ನಿಮ್ಮ ಕುಟುಂಬವನ್ನು ಸಂಕಷ್ಟಕ್ಕೆ ದೂಡಬಾರದಲ್ಲವೇ? ಈಗಲೇ ವಿಮಾ ಪಾಲಿಸಿ ವಿವರ ಡೈರಿಯಲ್ಲಿ ಬರೆದಿಡಿ
ಇನ್ಷೂರೆನ್ಸ್ ಪಾಲಿಸಿಗಳನ್ನು ಮಾಡಿಸಿದ್ದೀರಾ? ಅದರ ಮಾಹಿತಿಯನ್ನು ಸೇವ್ ಮಾಡುವುದು ಹೇಗೆ ಎಂಬುದು ಎಲ್ಲರಿಗೂ ತಿಳಿದಿರಬೇಕಾದ ಸಂಗತಿ ಇದು.
ಆಪತ್ಕಾಲದಲ್ಲಿ ಹಣಕಾಸಿನ ಭದ್ರತೆ ಇರಲಿ ಎಂದು ಒಂದಲ್ಲ ಒಂದು ಬಗೆಯ ವಿಮಾ ಪಾಲಿಸಿಗಳನ್ನು ಖರೀದಿಸುತ್ತಾರೆ. ಜೀವವಿಮೆ, ಆರೋಗ್ಯ ವಿಮೆ ಪಾಲಿಸಿಗಳನ್ನು ಮಾಡಿಸುವುದು ಎಷ್ಟು ಮುಖ್ಯವೋ ಅದೇ ರೀತಿ ಪಾಲಿಸಿಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ದಾಖಲೆಯ ರೂಪದಲ್ಲಿ ಜೋಪಾನವಾಗಿ ಇಟ್ಟುಕೊಳ್ಳುವುದೂ ಅಷ್ಟೇ ಮುಖ್ಯವಾಗಿರುತ್ತದೆ. ಪಾಲಿಸಿದಾರ ವಿಮೆಯ ಕುರಿತ ಮಾಹಿತಿಗಳನ್ನು ಕುಟುಂಬ ಸದಸ್ಯರ ಜತೆ ಹಂಚಿಕೊಳ್ಳದಿದ್ದರೆ ಅದರಿಂದ ದೊಡ್ಡ ನಷ್ಟವಾದೀತು. ಉದಾಹರಣೆಗೆ ನೋಡಿ, ಸಂಜೀವ್ ಎಂಬುವರು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಅದೊಂದು ದಿನ ಕಚೇರಿಯಿಂದ ಮನೆಗೆ ವಾಪಸ್ ಬರುವಾಗ ಅಪಘಾತ ಸಂಭವಿಸಿ ಮೃತಪಟ್ಟರು. ದುಡಿಯುವ ಕೈಗಳನ್ನು ಕಳೆದುಕೊಂಡು ಕುಟುಂಬ ಕಂಗಾಲಾಗಿಬಿಟ್ಟಿತು. ಈ ಆಘಾತದಿಂದ ಚೇತರಿಸಿಕೊಂಡ ಬಳಿಕ ಸಂಜೀವ್ ಅವರ ಪತ್ನಿಗೆ ತಮ್ಮ ಪತಿ 1 ಕೋಟಿ ರೂಪಾಯಿ ಮೌಲ್ಯದ ಟರ್ಮ್ ಇನ್ಷೂರೆನ್ಸ್ ಮಾಡಿಸಿದ್ದರು ಎಂಬುದು ನೆನಪಾಯಿತು.
