Meeting Point : ಮೈಸೂರಿನ ಅತ್ಯಾಚಾರ ದುರ್ಘಟನೆಯ ನಂತರ ಆ ಹುಡುಗರು ಅಲ್ಲಿಗೆ ಹೋಗಬಾರದಿತ್ತು ಅಥವಾ ಆ ಹುಡುಗಿ ಯಾಕೆ ಅಲ್ಲಿಗೆ ಹೋದಳು ಎಂಬ ಪ್ರಶ್ನೆಗಳು ಕೇಳಿಬಂದವು. ಈ ಪ್ರಶ್ನೆಗಳು ಈಗಷ್ಟೇ ಅಲ್ಲ ಇದಕ್ಕೆ ಶತಮಾನಕ್ಕೂ ಮೀರಿದ ಇತಿಹಾಸವಿದೆ. ಪಟ್ಟಭದ್ರ ಹಿತಾಸಕ್ತಿಗಳ ಕೈಚಳಕವಿದೆ. ಆದರೆ ಹರೆಯಕ್ಕೆ ಬಂದ ಹುಡುಗ-ಹುಡುಗಿಯರಲ್ಲಿ ಸ್ನೇಹವಿರಬಹು, ಪ್ರೇಮವಿರಬಹುದು ಅದು ಅವರವರ ವಯೋಸಹಜ ಮನೋಸಹಜ ಬಯಕೆಗಳು. ಹಾಗೆಯೇ ಲಿಂಗಸಮಾನತೆಯಲ್ಲಿ ನೋಡಿದಾಗ ಇದಕ್ಕೆ ಮತ್ತೊಂದು ಆಯಾಮವಿದೆ. ಒಟ್ಟಾರೆಯಾಗಿ ಇಬ್ಬರು ವ್ಯಕ್ತಿಗಳ ಭೇಟಿಯನ್ನು ಕೀಳಾಗಿ ನೋಡುವುದು, ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಒಂದೆಡೆಯಾದರೆ, ಆ ಜೋಡಿಗಳ ಮೇಲೆ ಕೈ ಮಾಡುವುದು ಮತ್ತು ಪೈಶಾಚಿಕ ಕೃತ್ಯಕ್ಕಿಳಿಯುವುದು ಇನ್ನೊಂದೆಡೆ ತಾಂಡವವಾಡುತ್ತಲೇ ಇದೆ. ಇಂಥ ಕಾರಣಗಳಿಂದಾಗಿ ಇಬ್ಬರು ವ್ಯಕ್ತಿಗಳ ಸಹಜ, ಆಪ್ತಭೇಟಿಗೆ ಅವಕಾಶವಿರಲಾರದಷ್ಟು ಸಾಮಾಜಿಕ ಸ್ಥಿತಿ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ರೂಪಿಸಿರುವ ಸರಣಿ ‘ಟಿವಿ9 ಕನ್ನಡ ಡಿಜಿಟಲ್ – ಮೀಟಿಂಗ್ ಪಾಯಿಂಟ್’
ಅಹಿತವಾಗಿದ್ದೆಲ್ಲ ಕ್ಷಣಮಾತ್ರದಲ್ಲಿ ಜರುಗಿಬಿಡುತ್ತದೆ. ಆದರೆ ಹಿತವಾಗಿದ್ದು? ಜೀವಸಹಜವಾದ ಈ ಹಾದಿಯಲ್ಲಿ ನಿಲ್ದಾಣಗಳನ್ನು ಕಂಡುಕೊಳ್ಳುವುದು ಜಟಿಲವೆ? ಇಂಥ ಸಂದರ್ಭದಲ್ಲಿ ನಿಮ್ಮೂರಿನ ಮೀಟಿಂಗ್ ಪಾಯಿಂಟ್ಗಳನ್ನೊಮ್ಮೆ ಹಿಂದಿರುಗಿ ನೋಡಬಹುದಾ ಎಂದು ವಿವಿಧ ಹಿನ್ನೆಲೆ, ಆಸಕ್ತಿ, ವೃತ್ತಿ, ಪ್ರವೃತ್ತಿಗಳಲ್ಲಿ ಆಸ್ಥೆಯಿಂದ ತೊಡಗಿಕೊಂಡಿರುವವರಿಗೆ ಕೇಳಲಾಗಿ, ತಮ್ಮ ಅನುಭವ-ವಿಚಾರಗಳನ್ನು ಹಂಚಿಕೊಳ್ಳುತ್ತಲಿದ್ಧಾರೆ. ಒಳಧ್ವನಿಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದಲ್ಲಿ ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಲ್ಲವೆ? ಓದುತ್ತಿರುವ ನೀವೂ ಈ ಸಂವಾದದಲ್ಲಿ ಪ್ರತಿಕ್ರಿಯಾತ್ಮಕ ಬರಹಗಳ ಮೂಲಕ ತೊಡಗಿಕೊಳ್ಳಬಹುದು; tv9kannadadigital@gmail.com
ಡಾ. ರಾಮ್ಪ್ರಸಾದ್ ಕೊಣನೂರು ಅಮೆರಿಕದಲ್ಲಿ ಒಳರೋಗಿ ತಜ್ಞರು. ಅವರ ಬರಹ ನಿಮ್ಮ ಓದಿಗೆ.
