
ನವದೆಹಲಿ, ಅಕ್ಟೋಬರ್ 10: ಭಾರತೀಯ ಚುನಾವಣಾ ಆಯೋಗ ಮತ್ತು ಎಸ್ಐಆರ್ ಪ್ರಕ್ರಿಯೆಯನ್ನು ಬೆಂಬಲಿಸಿ 124 ಮಾಜಿ ಐಎಎಸ್ ಮತ್ತು ಐಎಫ್‌ಎಸ್ ಅಧಿಕಾರಿಗಳ ಗುಂಪು ಬಹಿರಂಗ ಪತ್ರವೊಂದನ್ನು ಬಿಡುಗಡೆ ಮಾಡಿದೆ. ಚುನಾವಣಾ ವಂಚನೆ ಮತ್ತು ಮತ ಕಳ್ಳತನದ ಕುರಿತ ಆರೋಪಗಳನ್ನು ಸೂಕ್ತ ಆಧಾರ ಮತ್ತು ಸಾಕ್ಷ್ಯಗಳೊಂದಿಗೆ ಸಾಬೀತುಪಡಿಸಬೇಕು ಎಂದು ಪ್ರತಿಪಾದಿಸಿರುವ ಈ ಗುಂಪು, ಆಧಾರರಹಿತ ಆರೋಪಗಳು ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಕುಸಿಯುವಂತೆ ಮಾಡುತ್ತವೆ ಎಂದು ಎಚ್ಚರಿಸಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ದೆಹಲಿಯಲ್ಲಿ ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿರುವ ಮತ್ತು ಮಮತಾ ಬ್ಯಾನರ್ಜಿ ಹಾಗೂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ನಾಲ್ವರು ಮಾಜಿ ಮುಖ್ಯಮಂತ್ರಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಬೆನ್ನಲ್ಲೇ ನಿವೃತ್ತ ಹಿರಿಯ ಅಧಿಕಾರಿಗಳಿಂದ ಈ ಬಹಿರಂಗ ಪತ್ರ ಹೊರಬಿದ್ದಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಪ್ರತಿಭಟನೆ ವೇಳೆ ಇಡೀ ದಿನ ಏನೇನಾಯ್ತು? ಇಂದು ಟ್ರಾಫಿಕ್ ಸಂಚಾರ ಹೇಗಿತ್ತು? ಇಲ್ಲಿದೆ ಪೂರ್ತಿ ಮಾಹಿತಿ
ಎಸ್ಐಆರ್ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ಕೂಲಂಕಷವಾಗಿ ಪರಿಶೀಲಿಸಿದ್ದು, ಅಗತ್ಯ ಭದ್ರತಾ ಕ್ರಮಗಳನ್ನು ಸೂಚಿಸಿ ಚುನಾವಣಾ ಆಯೋಗದ ಅಧಿಕಾರವನ್ನು ಎತ್ತಿಹಿಡಿದಿದೆ ಎಂದು ಅವರು ನೆನಪಿಸಿದ್ದಾರೆ. “ಪ್ರಶ್ನಿಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕು, ಆದರೆ ಆರೋಪಿಸಿದವರು ಅದನ್ನು ಸಾಬೀತುಪಡಿಸುವುದು ಕರ್ತವ್ಯ” ಎಂದು ಅವರು ತಿಳಿಸಿದ್ದಾರೆ.
News Alert! Total of 124 ex-IAS, IFS officers issue open letter to citizens, strongly defending Election Commission, SIR process. https://t.co/tqDWM8aunz
— Press Trust of India (@PTI_News) October 10, 2026
“ನಾವು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಕೇವಲ ಒಂದು ಪದ ‘ತಿರುಚಲಾಗಿದೆ’ ಎಂಬುದನ್ನು ಯಾವುದೇ ಆಧಾರವಿಲ್ಲದೆ ನಮ್ಮ ಚುನಾವಣೆಗಳ ಮೇಲೆ ಪ್ರಯೋಗಿಸಲಾಗುತ್ತಿದೆ. ಇದನ್ನು ಪದೇ ಪದೇ ಪುನರಾವರ್ತಿಸುವುದು ನಮ್ಮೆಲ್ಲರಿಗೂ ಸೇರಿದ ಪ್ರಜಾಪ್ರಭುತ್ವದ ನಂಬಿಕೆಗೆ ಉಂಟುಮಾಡುವ ಗಾಯವಾಗಿದೆ. ಅದಕ್ಕಾಗಿ ನಾವು ಈ ಪತ್ರವನ್ನು ಬರೆಯುತ್ತಿದ್ದೇವೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
“ಚುನಾವಣೆಗಳನ್ನು ಹೇಗೆ ತಿರುಚಲಾಗುತ್ತದೆ ಎಂಬುದನ್ನು ನಾವು ಹತ್ತಿರದಿಂದ ನೋಡಿದ್ದೇವೆ. ಕೇವಲ ಸಿನಿಮಾಗಳಲ್ಲಿ ಕಾಣುವ ಬೂತ್ ಆಕ್ರಮಣ, ಬಾಹುಬಲಿಗಳ ಅಬ್ಬರ, ಬ್ಯಾಲೆಟ್ ಬಾಕ್ಸ್‌ಗಳ ಕಳವು ಮತ್ತು ಮತದಾರರನ್ನು ಬೆದರಿಸಿ ಓಡಿಸುವ ದಿನಗಳಲ್ಲಿ ನಾವು ಸೇವೆ ಸಲ್ಲಿಸಿದ್ದೇವೆ. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. 2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಯಾವುದೇ ಬೂತ್‌ನಲ್ಲಿ ಮರು-ಮತದಾನ ನಡೆಯಲಿಲ್ಲ. 1951ರ ನಂತರ ಅತ್ಯಂತ ಹೆಚ್ಚಿನ ಮತದಾನ ದಾಖಲಾಯಿತು. ಮಹಿಳೆಯರು ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿದರು” ಎಂದು ಪತ್ರದಲ್ಲಿ ತಿಳಿಸಿದ್ದಾರೆ.