ಆದರೆ, ಸಂಜೀವ್ ತಾವು ಯಾವ ಕಂಪೆನಿಯಲ್ಲಿ ವಿಮೆ ಮಾಡಿಸಿದ್ದಾರೆ, ಆ ಪಾಲಿಸಿಯನ್ನು ಎಲ್ಲಿ ಇಟ್ಟಿದ್ದಾರೆ ಎಂಬ ಬಗ್ಗೆ ಪತ್ನಿಗೆ ತಿಳಿಸಿರಲೇ ಇರಲಿಲ್ಲ. ವಿಮಾ ಪಾಲಿಸಿಯ ದಾಖಲೆಗಳನ್ನು ಪತ್ತೆ ಹಚ್ಚಲು ಸಾಧ್ಯ ಆಗಲಿಲ್ಲ. ಹೀಗಾಗಿ, ಅವರ ಕುಟುಂಬಕ್ಕೆ ಆಪತ್ಕಾಲದಲ್ಲಿ ಸಿಗಬೇಕಿದ್ದ ಹಣಕಾಸಿನ ಭದ್ರತೆ ಕೊನೆವರೆಗೂ ಸಿಗಲಿಲ್ಲ. ಮಾಹಿತಿ ಹಂಚಿಕೊಳ್ಳದಿದ್ದರೆ ಹೀಗೆ ಪರಿತಪಿಸಬೇಕಾಗುತ್ತದೆ. ಇಂತಹ ಎಡವಟ್ಟುಗಳಿಂದಾಗಿಯೇ ಪಾಲಿಸಿದಾರ ಮೃತಪಟ್ಟರೂ ವಿಮಾ ಕಂಪೆನಿಗಳಿಂದ ಕ್ಲೇಮ್ ಮಾಡದ ಪ್ರಕರಣಗಳು ಬೇಕಾದಷ್ಟಿವೆ. ವಿಮಾ ನಿಯಂತ್ರಕ ಸಂಸ್ಥೆ ಐಆರ್‌ಡಿಎ ಮಾಹಿತಿ ಪ್ರಕಾರ, ದೇಶದಲ್ಲಿ ವಿಮಾ ಕಂಪೆನಿಗಳಿಂದ ಕ್ಲೇಮ್ ಸಹ ಪಡೆಯದ ಸಾವಿರಾರು ಪ್ರಕರಣಗಳಿವೆ.
2019-20ನೇ ಸಾಲಿನಲ್ಲಿ ಜೀವ ವಿಮೆಯ ವೈಯಕ್ತಿಕ ಕ್ಲೇಮ್ ಮಾಡಿದವರು: ಎಲ್‌ಐಸಿ- 7,58,916, ಖಾಸಗಿ ವಿಮಾ ವಲಯ 1,15,933, ಎಲ್ಐಸಿಯಿಂದ ಕ್ಲೇಮ್ ಮಾಡದ ಒಟ್ಟು ಪ್ರಕರಣಗಳು- 10,928, ಖಾಸಗಿಯಿಂದ ಕ್ಲೇಮ್ ಮಾಡದ ಒಟ್ಟು ಪ್ರಕರಣಗಳು- 5,796 (ಮೂಲ: ಐಆರ್‌ಡಿಎ).
ಸ್ನೇಹಿತರೇ, ಮರೆಯದೆ ವಿಮಾ ಪಾಲಿಸಿಗಳ ದಾಖಲೆಗಳನ್ನು ಸುರಕ್ಷಿತವಾಗಿಡಿ. ಪತಿ, ಪತ್ನಿ, ತಂದೆ-ತಾಯಿ, ಮಕ್ಕಳು ಹೀಗೆ ಯಾರ ಹೆಸರಿನಲ್ಲಿ ಪಾಲಿಸಿಗಳನ್ನು ಮಾಡಿಸಿದ್ದೀರೋ ಆ ಎಲ್ಲ ಪಾಲಿಸಿಗಳ ವಿವರಗಳನ್ನು ಕುಟುಂಬದ ಜತೆ ತಪ್ಪದೇ ಹಂಚಿಕೊಳ್ಳಿ. ಆಗ ನಿಮ್ಮ ಕುಟುಂಬವು ಈ ರೀತಿಯ ಯಾತನೆ ಅನುಭವಿಸುವುದು ತಪ್ಪುತ್ತದೆ.
ಹಾಗಾದರೆ ಸುರಕ್ಷಿತವಾಗಿಡುವ ದಾರಿ ಯಾವುದು? ನಿಮ್ಮ ಎಲ್ಲ ಪ್ರಮುಖ ದಾಖಲೆಗಳನ್ನು ಎಲೆಕ್ಟ್ರಾನಿಕ್ ಸ್ವರೂಪದಲ್ಲಿ ಸುರಕ್ಷಿತವಾಗಿರಿಸಲು ಈಗ ನಾನಾ ಬಗೆಯ ಆಯ್ಕೆಗಳಿವೆ. ಅವೆಲ್ಲವೂ ಉಚಿತವಾಗಿವೆ.