ಹರೆಯಕ್ಕೆ ಬಂದ ಮಕ್ಕಳಲ್ಲಿ ಓಡುವ ಆಲೋಚನೆಗಳೇ ಬೇರೆ. ಹಿಂದಿನದು ಮುಂದಿನದು ಏನನ್ನೂ ಯೋಚಿಸುವ ವ್ಯವಧಾನ ಅವರಲ್ಲಿರುವುದಿಲ್ಲ. ಹಿರಿಯರ ಯಾವ ಮಾತನ್ನೂ ತಲೆಗೆ ಹಾಕಿಕೊಳ್ಳದಂಥ ವಯಸ್ಸು ಅದು. ಆದರೆ ನಾವು ನಮ್ಮ ಮಕ್ಕಳನ್ನು ತಿದ್ದಬೇಕಾಗಿರುವುದು ಹುಟ್ಟಿನಿಂದಲೇ ಎಂದು ನನ್ನ ಅಭಿಪ್ರಾಯ. ತಿದ್ದುವುದು ಎಂದರೆ ಭಯಪಡಿಸಿ ಅಲ್ಲ. ಮಕ್ಕಳ ಜೊತೆ ಒಂದು ಒಳ್ಳೆಯ ಸಂಬಂಧ ಮೊದಲಿನಿಂದಲೇ ರೂಢಿಸಿಕೊಂಡು ಅವರ ವ್ಯಕ್ತಿತ್ವಕ್ಕೆ ಅಡಿಪಾಯ ರೂಪಿಸುವುದು. ಹೀಗೆ ಮಾಡಿದಾಗ, ಅವರು ಯೌವನಕ್ಕೆ ಬಂದಾಗ ನಮ್ಮ ಮಾತು ಪೂರ್ತಿ ಕೇಳದಿದ್ದರೂ, ಅಪ್ಪ-ಅಮ್ಮ ಹೇಳುವುದರಲ್ಲಿ ನ್ಯಾಯವಿದೆ ಎಂಬ ಅರಿವು ಅವರಿಗೆ ತಕ್ಕಮಟ್ಟಿಗಾದರೂ ಬರಲಿ ಎಂದಷ್ಟೇ. ಅದರಲ್ಲೂ ಬಹುಮುಖ್ಯವಾಗಿ ಗಂಡುಮಕ್ಕಳಿಗೆ ಹೆಣ್ಣನ್ನು ಗೌರವಿಸುವ ಸಂಸ್ಕಾರವನ್ನು ಮೊದಲಿನಿಂದಲೇ ಹೇಳಿಕೊಡಬೇಕು.
