‘ದಕ್ಷಿಣ ಭಾರತಕ್ಕೆ ಅನುಕೂಲ’; ಮಹಿಳಾ ಮೀಸಲಾತಿ, ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಬೆಂಬಲ

ಲೋಕಸಭಾ ಸ್ಥಾನಗಳನ್ನು ಶೇ. 50ರಷ್ಟು ಹೆಚ್ಚಿಸುವ ಮತ್ತು ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವ ವಿಧೇಯಕಗಳಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಹಾಗೂ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ಚಂದ್ರಬಾಬು ನಾಯ್ಡು ಹಾಗೂ ಕೇಂದ್ರ ಸಚಿವ ಹೆಚ್.​ಡಿ ಕುಮಾರಸ್ವಾಮಿ ಜಂಟಿ ಸುದ್ದಿಗೋಷ್ಠಿ ನಡೆಸಿ ಈ ಘೋಷಣೆ ಮಾಡಿದ್ದಾರೆ. ಇದರಿಂದಾಗಿ ನವೆಂಬರ್ 30ರಂದು ಆರಂಭವಾಗಲಿರುವ ಸಂಸತ್ ಕಲಾಪಕ್ಕೂ ಮೊದಲೇ ಎನ್​ಡಿಎಗೆ ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೆ ಮಿತ್ರಪಕ್ಷಗಳ ಬೆಂಬಲ ಖಾತರಿಯಾದಂತಾಗಿದೆ.

ದಕ್ಷಿಣ ಭಾರತಕ್ಕೆ ಅನುಕೂಲ; ಮಹಿಳಾ ಮೀಸಲಾತಿ, ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಬೆಂಬಲ
ಚಂದ್ರಬಾಬು ನಾಯ್ಡು
Image Credit source: PTI

Updated on: Nov 27, 2026 | 9:13 PM

ನವದೆಹಲಿ, ನವೆಂಬರ್ 27: ಲೋಕಸಭಾ ಸ್ಥಾನಗಳನ್ನು ಶೇ. 50ರಷ್ಟು ಹೆಚ್ಚಿಸುವ ಪ್ರಸ್ತಾವನೆಯನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಇಂದು ಬೆಂಬಲಿಸಿದ್ದಾರೆ. ಜನಸಂಖ್ಯೆ ಆಧಾರಿತ ಕ್ಷೇತ್ರ ಪುನರ್​ವಿಂಗಡಣೆಯಿಂದಾಗಿ ಸಂಸದೀಯ ಪ್ರಾತಿನಿಧ್ಯದ ಪಾಲನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದ ದಕ್ಷಿಣ ಭಾರತದ ರಾಜ್ಯಗಳಿಗೆ ಇದರಿಂದ ನೆಮ್ಮದಿ ಸಿಗಲಿದೆ ಎಂದು ಅವರು ಹೇಳಿದ್ದಾರೆ. ಇಂದು ಕೇಂದ್ರ ಸಚಿವ ಹೆಚ್​.ಡಿ. ಕುಮಾರಸ್ವಾಮಿಯವರೊಂದಿಗೆ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚಂದ್ರಬಾಬು ನಾಯ್ಡು, ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ತತ್ವದಡಿ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡಿರುವ ಐತಿಹಾಸಿಕ ನಿರ್ಧಾರವನ್ನು ಬೆಂಬಲಿಸಲು ತಾವು ಬಂದಿರುವುದಾಗಿ ತಿಳಿಸಿದರು.

