Sydney Diary : ಸಿಡ್ನಿ ಡೈರಿ – ಎಂಟನೆಯ ತರಗತಿಗೆ ಬಂದ ಮೇಲೆ ನನಗೆ ಟೆಸ್ಟ್ಗಳಲ್ಲಿ ಉತ್ತರ ಬರೆಯಬೇಕು ಅಂತಲೂ ಅನ್ನಿಸುತ್ತಿರಲಿಲ್ಲ. ಕೃಷ್ಣದೇವರಾಯ ಬಹುಮುಖ ಪ್ರತಿಭೆಯುಳ್ಳ ವ್ಯಕ್ತಿ ಎಂದು ನಿರೂಪಿಸಿ ಎಂಬ ಪ್ರಶ್ನೆಗಳಿರುತ್ತಿದ್ದವು. ಇದಕ್ಕೆ ಆತ ಯುದ್ದ ಗೆದ್ದ, ಗುಡಿಗಳ ಕಟ್ಟಿಸಿದ, ಅಮುಕ್ತಮಾಲ್ಯದ ಬರೆದ, ವ್ಯಾಪಾರ ಮಾಡಿದ ಇತ್ಯಾದಿ ಉದ್ದುದ್ದಕ್ಕೆ ಪಾಯಿಂಟುಗಳನ್ನು ಹಾಕಿ ಬರೆಯಬೇಕಿತ್ತು. ನಾನು ಆರನೆಯ ತರಗತಿಯಲ್ಲಿದ್ದಾಗಲೆ ಆರ್. ಸಿ. ಹಿರೇಮಠರು ಸಂಪಾದಿಸಿದ ಮರೆಯಲಾಗದ ಮಹಾಸಾಮ್ರಾಜ್ಯ ಪುಸ್ತಕವನ್ನು ಪೂರ್ತಿ ಓದಿದ್ದೆ. ಇಂತಹ ಚಿಲ್ಲರೆ ಪ್ರಶ್ನೆಗಳಿಗೆ ಉತ್ತರ ಬರೆಯುವುದು ನನ್ನ ಪ್ರತಿಷ್ಠೆಗೆ ಕುಂದು ಎಂಬುದು ನನ್ನ ನಂಬಿಕೆಯಾಗಿತ್ತು. ನಾನೇನಿದ್ದರೂ ಷ. ಶೆಟ್ಟರ್, ಎಂ. ಎಂ. ಕಲಬುರ್ಗಿಯಂತಹ ಸಂಶೋಧಕರ ಮಟ್ಟದ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಬೇಕು ಅಂತಂದುಕೊಂಡಿದ್ದೆ. ಅದರಲ್ಲೂ ದಾಸವಾಳದ ಹೂವಿನ ಚಿತ್ರ ಬರೆದು ಪಾರ್ಟುಗಳನ್ನು ಲೇಬಲ್ಲಿಸಿ ಎಂಬ ಪ್ರಶ್ನೆಗಳಂತೂ ಅತಿ ಕಿರಿಕಿರಿಯುಂಟು ಮಾಡುತ್ತಿದ್ದವು. ಮೊದಲನೆಯದಾಗಿ ನನಗೆ ಚಿತ್ರಗಳನ್ನು ಬರೆಯಲು ಆಸಕ್ತಿ ಇರಲಿಲ್ಲ ಅದರ ಮೇಲೆ ಬಾಟನಿ ಬೇರೆ. ಚಿತ್ರ ಬರೆಯುವುದು ಒಂದು ಕಲೆ ತಾನೆ? ಇದು ಎಲ್ಲರಿಗೂ ಒಲಿಯುವುದು ಸಾಧ್ಯವೆ? ನನಗೆ ಒಲಿದಿರಲಿಲ್ಲ. ನಾನು ಬರೆದ ಚಿತ್ರ ಕೆಟ್ಟದಾಗಿ ಬಂದರೆ ಅದು ನನ್ನ ತಪ್ಪಲ್ಲವಲ್ಲ!
ಶ್ರೀಹರ್ಷ ಸಾಲಿಮಠ
*
(ಕಂತು – 8)
ನಮ್ಮಮ್ಮ ಪದೇ ಪದೇ ಹೇಳುತ್ತಿದ್ದರು “ಇವನಿಗೆ ಇನ್ಫಿರಿಯಾರಿಟಿ ಕಾಂಪ್ಲೆಕ್ಸ್ ಇಲ್ಲ. ಇರೋದೆಲ್ಲ ಸುಪಿರಿಯಾರಿಟಿ ಕಾಂಪ್ಲೆಕ್ಸ್. ಇವನು ತನ್ನನ್ನ ತನ್ನ ಮೇಷ್ಟ್ರುಗಳಿಗಿಂತ ಬುದ್ದಿವಂತ ಅಂತ ಅಂದುಕೊಂಡುಬಿಟ್ಟಿದಾನೆ” ಅಂತ. ನಮ್ಮಮ್ಮ ಹಾಗೆ ಹೇಳುತ್ತಿದ್ದುದರಲ್ಲಿ ದೊಡ್ಡ ಉತ್ಪ್ರೇಕ್ಷೆ ಏನೂ ಇರಲಿಲ್ಲ. ನಾನು ಹಾಗೆಯೇ ಅಂದುಕೊಂಡಿದ್ದೆ! “ಪರೀಕ್ಷೆಗೆ ಹೋಗೋ ಮುನ್ನ ದೇವರಿಗೆ ಒಮ್ಮೆ ಕೈಮುಗಿದು ಬನ್ರಪ್ಪಾ..” ಅಂತ ಸಲಹೆ ಕೊಡೊ ಸೈನ್ಸ್ ಟೀಚರುಗಳನ್ನ ಹೇಗೆ ಬುದ್ದಿವಂತರು ಅಂದುಕೊಳ್ಳಲಿ? ಒಮ್ಮೊಮ್ಮೆ ಟೀಚರುಗಳು ನನ್ನನ್ನು ಅಷ್ಟು ಅಸಾಧ್ಯವಾಗಿ ಏಕೆ ದ್ವೇಷಿಸುತ್ತಾರೆ ಅನ್ನಿಸೋದು.