ನಾನು ಮಿಡ್ಲ್ ಸ್ಕೂಲ್ನಲ್ಲಿದ್ದ ಒಂದು ದಿನ, ನಮ್ಮ ಮನೆಗೆ ಬಂದ ಹೆಣ್ಣುಮಗಳೊಬ್ಬರು ನಮ್ಮಪ್ಪನನ್ನು ಏಕವಚನದಲ್ಲಿ ಹೆಸರಿಡಿದು ಕರೆಯುತ್ತ ಒಳಗೆ ಬಂದವರೇ ಅವರ ಹೆಸರಿನದೇ ಹೇರ್ ಆಯಿಲ್ ನಮ್ಮ ಮನೆಯಲ್ಲಿದ್ದುದನ್ನು ನೋಡಿ, ‘ಓಹೋ ಇನ್ನೂ ನನ್ನ ಜ್ಞಾಪಕಕ್ಕೆ ಅದು ಇದು ಇಟ್ಕೊಂಡಿದ್ದೀಯ ಮನೆಯಲ್ಲಿ?’ ಎಂದು ನಗಾಡುತ್ತಾ ನಮ್ಮ ಅಪ್ಪನ ಕಾಲೆಳೆದು, ‘ಹಸಿವಾಗುತ್ತಿದೆ ತಿಂಡಿ ಕೊಡೋ’ ಎಂದು ಅಡುಗೆಮನೆ ಕಡೆ ಹೋದರು. ಯಾರಪ್ಪ ಲೇಡಿ ರ್ಯಾಂಬೋ ಎಂದುಕೊಂಡು, ನಮ್ಮಮ್ಮನ ಹತ್ತಿರ ಹೋಗಿ ಯಾರಮ್ಮ ಇವರು ಎಂದಾಗ, ಅಮ್ಮ ನಗುತ್ತ ನಿಮ್ಮಪ್ಪನ ಹಳೆಯ ಗರ್ಲ್ ಫ್ರೆಂಡ್ ಎಂದಿದ್ದರು. ಇದಾಗಿದ್ದು ಕಳೆದ ಶತಮಾನದ ಎಪ್ಪತ್ತನೆಯ ಇಸವಿಯ ಮಧ್ಯದಲ್ಲಿ. ತಲೆ ಎತ್ತಿ ಮಾತನಾಡದ ಹೆಣ್ಣುಮಕ್ಕಳ ಕಾಲವದು. ಅಂದರೆ ನಮ್ಮಪ್ಪನಿಗೆ ಅರವತ್ತನೇ ಇಸವಿಯಲ್ಲೇ ಗರ್ಲ್ ಫ್ರೆಂಡ್ ಇದ್ದರು. ಯಾವುದೋ ಕಾರಣಕ್ಕೆ ಅವರಿಬ್ಬರಿಗೂ ಮದುವೆಯಾಗದೆ ಇರಬಹುದು, ಆದರೆ ಆ ನಿಷ್ಕಲ್ಮಶ ಸ್ನೇಹವನ್ನು ಗೌರವಯುತವಾಗಿ ಉಳಿಸಿಕೊಂಡಿದ್ದರು. ಅಮ್ಮ ಕೂಡ ಅದಕ್ಕೆ ಸ್ಪಂದಿಸಿದ್ದರು. ಅಪ್ಪ ಹಿಂದೆ ಕೆಟ್ಟದಾಗಿ ನಡೆದುಕೊಂಡಿದ್ದರೆ ಆ ಹೆಣ್ಣುಮಗಳು ಖಂಡಿತ ನಮ್ಮ ಮನೆಗೆ ಆ ದಿನ ಬಂದು ತಿಂಡಿ ತಿಂದು ಹೋಗುತ್ತಿರಲಿಲ್ಲ. ಈ ಘಟನೆ ಆ ಚಿಕ್ಕ ವಯಸ್ಸಿನಲ್ಲೇ ನನ್ನ ಮನಸ್ಸಿನಲ್ಲಿ ಹೆಣ್ಣಿನೊಂದಿಗೆ ಯಾವುದೇ ಸಂದರ್ಭದಲ್ಲಿ ಹೇಗೆ ಗೌರವಯುತವಾಗಿ ನಡೆದುಕೊಳ್ಳಬಹುದು ಎಂಬುದಕ್ಕೆ ಇಂಬು ಕೊಟ್ಟಿತ್ತು.
