ನೇಪಾಳದಲ್ಲಿದ್ದ 320 ಭಾರತೀಯರ ಸುಳಿವು ಸಿಕ್ಕಿಲ್ಲ; ವಿದೇಶಾಂಗ ಸಚಿವಾಲಯ ಮಾಹಿತಿ

ನೇಪಾಳದಲ್ಲಿ ಸಂಭವಿಸಿದ ಭಾರೀ ಪ್ರವಾಹದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿದ್ದರೂ, 320 ಭಾರತೀಯ ಪ್ರಜೆಗಳು ಹಾಗೂ 100 ಭಾರತೀಯ ಮೂಲದ ನೇಪಾಳಿ ಪ್ರಜೆಗಳು ಇನ್ನೂ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇಂದು ತಿಳಿಸಿದೆ. ನೇಪಾಳಕ್ಕೆ ಹೋಗಿ ಸಿಲುಕಿಕೊಂಡವರ ಪಟ್ಟಿಯನ್ನು ಟ್ಯಾಲಿ ಮಾಡುವ ಕಾರ್ಯ ನಡೆಯುತ್ತಿರುವುದರಿಂದ ಈ ಸಂಖ್ಯೆಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ನೇಪಾಳದಲ್ಲಿದ್ದ 320 ಭಾರತೀಯರ ಸುಳಿವು ಸಿಕ್ಕಿಲ್ಲ; ವಿದೇಶಾಂಗ ಸಚಿವಾಲಯ ಮಾಹಿತಿ
Randhir Jaiswal And Nepal Flood
Image Credit source: PTI

Updated on: Aug 28, 2026 | 6:47 PM

ನವದೆಹಲಿ, ಆಗಸ್ಟ್ 28: ನೇಪಾಳದಲ್ಲಿ ಯಾರೂ ಊಹಿಸದ ರೀತಿಯಲ್ಲಿ ಒಮ್ಮೆಲೆ ಬಂದೆರಗಿದ ಪ್ರವಾಹದ ಅಲೆಗಳಿಗೆ ಸಾವಿರಾರು ಜನರು ಕೊಚ್ಚಿಕೊಂಡು ಹೋಗಿದ್ದಾರೆ. ಈಗಾಗಲೇ ಈ ಪ್ರವಾಹದಲ್ಲಿ (Nepal Flash Floods) ಸಿಲುಕಿ ಮೃತಪಟ್ಟವರ ಸಂಖ್ಯೆ 538ಕ್ಕೆ ಏರಿಕೆಯಾಗಿದೆ. ಇನ್ನೂ ನೂರಾರು ಜನರು ನಾಪತ್ತೆಯಾಗಿರುವುದರಿಂದ ಅವರು ಬದುಕಿರುವ ಸಾಧ್ಯತೆ ಕಡಿಮೆ. ಆ ನಾಪತ್ತೆಯಾದವರಲ್ಲಿ 320 ಭಾರತೀಯರ ಸುಳಿವು ಇನ್ನೂ ಸಿಕ್ಕಿಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಹಾಗೇ, ಭಾರತ ಮೂಲದ 100 ನೇಪಾಳಿ ಪ್ರಜೆಗಳು ಕೂಡ ನಾಪತ್ತೆಯಾಗಿದ್ದಾರೆ. ಪ್ರವಾಹ ಉಂಟಾಗಿ 2 ದಿನಗಳು ಕಳೆದಿರುವುದರಿಂದ ಕೆಸರಿನಡಿ ಹೂತುಹೋಗಿ, ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿ ನಾಪತ್ತೆಯಾದವರು ಬದುಕುಳಿದ ಸಾಧ್ಯತೆಗಳು ಬಹಳ ಕಡಿಮೆ ಎನ್ನಲಾಗುತ್ತಿದೆ.

ನೇಪಾಳದ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ 538ಕ್ಕೆ ಏರಿಕೆಯಾಗಿದೆ ಎಂದು ನೇಪಾಳದ ಪೊಲೀಸರು ತಿಳಿಸಿದ್ದಾರೆ. ನವಲ್ಪರಾಸಿ ಪೂರ್ವ (134 ಸಾವು), ಚಿತ್ವಾನ್ (221) ಮತ್ತು ಗೋರ್ಖಾ (46) ಸೇರಿದಂತೆ 8 ಜಿಲ್ಲೆಗಳಿಂದ ಮೃತದೇಹಗಳನ್ನು ಹೊರತೆಗೆಯಲಾಗಿದೆ.


ಚೀನಾದಲ್ಲಿ ಸಿಲುಕಿರುವ 400ಕ್ಕೂ ಹೆಚ್ಚು ಭಾರತೀಯರು ಸುರಕ್ಷಿತ:

ನೇಪಾಳ-ಚೀನಾ ಗಡಿಯ ಚೀನಾ ಭಾಗದಲ್ಲಿ ಸಿಲುಕಿಕೊಂಡಿರುವ 400ಕ್ಕೂ ಹೆಚ್ಚು ಭಾರತೀಯ ಪ್ರಜೆಗಳು ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ. ಭೀಕರ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಇತರ ನೂರಾರು ಭಾರತೀಯರನ್ನು ಸಂಪರ್ಕಿಸುವ ಪ್ರಯತ್ನಗಳು ನಿರಂತರವಾಗಿ ಸಾಗಿವೆ.