ಇ-ವಿಮೆ ವಿಮಾ ಪಾಲಿಸಿಗಳ ಹಾರ್ಡ್ ಕಾಪಿಗಳನ್ನು ನೀಡುವುದರ ಜತೆಜತೆಗೆ ಅವುಗಳನ್ನು ಎಲೆಕ್ಟ್ರಾನಿಕ್ ಸ್ವರೂಪದಲ್ಲೂ ಸುರಕ್ಷಿತವಾಗಿ ಇರಿಸುವಂತೆ ಐಆರ್‌ಡಿಎ ಎಲ್ಲ ವಿಮಾ ಕಂಪೆನಿಗಳಿಗೆ ನಿರ್ದೇಶಿಸಿದೆ. ಹೀಗಾಗಿ ವಿಮಾದಾರರು ಕ್ಯಾಮ್ಸ್, ಎನ್‌ಎಸ್‌ಡಿಎಲ್, ಸಿಡಿಎಸ್‌ಎಲ್ ಹಾಗೂ ಕಾರ್ವಿಯಂತಹ ಡೆಪಾಸಿಟರಿ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ, ಇ-ಅಕೌಂಟ್ ತೆರೆದು ತಮ್ಮ ಪಾಲಿಸಿ ಸಂಬಂಧಿತ ದಾಖಲೆಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡಬಹುದು.
ಡಿಜಿ ಲಾಕರ್ ಡಿಜಿಟಲ್ ಇಂಡಿಯಾ ಅಭಿಯಾನದಡಿ ಕೇಂದ್ರ ಸರ್ಕಾರವು ಶ್ರೀಸಾಮಾನ್ಯರಿಗೆ ಡಿಜಿಲಾಕರ್ ತೆರೆಯಲು ಅವಕಾಶ ಕಲ್ಪಿಸಿದೆ. ಇದೊಂದು ಸಂಪೂರ್ಣ ಉಚಿತವಾದ ವ್ಯವಸ್ಥೆ. ಈ ಡಿಜಿಲಾಕರ್‌ನಲ್ಲಿ ಪ್ಯಾನ್ ಕಾರ್ಡ್, ಡಿಎಲ್, ಆಧಾರ್ ಕಾರ್ಡ್, ವೋಟರ್ ಐಡಿ ಹೀಗೆ ಎಲ್ಲವನ್ನೂ ಸ್ಕ್ಯಾನ್ ಮಾಡಿ ಸುರಕ್ಷಿತವಾಗಿ ಇರಿಸಬಹುದು. ಬೇಕಾದಾಗ ಒಂದೇ ಕ್ಲಿಕ್‌ನಲ್ಲಿ ಡಿಜಿಲಾಕರ್ ಪ್ರವೇಶಿಸಿ, ನಿಮ್ಮ ದಾಖಲೆಗಳನ್ನು ತೋರಿಸಬಹುದು. ಸರ್ಕಾರ ಒದಗಿಸುವ ಈ ಸೇವೆಯನ್ನು ಆಪ್ ಮೂಲಕವೂ ಪಡೆದುಕೊಳ್ಳಬಹುದು.
ಫೈಲ್ ಮಾಡಿ ಇಡಿ ನೀವೇನಾದರೂ ಇಂಟರ್ನೆಟ್ ಬಳಸದಿದ್ದರೆ ವಿಮೆ ಪಾಲಿಸಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಅಚ್ಚುಕಟ್ಟಾಗಿ ಫೈಲ್ ಮಾಡಿ ಇಡಿ. ಇದರ ಜತೆಗೆ ಡೈರಿಯಲ್ಲಿ ಪಾಲಿಸಿಯ ಎಲ್ಲ ವಿವರಗಳನ್ನು ಬರೆದಿಡಿ. ನೀವು ಈ ದಾಖಲೆಗಳನ್ನು ಎಲ್ಲಿ ಇಟ್ಟಿರುತ್ತೀರಿ ಎಂಬುದನ್ನು ಕುಟುಂಬದ ಎಲ್ಲ ಸದಸ್ಯರಿಗೂ ತಿಳಿಸಿರಿ.
