
ದೆಹಲಿ, ಆ.15: ದೇಶಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮುಗಿಲು ಮುಟ್ಟಿದ್ದು, ರಾಜಧಾನಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಅಂಗಳದಲ್ಲಿ ಅಪೂರ್ವ ಇತಿಹಾಸವೊಂದು ರಚನೆಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಧ್ವಜಾರೋಹಣ ಸಮಾರಂಭದಲ್ಲಿ, ಮೊದಲ ಬಾರಿಗೆ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ನ ಪೂರ್ಣ ಆವೃತ್ತಿಯನ್ನು ಧ್ವಜಾರೋಹಣಕ್ಕೆ ಮುನ್ನ ಅಧಿಕೃತವಾಗಿ ಪ್ರಸಾರ ಮಾಡಲಾಯಿತು. ರಾಷ್ಟ್ರಗೀತೆ ‘ಜನ ಗಣ ಮನ’ಕ್ಕೂ ಮುನ್ನ ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ನುಡಿಸುವ ಮೂಲಕ ಈ ಬಾರಿಯ ಸ್ವಾತಂತ್ರ್ಯೋತ್ಸವವು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.
ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ರಚನೆಯಾಗಿ 150 ವರ್ಷಗಳು ಪೂರೈಸಿರುವ ನೆನಪಿಗಾಗಿ ಈ ವಿಶೇಷ ಗೌರವವನ್ನು ನೀಡಲಾಗಿದೆ. ಪ್ರಧಾನಿ ಮೋದಿ ಕೆಂಪುಕೋಟೆಯ ಮಹಾದ್ವಾರದಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸುತ್ತಿದ್ದಂತೆ, 1721 ಫೀಲ್ಡ್ ಬ್ಯಾಟರಿ (ಸೆರೆಮೋನಿಯಲ್) ವತಿಯಿಂದ ಸ್ವದೇಶಿ ನಿರ್ಮಿತ 105 mm ಲೈಟ್ ಫೀಲ್ಡ್ ಗನ್ ಬಳಸಿ 21 ಗುಂಡುಗಳ ಗೌರವ ಸಮರ್ಪಿಸಲಾಯಿತು.
ಧ್ವಜಾರೋಹಣದ ವೇಳೆ ಭಾರತೀಯ ಭೂಸೇನೆಯ ಬ್ಯಾಂಡ್ ‘ವಂದೇ ಮಾತರಂ’ ರಾಗವನ್ನು ನುಡಿಸಿತು. ಅದೇ ಕ್ಷಣದಲ್ಲಿ ಭಾರತೀಯ ವಾಯುಸೇನೆಯ Mi-17 ಹೆಲಿಕಾಪ್ಟರ್‌ಗಳು ಕೆಂಪುಕೋಟೆಯ ಮೇಲೆ ಪುಷ್ಪವೃಷ್ಟಿ ಕರೆದವು. ಒಂದು ಹೆಲಿಕಾಪ್ಟರ್‌ನಲ್ಲಿ ತ್ರಿವರ್ಣ ಧ್ವಜ ಹಾಗೂ ಇನ್ನೊಂದರಲ್ಲಿ ‘ವಂದೇ ಮಾತರಂ’ ಚಿತ್ರದ ಧ್ವಜ ಕಂಗೊಳಿಸಿತು. ಈ ಐತಿಹಾಸಿಕ ಕ್ಷಣಕ್ಕೆ ಕೆಲವೇ ದಿನಗಳ ಮುನ್ನ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ (ತಿದ್ದುಪಡಿ) ಕಾಯ್ದೆ, 2026’ ಗೆ ಅಂಕಿತ ಹಾಕಿದ್ದರು.
ಈ ಹೊಸ ಕಾಯ್ದೆಯನ್ವಯ, ‘ಜನ ಗಣ ಮನ’ ರಾಷ್ಟ್ರಗೀತೆಗೆ ಇದ್ದ ಕಾನೂನು ರಕ್ಷಣೆಯಂತೆಯೇ ‘ವಂದೇ ಮಾತರಂ’ ರಾಷ್ಟ್ರೀಯ ಗೀತೆಗೂ ಸಂಪೂರ್ಣ ಕಾನೂನು ರಕ್ಷಣೆ ಸಿಕ್ಕಿದೆ. ಗೀತೆಯನ್ನು ಹಾಡುವಾಗ ಬೇಕಾಬಿಟ್ಟಿ ಅಡ್ಡಿಪಡಿಸುವುದು ಅಥವಾ ಅಪಮಾನಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು, ದಂಡ ಹಾಗೂ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.
ಇದನ್ನೂ ಓದಿ: 80ನೇ ಸ್ವಾತಂತ್ರ್ಯ ದಿನಾಚರಣೆ; ರಾಜ್‌ಘಾಟ್‌ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸಮಾಧಿಗೆ ಪ್ರಧಾನಿ ಮೋದಿ ಪುಷ್ಪ ನಮನ
ಸ್ವಾತಂತ್ರ್ಯ ದಿನದ ಮುನ್ನಾದಿನ ರಾಷ್ಟ್ರಪತಿಗಳು ದೇಶವನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿಯೂ ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಪ್ರಸಾರ ಮಾಡಲಾಗಿತ್ತು. ಸ್ವದೇಶಿ ಚಳವಳಿಯ ಕಾಲದಲ್ಲಿ ದೇಶಪ್ರೇಮಿಗಳಿಗೆ ಸ್ಪೂರ್ತಿಯಾಗಿದ್ದ ಈ ಗೀತೆಗೆ ಸೂಕ್ತ ಗೌರವ ಸಿಕ್ಕಿರುವುದು ಸಮಸ್ತ ಭಾರತೀಯರಲ್ಲಿ ಹೆಮ್ಮೆ ಮೂಡಿಸಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:17 am, Sat, 15 August 26