ನನ್ನ ವಿಚಾರಕ್ಕೆ ಬಂದರೆ ಎರಡನೇ ಪಿಯುಸಿವರೆಗೂ ಹುಡುಗಿಯರನ್ನು ಯಾವುದೇ ಕಾರಣಕ್ಕೂ ಸುಮ್ಮಸುಮ್ಮನೆ ಮಾತನಾಡಿಸಿದವನೇ ಅಲ್ಲ. ಅಗತ್ಯ ಬಿದ್ದಾಗ ಹೂಂ, ಇಲ್ಲ ಎಂಬಷ್ಟೇ ಮಾತಿಗೆ ಸೀಮಿತ. ಮೆಡಿಕಲ್ ಸೇರಿದ ಮೇಲೆ ಈ ತರಹದ ಮನಃಸ್ಥಿತಿಗೆ ಮುಕ್ತಿ ಸಿಕ್ಕಿತು. ಇಂದಿಗೂ ಆ ಗೆಳತಿಯರ ಮತ್ತು ಅವರ ಕುಟುಂಬದ ಸ್ನೇಹ ಅವರು ನಮ್ಮ ಮನೆಯವರೇನೋ ಎಂಬಂತೆಯೇ ಇದೆ.
ನನ್ನ ಮಗ ಬೆಳೆಯುತ್ತಿರುವುದು ಅಮೆರಿಕಾದಲ್ಲಿ. ಪಾಶ್ಚಾತ್ಯ ಪದ್ದತಿ ನಮ್ಮ ಪದ್ಧತಿಗಿಂತ ವಿಭಿನ್ನ. ಗಂಡು ಹೆಣ್ಣು ಶಾಲೆಗಳಲ್ಲಿ ಚಿಕ್ಕಂದಿನಿಂದ ಜೊತೆಜೊತೆಯಲ್ಲೇ ಬೆಳೆಯುತ್ತಾರೆ. ಭಾರತದಲ್ಲಿ ಒಂದು ಹುಡುಗ ಹುಡುಗಿ ಮಾತನಾಡಿದರೆ ಎಲ್ಲರೂ ಅವರನ್ನೇ ಏನೋ ಕೆಟ್ಟದು ನಡೆಯುತ್ತಿದೆ ಎಂಬಂತೆ ನೋಡುವುದು, ಇಲ್ಲದ ಗುಲ್ಲೆಬ್ಬಿಸುವುದು, ಗೋಡೆಗಳ ಮೇಲೆ ಅವರಿಬ್ಬರ ಹೆಸರು ಮತ್ತು ಕೆಟ್ಟ ಮಾತುಗಳು ಬರೆಯುವುದು ಇವ್ಯಾವುವೂ ಇಲ್ಲಿ ಇರುವುದಿಲ್ಲ. ಹಾಗಂತ ನಾನಿಲ್ಲಿ ಪಾಶ್ಚಾತ್ಯ ಪದ್ಧತಿ ನಮ್ಮ ಪದ್ಧತಿಗಿಂತ ಮೇಲು ಎಂದು ಸಮರ್ಥಿಸುತ್ತಿಲ್ಲ. ನನ್ನ ಬರಹ ಏನಿದ್ದರೂ ಮೊನ್ನೆ ನಡೆದ ಮೈಸೂರಿನ ಕೃತ್ಯದ ಹಿನ್ನೆಲೆ ಕುರಿತಷ್ಟೇ. ನಮ್ಮ ಭಾರತದಲ್ಲಿ ಚಿಕ್ಕಂದಿನಿಂದಲೇ ಗಂಡು ಹೆಣ್ಣುಮಕ್ಕಳು ಒಟ್ಟಿಗೆ ಆಡುವುದು, ಶಾಲೆಗಳಲ್ಲಿ ಒಟ್ಟಿಗೆ ಕೂರುವುದು, ಮಾತನಾಡುವುದು ಎಲ್ಲದಕ್ಕೂ ನಿರ್ಬಂಧ ಹಾಕುತ್ತೇವೆ. ಹೀಗಿರುವಾಗ ಸೆಕ್ಸ್ ಬಗ್ಗೆ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡುವುದು ದೂರವೇ.
