ಆಂಧ್ರಪ್ರದೇಶದಲ್ಲಿ ಮಹಿಳೆಯ ಕೊಂದು, 9 ತುಂಡುಗಳಾಗಿ ಕತ್ತರಿಸಿ ಕಾಲುವೆಗೆ ಎಸೆದ ಕಟುಕ!
ಆಂಧ್ರಪ್ರದೇಶದ ವಿಜಯವಾಡದಲ್ಲಿ ಭೀಕರ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಾಲದ ಹಣ ಹಾಗೂ ವೈಯಕ್ತಿಕ ವೈಮನಸ್ಸಿನ ಹಿನ್ನೆಲೆಯಲ್ಲಿ ಕಟುಕನೊಬ್ಬ ಮಹಿಳೆಯ ಕುತ್ತಿಗೆ ಕೊಯ್ದು, ಆಕೆಯ ಮೃತದೇಹವನ್ನು 9 ತುಂಡುಗಳಾಗಿ ಕತ್ತರಿಸಿ ಕಾಲುವೆಗೆ ಎಸೆದಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಜಯವಾಡದ ಇಬ್ರಾಹಿಂಪಟ್ಟಣಂ ಬಳಿ ಮೃತದೇಹದ ಅವಶೇಷಗಳು ಪತ್ತೆಯಾಗಿದ್ದವು. ಪೊಲೀಸರು ಸೋಷಿಯಲ್ ಮೀಡಿಯಾದಲ್ಲಿ ದೇಹದ ಭಾಗಗಳ ಫೋಟೋಗಳನ್ನು ಹಂಚಿಕೊಂಡ ನಂತರ, ಕೈ ಮೇಲಿದ್ದ ಹಚ್ಚೆಯನ್ನು ನೋಡಿ ಸಂಬಂಧಿಕರು ಆಕೆಯನ್ನು ಕಲ್ಯಾಣಿ ಎಂದು ಗುರುತಿಸಿದ್ದಾರೆ.

ವಿಜಯವಾಡ, ಸೆಪ್ಟೆಂಬರ್ 29: ಆಂಧ್ರಪ್ರದೇಶದ ವಿಜಯವಾಡದಲ್ಲಿ ಕಟುಕನೊಬ್ಬ ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಿ, ಆಕೆಯ ಮೃತದೇಹವನ್ನು 9 ತುಂಡುಗಳಾಗಿ ಕತ್ತರಿಸಿ ಕಾಲುವೆಗೆ ಎಸೆದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕೊಲೆಯಾದ ಮಹಿಳೆಯನ್ನು ಕಲ್ಯಾಣಿ ಎಂದು ಗುರುತಿಸಲಾಗಿದೆ. ಪ್ರಾರಂಭದಲ್ಲಿ ಇಬ್ರಾಹಿಂಪಟ್ಟಣಂ ಬಳಿ ಗುರುತು ಪತ್ತೆಯಾಗದ ಸ್ಥಿತಿಯಲ್ಲಿ ಮೃತದೇಹದ ಅವಶೇಷಗಳು ಪತ್ತೆಯಾಗಿದ್ದವು. ಪೊಲೀಸರು ಈ ಪ್ರಕರಣದ ವಿವರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಾಗ, ಆಕೆಯ ಕೈ ಮೇಲಿದ್ದ ಹಚ್ಚೆಯನ್ನು ನೋಡಿ ಸಂಬಂಧಿಕರು ಗುರುತಿಸಿ ಪೊಲೀಸರನ್ನು ಸಂಪರ್ಕಿಸಿದ್ದರು.
ಪೋಲೀಸ್ ತನಿಖೆಯಲ್ಲಿ ಭವಾನಿಪುರಂನಲ್ಲಿ ಮಟನ್ ಅಂಗಡಿ ನಡೆಸುತ್ತಿದ್ದ ಶಫಿ ಎಂಬ ಕಟುಕನೇ ಈ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಶಫಿ ಮತ್ತು ಕಲ್ಯಾಣಿ ನಡುವೆ ನಿಕಟ ಪರಿಚಯವಿತ್ತು. ಆದರೆ ಹಣದ ವಿಚಾರವಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಅಲ್ಲದೆ, ಕಲ್ಯಾಣಿಯ ಮಗನಿಗೆ ಸಂಬಂಧಿಸಿದ ಹಳೆಯ ವಿವಾದದ ಕಾರಣದಿಂದಲೂ ಇವರಿಬ್ಬರ ಸಂಬಂಧದಲ್ಲಿ ಬಿರುಕು ಮೂಡಿತ್ತು.
ಇದನ್ನೂ ಓದಿ: ಹಣ ದೋಚಲು ಬಂದ ಕಳ್ಳರಿಗೆ ಶಾಕ್; ಎಟಿಎಂ ಬೂತ್ನೊಳಗೆ ಕೂಡಿ ಹಾಕಿದ ಬ್ಯಾಂಕ್ ಮ್ಯಾನೇಜರ್!
ಸೆಪ್ಟೆಂಬರ್ 17ರಂದು ಶಫಿ ಕಲ್ಯಾಣಿಯನ್ನು ಭವಾನಿಪುರಂನಲ್ಲಿರುವ ತನ್ನ ಮನೆಗೆ ಕರೆದುಕೊಂಡು ಹೋಗಿದ್ದನು. ಅಲ್ಲಿ ಹಣದ ವಿಚಾರವಾಗಿ ಜಗಳ ನಡೆದು, ಕೋಪಗೊಂಡ ಶಫಿ ಚಾಕುವಿನಿಂದ ಆಕೆಯ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ. ಕೊಲೆಯ ನಂತರ ಆಕೆಯ ದೇಹವನ್ನು 9 ಭಾಗಗಳಾಗಿ ಕತ್ತರಿಸಿದ ಶಫಿ, ಅದನ್ನು ವಿಲೇವಾರಿ ಮಾಡಲು ತನ್ನ ಮಟನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಗುರುವುಲು ಎಂಬಾತನ ನೆರವು ಪಡೆದಿದ್ದಾನೆ.
ಮೃತದೇಹದ ತುಂಡುಗಳನ್ನು ಗೊಲ್ಲಪುಡಿ ಪ್ರದೇಶದ ಕೂಲಿಂಗ್ ಕಾಲುವೆಗೆ ತೆಗೆದುಕೊಂಡು ಹೋಗಿ ಎಸೆದಿದ್ದಾನೆ. ಇದೀಗ ಪೊಲೀಸರು ಪ್ರಮುಖ ಆರೋಪಿ ಶಫಿ ಹಾಗೂ ಆತನಿಗೆ ಸಹಕರಿಸಿದ ಗುರುವುಲು ಇಬ್ಬರನ್ನೂ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಯ ನಿಖರ ಉದ್ದೇಶ, ಆರೋಪಿಗಳ ಪಾತ್ರ ಹಾಗೂ ಮೃತದೇಹವನ್ನು ಹೇಗೆ ಸಾಗಿಸಲಾಯಿತು ಎಂಬುದರ ಕುರಿತು ತನಿಖೆ ಮುಂದುವರಿದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




