ಬದುಕು ಕಟ್ಟಿಕೊಂಡವರಲ್ಲಿ ಮಂಜುಳ ಮಾಳ್ಗಿ ಕೂಡ ಒಬ್ಬರು. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ ಗ್ರಾಮದವರಾದ ಮೂವತ್ತೊಂಭತ್ತು ವರ್ಷದ ಇವರು, ಎಂಟು ತಲೆಮಾರುಗಳಿಂದಲೂ ದೇವದಾಸಿ ಪದ್ಧತಿಗೆ ಒಳಗಾಗಿದ್ದ ತಮ್ಮ ಕುಟುಂಬದ ಹೆಣ್ಣುಮಕ್ಕಳನ್ನು ಈ ಪದ್ಧತಿಯಿಂದ ಮುಕ್ತವಾಗಿಸಿದ್ದಾರೆ. ತಾವೂ ಘನತೆಯಿಂದ, ಸ್ವಾವಲಂಬಿಯಾಗಿ ಸ್ವಾಭಿಮಾನದಿಂದ ಬದುಕು ಕಟ್ಟಿಕೊಂಡಿದ್ದಾರೆ. ತಮ್ಮ ಸುತ್ತಮುತ್ತಲಿನ ಹೆಣ್ಣುಮಕ್ಕಳೂ ಈ ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುತ್ತಿದ್ದಾರೆ. ಜ್ಯೋತಿ ಎಸ್, ಸಿಟಿಝೆನ್ ಜರ್ನಲಿಸ್ಟ್ (Jyothi S)

(ಹಾದಿ 23)

‘ನಮ್ಮದು ಕೃಷಿ ಕುಟುಂಬ. ಮಾಳ್ಗೆ ನಮ್ಮ ಮನೆತನದ ಹೆಸರು. ಆಗ ನಮ್ಮ ಕೇರಿಯಲ್ಲಿ ಯಾರಿಗೂ ಮಾಳಿಗೆಮನೆ ಇರಲಿಲ್ಲ. ಗೋಡೆಮನೆ ಇದ್ದವು. ನಾವೊಬ್ಬರು ಮಾಳಿಗೆ ಹಾಕಿಸಿಕೊಂಡಿದ್ವಿ. ಹಾಗಾಗಿ ನಮ್ಮನ್ನು ಮಾಳ್ಗೆಯವರು ಎಂದು ಕರೆಯುತ್ತಿದ್ದರು. ನಮ್ಮ ಮುತ್ತಜ್ಜಿ ಶಾರೆಮ್ಮ ಹಾಗೂ ಹನುಮಂತವ್ವ, ಅಜ್ಜಿ ನಾಗಮ್ಮ. ನಮ್ಮ ಅಮ್ಮ ಲಲಿತಮ್ಮನಿಗೆ ನಾವು ನಾಲ್ಕು ಜನರು ಮಕ್ಕಳು. ನಮ್ಮದು ಸುಮಾರು ಏಳೆಂಟು ತಲೆಮಾರುಗಳಿಂದಲೂ ದೇವದಾಸಿ ಕುಟುಂಬ.’ ಎನ್ನುತ್ತಾರೆ ಮಂಜುಳ.

ಶಾರೆಮ್ಮ, ‘ನಮ್ಮ ಕಾಲದಲ್ಲಿ ದೇವದಾಸಿ ಹೆಣ್ಣುಮಕ್ಕಳು ಹೆಚ್ಚಿಗೆ ಇದ್ದರು. ಮದುವೆಯಾಗದಿದ್ದ ಹೆಣ್ಣುಮಕ್ಕಳನ್ನು ದೇವದಾಸಿಯಾರನ್ನಾಗಿ ಮಾಡುತ್ತಿದ್ದರು. ಆಂಜನೇಯನ ದೇವಸ್ಥಾನದಲ್ಲಿ ಕರೆದುಕೊಂಡು ಹೋಗಿ ಅರಿಶಿಣ ಹಚ್ಚಿ ಸ್ನಾನ ಮಾಡಿಸಿ, ಹಸಿರು ಸೀರೆ, ಬಳೆ ತೊಡಿಸುತ್ತಿದ್ದರು. ವಯಸ್ಸಾಗಿರುವ ಒಬ್ಬ ಜೋಗತಿ ಇರುತ್ತಿದ್ದಳು. ಕರಿಯ ಕಂಬಳಿ ಹಾಸಿ, ಹಣೆಗೆ ವಿಭೂತಿ ಹಚ್ಚಿ, ಜಡೆಗೆ ಮಲ್ಲಿಗೆ ದಂಡೆ ಮುಡಿಸಿ ಮದುಮಗಳಂತೆ ಸಿಂಗರಿಸುತ್ತಿದ್ದರು. ಇಲ್ಲಿ ಗಂಡಸರಿಗೆ ಪ್ರವೇಶವಿಲ್ಲ. ಎಲ್ಲವನ್ನೂ ಜೋಗತಿಯೇ ಮಾಡುವುದು.’

