ಅಹಮದಾಬಾದ್, ಜೂನ್ 13: ಗುಜರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಗುರುವಾರ ಅಪಘಾತಕ್ಕೀಡಾಗಿ (Ahmedabad plane crash) ವಿಮಾನದಲ್ಲಿದ್ದ 241 ಜನರು ಮೃತಪಟ್ಟು, ಒಬ್ಬರು ವ್ಯಕ್ತಿ ಪವಾಡಸದೃಶರಾಗಿ ಪಾರಾಗಿದ್ದಾರೆ. ಬದುಕುಳಿದ ಏಕೈಕ ವ್ಯಕ್ತಿ ವಿಶ್ವಾಸ್ ಕುಮಾರ್ ರಮೇಶ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್ನ ಸಿವಿಲ್ ಆಸ್ಪತ್ರೆಯಲ್ಲಿ ಭೇಟಿಯಾದರು. ವಿಮಾನದಲ್ಲಿದ್ದ 242 ಜನರಲ್ಲಿ 241 ಜನರು ಸಾವನ್ನಪ್ಪಿದ ಭಯಾನಕ ಸಂದರ್ಭದ ಬಗ್ಗೆ ವಿಶ್ವಾಸ್ ಕುಮಾರ್ ಅವರ ಬಳಿಯಿಂದ ಪ್ರಧಾನಿ ಮೋದಿ (Narendra Modi) ಮಾಹಿತಿ ಸಂಗ್ರಹಿಸಿದರು. ಇದೇ ವೇಳೆ, ‘ಅಪಘಾತದಲ್ಲಿ ಬದುಕುಳಿದಿರುವುದನ್ನು ನಂಬಲಾಗುತ್ತಿಲ್ಲ’ ಎಂದು ವಿಶ್ವಾಸ್ ಕುಮಾರ್ ಹೇಳಿದರು.
ಅಪಘಾತದ ಸಂದರ್ಭದಲ್ಲಿ ಕೆಲವು ಕ್ಷಣಗಳ ಕಾಲ, ‘ನಾನು ಇನ್ನೇನು ಸಾಯುತ್ತೇನೆ’ ಎಂದು ಅನಿಸಿತು. ಆದರೆ ಕಣ್ಣು ತೆರೆದಾಗ, ಜೀವಂತವಾಗಿದ್ದೇನೆ ಎಂಬುದು ಅರಿವಾಯಿತು. ತಕ್ಷಣವೇ ಸೀಟ್ ಬೆಲ್ಟ್ ತೆರೆದು ಹೊರಬರಲು ಪ್ರಯತ್ನಿಸಿದೆ. ನಂತರ ಹೊರಬಂದೆ. ನನ್ನ ಕಣ್ಣೆದುರೇ ವಿಮಾನದಲ್ಲಿದ್ದ ಏರ್ ಹೋಸ್ಟೆಸ್ಗಗಳು, ಚಿಕ್ಕಮ್ಮ ಮತ್ತು ಚಿಕ್ಕಪ್ಪ ಎಲ್ಲರೂ ಕಣ್ಮರೆಯಾದರು. ನನ್ನೊಂದಿಗೆ ಇದ್ದ ಯಾರೂ ಉಳಿದಿರಲಿಲ್ಲ ಎಂದು ವಿಶ್ವಾಸ್ ಕುಮಾರ್, ಅಪಘಾತದ ಸಂದರ್ಭದ ಭೀಕರತೆಯನ್ನು ಬಿಚ್ಚಿಟ್ಟರು.
‘ಜನರು ಜೀವಂತ ಉರಿಯುತ್ತಿರುವುದನ್ನು ನಾನು ನೋಡಿದೆ. ನನ್ನ ಸೀಟು 11-ಎ ಆಗಿತ್ತು. ವಿಮಾನವು ಕಟ್ಟಡದ ನೆಲ ಮಹಡಿಗೆ ಡಿಕ್ಕಿ ಹೊಡೆದು ಆ ಭಾಗದಲ್ಲಿತ್ತು. ಬೆಂಕಿಯಿಂದಾಗಿ ಎಡಗೈ ಸುಟ್ಟುಹೋಗಿತ್ತು. ಅಲ್ಲಿಂದ ಹೊರ ಜಿಗಿದು ಓಡಿ ಹೊರಬಂದೆ. ಎಲ್ಲೆಡೆ ಜನರು ಬಿದ್ದಿದ್ದರು. ನನ್ನನ್ನು ಆಂಬ್ಯುಲೆನ್ಸ್ ಸಹಾಯದಿಂದ ಆಸ್ಪತ್ರೆಗೆ ಕರೆತಂದರು’ ಎಂದು ವಿಶ್ವಾಸ್ ಕುಮಾರ್ ತಿಳಿಸಿದರು.
ಈ ಅಪಘಾತವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾನು ಹೇಗೆ ಬದುಕುಳಿದೆ ಎಂಬುದು ಈಗಲೂ ನನಗೆ ಸರಿಯಾಗಿ ತಿಳಿದಿಲ್ಲ. ಜನರು ನನ್ನನ್ನು ಚೆನ್ನಾಗಿ ನಡೆಸಿಕೊಳ್ಳುತ್ತಿದ್ದಾರೆ. ಇಲ್ಲಿನ ಜನರು ತುಂಬಾ ಒಳ್ಳೆಯವರು ಎಂದು ಅವರು ಹೇಳಿದರು.
ಇದನ್ನೂ ಓದಿ: ಬ್ಲ್ಯಾಕ್ ಬಾಕ್ಸ್ ಸಂಗ್ರಹದಿಂದ ತನಿಖೆಯ ವರೆಗೆ, ವಿಮಾನ ಪತನದ ಕಾರಣ ಪತ್ತೆ ಹಚ್ಚೋದು ಹೇಗೆ? ಇಲ್ಲಿದೆ ಮಾಹಿತಿ
ವಿಶ್ವಾಸ್ ಕುಮಾರ್ ರಮೇಶ್ 40 ವರ್ಷದ ಬ್ರಿಟಿಷ್ ಪ್ರಜೆಯಾಗಿದ್ದು, ಅವರ ಕುಟುಂಬವನ್ನು ಭೇಟಿ ಮಾಡಲು ಭಾರತಕ್ಕೆ ಬಂದಿದ್ದರು. ಅವರು ಸಹೋದರ ಅಜಯ್ ಕುಮಾರ್ ರಮೇಶ್ (45) ಅವರೊಂದಿಗೆ ಬ್ರಿಟನ್ಗೆ ಹಿಂತಿರುಗುತ್ತಿದ್ದರು. ವಿಶ್ವಾಸ್ ವಿಮಾನದಲ್ಲಿ 11A ನಲ್ಲಿ ಕುಳಿತಿದ್ದರೆ, ಅವರ ಸಹೋದರ ಮತ್ತೊಂದು ಸಾಲಿನಲ್ಲಿ ಕುಳಿತಿದ್ದರು.
ವಿಮಾನವು ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅಹಮದಾಬಾದ್ನಲ್ಲಿ ಪತನಗೊಂಡಿತ್ತು. ಈ ಅಪಘಾತದಲ್ಲಿ ಇದುವರೆಗೆ 265 ಜನ ಸಾವನ್ನಪ್ಪಿದ್ದಾರೆ. ವಿಮಾನದಲ್ಲಿದ್ದ 242 ಜನರಲ್ಲಿ 241 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಮೃತಪಟ್ಟಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:11 pm, Fri, 13 June 25