ಒಮ್ಮೆ ಹೀಗಾಯಿತು. ನಮ್ಮ ಕನ್ನಡ ಟೀಚರು ಎಸ್. ಕೃಷ್ಣಪ್ಪನವರು ಪಾಠದ ಮಧ್ಯೆ ಅದೇನೊ ಕೆಲಸ ಅಂತ ಹೊರಹೋದರು. ನನಗೆ ನನ್ನ ಗೆಳೆಯನೊಬ್ಬನ ಬಳಿ ನೋಟ್ಸ್ ಪಡೆದುಕೊಳ್ಳಬೇಕಾದುದರಿಂದ ಕ್ಲಾಸ್ ಲೀಡರ್ ಬಳಿ ಅನುಮತಿ ಕೋರಿದೆ. ಹೀಗೆ ಕೋರುತ್ತಿರುವ ಸಮಯದಲ್ಲೇ ಇದ್ದಕ್ಕಿದ್ದಂಗೆ ಒಳಬಂದ ಮೇಷ್ಟ್ರು ಕ್ಲಾಸಿನಲ್ಲಿ ಮೇಷ್ಟ್ರು ಇಲ್ಲದಿದ್ದಾಗ ಮಾತನಾಡುತ್ತಿದ್ದೀಯಾ ಅಂತ ಆರೋಪಿಸಿ ನನ್ನನ್ನು ಹಿಗ್ಗಾ ಮುಗ್ಗಾ ಥಳಿಸತೊಡಗಿದರು. ನಾನು ಕ್ಲಾಸ್ ಲೀಡರ್ ನ ಬಳಿ ಅನುಮತಿ ಕೋರುತ್ತಿದ್ದೇನೆ ಅಷ್ಟೆ ಅಂತ ಹೇಳಿದರೂ ಕೇಳಲಿಲ್ಲ. ತರಗತಿಯಲ್ಲಿ ಟೀಚರು ಇಲ್ಲದಿದ್ದಾಗ ಕ್ಲಾಸ್ ಲೀಡರ್ ಬಳಿ ಅನುಮತಿ ಕೋರಿ ಇನ್ನೊಬ್ಬರನ್ನು ಮಾತನಾಡಿಸುವ ಅವಕಾಶ ಇತ್ತು. ಇಲ್ಲಿ ನಾನು ಬೇರೆ ಹುಡುಗನನ್ನು ಮಾತನಾಡಿಸಿರಲೂ ಇಲ್ಲ ಇನ್ನೂ ಕ್ಲಾಸ್ ಲೀಡರಿನ ಬಳಿ ಅನುಮತಿ ಕೋರಿದ್ದೆನಷ್ಟೇ! ತಾವು ಮಾಡಿದ ಕಾನೂನನ್ನು ತಾವೇ ಪಾಲಿಸದ ಇಂತಹ ಮೇಷ್ಟ್ರುಗಳಿದ ನಾನು ಕಲಿಯುವಂತದ್ದೇನೂ ಇಲ್ಲ ಅಂತ ನಿರ್ಧರಿಸಿದೆ!
ಅಂದಿನಿಂದ ನಾನು ಟೀಚರುಗಳು ಕೊಟ್ಟ ಹೋಮ್ವರ್ಕ್, ಕಾಪಿರೈಟಿಂಗ್ ಬರೆಯುವುದು ಯಾವುದನ್ನೂ ಮಾಡಲಿಲ್ಲ. ಹೊಡೆದರೆ ಎಲ್ಲರೂ ಹೊಡೆಸಿಕೊಳ್ಳುವಂತೆ ಹೊಡೆಸಿಕೊಳ್ಳುತ್ತಿದ್ದೆ. ಕ್ಲಾಸಿನಿಂದ ಹೊರಹಾಕಿದರೆ ಹೋಗುತ್ತಿದ್ದೆ. ನೋಟ್ಸ್ ಕೂಡ ಬರೆದುಕೊಳ್ಳುವುದು ನಿಲ್ಲಿಸಿಬಿಟ್ಟೆ. ಇದೆಲ್ಲಾ ಸಮಯವನ್ನು ಶಾಲೆಯ ಹೊರತಾದ ಪುಸ್ತಕಗಳ ಓದಿನಲ್ಲಿ ತೊಡಗಿಸಿಕೊಂಡೆ. ಆದರೆ ಮಾರ್ಕ್ಸ್ ಯಾವತ್ತಿಗೂ ಕಡಿಮೆಯಾಗದಂತೆ ನೋಡಿಕೊಳ್ಳುತ್ತಿದ್ದೆ. ಎಷ್ಟೇ ಹುಡುಕಿದರೂ ಮಾರ್ಕುಗಳನ್ನು ಕತ್ತರಿಸುವುದು ಮೇಷ್ಟ್ರುಗಳಿಗೆ ಕಷ್ಟವಿತ್ತು. ಮಾರ್ಕುಗಳ ಬಗ್ಗೆ ನಾನು ಹುಷಾರಾಗಿದ್ದ ಕಾರಣವೆಂದರೆ ಮನೆಯಲ್ಲಿ ಥಳಿಸಲು ನಮ್ಮ ತೀರ್ಥರೂಪರಿದ್ದರಲ್ಲ.