– ನೀವು ಇಂಟರ್ನೆಟ್ ಬಳಸದಿದ್ದರೆ ಫೈಲ್ ಮಾಡಿ ಇಡಿ – ಪಾಲಿಸಿ ಮತ್ತು ಪ್ರೀಮಿಯಂ ವಿವರಗಳನ್ನು ಬರೆದಿಡಿ – ಪಾಲಿಸಿ ಕುರಿತ ಎಲ್ಲ ಮಾಹಿತಿಗಳನ್ನು ಕುಟುಂಬದ ಜತೆ ಹಂಚಿಕೊಳ್ಳಿ
ಒಂದು ವೇಳೆ ನಿಮ್ಮ ಪಾಲಿಸಿಯ ದಾಖಲೆಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಸಂಗ್ರಹಿಸಿಟ್ಟಿದ್ದರೆ ಯೂಸರ್ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ಕುಟುಂಬ ಸದಸ್ಯರ ಜತೆ ಹಂಚಿಕೊಳ್ಳಿ.
ನಿಮಗೆ ಸಲಹೆ ನೀವು ಕಂಪ್ಯೂಟರ್ ಜ್ಞಾನ ಉಳ್ಳವರಾಗಿದ್ದರೆ ವಿಮಾ ಪಾಲಿಸಿ, ಹೂಡಿಕೆ ಮತ್ತು ತೆರಿಗೆ ಸಂಬಂಧಿತ ದಾಖಲೆಗಳನ್ನು ಡಿಜಿಟಲ್ ಫೈಲ್‌ನಲ್ಲಿ ಸಂಗ್ರಹಿಸಿಡಿ. ಕಾಲಕಾಲಕ್ಕೆ ಅದನ್ನು ಅಪ್‌ಡೇಟ್ ಮಾಡ್ತಿರಿ. ಈ ಫೈಲ್ ಅನ್ನು ಕುಟುಂಬ ಸದಸ್ಯರ ಜತೆ ಇಮೇಲ್ ಮೂಲಕ ಶೇರ್ ಮಾಡಿ. ನೀವು ಹೀಗೆ ಮಾಡಿದ್ದೇ ಆದಲ್ಲಿ ಕುಟುಂಬವು ಸಂಜೀವ್ ಅವರ ಕುಟುಂಬ ಅನುಭವಿಸಿದಂತಹ ಬಿಕ್ಕಟ್ಟನ್ನು ಅನುಭವಿಸಬೇಕಾಗುವುದಿಲ್ಲ.…
ಜೀವನ ಬಂದಂಗೆ ನೋಡಿಕೊಂಡರೆ ಆಯಿತು ಅಂತ ನೀವೇನಾದರೂ ಪಾಲಿಸಿಯ ಕರಾರನ್ನು ಓದದೆ ಸಹಿ ಮಾಡಿದ್ದೀರಾ? ಹಾಗಿದ್ದರೆ ನೀವು ತೊಂದರೆಗೆ ಸಿಲುಕುವುದು ಪಕ್ಕಾ. ಹಣದ ವಿಚಾರದಲ್ಲಿ ಸದಾ ಜಾಗೃತರಾಗಿರಿ, ಅದಕ್ಕಾಗಿ ನಮ್ಮ ವೆಬ್ಸೈಟ್ ಓದುತ್ತಾ ಇರಿ.
ಇದನ್ನೂ ಓದಿ: Unclaimed Deposits: ಬ್ಯಾಂಕ್ಗಳು, ಇನ್ಷೂರೆನ್ಸ್ ಕಂಪೆನಿಗಳಲ್ಲಿ ಇರುವ ಜನರ ಅನ್ಕ್ಲೇಮ್ಡ್ ಮೊತ್ತ 49 ಸಾವಿರ ಕೋಟಿ ರೂಪಾಯಿ