AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಡನನ್ನು ಕಾಪಾಡಲು 40 ಅಡಿ ಆಳದ ಬಾವಿಗೆ ಹಾರಿದ ಕೇರಳದ ಮಹಿಳೆ!

ಕೇರಳದ ಮಹಿಳೆಯೊಬ್ಬರು ತಮ್ಮ ಗಂಡನನ್ನು ರಕ್ಷಿಸಲು 40 ಅಡಿ ಬಾವಿಗೆ ಹಾರಿದ್ದಾರೆ. ಬಾವಿಗೆ ಬಿದ್ದಿದ್ದ ಗಂಡನನ್ನು ಕಾಪಾಡಲು 56 ವರ್ಷದ ಮಹಿಳೆ ಈ ದುಸ್ಸಾಹಸಕ್ಕೆ ಕೈಹಾಕಿದ್ದಾರೆ. ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಪತಿ ಆಕಸ್ಮಿಕವಾಗಿ ಬಾವಿಗೆ ಬಿದ್ದಾಗ, ಅವರನ್ನು ರಕ್ಷಿಸಲು ಮಹಿಳೆಯೊಬ್ಬರು 40 ಅಡಿ ಆಳದ ಬಾವಿಗೆ ಇಳಿದಿದ್ದಾರೆ. ಎರ್ನಾಕುಲಂ ಜಿಲ್ಲೆಯ ಪಿರಾವೋಮ್ ಪಟ್ಟಣದಲ್ಲಿ 56 ವರ್ಷದ ಮಹಿಳೆಯೊಬ್ಬರು 40 ಅಡಿ ಆಳದ ಬಾವಿಗೆ ಇಳಿದು, ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದ ತನ್ನ 64 ವರ್ಷದ ಪತಿ ರಮೇಶನನ್ನು ರಕ್ಷಿಸಿದ್ದಾರೆ.

ಗಂಡನನ್ನು ಕಾಪಾಡಲು 40 ಅಡಿ ಆಳದ ಬಾವಿಗೆ ಹಾರಿದ ಕೇರಳದ ಮಹಿಳೆ!
Kerala Woman Climbs Down 40 Foot Well
ಸುಷ್ಮಾ ಚಕ್ರೆ
|

Updated on: Feb 06, 2025 | 9:48 PM

Share

ತಿರುವನಂತಪುರಂ: ಕೇರಳದ ಮಹಿಳೆಯೊಬ್ಬರು ತಮ್ಮ ಪತಿ ಆಕಸ್ಮಿಕವಾಗಿ ಬಾವಿಗೆ ಬಿದ್ದಾಗ ಅವರನ್ನು ರಕ್ಷಿಸಲು 40 ಅಡಿ ಆಳದ ಬಾವಿಗೆ ಹಾರಿದ್ದಾರೆ. ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಪಿರಾವೋಮ್ ಪುರಸಭೆಯ ಇಲಾಂಜಿಕ್ಕವಿಲ್‌ನಲ್ಲಿ ವಾಸಿಸುವ 64 ವರ್ಷದ ನಿವೃತ್ತ ಪೊಲೀಸ್ ಅಧಿಕಾರಿ ರಮೇಶ್ ಬಾವಿಗೆ ಬಿದ್ದಿದ್ದರು. ರಮೇಶ್ ತನ್ನ ಮನೆಯ ಅಂಗಳದಲ್ಲಿರುವ ಬಾವಿಯ ಬಳಿ ಮೆಣಸು ಕೊಯ್ಯುವಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದರು. ಮರದ ಕೊಂಬೆ ಮುರಿದು ಬಿದ್ದ ಪರಿಣಾಮ ಅವರು ಬಾವಿಗೆ ಬಿದ್ದಿದ್ದರು. ಬಾವಿ ಸುಮಾರು 40 ಅಡಿ ಆಳದಲ್ಲಿದ್ದು, ಕೆಳಭಾಗದಲ್ಲಿ ಸುಮಾರು 5 ಅಡಿ ನೀರು ಇತ್ತು.

ಗಂಡ ಬಾವಿಗೆ ಬಿದ್ದು ಕಿರುಚಾಡುತ್ತಿರುವುದನ್ನು ಕೇಳಿದ ಅವರ 56 ವರ್ಷದ ಪತ್ನಿ ಪದ್ಮ ಮೊದಲು ಗಂಡನಿಗೆ ಮೇಲೆ ಬರಲು ಸಹಾಯ ಮಾಡಲು ಪ್ಲಾಸ್ಟಿಕ್ ಹಗ್ಗವನ್ನು ಎಸೆದರು. ಆದರೆ, ಅವರಿಗೆ ಅದನ್ನು ಹಿಡಿದುಕೊಂಡು ಮೇಲೆ ಬರಲು ಸಾಧ್ಯವಾಗಲಿಲ್ಲ. ತಕ್ಷಣ ತನ್ನ ಸಂಬಂಧಿಕರಿಗೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಲು ಹೇಳಿ, ತನ್ನ ಗಂಡ ನೀರಿನಲ್ಲಿ ಮುಳುಗದಂತೆ ತಡೆಯಲು ತಾವೇ ಬಾವಿಗೆ ಇಳಿದರು.

ಇದನ್ನೂ ಓದಿ: Viral: ಡೋರ್‌ ಕ್ಲೋಸ್‌ ಆಗ್ತಿದೆ ಎನ್ನುವಷ್ಟರಲ್ಲಿ ರೈಲು ಏರಲು ಮುಂದಾದ ಮಹಿಳೆ; ಮುಂದೇನಾಯ್ತು ನೋಡಿ…

ಮೊದಲಿಗೆ, ಪದ್ಮ ಹಗ್ಗವನ್ನು ಬಳಸಿ ಬಾವಿಗೆ ಇಳಿಯಲು ಪ್ರಯತ್ನಿಸಿದರು. ಆದರೆ ಹಿಡಿತ ತಪ್ಪಿ, ಬಾವಿಯೊಳಗಿನ ನಾಲ್ಕನೇ ರಿಂಗ್​ನಿಂದ ಕೆಳಗೆ ಬಿದ್ದರು. ಕೆಳಗೆ ಬಿದ್ದ ನಂತರ ಗಂಡ ನೀರಿನಲ್ಲಿ ಮುಳುಗದಂತೆ ನೋಡಿಕೊಂಡ ಅವರು ಗಂಡನನ್ನು ಹಿಡಿದುಕೊಂಡು ಬಾವಿಯ ಗೋಡೆಗೆ ಒರಗಿ ನಿಂತರು. ನೀರು ಕೇವಲ 5 ಅಡಿ ಇದ್ದುದರಿಂದ ಅವರ ಮುಖ ನೀರಿನಲ್ಲಿ ಮುಳುಗಲಿಲ್ಲ.

ವಿಷಯ ತಿಳಿದ ಕೂಡಲೆ ಪಿರವೋಮ್ ನಿಲಯಂನ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದರು. ಹಗ್ಗಗಳು ಮತ್ತು ಬಲೆಗಳನ್ನು ಬಳಸಿ ಇಬ್ಬರನ್ನೂ ಯಶಸ್ವಿಯಾಗಿ ಮೇಲೆತ್ತಿದರು. ಸಣ್ಣಪುಟ್ಟ ಗಾಯಗಳಾಗಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