ಶಾಲೆ ಮನೆ ಎರಡೂ ಕಡೆ ಹೊಡೆತ ತಿನ್ನುವುದು ಕಷ್ಟವಾಗಿತ್ತು. ಆದರೆ ಎಂಟನೆಯ ತರಗತಿಗೆ ಬಂದ ಮೇಲೆ ಟೆಸ್ಟ್ಗಳಿಗೆ ಓದುವುದನ್ನೂ ಮಾರ್ಕ್ಸ್ ತೆಗೆಯುವುದೂ ಕಡಿಮೆ ಮಾಡಿಬಿಟ್ಟೆ. ಯಾಕೆಂದರೆ ಹೈಸ್ಕೂಲಿನಲ್ಲಿ ಪ್ರೈಮರಿ ಸ್ಕೂಲಿನಲ್ಲಿ ಹೊಡೆದಂತೆ ಹೊಡೆಯುತ್ತಿರಲಿಲ್ಲ. ಒಂದೊ ಕ್ಲಾಸಿನಿಂದ ಹೊರಕಳಿಸುತ್ತಿದ್ದರು ಅಥವಾ ಎಲ್ಲರೆದುರಿಗೆ ಅವಮಾನ ಮಾಡುತ್ತಿದ್ದರು. ಇವು ನನ್ನ ಚರ್ಮಕ್ಕಾಗಲಿ ಮನಸ್ಸಿಗಾಗಲಿ ನಾಟುತ್ತಿರಲಿಲ್ಲ. ‘ಈ ದೇಹ ನನ್ನದಲ್ಲ’ ಎಂಬ ಭಾವದಂತೆ ನಿರಾಳವಾಗಿದ್ದೆ. ಇಂತಹ ಚಿಲ್ಲರೆ ಬುಲ್ಲಿಯಿಂಗ್ಗಳನ್ನು ಮೀರಿದ ಆತ್ಮವಿಶ್ವಾಸವೊಂದು ನನ್ನ ಓದಿನ ಮೇಲೆ ನನಗಿತ್ತು. ನನ್ನ ಮನೆಯಲ್ಲಿಯೂ ಸಹ ತೀರ್ಥರೂಪರು ಹೀಗೆಯೆ ಮಾಡಬಹುದು, ಹೊಡೆಯುವುದು ನಿಲ್ಲಿಸಬಹುದು ಅಂತ ಬಗೆದಿದ್ದೆ. ಆದರೆ ನಮ್ಮ ತಂದೆಯವರು ನಿಯತ್ತು ಮೀರದೆ ಹತ್ತನೆಯ ತರಗತಿಯವರೆಗೆ ಥಳಿಸುವುದನ್ನು ನಿಲ್ಲಿಸಲಿಲ್ಲ! ಆದರೆ ತಿಂಗಳಿಗೊಮ್ಮೆ ರಿಪೋರ್ಟ್ ಕಾರ್ಡ್ ಬಂದಾಗ ಮಾತ್ರ ತಾನೆ ಹೊಡೆತಗಳು ಬೀಳುವುದು. ಅದಕ್ಕಾಗಿ ಯಾಕೆ ವರ್ಷಪೂರ್ತಿ ಸಿಲೆಬಸ್ ಓದಿ ಸಮಯ ಹಾಳು ಮಾಡುವುದು ಅಂತ ನನಗಿಷ್ಟ ಬಂದ ಪುಸ್ತಕಗಳನ್ನು ಓದುತ್ತಿದ್ದೆ.
ನಾನು ಬರುಬರುತ್ತಾ ಮೊಂಡನಾಗುತ್ತಿರುವುದನ್ನು ನೋಡಿದ ಕೆಲ ತುಂಬಾ ಒಳ್ಳೆಯ ಮನಸ್ಸಿನ ಟೀಚರುಗಳು ದಿಗಿಲು ಬಿದ್ದು ನನ್ನ ತಂದೆ ತಾಯಿಗಳನ್ನು ಶಾಲೆಗೆ ಕರೆಸಿ ಮಾತನಾಡಿದರು. ಪರಿಪರಿಯಾಗಿ ನನ್ನ ತೊಂದರೆ ಏನು ಅಂತ ಕೇಳಿದರು. ಅದರಲ್ಲೂ ಸಿ. ಇ. ನಾಗರತ್ನ ಎಂಬ ಟೀಚರು ಅದೆಷ್ಟು ಪ್ರೀತಿಯಿಂದ ನನ್ನ ಗಲ್ಲ ಸವರಿ ಕೇಳಿದರೆಂದರೆ, ಅವರ ಅಷ್ಟು ಮೆದು ಅಂಗೈಗಳ ಪ್ರೀತಿಯ ಸ್ಪರ್ಷಕ್ಕಾದರೂ ಮನಸೋತು ನನ್ನ ಮೊಂಡುತನ ಬಿಟ್ಟುಬಿಡೋಣ ಅಂತ ಆ ಕ್ಷಣ ಅನ್ನಿಸಿತು. ಬಿಡಲಿಕ್ಕೆ ಸಾಧ್ಯವಾಗಲಿಲ್ಲ ಅನ್ನಿ. ನನಗೆ ಆಗಲೂ ಅಷ್ಟೇ ಈಗಲೂ ಅಷ್ಟೇ ಯಾವುದೇ ವಿಷಯದ ಬಗ್ಗೆ ಸಮಝಾಯಿಷಿ ಕೊಡಬೇಕು ಅನ್ನಿಸುವುದೇ ಇಲ್ಲ. ಯಾರಾದರೂ ನನ್ನ ತಪ್ಪಿದೆ ಅಂದರೆ ಅಥವಾ ಆರೋಪ ಹೊರಿಸಿದರೆ ಉತ್ತರ ಕೊಡಲು ಹೋಗುವುದಿಲ್ಲ.