ಇದನ್ನೂ ಓದಿ: ನೇಪಾಳ-ಟಿಬೆಟ್ ಗಡಿಯಲ್ಲಿ ಮತ್ತೊಂದು ಪ್ರವಾಹದ ಭೀತಿ; ಚೀನಾದಿಂದ ಎಚ್ಚರಿಕೆ

ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸ್ಥಳೀಯ ಆಡಳಿತ, ಪ್ರವಾಸ ನಿರ್ವಾಹಕರು ಮತ್ತು ತಂಡದ ನಾಯಕರ ಮೂಲಕ ಸಂಕಷ್ಟದಲ್ಲಿರುವ ಭಾರತೀಯರೊಂದಿಗೆ ಸಂಪರ್ಕದಲ್ಲಿದೆ. ಹಲವು ಕುಟುಂಬಗಳು ರಾಯಭಾರ ಕಚೇರಿಯ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯುತ್ತಿವೆ. “ಪ್ರಸ್ತುತ ಅಲ್ಲಿ ಸುಮಾರು 400 ಭಾರತೀಯರಿದ್ದಾರೆ. ನಮ್ಮ ರಾಯಭಾರ ಕಚೇರಿಯು ಅವರಲ್ಲಿ ಹಲವರೊಂದಿಗೆ ಸಂಪರ್ಕದಲ್ಲಿದೆ. ಪರಿಸ್ಥಿತಿಯು ಕ್ಷಣಕ್ಷಣಕ್ಕೂ ಬದಲಾಗುತ್ತಿರುವುದರಿಂದ ನಾಪತ್ತೆಯಾದವರ ಮತ್ತು ಸುರಕ್ಷಿತವಾಗಿರುವವರ ಸಂಖ್ಯೆಯಲ್ಲಿ ವ್ಯತ್ಯಾಸಗಳಾಗುತ್ತಿವೆ” ಎಂದು ರಣಧೀರ್ ಜೈಸ್ವಾಲ್ ಸ್ಪಷ್ಟಪಡಿಸಿದ್ದಾರೆ.


ಭಾರತದಿಂದ ಸುರಂಗ ರಕ್ಷಣಾ ಪಡೆಯ ನಿಯೋಜನೆ:

ನೇಪಾಳ ಸರ್ಕಾರದ ಮನವಿಯ ಮೇರೆಗೆ ಭಾರತವು ಸುರಂಗ ರಕ್ಷಣಾ ತಂಡವನ್ನು ಕಳುಹಿಸಲು ಸಿದ್ಧತೆ ನಡೆಸಿದೆ. ಅಗತ್ಯ ಉಪಕರಣಗಳನ್ನು ಮೌಲ್ಯಮಾಪನ ಮಾಡಲು ಮೊದಲು ಪರಿಶೀಲನಾ ತಂಡವನ್ನು ಕಳುಹಿಸಲಾಗುತ್ತಿದೆ. ಜೊತೆಗೆ ವೈದ್ಯಕೀಯ ತಂಡ ಮತ್ತು ಸಂಚಾರ ಮರುಸ್ಥಾಪನೆಗೆ ‘ಬೇಲಿ ಸೇತುವೆಗಳನ್ನು’ ಪೂರೈಸಲಾಗುತ್ತಿದೆ.

ಇದನ್ನೂ ಓದಿ: ನೇಪಾಳದ ಪ್ರವಾಹದಲ್ಲಿ 288 ಭಾರತೀಯರು ನಾಪತ್ತೆ, ತಮಿಳುನಾಡಿನ 21 ಜನರ ರಕ್ಷಣೆ; ಸರ್ಕಾರದಿಂದ ಮಾಹಿತಿ

ಎನ್‌ಡಿಆರ್‌ಎಫ್ (NDRF) ನೆರವಿಗೆ ಸಿದ್ಧ:

ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ನೇಪಾಳಕ್ಕೆ ಎನ್‌ಡಿಆರ್‌ಎಫ್ ಪಡೆಗಳನ್ನು ಕಳುಹಿಸಲು ಭಾರತ ಆಫರ್ ನೀಡಿದ್ದು, ನೇಪಾಳ ಸರ್ಕಾರದ ಪ್ರತಿಕ್ರಿಯೆಗೆ ಕಾಯುತ್ತಿದೆ. ಈಗಾಗಲೇ ಎರಡು ವಿಮಾನಗಳಲ್ಲಿ ಪರಿಹಾರ ಸಾಮಗ್ರಿ ರವಾನೆಯಾಗಿದ್ದು, ಮೂರನೇ ಬಾರಿ ಸಾಮಗ್ರಿಗಳು ಶೀಘ್ರವೇ ನೇಪಾಳಕ್ಕೆ ತಲುಪಲಿದೆ. ಆಗಸ್ಟ್ 26ರಂದು 10 ಟನ್ ಮತ್ತು ಆಗಸ್ಟ್ 27ರಂದು 37.5 ಟನ್ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗಿತ್ತು. ಪ್ರಸ್ತುತ ಕಳುಹಿಸುತ್ತಿರುವ 13 ಟನ್ ಸಾಮಗ್ರಿಯೊಂದಿಗೆ ಭಾರತ ನೀಡಿದ ಒಟ್ಟು ಪರಿಹಾರವು 60 ಟನ್‌ ತಲುಪಲಿದೆ.

ಮತ್ತೊಂದು ಪ್ರವಾಹದ ಭೀತಿ:

ಟಿಬೆಟ್ ಗಡಿಯಲ್ಲಿ ಹಿಮಪಾತದಿಂದಾಗಿ ಉಂಟಾಗಿರುವ ಕೃತಕ ಸರೋವರದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಮತ್ತೊಂದು ಭೀಕರ ಪ್ರವಾಹ ಎದುರಾಗುವ ಅಪಾಯವಿದೆ ಎಂದು ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ತಗ್ಗಿಸುವಿಕೆ ಮತ್ತು ನಿರ್ವಹಣಾ ಪ್ರಾಧಿಕಾರ (NDRRMA) ಎಚ್ಚರಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:43 pm, Fri, 28 August 26

Loading...
Unable to load recommendations.
Follow Us