“ಪ್ರಧಾನಿ ಮೋದಿ ಮಾಡಿರುವುದು ಒಂದು ಅಸಾಧಾರಣ ಕೆಲಸ. ನಿನ್ನೆಯವರೆಗೂ ರಾಹುಲ್ ಗಾಂಧಿ ಕೇರಳದ ಸಂಸದರಾಗಿದ್ದರು. ಈಗ ಪ್ರಿಯಾಂಕಾ ಗಾಂಧಿಯವರು ಕೇರಳವನ್ನು ಪ್ರತಿನಿಧಿಸುತ್ತಿದ್ದಾರೆ. ದಕ್ಷಿಣ ಭಾರತದ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರವಿದೆ. ತಮಿಳುನಾಡಿನಲ್ಲಿ ಸರ್ಕಾರಕ್ಕೆ ಕಾಂಗ್ರೆಸ್​ನಿಂದ ಬೆಂಬಲವಿದೆ. ಇತ್ತೀಚಿನ ಜನಗಣತಿಯಂತೆ ಕ್ಷೇತ್ರ ಪುನರ್ವಿಂಗಡಣೆಯಾದರೆ ದಕ್ಷಿಣ ಭಾರತಕ್ಕೆ ಭಾರಿ ನಷ್ಟವಾಗಲಿದೆ, ದಕ್ಷಿಣ ಭಾರತದ ಧ್ವನಿ ಅಡಗಿಹೋಗುತ್ತದೆ ಎಂದು ಅಸಮಾಧಾನ ವ್ಯಕ್ತವಾಗಿತ್ತು. ಇದಕ್ಕಿರುವ ಅತ್ಯುತ್ತಮ ಪರಿಹಾರ ಅಂದರೆ ಶೇ.50ರಷ್ಟು ಸ್ಥಾನ ಹೆಚ್ಚಳ. ಇದಕ್ಕಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ. ಇದು ಎಲ್ಲರಿಗೂ ಗೆಲುವು ತರುವ ಹಾಗೂ ತೃಪ್ತಿ ನೀಡುವ ನಿರ್ಧಾರ. ಈ ವಿಚಾರದಲ್ಲಿ ಈಗ ಎಲ್ಲರೂ ಒಮ್ಮತಕ್ಕೆ ಬರಬೇಕಾದ ಅಗತ್ಯವಿದೆ. ಇದು ದೇಶದ ಪಾಲಿಗೆ ಒಂದು ಐತಿಹಾಸಿಕ ಸಂದರ್ಭವಾಗಿದೆ. ದೇಶ ಗೆಲ್ಲಬೇಕಾದರೆ ನಾವು ನಮ್ಮ ಮಹಿಳೆಯರನ್ನ ಗೌರವಿಸಬೇಕು” ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.

Loading...

YouTube video player

ಪ್ರತಿ ರಾಜ್ಯದ ಪ್ರಸ್ತುತ ಇರುವ ಸ್ಥಾನಗಳನ್ನು ಶೇ. 50ರಷ್ಟು ಹೆಚ್ಚಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ಚಂದ್ರಬಾಬು ನಾಯ್ಡು, “ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಈ ಕ್ರಮವು ದಕ್ಷಿಣ ಭಾರತದ ರಾಜ್ಯಗಳಿಗೆ ನೆಮ್ಮದಿ ನೀಡಲಿದೆ ಎಂದರು. ಸಂಸದೀಯ ಸ್ಥಾನಗಳ ಪ್ರಸ್ತಾವಿತ ಹೆಚ್ಚಳದ ಕುರಿತು ಮಾತನಾಡಿದ ಅವರು, ಕುಟುಂಬ ಯೋಜನೆಯ ಮೂಲಕ ಜನಸಂಖ್ಯೆ ಬೆಳವಣಿಗೆಯನ್ನು ನಿಯಂತ್ರಿಸಲು ಆರಂಭದಲ್ಲೇ ಕ್ರಮ ಕೈಗೊಂಡಿದ್ದರೂ, ಜನಸಂಖ್ಯೆಯ ಅಂಕಿಅಂಶಗಳ ಆಧಾರದ ಮೇಲಿನ ಕ್ಷೇತ್ರ ಪುನರ್​ವಿಂಗಡಣೆಯು ದಕ್ಷಿಣದ ರಾಜ್ಯಗಳನ್ನು ಅನನುಕೂಲಕ್ಕೆ ಸಿಲುಕಿಸಬಹುದೆಂಬ ಆತಂಕವಿತ್ತು. ನಿನ್ನೆಯವರೆಗೂ ನಾವೆಲ್ಲರೂ ಭಯಭೀತರಾಗಿದ್ದೆವು. 1971ರ ಜನಗಣತಿ ಅಥವಾ 2011ರ ಜನಗಣತಿ ಅಥವಾ 2026ರ ಜನಗಣತಿಯ ಪ್ರಕಾರ ಹೋದರೆ, ದಕ್ಷಿಣ ಭಾರತಕ್ಕೆ ದೊಡ್ಡ ಸಮಸ್ಯೆಯಾಗುತ್ತದೆ, ಏಕೆಂದರೆ ಆರಂಭಿಕ ಹಂತದಲ್ಲಿ ನಾವೇ ಕುಟುಂಬ ಯೋಜನೆಗೆ ಮುಂದಾಗಿದ್ದೆವು. ಹೀಗಾಗಿ, ಜನಸಂಖ್ಯೆಯ ಆಧಾರದಲ್ಲಿ ಸೀಟು ಹಂಚಿಕೆಯಾದರೆ ದಕ್ಷಿಣ ಭಾರತಕ್ಕೆ ನಷ್ಟವಾಗಲಿದೆ ಎಂಬ ಆತಂಕವಿತ್ತು. ಈಗ ಆ ಭೀತಿ ನಿವಾರಣೆಯಾಗಿದೆ” ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಕ್ಷೇತ್ರ ಮರುವಿಂಗಡಣೆಗೆ ಕೇಂದ್ರದ ಹೊಸ ಸೂತ್ರ: ಲೋಕಸಭೆಯಲ್ಲಿ ಶೇ.50ರಷ್ಟು ಸ್ಥಾನ ಹೆಚ್ಚಳಕ್ಕೆ ಕೇಂದ್ರ ಅಸ್ತು, 2051ರವರೆಗೆ ಈ ಹೊಸ ನಿಯಮ