ಯಾವ ವಿಷಯದಲ್ಲಿ ಮಕ್ಕಳನ್ನು ತುಂಬಾ ಕಟ್ಟುನಿಟ್ಟಾಗಿ ಬೆಳೆಸುತ್ತೇವೋ ಆಗ ಆ ವಿಷಯದ ಬಗ್ಗೆಯೇ ಅವರಿಗೆ ಕುತೂಹಲ ಹೆಚ್ಚುತ್ತಾ ಹೋಗುತ್ತದೆ. ವಿಶೇಷವಾಗಿ ಗಂಡುಮಕ್ಕಳೊಂದಿಗೆ ಇಂಥ ವಿಚಾರಗಳನ್ನು ಆಗಾಗ ಮುಕ್ತವಾಗಿ ಮಾತನಾಡುತ್ತಿರಬೇಕು. ಆಗ ಅವರು ಯೋಚಿಸುವ ದಿಸೆ ಬದಲಾಗುತ್ತ ಹೋಗುತ್ತದೆ. ಅಮೆರಿಕಾದಲ್ಲಿ ಮಕ್ಕಳು ಬೆಳೆಯುತ್ತಿದ್ದಂತೆ ಅವರವರ ಹಣವನ್ನು ಅವರೇ ದುಡಿದುಕೊಳ್ಳುವ ಸಂಸ್ಕೃತಿಗೆ ಒಗ್ಗಿಸುತ್ತಾರೆ. ಉದಾಹರಣೆಗೆ, ಗಂಡುಮಕ್ಕಳಾದರೆ ಅವರಿವರ ಮನೆಯ ಮುಂದೆ ಬೆಳೆದ ಹುಲ್ಲು ಕತ್ತರಿಸುವ ಕೆಲಸ, ಮನೆಮನೆಗೆ ಪೇಪರ್ ಹಾಕುವ ಕೆಲಸ. ಗಂಡುಮಕ್ಕಳು ಅಥವಾ ಹೆಣ್ಣುಮಕ್ಕಳು ಯಾರಾದರೂ ಸರಿ. ನೆರೆಹೊರೆಯ ಪೋಷಕರು ಕೆಲಸಕ್ಕೋ ಅಥವಾ ಒಂದೆರಡು ಗಂಟೆಗಳ ಕಾಲ ಹೋದಾಗ ಅವರ ಮಕ್ಕಳನ್ನು ನೋಡಿಕೊಳ್ಳುವ ಕೆಲಸ, ಬಟ್ಟೆ ಅಂಗಡಿಯಲ್ಲೋ, ದಿನಸಿ ಅಂಗಡಿಯಲ್ಲೋ ಅಥವಾ ರೆಸ್ಟೊರೆಂಟ್ಗಳಲ್ಲಿ ಮಾಣಿಯ ಕೆಲಸ… ಹೀಗೆ ಹತ್ತು ಹಲವಾರು ಚಟುವಟಿಕೆಗಳಲ್ಲಿ ತೊಡಗಿಸುತ್ತಾರೆ. ಮಕ್ಕಳು ಜವಾಬ್ದಾರಿಯುತ ಕೆಲಸದೊಳಗೆ ಒಳಗೊಂಡಾಗ ಅಹಿತಕರ ಚಟುವಟಿಕೆಗಳ ಕಡೆಗೆ ಅವರ ಮನಸ್ಸು ವಾಲದೆ ಹದಿಹರೆಯದಲ್ಲಿಯೇ ಸೂಕ್ಷ್ಮವಾಗಿ ಯೋಚಿಸುವುದನ್ನು ಕಲಿಯುತ್ತಾರೆ. ಈ ಮೂಲಕ ಜೀವನದ ಮಹತ್ವ ಅವರಿಗೆ ಅರ್ಥವಾಗುತ್ತಾ ಹೋಗುತ್ತದೆ.