ಒಂದು ಸಾರಿ ಮೇಷ್ಟ್ರು ಸೈಕಲ್ ಕಂಡು ಹಿಡಿದವರು ಯಾರು ಅಂತ ಕೇಳಿದರು. ನಾನು ಬಾರನ್ ವಾನ್ ಡ್ರಾಯಿಸ್ ಅಂತ ಹೇಳಿದೆ. ನನ್ನ ಗೆಳೆಯ ಮಾಕ್ಮಿಲನ್ ಅಂತ ಹೇಳಿದ. ಯಾರು ಸರಿ ಎಂಬ ವಾದ ಶುರುವಾಯಿತು. ಸೈಕಲ್ ಅನ್ನು ಮೊದಲ ಬಾರಿಗೆ ಗಾಲಿಗಳೊಂದಿಗೆ ತಯಾರಿಸಿದವನು ಮರಗೆಲಸದವನಾದ ಡ್ರಾಯಿಸ್. ಮರದ ಹಲಗೆಗಳಿಂದ ತಯಾರಿಸಿದ. ಇದು ಜನರ ಬಳಕೆಗೆ ಯೋಗ್ಯವಾಗಿರಲಿಲ್ಲ. ಕೆಲವರ್ಷಗಳ ನಂತರ ಮಾಕ್ಮಿಲನ್ ಎಂಬುವನು ಸಾಕಷ್ಟು ಸುಧಾರಣೆಗಳನ್ನು ಕಬ್ಬಿಣವನ್ನು ಬಳಸಿ ಜನಬಳಕೆಗೆ ಯೋಗ್ಯವಾಗುವಂತೆ ಮಾಡಿದ. ಈಗಿರುವ ಸೈಕಲ್ ಬಹುತೇಕ ಮ್ಯಾಕ್ಮಿಲನ್ ತಂದ ಸುಧಾರಣೆಯದೇ. ಹಾಗಾಗಿ ಮಾಕ್ಮಿಲನ್ ಅನ್ನು ಕೆಲಕಡೆ ಸೈಕಲ್ ಜನಕ ಎಂದೇ ಕರೆಯಲಾಗುತ್ತದೆ. ನಾನು ಎಷ್ಟು ವಿವರಿಸಿ ಸುಮ್ಮನಾದೆ. ಆದರೆ ಅದು ಯಾರ ತಲೆಗೂ ಹೋದಂತೆ ಕಾಣಲಿಲ್ಲ. ಮರುದಿನ ಆತ ಒಂದು ರೈಲಿನಲ್ಲಿ ಮಾರಾಟಕ್ಕೆ ಸಿಗುವ ಕ್ವಿಜ್ ಪುಸ್ತಕವನ್ನು ತಂದು ತೋರಿಸಿ ಇದು ನೋಡು ನನ್ನ ಪ್ರೂಫ್ ಅಂತ ತೋರಿಸಿದ. ಎಲ್ಲರೂ ಆತನನ್ನು ನಂಬಿದರು.
ನನ್ನ ಬಳಿ ನೂರಾರು ಸಂಶೋಧನೆಗಳ ಪುಸ್ತಕಗಳೇ ಇದ್ದವು ಅಂತ ಪುಸ್ತಕವೊಂದರಲ್ಲಿ ಸೈಕಲ್ ಬಗ್ಗೆಯೂ ಸಹ ಇತ್ತು. ನನಗೆ ಪುಸ್ತಕ ತಂದು ತೋರಿಸಬೇಕು ಗೆದ್ದೆ ಅನಿಸಿಕೊಳ್ಳಬೇಕು ಅಂತ ಅನ್ನಿಸಲೇ ಇಲ್ಲ. ಗುರುಗಳು ಆತನೆ ವಾಗ್ವಾದದಲ್ಲಿ ವಿಜಯಿ ಅಂತ ಘೋಷಿಸಿದರು. ದಾರಿಯಲ್ಲಿ ಕಂಡ ಹುಡುಗರೆಲ್ಲ ಆತ ನಿನ್ನನ್ನು ಸೋಲಿಸಿದನಂತೆ ಹೌದಾ? ಅಂತ ಕೇಳುತ್ತಿದ್ದರು. ನಾನು ಎಲ್ಲರಿಗೂ ಹೌದು ಅಂತ ಹೇಳಿ ಮುಂದೆ ಹೋಗುತ್ತಿದ್ದೆನಷ್ಟೇ ಹೊರತು ವಿವರಣೆ ಕೊಡಲು ಹೋಗುತ್ತಿರಲಿಲ್ಲ. ಇನ್ನು ನನ್ನ ಮೊಂಡುತನದ ಕಾರಣವೇನು ಅಂತ ಮೇಷ್ಟ್ರುಗಳಿಗಾಗಲಿ, ತಾಯ್ತಂದೆಯರಿಗಾಗಲಿ ವಿವರಿಸಲು ನನಗೆ ಕಾರಣವೇ ಇರಲಿಲ್ಲ. ನನಗೆ ಮೊಂಡುತನ ಬರಲು ಎಸ್. ಕೃಷ್ಣಪ್ಪನವರ ಪ್ರಸಂಗ ಒಂದು ಟ್ರಿಗರಿಂಗ್ ಪಾಯಿಂಟ್ ಅಷ್ಟೇ! ದೊಡ್ಡವರ ಅನೇಕ ಆಷಾಢಭೂತಿತನಗಳೂ ಇದಕ್ಕೆ ಹಿನ್ನೆಲೆಯಾಗಿದ್ದವು. ನಮ್ಮಮ್ಮ ಸತತವಾಗಿ ಹೆಚ್ಚು ಬರೆಯಬೇಕು ಅಂತ ಪ್ರೇರೇಪಿಸುತ್ತಿದ್ದರು. ಕಡಿಮೆ ಬರೆದರೆ ಬೈಯುತ್ತಿದ್ದರು. ಹೆಚ್ಚು ಬರೆದಂತೆ ಪೆನ್ಸಿಲ್ಗಳು ಕರಗುತ್ತದೆಯಲ್ಲವೇ? ಪೆನ್ಸಿಲ್ ಬೇಗ ಕರಗಿ ಖಾಲಿಯಾದಾಗ ಬೇಗ ಖಾಲಿಯಾಯಿತು ಅಂತ ಮತ್ತೆ ಬೈಯುತ್ತಿದ್ದರು.