ದಕ್ಷಿಣ ಭಾರತಕ್ಕೆ ಹೇಗೆ ಅನುಕೂಲ?:

ಕ್ಷೇತ್ರ ಪುನರ್​ವಿಂಗಡಣೆ ಪ್ರಕ್ರಿಯೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಯಾವುದೇ ಅನ್ಯಾಯವಾಗುವುದಿಲ್ಲ ಮತ್ತು ಲೋಕಸಭೆಯಲ್ಲಿ ದಕ್ಷಿಣದ ರಾಜ್ಯಗಳ ಪ್ರಸ್ತುತ ಶೇ. 23.76ರಷ್ಟು ಪ್ರಾತಿನಿಧ್ಯದ ಪಾಲು ಹಾಗೆಯೇ ಉಳಿಯಲಿದೆ ಎಂದು ಚಂದ್ರಬಾಬು ನಾಯ್ಡು ಸ್ಪಷ್ಟಪಡಿಸಿದ್ದಾರೆ. ಕ್ಷೇತ್ರ ಮರುವಿಂಗಡಣೆ ಮತ್ತು ಶೇ. 50ರಷ್ಟು ಸೀಟುಗಳ ಹೆಚ್ಚಳದ ನಂತರ ದಕ್ಷಿಣ ಭಾರತದ ರಾಜ್ಯಗಳ ಸ್ಥಾನಗಳ ಸಂಖ್ಯೆ ಮತ್ತು ಪಾಲಿನ ವಿವರವನ್ನು ನಾಯ್ಡು ನೀಡಿದ್ದಾರೆ.

ಆ ಪ್ರಕಾರ, ಆಂಧ್ರಪ್ರದೇಶದಲ್ಲಿ ಪ್ರಸ್ತುತ 25 ಸ್ಥಾನಗಳಿಂದ ಮುಂದೆ 38 ಸ್ಥಾನಗಳಿಗೆ ಏರಿಕೆಯಾಗಲಿದೆ. ಒಟ್ಟು ಪ್ರಮಾಣದಲ್ಲಿ ಶೇ. 4.6ರಷ್ಟು ಪಾಲು ಮುಂದುವರಿಕೆಯಾಗಲಿದೆ.