‘ಬುದ್ಧ ಬಸವಣ್ಣನ ವಿಚಾರಗಳನ್ನು ಆಧಾರವಾಗಿಟ್ಟುಕೊಂಡು ಮಂತ್ರದ ಧಾಟಿಯಲ್ಲಿ ಉಚ್ಛರಿಸುತ್ತಿದ್ದರು. ಹಿಂದೂ ಸಂಪ್ರದಾಯಗಳಲ್ಲಿ ಮಾಂಗಲ್ಯಂ ತಂತು ನಾನೇನ… ಹೇಳುವಂತೆ. ಹವಳ, ಮುತ್ತು ಅದಕ್ಕೆ ಹೆಣ್ಣುದೇವರ ಒಂದು ಪದಕ ಹಾಕಿ ಮೊದಲು ಒಂದು ಗೂಟಕ್ಕೆ ಕಟ್ಟಿ ಪೂಜೆ ಮಾಡಿ ನಂತರ ವಯಸ್ಸಾದ ಜೋಗತಿಯರು ದೇವದಾಸಿಯಾಗುತ್ತಿರುವ ಹೆಣ್ಣುಮಕ್ಕಳ ಕತ್ತಿಗೆ ಕಟ್ಟುತ್ತಿದ್ದರು. ಒಂದೆರಡು ಮೂರು ತಾಸುಗಳಲ್ಲಿ ಕಾರ್ಯಗಳೆಲ್ಲವನ್ನು ಮುಗಿಸಿ ಎದೆಯಮೇಲೆ ಆಂಜನೇಯನ ಮುದ್ರೆ ಕಾಯಿಸಿ ಹಾಕುತ್ತಿದ್ದರು. ಹಾಗೆ ಮಾಡಿದರೆ ಮಾತ್ರ ಮೋಕ್ಷ ಸಿಗುತ್ತದೆ ಎನ್ನುವ ವಾಡಿಕೆ. ಹಾಗಾಗಿ ದೇವದಾಸಿಯರನ್ನು ನಿತ್ಯ ಸುಮಂಗಲಿ ಎನ್ನುತ್ತಿದ್ದರು. ಈಗ ಈ ಪದ್ಧತಿ ಅಸ್ತಿತ್ವದಲ್ಲಿಲ್ಲ’ ಎನ್ನುತ್ತಾರೆ.

ಮಂಜುಳ, ‘ನನ್ನ ಅಕ್ಕ, ನಾನು, ತಂಗಿ, ತಮ್ಮ ಹುಟ್ಟಿದ ಮೇಲೆ ಭಿಕ್ಷೆ ಬೇಡಿಯಾದರೂ ಮಕ್ಕಳನ್ನು ಚೆನ್ನಾಗಿ ಓದಿಸಬೇಕು ನನ್ನ ತರಹ ಕಷ್ಟಪಡುವುದು ಬೇಡ ಎನ್ನುವ ಛಲ ಅಮ್ಮನಿಗಿತ್ತು. ನಮ್ಮಕ್ಕನಿಗೆ ಓದುವುದರಲ್ಲಿ ಆಸಕ್ತಿ ಇರಲಿಲ್ಲ. ನಾನು ಓದಿನಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದೆ. ಹಾಗಾಗಿ ಓದಲು ನನಗೆ ಹೆಚ್ಚಿನ ಆದ್ಯತೆ ಕೊಟ್ಟರು. ಬಾಲ್ಯದಲ್ಲಿ, ಯೌವ್ವನದಲ್ಲಿ ಒಂದಾದರೊಂದರಂತೆ ಬರೀ ಜವಾಬ್ದಾರಿಗಳನ್ನು ಹೊತ್ತಿದ್ದೆ ಆಯ್ತು. ಬಾಲ್ಯದಲ್ಲಿ ಆಟ ಆಡೋಕೆ ಸಮಯವೇ ಇರುತ್ತಿರಲಿಲ್ಲ. ಶಾಲೆಗೆ ಸಮವಸ್ತ್ರ ಹೊಲೆಸಲು ಅಮ್ಮನ ಹತ್ತಿರ ಹಣವಿರಲಿಲ್ಲ. ಶೂ ಹಾಕಿಕೊಂಡು ಹೋಗಿಲ್ಲ ಅಂತ ಎಷ್ಟೋ ಸಲ ಹೊರಗಡೆ ನಿಂತಿದ್ದೇನೆ. ಕೊನೆಯ ಬೆಂಚಿನಲ್ಲಿ ಕೂರಿಸುತ್ತಿದ್ದರು. ಎಸ್.ಎಸ್.ಎಲ್.ಸಿ.ಯಲ್ಲಿ ಮೂರು ಸಲ ಫೇಲ್ ಆಗಿ ನಂತರ ಪಾಸ್ ಮಾಡಿಕೊಂಡೆ. ಪಿಯುಸಿಯನ್ನು ಒಂದೇ ಸಲಕ್ಕೆ ಪಾಸ್ ಆಗಿದ್ದು ನನ್ನಲ್ಲಿ ಶಿಕ್ಷಣದ ಬಗ್ಗೆ ಭರವಸೆಯನ್ನು ಮೂಡಿಸಿತು.’