ಇದರ ನಂತರ ಮನೆಗೆ ಬಂದ ಬಂಧುಗಳು ಸ್ನೇಹಿತರುಗಳು ತಮ್ಮ ತಮ್ಮ ಯೋಗ್ಯತಾನುಸಾರ ನನಗೆ ಬುದ್ದಿ ಹೇಳುವವರೇ! ಕಿರಾಣಿ ಅಂಗಡಿ ಇಟ್ಟವರಿಂದ ಹಿಡಿದು ವಿದೇಶಗಳಲ್ಲಿ ವೈದ್ಯರಾದವರ ತನಕ! ಎಲ್ಲರೂ ಎಲ್ಲೆಲ್ಲೋ ಓದಿದ್ದ ಕಳಪೆ ಪರ್ಸನಾಲಿಟಿ ಡೆವಲಪ್ಮೆಂಟ್, ಸೆಲ್ಫ್ ಹೆಲ್ಪ್ ಪುಸ್ತಕಗಳ ಕತೆಗಳನ್ನು ಹೇಳೋರು. ಎಷ್ಟೋ ಸಾರಿ ಇಂತಹ ಕತೆಗಳನ್ನು ಹೇಳಿದಾಗ ನೀವು ಇದನ್ನು ಇಂತಹ ಪುಸ್ತಕ/ಪತ್ರಿಕೆಯಲ್ಲಿ ಓದಿದ್ದೀರಲ್ಲವೇ? ಅಂತ ಅಲ್ಲೇ ಕೇಳಿಬಿಡುತ್ತಿದ್ದೆ. ಪ್ರತಿ ಸಾರಿ ಈ ರೀತಿ ಮನೆಗೆ ಬಂದ ಜನರು ಬುದ್ಧಿ ಹೇಳುತ್ತಾ ಕೂತಾಗ ನಾನು ಆಡುವ ಮತ್ತು ನನಗಿಷ್ಟದ ಪುಸ್ತಕಗಳನ್ನು ಓದುವ ಸಮಯ ವ್ಯರ್ಥವಾಗುತ್ತದಲ್ಲಾ ಅಂತ ವ್ಯಥೆ ಪಡುತ್ತಿದ್ದೆ. ಇಂತಹ ಒಂದು ಬುದ್ದಿ ಹೇಳುವ ಸೆಶನ್ನಲ್ಲಿ “ನಿನಗೆ ಕೀಳರಿಮೆ ಇದ್ದರೆ ಅದನ್ನು ಬಿಟ್ಟುಬಿಡಪ್ಪಾ ನೀನು ಬುದ್ದಿವಂತ” ಅಂತ ಯಾರಾದರೂ ಹೇಳಿದಾಗ ಈ ಬರಹದ ಮೊದಲ ಪ್ಯಾರಾಗ್ರಾಫ್ನಲ್ಲಿರುವ ವಾಕ್ಯಗಳನ್ನು ನಮ್ಮಮ್ಮ ಹೇಳುತ್ತಿದ್ದರು.
ಇದರ ನಡುವೆ ಎಸ್. ಕೃಷ್ಣಪ್ಪನವರು ಸರಕಾರಿ ಕೆಲಸ ಸಿಕ್ಕು ಹೊರಟು ಹೋಗಿ ಎ. ಪಿ. ನಾಗರಾಜ ಎಂಬ ಮೇಷ್ಟ್ರು ಬಂದರು. ಎ ಪಿ ನಾಗರಾಜ ಅವರು ಕೃಷ್ಣಪ್ಪನವರಷ್ಟು ಕುಶಾಗ್ರಮತಿಗಳು, ಓದಿಕೊಂಡವರೂ ಆಗಿರಲಿಲ್ಲ. ಒಮ್ಮೆ ಎ. ಪಿ. ನಾಗರಾಜ ಮೇಷ್ಟ್ರು ಪಾಠ ಮಾಡುವಾಗ ಅಗಸೆಯ ಮರ ಎಂದರೆ ಆಗಸದಷ್ಟು ಎತ್ತರದ ಮರ ಎಂದೂ ತುಂಬಾ ದೊಡ್ಡ ಮರಗಳನ್ನು ಹಾಗೆ ಕರೆಯುತ್ತಾರೆಂದೂ ಹೇಳಿದರು. ನನ್ನ ಕಿಳ್ಳಿ ಬುದ್ಧಿ ಜಾಗೃತವಾಯಿತು. ನಿಜ ಎಂದರೆ ನನ್ನ ಕಿಳ್ಳಿ ಬುದ್ದಿ ಯಾವತ್ತೂ ಮಲಗುವುದಿಲ್ಲ ಕಚ್ಚಲು ಅವಕಾಶ ಹುಡುಕುತ್ತಿರುತ್ತದಷ್ಟೇ! ನಾನು ಎದ್ದು ನಿಂತು “ಸಾರ್ ಪುಸ್ತಕದಲ್ಲಿ ಅಗಸೆ ಅಂತ ಇದೆ, ಆಗಸ ಅಂತ ಅಲ್ಲ” ಅಂತ ಹೇಳಿದೆ. ಮೇಷ್ಟ್ರು ಅದು ಪ್ರಿಂಟ್ ಮಿಸ್ಟೇಕಿರಬಹುದು ಅಂದರು. ಪ್ರಿಂಟ್ ಮಿಸ್ಟೇಕ್ ಆದರೆ ಒಂದು ಅಕ್ಷರ ಅಥವಾ ಪದ ವ್ಯತ್ಯಾಸ ಇರುತ್ತದೆ. ಆದರೆ ಇಲ್ಲಿ ಇಡಿಯ ವಾಕ್ಯವೇ ಬೇರೆ ರೀತಿ ಇದೆ. ಇಡಿಯ ವಾಕ್ಯ ತಪ್ಪಾಗಲು ಹೇಗೆ ಸಾಧ್ಯ ಅಂತ ಕೇಳಿ ಮೇಷ್ಟ್ರು ತಬ್ಬಿಬ್ಬಾದಾಗ ನಾನೇ ಹಳ್ಳಿಯ ಬಾಗಿಲನ್ನು ಸೂಚಿಸಲು ಬೆಳೆಸುವ ಮರಗಳು ಅವು ಉತ್ತರ ಹೇಳಿದೆ. ಹುಡುಗರು ಮುಸಿಮುಸಿ ನಕ್ಕರು ಮೇಷ್ಟ್ರು ಉರಕೊಂಡರು, ನಾನು ಜಂಬ ಪಟ್ಟುಕೊಂಡೆ.