ತಮಿಳುನಾಡು: ಪ್ರಸ್ತುತ 39 ಸ್ಥಾನಗಳಿಂದ 59 ಸ್ಥಾನಗಳಿಗೆ ಏರಿಕೆಯಾಗಲಿದೆ. ಶೇ. 7.18ರಷ್ಟು ಪಾಲು ಯಥಾಸ್ಥಿತಿ ಮುಂದುವರೆಯಲಿದೆ.

ಕರ್ನಾಟಕ: ಪ್ರಸ್ತುತ 28 ಸ್ಥಾನಗಳಿಂದ 42 ಸ್ಥಾನಗಳಿಗೆ ಏರಿಕೆಯಾಗಲಿದೆ. ಶೇ. 5.16ರಷ್ಟು ಪಾಲು ಮುಂದುವರಿಯಲಿದೆ.

ತೆಲಂಗಾಣ: ಪ್ರಸ್ತುತ 17 ಸ್ಥಾನಗಳಿಂದ 26 ಸ್ಥಾನಗಳಿಗೆ ಏರಿಕೆಯಾಗಲಿದೆ. ಶೇ. 3.13ರಷ್ಟು ಪಾಲು ಮುಂದುವರೆಯಲಿದೆ.

ಕೇರಳ: ಪ್ರಸ್ತುತ 20 ಸ್ಥಾನಗಳಿಂದ 30 ಸ್ಥಾನಗಳಿಗೆ ಏರಿಕೆಯಾಗಲಿದೆ. ಶೇ. 3.68ರಷ್ಟು ಪಾಲು ಮುಂದುವರೆಯಲಿದೆ.

ಇದನ್ನೂ ಓದಿ: ಇಂಡಿಯ ಬಣಕ್ಕೆ ಶಾಕ್; ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬೆಂಬಲ ಘೋಷಣೆ

ಈ ಮೂಲಕ ದಕ್ಷಿಣ ಭಾರತದಲ್ಲಿ ಪ್ರಸ್ತುತ ಇರುವ 129 ಸ್ಥಾನಗಳು 195ಕ್ಕೆ ಏರಲಿದ್ದು, ಪ್ರಾತಿನಿಧ್ಯದ ಶೇ. 23.76ರಷ್ಟು ಪಾಲು ಬದಲಾಗದೆ ಹಾಗೆಯೇ ಉಳಿಯಲಿದೆ ಎಂದು ಅವರು ಹೇಳಿದ್ದಾರೆ.

ಹಾಗೇ, ಸುಮಾರು ಮೂರು ದಶಕಗಳಿಂದ ಬಾಕಿ ಉಳಿದಿದ್ದ ಮಹಿಳಾ ಮೀಸಲಾತಿ ವಿಧೇಯಕವನ್ನು (ನಾರಿ ಶಕ್ತಿ ವಂದನ್ ಅಧಿನಿಯಮ) ಮುಂದಕ್ಕೆ ಕೊಂಡೊಯ್ಯುತ್ತಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಚಂದ್ರಬಾಬು ನಾಯ್ಡು ಅಭಿನಂದಿಸಿದ್ದಾರೆ. ಮಹಿಳೆಯರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡುವ ಈ ನಿರ್ಧಾರ ಐತಿಹಾಸಿಕವಾದುದು ಎಂದು ಅವರು ಬಣ್ಣಿಸಿದ್ದಾರೆ.

ನವೆಂಬರ್ 30ರಿಂದ ಸಂಸತ್ತಿನ ವಿಶೇಷ ಅಧಿವೇಶನ ಆರಂಭವಾಗಲಿರುವ ಹಿನ್ನೆಲೆಯಲ್ಲಿ, ನವೆಂಬರ್ 29ರಿಂದಲೇ ಟಿಡಿಪಿ, ಜನಸೇನೆ ಮತ್ತು ಬಿಜೆಪಿ ಸಂಸದರು ತಪ್ಪದೇ ದೆಹಲಿಯಲ್ಲಿ ಹಾಜರಿರುವಂತೆ ಅವರು ಸೂಚಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:58 pm, Fri, 27 November 26

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us