ಇನ್ನು ಹರೆಯದಲ್ಲಿನ ಡೇಟಿಂಗ್ ಕುರಿತು ನಾನು ಅಮೆರಿಕಾದಲ್ಲಿ ನೋಡಿರುವ ಕೆಲವು ವಿಚಾರಗಳನ್ನು ಇಲ್ಲಿ ಹಂಚಿ ಕೊಳ್ಳುತ್ತೇನೆ. ಇಲ್ಲಿ ಡೇಟಿಂಗ್ ಹೈಸ್ಕೂಲ್, ಕಾಲೇಜ್ ಓದುವಾಗಲೇ ಶುರುವಾಗುತ್ತದೆ. ಡೇಟಿಂಗ್ ಎಂದರೆ ಜೀವನ ಸಂಗಾತಿಯನ್ನು ಅವರವರೇ ಹುಡುಕಿಕೊಳ್ಳುವುದು. ಇದು ಹೇಗೆ ಸಾಗುತ್ತದೆಯೆಂದರೆ, ಮೊದಲಿಗೆ ಇಬ್ಬರಲ್ಲೂ ಆಕರ್ಷಣೆ, ನಂತರ ವಾಸ್ತವ, ಆನಂತರ ಬದ್ಧತೆ ಮುಂದೆ ಅನ್ಯೋನ್ಯತೆ. ಇದೆಲ್ಲ ಹಂತಹಂತವಾಗಿ ಸರಿ ಹೋದ ನಂತರವಷ್ಟೇ ಮದುವೆಯ ಪ್ರಸ್ತಾಪ; ‘ನೀನು ನನ್ನನ್ನು ಮದುವೆಯಾಗುವೆಯಾ?’ ಎಂದು ಉಂಗುರ ಕೊಟ್ಟು ಕೇಳುವ ಅನುಮತಿ. ಈ ಅನುಮತಿಯ ನಂತರವೇ ಮದುವೆ. ಈ ಪ್ರಕ್ರಿಯೆಯಲ್ಲಿ ತಮಗೆ ಹೊಂದಿಕೊಳ್ಳುವ ಸಂಗಾತಿಯ ಬಗ್ಗೆ ಕೆಲವು ವರ್ಷಗಳ ಒಡನಾಟ ಇರುವುದರಿಂದ ಇಬ್ಬರಲ್ಲೂ ಪ್ರೀತಿ ಮತ್ತು ಗೌರವ ಹೆಚ್ಚುತ್ತದೆ. ಇಲ್ಲಿನವರು ಬಾಹ್ಯರೂಪವನ್ನು ಮುಂದಿಟ್ಟುಕೊಂಡು ಮದುವೆಯಾಗುವುದಕ್ಕಿಂತ ಮಾನಸಿಕ, ಬೌದ್ಧಿಕ ಹೊಂದಾಣಿಕೆಗೆ ಹೆಚ್ಚು ಬೆಲೆ ಕೊಡುತ್ತಾರೆ. ಹಾಗಾಗಿ ಡೇಟಿಂಗ್ ಎನ್ನುವುದು ಇಲ್ಲಿನ ಜನರ ಜೀವನಶೈಲಿ. ಅದನ್ನು ನಾವು ತಪ್ಪಾಗಿ ಭಾವಿಸಬಾರದು. ಯಾವ ಸಂಸ್ಕೃತಿಯನ್ನು ಎಷ್ಟು ಸ್ವೀಕರಿಸುತ್ತೇವೆ ಅಳವಡಿಸಿಕೊಳ್ಳುತ್ತೇವೆ ಎನ್ನುವುದು ನಮ್ಮ ನಮ್ಮ ಭಾವಕ್ಕೆ, ಬುದ್ಧಿಗೆ ಸಂಬಂಧಿಸಿದ್ದು. ಆದರೆ, ಪ್ರಪಂಚದ ಯಾವ ಮೂಲೆಯಲ್ಲಿಯೇ ಆಗಲಿ ಹೆಣ್ಣಿಗೆ ಎಲ್ಲಿ ಗೌರವ ಸಿಗುವುದಿಲ್ಲವೋ ಆ ಸಂಸ್ಕೃತಿಯಲ್ಲಿ ದೋಷವಿದೆ ಎಂದರ್ಥ. ಇದಕ್ಕೆ ಇತ್ತೀಚಿನ ತಾಲಿಬಾನ್ ಬೆಳವಣಿಗೆ ಕೂಡ ಹೊರತಾಗಿಲ್ಲ.
ಇದನ್ನೂ ಓದಿ : Meeting Point : ಹಸುವಿನ ಕೆಚ್ಚಲಲ್ಲಿ ತುಂಬಿದ ಹಾಲು ಹೊರಬರಲಿಕ್ಕೂ ಕರುವಿನ ಸಾಂಗತ್ಯ ಬೇಕಾಗುತ್ತದೆ
Published On - 11:35 am, Fri, 10 September 21