ಇದನ್ನೂ ಓದಿ : ನಾನೆಂಬ ಪರಿಮಳದ ಹಾದಿಯಲಿ; ನಮ್ಮ ಕನಸುಗಳನ್ನು ತ್ಯಜಿಸುವುದೆಂದರೆ ನಮ್ಮನ್ನು ನಾವೇ ದಿವಾಳಿಗೆಬ್ಬಿಸಿಕೊಂಡಂತೆ

‘ಅದಾಗಿಯೂ ಕಾಲೇಜು ಮುಗಿಸಿ ಬಂದ ಮೇಲೆ ಹೊಲದ ಕೆಲಸ. ರಜೆ ಇರುವಾಗ ಕಡ್ಲೆಕಾಯಿ ಕೀಳಲು ಹೋಗುವುದು, ಬೇವಿನ ಬೀಜ ಆರಿಸುವುದು, ರಂಗೋಲಿ ಮಾರುವುದು ಈ ತರದ ಕೆಲಸಗಳನ್ನು ಮಾಡುತ್ತಿದ್ದೆ. ವಯಸ್ಸಿಗೆ ಬಂದ ನಂತರ ಗಂಡುಮಗನಂತೆ ದುಡಿದಿದ್ದೇನೆ. ಆಗ ನನಗೆ ಬಂದ ಕಷ್ಟಗಳು ಬದುಕಿನ ಪಾಠಗಳಾದವು. ನಾನು ಮುಂದೆ ಬೆಳೆಯಲು ಮೆಟ್ಟಿಲುಗಳಾದವು. ಡಿಗ್ರಿ ತನಕ ಓದಿದ ಮೇಲೆ ಎಲ್ಲರೂ ಒಂದು ಊರು ಬಿಟ್ಟು ಇನ್ನೊಂದು ಊರಿಗೆ ಯಾಕೆ ಹಾಸ್ಟೆಲ್, ಅಲ್ಲಿ ಇಲ್ಲಿ ಅಂತ ಕಳುಹಿಸುತ್ತೀಯ… ಅವಳಿಗೆ ಮದುವೆ ಮಾಡು ಎಂದು ಅವ್ವನಿಗೆ ಹೇಳುತ್ತಿದ್ದರು. ಆಗ ಅವ್ವ ಉಳಿದವರಂತೂ ಚೆನ್ನಾಗಿ ಓದಲಿಲ್ಲ ಆಕೆ ಚೆನ್ನಾಗಿ ಓದುತ್ತಿದ್ದಾಳೆ ಓದಲಿ ಎಂದು ಮಾಸ್ಟರ್ ಡಿಗ್ರಿ ಮಾಡಲು ಸೇರಿಸಿದಳು.’