ಟೀಚರುಗಳ ಬಳಿ ನಾನು ಜ್ಞಾನ ವೃದ್ಧಿಸಿಕೊಳ್ಳಲು ಪ್ರಶ್ನೆ ಕೇಳುವುದಕ್ಕಿಂತ ಅವರಿಗೆ ಕಿರಿಕಿರಿ ಮಾಡಿ ಮನರಂಜನೆ ಪಡೆಯಲು ಕೇಳುತ್ತಿದ್ದುದೇ ಜಾಸ್ತಿ. ಎಷ್ಟೋ ಸಾರಿ ಕ್ಲಾಸು ಬೋರಾದಾಗ ಗೆಳೆಯರು ಪ್ರಶ್ನೆಗಳನ್ನು ಕೇಳಲು ಪ್ರಚೋದಿಸುತ್ತಿದ್ದರು. ಇಂತಹ ದುರಹಂಕಾರದ ಬುದ್ದಿಯನ್ನು ಬಿಟ್ಟುಬಿಡಲು ನನ್ನ ತಂದೆ ಸಾಕಷ್ಟು ಬಾರಿ ಬುದ್ಧಿ ಹೇಳಿದ್ದರು. ಎ. ಪಿ. ನಾಗರಾಜ ಮೇಷ್ಟ್ರು ಇಪ್ಪತೈದು ಅಂಕಗಳ ಬದಲು ಇಪ್ಪತ್ನಾಲ್ಕು ಅಂಕಗಳಿಗೆ ಪ್ರಶ್ನೆಪತ್ರಿಕೆ ಸೆಟ್ ಮಾಡೋರು. ಒಂದು ಅಂಕಗಳನ್ನು ಕೈಬರಹಕ್ಕೆ ಕೊಡೊರು. ಆ ಒಂದು ಅಂಕ ನನ್ನೊಬ್ಬನನ್ನು ಬಿಟ್ಟು ಕ್ಲಾಸಿನಲ್ಲಿ ಎಲ್ಲರಿಗೂ ಸಿಕ್ಕಿರೋದು!
ನಮ್ಮ ಹೆಡ್ ಮಾಸ್ತರರಿಗೆ ಕನ್ನಡ ಮಾಧ್ಯಮ ಹುಡುಗರು ದಡ್ಡರೆಂದೂ ಅವರು ಸರಿಯಾಗಿ ಓದಿ ಒಳ್ಳೆಯ ಅಂಕಗಳನ್ನು ಗಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದೂ ಅಂತಃಪ್ರೇರಣೇಯಾಯಿತು. ಅದಕ್ಕೆ ತಕ್ಕಂತೆ ಹೆಚ್ಚಿನ ಪ್ರಮಾಣದಲ್ಲಿ ಹೊಡೆಯುವುದು ಬಡಿಯುವುದರ ಜೊತೆಗೆ ಪರೀಕ್ಷೆಗೆ ಓದಲು ಸೂಕ್ತ ಟೈಂ ಟೇಬಲ್ ಅನ್ನು ತಯಾರಿಸಿಕೊಡಬೇಕೆಂದು ಎ. ಪಿ. ನಾಗರಾಜ ಮೇಷ್ಟ್ರಿಗೆ ತಾಕೀತು ಮಾಡಿದರು. ಎ. ಪಿ. ನಾಗರಾಜ ಮೇಷ್ಟ್ಟು ಹಾಕಿಕೊಟ್ಟ ಟೈಂ ಟೇಬಲ್ ಪ್ರಕಾರ ವಿದ್ಯಾರ್ಥಿಗಳು ಐದೂವರೆಗೆ ಏಳಬೇಕಿತ್ತು ರಾತ್ರ ಹತ್ತೂವರೆವರೆಗೆ ಓದಬೇಕಿತ್ತು.
ಏಳನೆಯ ತರಗತಿಯ ಮಕ್ಕಳಿಗೆ ಎಂಟು ತಾಸಿಗಿಂತ ಕಡಿಮೆ ನಿದ್ದೆಯನ್ನು ಪ್ರೊಪೋಸ್ ಮಾಡಿದ ಮೇಷ್ಟ್ರ ಐಕ್ಯೂ ಬಗ್ಗೆ ನನಗೆ ಅನುಮಾನಗಳಿವೆ. ಟೈಮ್ ಟೇಬಲ್ ಹಾಕಿಕೊಟ್ಟು ವಾರದ ನಂತರ ಒಮ್ಮೆ ತರಗತಿಯಲ್ಲಿ ಎ. ಪಿ. ನಾಗರಾಜ ಮೇಷ್ಟ್ರು ಯಾರ್ಯಾರು ಟೈಮ್ ಟೇಬಲ್ ಅನುಸರಿಸುತ್ತಿದ್ದೀರಿ ಅಂತ ಕೇಳಿದರು. ಕೆಲವರು ಕೈ ಎತ್ತಿದರು ಇನ್ನು ಕೆಲವರು ಎತ್ತಲಿಲ್ಲ. ಯಾರು ಎತ್ತದಿದ್ದರೂ ನಾನು ಕೈ ಎತ್ತದಿರುವುದು ಮೇಷ್ಟ್ರಿಗೆ ಸಿಟ್ಟು ತರಿಸಿತು. “ನೀನು ಈ ಸಾರಿ ಹೆಂಗೆ ಫಸ್ಟ್ ರ್ಯಾಂಕ್ ಹೆಂಗ್ ಬರ್ತಿಯಲೇ ನಾನೂ ನೋಡ್ತಿನಿ” ಅಂದರು. ನನಗೆ ನಾನೇ ಮೊದಲನೆಯವನಾಗುವುದರಲ್ಲಿ ಅನುಮಾನವೇ ಇರಲಿಲ್ಲ. ಯಾಕೆಂದರೆ ಬೇರೆಯವರಂತೆ ಓದು ನನಗೆ ವೃತ್ತಿಯಾಗಿರಲಿಲ್ಲ.