STORY | 124 former IAS, IFS officers write open letter to citizens, defend EC, SIR
A total of 124 former IAS, IFS and allied services’ officers have issued an open letter to the citizens of India, strongly defending the Election Commission (EC) and the Special Intensive Revision (SIR) of the electoral roll, while questioning allegations of vote rigging without credible evidence.
READ: https://t.co/RXNIOvYvTQ
— Press Trust of India (@PTI_News) October 10, 2026
“ಚುನಾವಣಾ ಆಯೋಗ ರೂಪಿಸಿರುವ ಪ್ರಸ್ತುತ ವ್ಯವಸ್ಥೆಯು ಯಾರನ್ನೂ ಕುರುಡಾಗಿ ನಂಬುವುದಿಲ್ಲ. ಪ್ರತಿಯೊಬ್ಬ ಅಭ್ಯರ್ಥಿಯ ಏಜೆಂಟ್ ಪ್ರತಿ ಬೂತ್ ಅನ್ನು ವೀಕ್ಷಿಸುತ್ತಾರೆ ಮತ್ತು ಚಲಾವಣೆಯಾದ ಮತಗಳ ಸಹಿ ಮಾಡಿದ ಪ್ರತಿಯನ್ನು ಮನೆಗೆ ಕೊಂಡೊಯ್ಯುತ್ತಾರೆ. ಇವಿಎಂ ಯಂತ್ರಗಳನ್ನು ಏಜೆಂಟರ ಸಹಿಯೊಂದಿಗೆ ಸೀಲ್ ಮಾಡಲಾಗುತ್ತದೆ ಮತ್ತು ಅಭ್ಯರ್ಥಿಗಳು ವೀಕ್ಷಿಸಬಹುದಾದ ತೀವ್ರ ಭದ್ರತಾ ಕೊಠಡಿಗಳಲ್ಲಿ ಇಡಲಾಗುತ್ತದೆ. ವಿವಿಪ್ಯಾಟ್ ಸ್ಲಿಪ್‌ಗಳನ್ನು ಮತಯಂತ್ರದ ಎಣಿಕೆಯೊಂದಿಗೆ ತಾಳೆ ಮಾಡಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಅಕ್ರಮ ಎಸಗಬೇಕಾದರೆ ವಿವಿಧ ರಾಜಕೀಯ ಪಕ್ಷಗಳ ಸಾವಿರಾರು ಅಧಿಕಾರಿಗಳು ಮತ್ತು ಸೋಲುವ ಪಕ್ಷದ ಏಜೆಂಟರುಗಳು ಮೌನವಾಗಿರಬೇಕಾಗುತ್ತದೆ, ಇದು ಅಸಾಧ್ಯ.” ಎಂದಿದ್ದಾರೆ.
ವಿಪಕ್ಷಗಳಿಗೆ ಪತ್ರದ ಮೂಲಕ ಪ್ರಶ್ನೆ:
“ನೀವು ಇಂದು ‘ದೋಷಪೂರಿತ’ ಎಂದು ಕರೆಯುತ್ತಿರುವ ಅದೇ ವ್ಯವಸ್ಥೆಯು ನಿಮಗೆ ಈ ಹಿಂದೆ ಗೆಲುವು ತಂದುಕೊಟ್ಟಾಗ ಸರಿಯಿತ್ತೇ? ಹಾಗಿದ್ದಲ್ಲಿ, ನೀವು ಶಂಕಿಸುತ್ತಿರುವುದು ಚುನಾವಣಾ ವ್ಯವಸ್ಥೆಯನ್ನೋ ಅಥವಾ ಬಂದಿರುವ ಫಲಿತಾಂಶವನ್ನೋ ಎಂದು ನೀವೇ ಪ್ರಶ್ನಿಸಿಕೊಳ್ಳಿ” ಎಂದು ಮಾಜಿ ಅಧಿಕಾರಿಗಳು ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:22 pm, Sat, 10 October 26