Haadiye Torida Haadi colum breaking devadasi system by Jyothi S

ಅಜ್ಜಿ ನಾಗಮ್ಮನೊಂದಿಗೆ ಮಂಜುಳಾ

‘ನಾನು ಪ್ರತಿದಿನ ಬಸ್ಸಿನಲ್ಲಿ ಹೋಗಿ ಬರುತ್ತಿದ್ದೆ. ನನಗೆ ಉನ್ನತ ಶಿಕ್ಷಣ ಪೂರೈಸಿ, ಒಳ್ಳೆಯ ಉದ್ಯೋಗಕ್ಕೆ ಸೇರಬೇಕು ಎನ್ನುವ ಆಲೋಚನೆ ಇತ್ತು. ನಮ್ಮ ಸಮುದಾಯದಲ್ಲಿ ವಿದ್ಯಾಭ್ಯಾಸಕ್ಕೆ ಹೋದರೆ ಅದೇ ಸಾಧನೆ. ನಮ್ಮ ಕೇರಿಯಲ್ಲಿ, ನಮ್ಮ ಸಮುದಾಯದ ಹೆಣ್ಣುಮಕ್ಕಳಲ್ಲಿ ಮಾಸ್ಟರ್ ಡಿಗ್ರಿ ಕಂಪ್ಲೀಟ್ ಮಾಡಿದವರಲ್ಲಿ ನಾನೇ ಮೊದಲಿಗಳು. ನನಗೆ ಮೂವತ್ತೊಂದು ವರ್ಷವಾದಾಗ ಮಲ್ಲಿಕಾರ್ಜುನ್ ಎಂಬುವರನ್ನು ಪ್ರೀತಿಸಿ ವಿವಾಹ ಮಾಡಿಕೊಂಡೆ. ‘ಸಖಿ’ ನಿರ್ದೇಶಕರಾದ ಎಂ. ಭಾಗ್ಯಲಕ್ಷ್ಮಿ, ತಮ್ಮ ಕಚೇರಿಯಲ್ಲಿಯೇ ಸರಳವಾಗಿ ಮದುವೆ ಮಾಡಿಸಿದರು. ಮಲ್ಲಿಕಾರ್ಜುನ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ನಮಗೆ ಒಬ್ಬಳು ಮಗಳಿದ್ದಾಳೆ. ತುಂಬ ಸಂತೋಷವಾಗಿ ಬದುಕುತ್ತಿದ್ದೇವೆ’ ಎನ್ನುತ್ತಾರೆ.

‘ನಾನು ‘ಸಖಿ’ ಸಂಸ್ಥೆಯಲ್ಲಿ ಸಮುದಾಯ ಸಂಘಟಕಳಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಹೆತ್ತ ತಾಯಿ ಒಬ್ಬಳಾದರೆ ಬದುಕಿಗೆ ಸ್ಫೂರ್ತಿಯಾಗಿದ್ದು ತಾಯಿಯಂತೆ ಜೊತೆಗೆ ನಿಂತದ್ದು ಭಾಗ್ಯಲಕ್ಷ್ಮಿಯವರು. ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಗಳ ಮುಖಾಂತರ ಹಳ್ಳಿಹಳ್ಳಿಗೆ ನಡೆದುಕೊಂಡು ಹೋಗಿ ನೂರು ದಿನಗಳ ಕೆಲಸ ಕೊಡಿಸುತ್ತಿದ್ದೆ. ಈ ರೀತಿಯ ಕೆಲಸಗಳಿಂದಾಗಿ ಜನರು ನನ್ನನ್ನು ಗೌರವದಿಂದ ಕಾಣುತ್ತ ಬಂದರು. ನನಗೆ ಸಿಗದಿರುವ ಅವಕಾಶಗಳು ನನ್ನ ಮಗಳಿಗೆ ಸಿಗಬೇಕು. ಹಾಗಾಗಿ ನಮಗೆ ಒಬ್ಬಳೇ ಮಗಳು ಸಾಕೆಂದು ನಿರ್ಧಾರ ಮಾಡಿ ಅವಳನ್ನು ಚೆನ್ನಾಗಿ ಓದಿಸುತ್ತಿದ್ದೇವೆ. ನಮ್ಮಉತ್ತರ ಕರ್ನಾಟಕದಲ್ಲಿ ತಳಸಮುದಾಯದಲ್ಲಿ ಶೈಕ್ಷಣಿಕ ತಿಳಿವಳಿಕೆ ಕಡಿಮೆ ಇದೆ. ನಮ್ಮ ಸಮುದಾಯದವರು ವಿದ್ಯಾವಂತರಾಗಿ ಮುಂದೆ ಬರಬೇಕು. ಘನತೆಯಿಂದ ಬದುಕಬೇಕು ಎನ್ನುವುದು ನನ್ನ ಬಹುದೊಡ್ಡ ಕನಸು.’

