Qatar Mail : ವಿಶ್ವಪ್ರಸಿದ್ಧ 829.8 ಮೀಟರ್ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಕೆಲವು ಸಂಕೇತಗಳ ವಿನಿಮಯವನ್ನು ತಡೆಯುವುದಕ್ಕಾಗಿ ಈಥನ್ ಹಂಟ್ ಮತ್ತವನ ತಂಡ ದುಬೈಗೆ ಬರುತ್ತದೆ. ಕೆಲವು ನಿಮಿಷಗಳ ಬಳಿಕ ದುಷ್ಟ ವ್ಯಕ್ತಿಯೊಬ್ಬನನ್ನು ಹಿಂಬಾಲಿಸಿಕೊಂಡು ಹಂಟ್ ಬುರ್ಜ್ ಖಲೀಫಾದಿಂದ ಹೊರಗೆ ಓಡಿ ಬರುತ್ತಾನೆ. ಅವನು ದುಷ್ಟನನ್ನು ಹಿಡಿಯಲು ಓಡುತ್ತಿದ್ದಂತೆಯೇ ನಗರದಲ್ಲಿ ಅಚಾನಕ್ ದೂಳಿನ ಬಿರುಗಾಳಿ ಆವರಿಸಿಕೊಳ್ಳುತ್ತದೆ. ಆ ಕಡಿಮೆ ಗೋಚರತೆಯಲ್ಲಿಯೂ ಹಂಟ್ ಆ ವ್ಯಕ್ತಿಯನ್ನು ಬೆನ್ನಟ್ಟುವುದನ್ನು ಮುಂದುವರೆಸುತ್ತಾನೆ. ಆ ದೂಳಿನ ಬಿರುಗಾಳಿ ಎಷ್ಟು ತೀವ್ರಗೊಳ್ಳುತ್ತದೆಂದರೆ, ಹಂಟ್ ಮಾತ್ರವಲ್ಲ, ಅದನ್ನು ನೋಡುತ್ತಿರುವ ನಮಗೂ ಕೆಲವು ಮೀಟರ್ಗಳಿಗಿಂತ ಹೆಚ್ಚು ಮುಂದೆ ನೋಡಲು ಸಾಧ್ಯವಾಗುವುದಿಲ್ಲ. ಕತಾರಿಗೆ ನಾನು ಬಂದು ವರ್ಷವಾಗಿತ್ತಷ್ಟೆ. ಈ ದೂಳಿನ ಚಂಡಮಾರುತದ ಚೇಸ್ ದೃಶ್ಯವನ್ನು ‘ಮಿಷನ್ ಇಂಪಾಸಿಬಲ್ ಘೋಸ್ಟ್ ಪ್ರೊಟೊಕಾಲ್’ (2011) ಚಿತ್ರದಲ್ಲಿ ನೋಡಿ ಅಕ್ಷರಶಃ ಬೆಚ್ಚಿ ಬಿದ್ದಿದ್ದೆ. ಆ ದೃಶ್ಯ ಎಷ್ಟು ನೈಜವಾಗಿದೆಯೆಂದರೆ ಮಧ್ಯಪ್ರಾಚ್ಯದಲ್ಲಿ, ಅದರಲ್ಲೂ ದುಬೈನಲ್ಲಿ ಆಗಾಗ ಹೀಗೆ ದೂಳಿನ ಚಂಡಮಾರುತಗಳು ಕಾಣಿಸಿಕೊಳ್ಳುತ್ತವೆ ಎಂದು ಜನರು ನಂಬುವಷ್ಟರ ಮಟ್ಟಿಗೆ ಅದನ್ನು ಚಿತ್ರೀಕರಿಸಿದ್ದಾರೆ.
ಚೈತ್ರಾ ಅರ್ಜುನಪುರಿ, ಪತ್ರಕರ್ತೆ
(ಪತ್ರ 11)
ಈ ಸಿನೆಮಾದ ದೃಶ್ಯಗಳನ್ನು ನೋಡಿ ಕಂಗೆಟ್ಟಾಗ, ದುಬೈ ಇರಲಿ ಕತಾರಿನಲ್ಲೂ ಆ ಚಿತ್ರದ ರೀತಿಯಲ್ಲಿ ಮರಳಿನ ಚಂಡಮಾರುತ ಬರುವುದಿಲ್ಲ, ತಲೆ ಕೆಡಿಸಿಕೊಳ್ಳುವುದು ಬೇಡ ಎಂದು ಗೆಳೆಯರು ಸಮಾಧಾನಿಸಿದ್ದರು. ಆದರೆ ಈ ಒಂದು ತಿಂಗಳಿನಲ್ಲಿ ಎರಡು ಸಲ ಪ್ರಖರವಾದ ದೂಳಿನ ಬಿರುಗಾಳಿಯೆದ್ದು ಇಲ್ಲಿ ಯಾವುದೂ ಇಂಪಾಸಿಬಲ್ ಅಲ್ಲ ಎನ್ನುವುದನ್ನು ನೆನಪಿಸಿಕೊಟ್ಟಿದೆ. ಹಾಲಿವುಡ್ ಚಿತ್ರದ ರೇಂಜ್ಗಲ್ಲದಿದ್ದರೂ ಈಗ ಬಂದಿರುವ (ಇದನ್ನು ಬರೆಯುವಾಗಲೂ ಸಹ ಕಿಟಕಿಯಿಂದ ಹೊರಗೆ ನೋಡಿದರೆ, ಪಕ್ಕದ ಬಿಲ್ಡಿಂಗ್ ಸಹ ಸ್ಪಷ್ಟವಾಗಿ ಕಾಣಿಸದಷ್ಟು ದೂಳು ಹೊರಗೆ ಆವರಿಸಿಕೊಂಡಿದೆ) ದೂಳಿನ ಬಿರುಗಾಳಿಯಿಂದಾಗಿ ದೇಶದ ಹಲವು ಭಾಗಗಳಲ್ಲಿ ಸಮತಲ ಗೋಚರತೆ (horizontal visibility) ಎರಡು ಕಿಲೋಮೀಟರ್ ಅಥವಾ ಅದಕ್ಕಿಂತ ಕಡಿಮೆಯಾಗಿ ಹೊಸ ತಲೆನೋವಾಗಿದೆ. ಕೆಲವು ಭಾಗಗಳಲ್ಲಂತೂ ಸಮತಲ ಗೋಚರತೆ ಶೂನ್ಯಕ್ಕಿಂತಲೂ ಕಡಿಮೆಯಿದ್ದು ವಾಹನ ಚಾಲಕರಿಗೆ ಮತ್ತಷ್ಟು ದಿಗಿಲು ಹುಟ್ಟಿಸಿದೆ.
ಈ ದೂಳಿನ ವಾತಾವರಣದಲ್ಲಿ ಏನೆಲ್ಲಾ ಸಂಭವಿಸಬಹುದು ಎನ್ನುವುದಕ್ಕೆ ಸಾಕ್ಷಿ ಕಳೆದ ಮಂಗಳವಾರ, ಅಂದರೆ ಮೇ 17ರಂದು ನಡೆದ ಹದಿಮೂರು ಕಾರುಗಳ ಅಪಘಾತ. ಇವು ಬೇರೆ ಸ್ಥಳಗಳಲ್ಲಿ, ಬೇರೆ ಸಮಯದಲ್ಲಿ ನಡೆದ ವಿವಿಧ ಅಪಘಾತಗಳಲ್ಲ, ಬದಲಾಗಿ ಒಂದೇ ಸ್ಥಳದಲ್ಲಿ, ಒಂದೇ ಸಮಯಕ್ಕೆ ನಡೆದ ಘಟನೆ. ದೂಳಿನ ವಾತಾವರಣ ಮತ್ತು ಬಲವಾದ ಗಾಳಿಯಲ್ಲಿ ಒಂದರ ಹಿಂದೆ ಒಂದು ಬರುತ್ತಿದ್ದ ಹದಿಮೂರು ಗಾಡಿಗಳು ಒಮ್ಮೆಲೆ ಒಂದಕ್ಕೊಂದು ಡಿಕ್ಕಿ ಹೊಡೆದು ಬಿಟ್ಟವು. ಪತ್ರಕರ್ತ ಜಾಬೆರ್ ಅಲ್-ಹರ್ಮಿ ತಮ್ಮ ಟ್ವಿಟ್ಟರ್ ನಲ್ಲಿ ವಿಡಿಯೋ ಹಂಚಿಕೊಂಡಾಗ ಎಲ್ಲರೂ ಬೆಚ್ಚಿಬಿದ್ದೆವು.
تصادم مجموعة من السيارات في حادث مروري قد يكون الأكثر عددا للسيارات في #قطر ..
السرعة وعدم الانتباه والانشغال عن الطريق بالهاتف .. من بين أكثر الاسباب التي تقود للحوادث ..#حوادث pic.twitter.com/ngXteYEHIY— جابر الحرمي (@jaberalharmi) May 17, 2022
ಹಾಲಿವುಡ್ ಚಿತ್ರಗಳಲ್ಲಿ ತೋರಿಸುವ ಹಾಗೆ ಮರಳಿನ ಬಿರುಗಾಳಿಗಳು ಇರಾಕ್, ಕುವೈತ್ ಮತ್ತು ಸೌದಿ ಅರೇಬಿಯಾದಲ್ಲಿ ಸಂಭವಿಸುತ್ತದೆ, ಆದರೆ ಕತಾರ್ ನಲ್ಲಿ ಹಾಗೆ ಸಂಭವಿಸುವುದಿಲ್ಲ. ಕತಾರ್ನ ಭೌಗೋಳಿಕ ಸ್ಥಳ ಮತ್ತು ಹವಾಮಾನ ಅಂತಹ ಪ್ರಕ್ಷುಬ್ಧತೆಗೆ ಅವಕಾಶ ನೀಡುವುದಿಲ್ಲವೆನ್ನುವುದು ನಿಜವಾದರೂ, ನೆರೆಯ ರಾಷ್ಟ್ರಗಳಲ್ಲಾಗುವ ಹವಾಮಾನ ವೈಪರೀತ್ಯಗಳು ಇಲ್ಲಿ ಖಂಡಿತವಾಗಿಯೂ ಪರಿಣಾಮ ಬೀರುತ್ತವೆ. ಹಠಾತ್ ಮತ್ತು ಬಲವಾದ ವಾಯುವ್ಯ ಮಾರುತಗಳು ಇರಾಕ್, ಕುವೈತ್ ಮತ್ತು ಸೌದಿ ಅರೇಬಿಯಾದಲ್ಲಿ ದೂಳು ಮತ್ತು ಮರಳನ್ನು ಮೇಲೆಸೆಯುತ್ತವೆ. ಅಲ್ಲಿ ಹುಟ್ಟುವ ಮರಳು ಬಿರುಗಾಳಿಗಳು ಕತಾರ್ ತಲುಪುವಷ್ಟರಲ್ಲಿ ತಮ್ಮ ತೀವ್ರತೆಯನ್ನು ಕಳೆದುಕೊಂಡು ದೂಳಿನ ಬಿರುಗಾಳಿಗಳಂತೆ ಕೊನೆಗೊಳ್ಳುತ್ತವೆ. ಹಾಗೆ ಬಂದ ಬಿರುಗಾಳಿಯಲ್ಲಿ ಹೆಚ್ಚಿನ ಮರಳು ಕಣಗಳು ಗಾಳಿಯಲ್ಲಿಯೇ ತೇಲುತ್ತವೆಯೇ ಹೊರತು ಬಾಹ್ಯ ರೂಪದಲ್ಲಿ ಕಾಣಿಸುವುದಿಲ್ಲ.
ಇದನ್ನೂ ಓದಿ : National Wine Day: ಮೈಲ್ಸ್ ವೈನ್ ಮಾಯಾ ವೈನ್ ಮತ್ತು ಕಾರೇಹಣ್ಣಿನ ಮಧು ವೈಎನ್
ಮರಳಿನ ಬಿರುಗಾಳಿಯ ತೀವ್ರತೆ ಎಷ್ಟಿತ್ತೆಂದರೆ ಇರಾಕ್ ನಲ್ಲಿ ಬರೋಬ್ಬರಿ 5,000ಕ್ಕೂ ಹೆಚ್ಚು ಜನ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗೆ ನೋಡಿದರೆ ಈ ಬಿರುಗಾಳಿ ಮೊದಲೂ ಅಲ್ಲ, ಕೊನೆಯೂ ಅಲ್ಲ. ಏಪ್ರಿಲ್ ನಂತರ ಇರಾಕ್ ಮೇಲೆ ಅಪ್ಪಳಿಸಿದ ಒಂಬತ್ತನೇ ದೂಳಿನ ಬಿರುಗಾಳಿ ಇದು. ಸರ್ಕಾರ ಅಲ್ಲಿನ ಶಾಲೆಗಳು ಮತ್ತು ಕಚೇರಿಗಳನ್ನು ಮುಚ್ಚುವುದು ಮಾತ್ರವಲ್ಲದೆ, ಬಾಗ್ದಾದ್ ವಿಮಾನ ನಿಲ್ದಾಣದಲ್ಲಿ ವಿಮಾನಗಳನ್ನು ಸಹ ಸ್ಥಗಿತಗೊಳಿಸಿದೆ.
ಈ ಮರಳಿನ ಬಿರುಗಾಳಿಗಳು ವಿಶಿಷ್ಟವಾಗಿ ವಸಂತ ಋತುವಿನ ಕೊನೆಯಲ್ಲಿ ಮತ್ತು ಬೇಸಿಗೆಯಲ್ಲಿ ‘ಶಮಲ್’ನಂತಹ ಋತುಮಾನದ ಗಾಳಿಯಿಂದ ಪ್ರಚೋದಿಸಲ್ಪಟ್ಟು ಕಾಣಿಸಿಕೊಳ್ಳುತ್ತವಾದರೂ, ಈ ವರ್ಷ ಮಾರ್ಚ್ನಿಂದಲೇ ಇರಾಕ್ನಲ್ಲಿ ಹೆಚ್ಚುಕಡಿಮೆ ಪ್ರತಿ ವಾರವೂ ಕಾಣಿಸಿಕೊಂಡಿವೆ. ತೀವ್ರ ಮರಳು ಬಿರುಗಾಳಿ ದೇಶವನ್ನು ಆವರಿಸಿದ್ದರಿಂದ ನೆರೆಯ ರಾಷ್ಟ್ರ ಕುವೈತ್ನ ಆಕಾಶ ಪ್ರಕಾಶಮಾನವಾದ ಕಿತ್ತಳೆ ಬಣ್ಣಕ್ಕೆ ತಿರುಗಿ, ಈ ತಿಂಗಳಿನಲ್ಲಿ ಎರಡನೇ ಬಾರಿಗೆ, ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೂಳಿನ ಕಾರಣ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಿದೆ.
ಈ ದೂಳಿನ ಬಿರುಗಾಳಿಗಳು ರಸ್ತೆಗಳಲ್ಲಿ ಗೋಚರತೆಯನ್ನು ಅಡ್ಡಿಪಡಿಸುವುದರೊಂದಿಗೆ ಗಾಳಿಯ ಗುಣಮಟ್ಟವನ್ನೂ ಕಡಿಮೆ ಮಾಡುತ್ತವೆ. ಕತಾರ್ ಹವಾಮಾನ ಇಲಾಖೆ (QMD) ತಿಂಗಳ ಆರಂಭದಲ್ಲಿ ಹವಾಮಾನ ಎಚ್ಚರಿಕೆಯನ್ನು ನೀಡಿತ್ತು. ಪ್ರಪಂಚದಾದ್ಯಂತದ ನಗರಗಳ ಗಾಳಿಯ ಗುಣಮಟ್ಟವನ್ನು ಅಳೆಯುವ ಅಪ್ಲಿಕೇಶನ್, Plume, ದಾಖಲಿಸಿರುವ air quality index (AQI) ಪ್ರಕಾರ ಕತಾರ್ ನ ವಾಯುಮಾಲಿನ್ಯ ಮೇ ೨೪ರಂದು 174 US AQI! IQAir, ನೈಜ-ಸಮಯದ ವಾಯು ಗುಣಮಟ್ಟದ ವರದಿಯ ಪ್ರಕಾರ, ಇದೇ ದಿನ ರಾಜಧಾನಿ ದೋಹಾದ ವಾಯುಮಾಲಿನ್ಯದ ಗುಣಮಟ್ಟ 163 US AQI, ಹಾಗೂ ವಾಯುವಿನಲ್ಲಿರುವ PM2.5 ಸಾಂದ್ರತೆಯು ವಿಶ್ವ ಆರೋಗ್ಯ ಸಂಸ್ಥೆಯ ಪ್ರಸ್ತುತ ವಾರ್ಷಿಕ ವಾಯು ಗುಣಮಟ್ಟದ ಮಾರ್ಗದರ್ಶಿ ಮೌಲ್ಯಕ್ಕಿಂತ 15.8 ಪಟ್ಟು ಹೆಚ್ಚಾಗಿದೆ.
ಸುತ್ತಮುತ್ತಲೂ ನಾವು ಉಸಿರಾಡುವ ಗಾಳಿಯಲ್ಲಿ ಮರಳಿನ ಸಣ್ಣ ಕಣಗಳಿರುವಾಗ ಅಲರ್ಜಿ ಅಥವಾ ಅಸ್ತಮಾ ಇರುವವರ ಪರಿಸ್ಥಿತಿಯನ್ನೊಮ್ಮೆ ಆಲೋಚಿಸಿ ನೋಡಿ. ಮಕ್ಕಳು, ವಯಸ್ಸಾದವರು, ಹಾಗೂ ಗರ್ಭಿಣಿಯರು ಇಂತಹ ಸಂದರ್ಭಗಳಲ್ಲಿ ದೂಳಿನಿಂದ ಹರಡುವ ವೈರಸ್ಗಳು ಮತ್ತು ಬ್ಯಾಕ್ಟೀರಿಯಾಗಳಿಂದ ಸೋಂಕಿಗೆ ಹೆಚ್ಚು ಒಳಗಾಗುತ್ತಾರೆ. ಹತ್ತದಿನೈದು ನಿಮಿಷ ಇಂತಹ ಗಾಳಿಯಲ್ಲಿ ಉಸಿರಾಡಿದರೆ ಖಾಯಿಲೆ ಇಲ್ಲದವರೂ ಅಸ್ತಮಾ ರೋಗಲಕ್ಷಣಗಳನ್ನು ಪಡೆದುಕೊಳ್ಳುವ ಅಪಾಯ ಕಟ್ಟಿಟ್ಟ ಬುತ್ತಿ. ನಾನು ಹೇಳುತ್ತಿರುವುದು ಅತಿಶಯೋಕ್ತಿ ಎನ್ನಿಸಬಹುದು, ಆದರೆ ಅಮೇರಿಕನ್ ಥೊರಾಸಿಕ್ ಸೊಸೈಟಿಯ ವರದಿ ನೋಡಿದರೆ ಎಂಥವರಿಗೂ ನಡುಕುವುಂಟಾಗುತ್ತದೆ. ದೂಳಿನ ಬಿರುಗಾಳಿಯಲ್ಲಿ ಬರುವ ಮರಳಿನ ಕಣಗಳು “ಸಾಮಾನ್ಯವಾಗಿ ಶ್ವಾಸಕೋಶದಲ್ಲಿ ನಿಲ್ಲಲಾಗದಷ್ಟು ದೊಡ್ಡದಾಗಿರುತ್ತವೆ, ಹಾಗಾಗಿ ಆ ಕಣಗಳು ಮೇಲಿನ ಶ್ವಾಸನಾಳದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತವೆ. ಇದರಿಂದಾಗಿ ಮೇಲ್ಭಾಗದ ಶ್ವಾಸನಾಳ ಮತ್ತು ಲೋಳೆಯ ಪೊರೆಯಲ್ಲಿ” ತಡೆದುಕೊಳ್ಳಲಾರದಷ್ಟು ಕಿರಿಕಿರಿಯಾಗುತ್ತದೆ.
ಇಂತಹ ಸಮಯದಲ್ಲಿ ನಾವು ಆದಷ್ಟು ಹೊರಗೆ ಹೋಗುವುದನ್ನು ಮುಂದೂಡುತ್ತೇವೆ. ಒಂದು ವೇಳೆ ಹೊರಗೆ ಹೋಗಲೇಬೇಕಾದ ಅವಶ್ಯಕತೆ ಬಂದರೆ ಮೈ ಕೈಎಲ್ಲಾ ಮುಚ್ಚುವಂತೆ ಬಟ್ಟೆ, ಬಾಯಿ ಮೂಗು ಮುಚ್ಚುವ ಹಾಗೆ ಮಾಸ್ಕ್ (ಮಾಸ್ಕ್ ಇಲ್ಲಿ ಕರೋನದ ಕೊಡುಗೆಯೇನಲ್ಲ!), ಕಣ್ಣಿಗೆ ಕನ್ನಡಕ ಹಾಕಿಕೊಳ್ಳುತ್ತೇವೆ. ಈ ದಿನಗಳಲ್ಲಿ ಮನೆ ಕಸ ಗುಡಿಸಿ ಒರೆಸಿದರೂ ಮತ್ತೆ ಮತ್ತೆ ದೂಳು ಮೆತ್ತಿಕೊಳ್ಳುತ್ತಲೇ ಇರುತ್ತದೆ. ಕಿಟಕಿಯ ಸಂದುಗಳಿಗೆ ಒದ್ದೆ ಬಟ್ಟೆ ಹಾಕಿ, ಮನೆಯೊಳಗೆ ದೂಳು ಬರದಂತೆ ತಡೆಯುವ ಪ್ರಯತ್ನದಲ್ಲಿಯೂ ಸೋತು ಸುಮ್ಮನಾಗಿದ್ದೇವೆ. ಸಾಮಾನ್ಯವಾಗಿ ಇತರೆಡೆಗಳಲ್ಲಿ ವರ್ಷದವರೆಗೂ HEPA (High Efficiency Particulate Air [filter]) ಬದಲಾಯಿಸದೆ ಕೆಲಸ ಮಾಡುವ ಏರ್ ಪ್ಯೂರಿಫೈಯರ್ ಗಳು ಈ ಬಿರುಗಾಳಿ ಬಂದು ಹೋದ ಬಳಿಕ ಫಿಲ್ಟರ್ ಬದಲಾಯಿಸಿ ಅಥವಾ ಸ್ವಚ್ಛಗೊಳಿಸಿ ಎಂದು ಲೈಟ್ ಮಿನುಗಲು ಶುರು ಮಾಡಿಬಿಡುತ್ತವೆ.
ದೂಳಿಗೆಲ್ಲಾ ಏರ್ ಪ್ಯೂರಿಫೈಯರ್ ಯಾಕೆ ಎಂದು ಮೂಗು ಮುರಿಯುವಂತಿಲ್ಲ. ಮರಳಿನ ಬಿರುಗಾಳಿ ಹುಟ್ಟಿದ್ದು ಪಕ್ಕದ ದೇಶದಲ್ಲಿಯೇ ಆದರೂ ಅದು ತಲುಪುವ ದೇಶದ ಮೇಲೆ ಅದರ ಪರಿಣಾಮ ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ. ಅದರ ಮೂಲ ಒಂದೇ ಆಗಿದ್ದರೂ, ಯಾವ ಯಾವ ಪ್ರದೇಶವನ್ನು ಅದು ಹಾದು ಹೋಗುತ್ತದೋ ಅಲ್ಲಿನ ಎಲ್ಲಾ ರೀತಿಯ ಸೂಕ್ಷ್ಮ ವಸ್ತುಗಳನ್ನೂ ತನ್ನೊಂದಿಗೆ ತೆಗೆದುಕೊಂಡೇ ಮತ್ತೊಂದು ಪ್ರದೇಶವನ್ನು ತಲುಪುತ್ತದೆ. ಅದು ಯಾವುದೇ ದೇಶದ ಕದ ತಟ್ಟಲಿ, ಮರಳಿನ ಕಣದ ಜೊತೆಯಲ್ಲಿ ಬ್ಯಾಕ್ಟೀರಿಯಾಗಳು, ವೈರಸ್ ಗಳು, ದೂಳಿನ ಹುಳಗಳು, ಶಿಲೀಂಧ್ರಗಳು ಮತ್ತು ಇತರೆ ಸೂಕ್ಷ್ಮಜೀವಿಗಳೂ ಕದ ತಟ್ಟದೆಯೇ ನಮ್ಮ ಮನೆಯ ಒಳಹೊಕ್ಕಿರುತ್ತವೆ.
ಇದನ್ನೂ ಓದಿ : National Paper Airplane Day 2022: ಆಟಿಕೆ ಕೊಡಿಸದ ನನ್ನಮ್ಮನೆಂಬ ‘ಮುದ್ದುರಾಕ್ಷಸಿ’ಯೇ
ಸಹಾರಾ ಮರುಭೂಮಿಯಲ್ಲೇಳುವ ಮರಳಿನ ಬಿರುಗಾಳಿಗಳು ಮಧ್ಯ ಆಫ್ರಿಕಾದಾದ್ಯಂತ ಮಾರಣಾಂತಿಕ ಮೆನಿಂಜೈಟಿಸ್ ಬೀಜಕಗಳನ್ನು ಹರಡುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಅಷ್ಟೇ ಏಕೆ, ಮಂಗೋಲಿಯಾ ಮತ್ತು ಗೋಬಿ ಮರುಭೂಮಿಯಿಂದ ಬರುವ ದೂಳು ಮತ್ತು ಮರಳು ಚೀನಾ, ಕೊರಿಯಾ ಮತ್ತು ಜಪಾನ್ ತಲುಪಿ, ಅಲ್ಲಿನ ಜನತೆಯ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡಿವೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶದ ಪ್ರಕಾರ, ಪ್ರತಿ ವರ್ಷ ಸುಮಾರು ಏಳು ಮಿಲಿಯನ್ ಜನರ ಸಾವಿಗೆ ಕಾರಣವಾಗುವ ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣ ಈ ದೂಳಿನ ಬಿರುಗಾಳಿಗಳು.
‘ಮಿಷನ್ ಇಂಪಾಸಿಬಲ್’ ಚಿತ್ರದಲ್ಲಿ ತೋರಿಸುವ ಹಾಗೆ ಮರಳಿನ ಬಿರುಗಾಳಿ ದುಬೈನಲ್ಲಿ ಹಾಗೆ ಮೇಲೇಳದಿರಬಹುದು, ಆದರೆ ಆ ಸಮಯದಲ್ಲಿ ನಾಯಕ ವರ್ತಿಸುವ ರೀತಿ ಮಾತ್ರ ಬಹಳ ನಿಖರವಾಗಿದೆ. ಹಂಟ್ ಪಾತ್ರಧಾರಿ ಟಾಮ್ ಕ್ರೂಸ್ ಚಂಡಮಾರುತದ ನಡುವೆ ಓಡುತ್ತಿರುವಾಗಲೇ, ಒಮ್ಮೆ ನಿಂತು, ತನ್ನ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ಕನ್ನಡಕವನ್ನು ಧರಿಸಿ, ಬಾಯಿಗೆ ಬಟ್ಟೆಯೊಂದನ್ನು ಸುತ್ತಿಕೊಂಡು, ದುಷ್ಟನನ್ನು ಹಿಡಿಯಲು ಮತ್ತೆ ಓಡುತ್ತಾನೆ. ವಾಸ್ತವವಾಗಿ ಅಂತಹ ಬಿರುಗಾಳಿಯಲ್ಲಿ ಯಾರಿಗೂ ಹಾಗೆ ಓಡಲಾಗುವುದಿಲ್ಲ, ಆದರೆ ವಿಶೇಷ ತರಬೇತಿ ಪಡೆದ ರಹಸ್ಯ ಏಜೆಂಟ್ ದುಷ್ಟನ ಹಿಂದೆ ಹಾಗೆ ಓಡದಿದ್ದರೆ ಹೇಗೆ? ಕೊನೆಗೆ, ಈ ಚೇಸ್ ದೃಶ್ಯ ಮುಖಾಮುಖಿ ಡಿಕ್ಕಿಯಲ್ಲಿ ಕೊನೆಗೊಳ್ಳುತ್ತದೆ, ದುಷ್ಟ ಟ್ರಕ್ ನಲ್ಲಿ ತಪ್ಪಿಸಿಕೊಳ್ಳುತ್ತಾನೆ. ಅವನು ತಪ್ಪಿಸಿಕೊಳ್ಳಲು ಕಾರಣ ನಾಯಕನಲ್ಲ, ಆ ಬಿರುಗಾಳಿ ಎಂದು ಚಲನಚಿತ್ರ ನಾಯಕನನ್ನು ಸಮರ್ಥಿಸಿಕೊಂಡರೂ, ಅದೇ ವಾಸ್ತವ ಮತ್ತು ಕಟು ಸತ್ಯ. Sandstorms are more powerful than any heroes. ಇದನ್ನು ಮಧ್ಯಪ್ರಾಚ್ಯದಲ್ಲಿ ವಾಸಿಸುತ್ತಿರುವ ಯಾರನ್ನೇ ಕೇಳಿದರೂ ಸರಿಯೆಂದು ಒಪ್ಪುತ್ತಾರೆ.
(ಮುಂದಿನ ಪತ್ರ : 10.6.2022)
ಪ್ರತಿಕ್ರಿಯೆಗಾಗಿ : tv9kannadadigital@gmail.com
Published On - 6:15 am, Fri, 27 May 22