ಅದೊಂದು ಉಸಿರಾಟದಷ್ಟೇ ಸಹಜವಾದ ಪ್ರಕ್ರಿಯೆಯಾಗಿತ್ತು, ಕಂಡ ಕಂಡ ಮ್ಯಾಗಜಿನುಗಳು, ದಿನಪತ್ರಿಕೆಗಳು, ಪುಸ್ತಕಗಳು, ಮಂಡಕ್ಕಿ ಕಟ್ಟುವ ಹಾಳೆಗಳು, ಅಂಗಡಿಯ ಬೋರ್ಡುಗಳನ್ನೂ ಸಹ ಬಿಡುತ್ತಿರಲಿಲ್ಲ. ಪ್ರತಿ ವರ್ಷ ಶಾಲೆ ಶುರುವಾಗುವ ಸಮಯದಲ್ಲಿ ಬರುವ ಪುಸ್ತಕಗಳು ನಾನು ದಿನದಿನವೂ ಓದುತ್ತಿದ್ದ ಪುಸ್ತಕಗಳ ಪಾಲಿಗೆ ಒಂದು ಸೇರ್ಪಡೆಯಷ್ಟೇ! ಗಣಿತ ಹೊರತುಪಡಿಸಿ ಎಲ್ಲ ಟೆಕ್ಸ್ಟ್ ಪುಸ್ತಕಗಳನ್ನು ವಾರದಲ್ಲೇ ಓದಿ ಮುಗಿಸಿರುತ್ತಿದ್ದೆ. ನನ್ನ ಕ್ಲಾಸ್ ಮಾತ್ರವಲ್ಲ ನಮ್ಮ ಮನೆಗೆ ಟ್ಯೂಷನ್ಗೆ ಬರುತ್ತಿದ್ದ ಹೈಸ್ಕೂಲು ವಿದ್ಯಾರ್ಥಿಗಳ ಪುಸ್ತಕಗಳನ್ನೂ ಓದಿಬಿಟ್ಟಿರುತ್ತಿದ್ದೆ. ಸಾಲದೆಂಬಂತೆ ಅಕ್ಕಪಕ್ಕದ ಕಾಲೇಜು ಹುಡುಗರ ಪಠ್ಯಪುಸ್ತಕಗಳನ್ನು ಮನೆಗೆ ತಂದು ಓದುತ್ತಿದ್ದೆ. ಹಾಗಾಗಿ ನನ್ನ ಪರೀಕ್ಷೆಯ ಅಂಕಗಳು ನನ್ನ ಪಠ್ಯದ ಓದಿನ ಮೇಲೆ ಅವಲಂಬಿತವಾಗಿರಲಿಲ್ಲ. ಪರೀಕ್ಷೆಯ ಸಮಯದಲ್ಲೂ ಒಮ್ಮೆ ತಿರುವಿ ಹಾಕುತ್ತಿದ್ದುದಷ್ಟೇ. ಎಂದಿನಂತೆ ಅಪಾರ ಅಂತರದಿಂದ ತರಗತಿಗೆ ಮೊದಲನೆಯವನಾದೆ. ಈ ಮೊಂಡುತನದಿಂದ ಸಾಕಷ್ಟು ಪ್ರಯೋಜನಗಳಿದ್ದವು. ನನಗೆ ನನ್ನದೇ ಲೋಕದಲ್ಲಿ ಸ್ವತಂತ್ರವಾಗಿ ವಿಹರಿಸುವ ಅವಕಾಶವಿತ್ತು. ಅಲ್ಲಿ ಶಾಲೆಗಳಲ್ಲಿದ್ದಂತೆ ಇರುವ ಬೇಲಿಗಳು ಬಂಧನಗಳು ಇರಲಿಲ್ಲ. ನನ್ನ ಸ್ವಂತ ಓದು ಕೊಡುತ್ತಿದ್ದ ಸ್ವಾತಂತ್ರ, ಆತ್ಮವಿಶ್ವಾಸ ಶಾಲೆಯ ಓದು ತಂದುಕೊಡುತ್ತಿರಲಿಲ್ಲ. ಇದಕ್ಕಾಗಿ ನಾನು ಹೊಡೆತ ತಿನ್ನುವ ಬೈಸಿಕೊಳ್ಳುವ ಬೆಲೆ ತೆರಬೇಕಾಗಿತ್ತು. ಆದರೆ ನಾನು ನನ್ನ ಲೋಕದಲ್ಲಿ ಅನುಭವಿಸುವ ಸುಖದ ಮುಂದೆ ಈ ಬೆಲೆ ಅತ್ಯಲ್ಪವಾಗಿತ್ತು.
ಎಂಟನೆಯ ತರಗತಿಗೆ ಬಂದ ಮೇಲೆ ನನಗೆ ಟೆಸ್ಟ್ಗಳಲ್ಲಿ ಉತ್ತರ ಬರೆಯಬೇಕು ಅಂತಲೂ ಅನ್ನಿಸುತ್ತಿರಲಿಲ್ಲ. ಕೃಷ್ಣದೇವರಾಯ ಬಹುಮುಖ ಪ್ರತಿಭೆಯುಳ್ಳ ವ್ಯಕ್ತಿ ಎಂದು ನಿರೂಪಿಸಿ ಎಂಬ ಪ್ರಶ್ನೆಗಳಿರುತ್ತಿದ್ದವು. ಇದಕ್ಕೆ ಆತ ಯುದ್ದ ಗೆದ್ದ, ಗುಡಿಗಳ ಕಟ್ಟಿಸಿದ, ಅಮುಕ್ತಮಾಲ್ಯದ ಬರೆದ, ವ್ಯಾಪಾರ ಮಾಡಿದ ಇತ್ಯಾದಿ ಉದ್ದುದ್ದಕ್ಕೆ ಪಾಯಿಂಟುಗಳನ್ನು ಹಾಕಿ ಬರೆಯಬೇಕಿತ್ತು. ನಾನು ಆರನೆಯ ತರಗತಿಯಲ್ಲಿದ್ದಾಗಲೆ ಆರ್. ಸಿ. ಹಿರೇಮಠರು ಸಂಪಾದಿಸಿದ ಮರೆಯಲಾಗದ ಮಹಾಸಾಮ್ರಾಜ್ಯ ಪುಸ್ತಕವನ್ನು ಪೂರ್ತಿ ಓದಿದ್ದೆ. ಇಂತಹ ಚಿಲ್ಲರೆ ಪ್ರಶ್ನೆಗಳಿಗೆ ಉತ್ತರ ಬರೆಯುವುದು ನನ್ನ ಪ್ರತಿಷ್ಠೆಗೆ ಕುಂದು ಎಂಬುದು ನನ್ನ ನಂಬಿಕೆಯಾಗಿತ್ತು. ನಾನೇನಿದ್ದರೂ ಷ. ಶೆಟ್ಟರ್, ಎಂ. ಎಂ. ಕಲಬುರ್ಗಿಯಂತಹ ಸಂಶೋಧಕರ ಮಟ್ಟದ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಬೇಕು ಅಂತಂದುಕೊಂಡಿದ್ದೆ. ಅದರಲ್ಲೂ ದಾಸವಾಳದ ಹೂವಿನ ಚಿತ್ರ ಬರೆದು ಪಾರ್ಟುಗಳನ್ನು ಲೇಬಲ್ಲಿಸಿ ಎಂಬ ಪ್ರಶ್ನೆಗಳಂತೂ ಅತಿ ಕಿರಿಕಿರಿಯುಂಟು ಮಾಡುತ್ತಿದ್ದವು. ಮೊದಲನೆಯದಾಗಿ ನನಗೆ ಚಿತ್ರಗಳನ್ನು ಬರೆಯಲು ಆಸಕ್ತಿ ಇರಲಿಲ್ಲ ಅದರ ಮೇಲೆ ಬಾಟನಿ ಬೇರೆ. ಚಿತ್ರ ಬರೆಯುವುದು ಒಂದು ಕಲೆ ತಾನೆ? ಇದು ಎಲ್ಲರಿಗೂ ಒಲಿಯುವುದು ಸಾಧ್ಯವೆ? ನನಗೆ ಒಲಿದಿರಲಿಲ್ಲ. ನಾನು ಬರೆದ ಚಿತ್ರ ಕೆಟ್ಟದಾಗಿ ಬಂದರೆ ಅದು ನನ್ನ ತಪ್ಪಲ್ಲವಲ್ಲ!
ಆಸ್ಟ್ರೇಲಿಯಾದಲ್ಲಿ ತಾಯ್ತಂದೆಯರು ತಮ್ಮ ಮಕ್ಕಳಿಗೆ ಹೊಡೆದರೆ ಅವರಿಗೆ ಮೊದಲ ಹಂತದಲ್ಲಿ ಸರಕಾರದ ವತಿಯಿಂದ ಮಾನಸಿಗ ತಜ್ಞರ ಬಳಿ ಕೌನ್ಸೆಲಿಂಗ್ ಮಾಡಿಸಲಾಗುತ್ತದೆ. ಇದಕ್ಕಾಗಿ ಸಾವಿರಾರು ಡಾಲರುಗಳನ್ನು ತಾಯ್ತಂದೆಯರು ತೆರಬೇಕು. ಇನ್ನೂ ಮುಂದುವರಿದರೆ ಈತ ಪೇರೆಂಟಾಗಲು ನಾಲಾಯಕ್ಕು ಅಂತ ನಿರ್ಧರಿಸಿ ಆತನನ್ನು ಜೈಲಿಗೆ ಕಳಿಸಿ ಮಕ್ಕಳನ್ನು ಸರಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತದೆ. ಇಂಡಿಯಾದಲ್ಲಿ ನಮ್ಮ ಕಾಲದಲ್ಲಿ ಈ ನೀತಿ ಇದ್ದಿದ್ದರೆ ನಮ್ಮ ಟೀಚರುಗಳನ್ನು ಹುಚ್ಚಾಸ್ಪತ್ರೆಗೆ ಪರ್ಮನೆಂಟಾಗಿ ಕಳಿಸಿಬಿಡುತ್ತಿದ್ದರೇನೋ! ಮಕ್ಕಳಿಗೆ ಹೊಡೆಯುವುದು ಬಡಿಯುವುದು ಅವರಿಗೆ ಕಲಿಸುವುದಕ್ಕಿಂತ ಟೀಚರ್ಗಳ ಇಗೋ ತೃಪ್ತಿಪಡಿಸಲಿಕ್ಕಾಗಿ ಅಂತ ನನ್ನ ಅನಿಸಿಕೆ. ತರಗತಿಯಲ್ಲಿ ಗಲ್ಲಕ್ಕೆ ಕೈಹಚ್ಚಿ ಕೂರಬಾರದು, ನಡುವೆ ನೀರು ಕುಡಿಯಬಾರದು, ಮೂತ್ರಕ್ಕೆ ಹೋಗಬಾರದು, ಮಾತಾಡಬಾರದು, ಕೆಮ್ಮಬಾರದು, ಕೆಕ್ಕರಿಸಬಾರದು, ಜೇಬಲ್ಲಿ ಕೈ ಇಟ್ಟುಕೊಳ್ಳಬಾರದು, ನಗಬಾರದು, ಇವೆಲ್ಲ ಮಾಡಿದರೆ ಟೀಚರುಗಳಿಗೆ ಅಗೌರವ ತೋರಿದಂತೆ ಎನ್ನುವುದು. ಈ ರೀತಿಯ ಅಪದ್ಧ ನಿಯಮಗಳನ್ನು ಹೇರುವುದು ಟೀಚರುಗಳ ಇಗೊ ಅಲ್ಲದೇ ಮತ್ತೇನೂ ಇರಲು ಸಾಧ್ಯವಿಲ್ಲ. ಇಂತಹ ವಿಚಿತ್ರ ನಿಯಮಗಳು ಮುಂದುವರಿದ ದೇಶಗಳಲ್ಲಿಲ್ಲ. ಇಂತಹ ತಿಕ್ಕಲು ನಿಯಮಗಳನ್ನು ಪಾಲಿಸುವುದೇ ನಮಗೆ ನೀಡುವ ಗೌರವ ಎಂದುಕೊಳ್ಳುವುದು ಬೌದ್ಧಿಕ ಊನತೆಯ ಭಾಗವಾಗಿ ನನಗೆ ಕಾಣುತ್ತದಷ್ಟೇ. ಕ್ಲಾಸಿನಲ್ಲಿ ತೂಕಡಿಕೆ ಬಂದರೆ ಮೇಷ್ಟ್ರು ಮಾಡುವ ಪಾಠ ಬೋರಿಂಗ್ ಆಗಿದೆ ಅಂತ ಅರ್ಥವೇ ಹೊರತು ವಿದ್ಯಾರ್ಥಿ ಅವಿಧೇಯ ಅಂತ ಅಲ್ಲ.
ಹಿಂದಿನ ಕಂತು : Sydney Diary : ಎಲ್ಲಿ ಸರಕಾರಗಳು ಸೋಲುತ್ತವೆಯೋ ಅಲ್ಲಿ ಪ್ರಶಸ್ತಿಗಳು ವಿಜೃಂಭಿಸುತ್ತವೆ
Published On - 10:53 am, Sun, 12 December 21