ಇದನ್ನೂ ಓದಿ : Women Empowerment; ನಾನೆಂಬ ಪರಿಮಳದ ಹಾದಿಯಲಿ: ಇನ್ನಾದರೂ ನಿಲ್ಲಿಸುವಿರೇ ಹೂ ಅರಳಿದ್ದಕ್ಕೆ ಸಾಕ್ಷಿ ಹುಡುಕುವುದನ್ನು

‘ಸಖಿ’ ಸಂಸ್ಥೆಯ ನೇತ್ರಾವತಿ, ‘ಮೂಲತಃ ದಲಿತ ಹೆಣ್ಣುಮಕ್ಕಳು, ದೇವದಾಸಿ ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಕೆಲಸ ಮಾಡುತ್ತಿರುವ ಸಂಸ್ಥೆ. ಹಾಗೆಯೇ ದೇವದಾಸಿ ಕುಟುಂಬ, ದಲಿತ ಹೆಣ್ಣುಮಕ್ಕಳು, ದಿನಕೂಲಿ ಕಾರ್ಮಿಕರು, ಒಂಟಿ ಹೆಣ್ಣುಮಕ್ಕಳು, ಯುವಕರು, ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿಕೊಂಡವರನ್ನು ಕರೆಸಿ ಅವರಿಗೆ ತುಂಡು ಭೂಮಿ ಇದ್ದರೆ, ಸಾವಯವ ಕೃಷಿ ಬಗ್ಗೆ ತರಬೇತಿ ನೀಡುವುದು. ಅವಶ್ಯಕತೆ ಇರುವವರಿಗೆ ಕಾರ್ ಡ್ರೈವಿಂಗ್, ಟೈಲರಿಂಗ್, ಸ್ಪೋಕನ್ ಇಂಗ್ಲಿಷ್, ಉನ್ನತ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಗಳನ್ನು ಕೊಡುವುದು, ಇನ್ನೂ ಅಗತ್ಯ ಇದೆ ಅಂತಾದವರಿಗೆ ಫುಡ್ ಕಿಟ್, ಮೆಡಿಸಿನ್, ಬಟ್ಟೆ, ಸರ್ಕಾರಿ ಕಾಲೇಜುಗಳಲ್ಲಿ ಓದುವವರಿಗೆ ಪುಸ್ತಕ, ಫೀಸ್ ಹೀಗೆ ಹಲವಾರು ರೀತಿಯ ಸಹಾಯಗಳನ್ನು ಮಾಡುತ್ತಿದೆ. ಜೊತೆಗೆ ಲೈಫ್ ಸ್ಕಿಲ್, ವೃತ್ತಿನೋಟ ಮತ್ತು ಅರಿವಿನ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ. ಹಲವಾರು ಹೆಣ್ಣುಮಕ್ಕಳು ನಗರಗಳ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಎಂ.ಎ, ಪಿಎಚ್​.ಡಿ ಮಾಡಿ ಉಪನ್ಯಾಸಕರಾಗಿ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ವಿವರಿಸುತ್ತಾರೆ.

ದೇವದಾಸಿ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸಾಕಷ್ಟು ಹೋರಾಟಗಳಾಗಿ ಹಲವಾರು ಕಾಯ್ದೆಗಳು ಬಂದಿದ್ದರೂ ಇನ್ನೂ ಇದು ಅಲ್ಲಲ್ಲಿ ಅಸ್ತಿತ್ವದಲ್ಲಿದೆ. ಈ ಪದ್ಧತಿಗೆ ಒಳಗಾದ ಮಹಿಳೆಯರು ಸಮಾಜಮುಖಿಯಾಗಿ ಗೌರವಯುತವಾಗಿ ಬಾಳಲಿ. ಮಂಜುಳ ಮತ್ತು ಸಖಿ ಸಂಸ್ಥೆಯು ಎತ್ತರಕ್ಕೆ ಬೆಳೆಯಲಿ. ಇಂತಹ ವ್ಯಕ್ತಿ ಮತ್ತು ಸಂಘಟನೆಗಳು ಇನ್ನಷ್ಟು ಹೆಚ್ಚಾಗಲಿ.

(ಮಂಜುಳಾ : 9480064312)

ಪ್ರತಿಕ್ರಿಯೆಗಾಗಿ : tv9kannadadigital@gmail.com

ಇದನ್ನೂ ಓದಿ

ಈ ಅಂಕಣದ ಎಲ್ಲಾ ಬರಹಗಳನ್ನು ಓದಲು ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada