AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕ ತನ್ನ ಸ್ವಹಿತಾಸಕ್ತಿ ಕಾಯ್ದುಕೊಳ್ಳುತ್ತಿದೆ: ಟ್ರಂಪ್-ಪುಟಿನ್ ತೈಲ ಒಪ್ಪಂದದ ಬಗ್ಗೆ ಜೈಶಂಕರ್ ಮಾತು

ಅಮೆರಿಕ-ರಷ್ಯಾ ನಡುವಿನ ಡೀಸೆಲ್ ಒಪ್ಪಂದವನ್ನು ವಿದೇಶಾಂಗ ಸಚಿವ ಜೈಶಂಕರ್ ಸಮರ್ಥಿಸಿದ್ದಾರೆ. ಪ್ರತಿಯೊಂದು ದೇಶವೂ ತನ್ನ ಸ್ವಹಿತಾಸಕ್ತಿ ಕಾಯ್ದುಕೊಳ್ಳುವುದು ಅನಿವಾರ್ಯ ಎಂಬುದಕ್ಕೆ ಇದು ನಿದರ್ಶನ ಎಂದರು. ಭಾರತ ರಷ್ಯಾದಿಂದ ಕಚ್ಚಾ ತೈಲ ಖರೀದಿಸಿದ ನಿಲುವು ಎಷ್ಟು ಸಮರ್ಥನೀಯವಾಗಿತ್ತು ಎಂಬುದಕ್ಕೆ ಟ್ರಂಪ್ ಸರ್ಕಾರದ ನಡೆ ಸಾಕ್ಷಿ. ಜಾಗತಿಕ ರಾಜಕೀಯ ಒತ್ತಡಗಳ ಬದಲಿಗೆ ಪ್ರತಿಯೊಂದು ರಾಷ್ಟ್ರವೂ ತನ್ನದೇ ಆಯ್ಕೆ ಹೊಂದಿರಬೇಕು ಎಂದರು.

ಅಮೆರಿಕ ತನ್ನ ಸ್ವಹಿತಾಸಕ್ತಿ ಕಾಯ್ದುಕೊಳ್ಳುತ್ತಿದೆ: ಟ್ರಂಪ್-ಪುಟಿನ್ ತೈಲ ಒಪ್ಪಂದದ ಬಗ್ಗೆ  ಜೈಶಂಕರ್  ಮಾತು
ಎಸ್ ಜೈಶಂಕರ್ Image Credit source: PTI
ನಯನಾ ರಾಜೀವ್
|

Updated on: Oct 23, 2026 | 8:20 AM

Share

ನವದೆಹಲಿ, ಅಕ್ಟೋಬರ್ 23: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಏರ್ಪಟ್ಟಿರುವ ಡೀಸೆಲ್ ಸರಬರಾಜು ಒಪ್ಪಂದವು ಅಮೆರಿಕದ ಮಿತ್ರರಾಷ್ಟ್ರಗಳಲ್ಲಿ ಅಸಮಾಧಾನ ಮೂಡಿಸಿರಬಹುದು. ಆದರೆ ಪ್ರತಿಯೊಂದು ದೇಶವೂ ಮೊದಲು ತನ್ನ ಜನರ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದು ಅನಿವಾರ್ಯ ಎಂಬುದಕ್ಕೆ ಇದು ನಿದರ್ಶನ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಪ್ರತಿಪಾದಿಸಿದ್ದಾರೆ.

ಅಮೆರಿಕ ತನ್ನ ನಾಗರಿಕರಿಗೆ ತೊಂದರೆಯಾಗುವುದನ್ನು ಬಯಸುವುದಿಲ್ಲ. ಇದೇ ಕಾರಣಕ್ಕೆ ಸ್ವಹಿತಾಸಕ್ತಿಗೆ ಮೊದಲ ಆದ್ಯತೆ ನೀಡಿದೆ. ಭಾರತವೂ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವಾಗ ತೆಗೆದುಕೊಂಡ ನಿಲುವು ಎಷ್ಟು ಸಮರ್ಥನೀಯವಾಗಿತ್ತು ಎಂಬುದಕ್ಕೆ ಟ್ರಂಪ್ ಸರ್ಕಾರದ ಇತ್ತೀಚಿನ ನಡೆಯೇ ಸಾಕ್ಷಿ ಎಂದು ಹೇಳಿದರು.

ಅಮೆರಿಕ-ರಷ್ಯಾ ಡೀಸೆಲ್ ಡೀಲ್: ಅಕ್ಟೋಬರ್ 9 ರಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾದಿಂದ ಅಮೆರಿಕ ಹಾಗೂ ಜಾಗತಿಕ ಮಾರುಕಟ್ಟೆಗಳಿಗೆ ತಕ್ಷಣವೇ 3 ಲಕ್ಷ ಟನ್‌ಗೂ ಹೆಚ್ಚು ಡೀಸೆಲ್ ಆಮದು ಮಾಡಿಕೊಳ್ಳುವ ಒಪ್ಪಂದವನ್ನು ಪ್ರಕಟಿಸಿದ್ದರು. ನವೆಂಬರ್‌ನಲ್ಲಿ ಹೆಚ್ಚುವರಿಯಾಗಿ 5 ಲಕ್ಷ ಟನ್ ಮತ್ತು ಆ ನಂತರ ಹಂತ ಹಂತವಾಗಿ 1 ಮಿಲಿಯನ್ ಟನ್‌ಗಳಷ್ಟು ಡೀಸೆಲ್ ಪೂರೈಕೆಗೆ ರಷ್ಯಾ ಒಪ್ಪಿಗೆ ಸೂಚಿಸಿದೆ.

‘ಅಮೆರಿಕ ಫಸ್ಟ್’ ಸಮರ್ಥನೆ: ಯುರೋಪಿಯನ್ ಮಿತ್ರರಾಷ್ಟ್ರಗಳ ಟೀಕೆಗಳ ನಡುವೆಯೂ ತಮ್ಮ ತೀರ್ಮಾನವನ್ನು ಸಮರ್ಥಿಸಿಕೊಂಡಿದ್ದ ಟ್ರಂಪ್, “ನಾನು ಅಮೆರಿಕಾದ ಜನರ ಆರ್ಥಿಕ ಹಿತಾಸಕ್ತಿಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ; ಯಾವಾಗಲೂ ಅಮೆರಿಕಕ್ಕೇ ಮೊದಲ ಆದ್ಯತೆ” ಎಂದು ಹೇಳಿದ್ದರು.

ಇದನ್ನೂ ಓದಿ: ಭಾರತ-ಅಮೆರಿಕ ಐತಿಹಾಸಿಕ ವ್ಯಾಪಾರ ಒಪ್ಪಂದಕ್ಕೆ ಕ್ಷಣಗಣನೆ: ‘ಹಿಂದೆಂದಿಗಿಂತಲೂ ಇದು ಅತ್ಯಂತ ಭಿನ್ನ’ ಎಂದ ಡೊನಾಲ್ಡ್ ಟ್ರಂಪ್

“ನಿರ್ಬಂಧಗಳ ಜಗತ್ತು ಶಾಶ್ವತವಲ್ಲ”: ಜೈಶಂಕರ್ ವಿಶ್ಲೇಷಣೆ

ಒತ್ತಡದ ರಾಜಕಾರಣಕ್ಕೆ ಜಾಗವಿಲ್ಲ: ಪಶ್ಚಿಮದ ಹಲವು ರಾಷ್ಟ್ರಗಳು ನಿರ್ಬಂಧಗಳ ಮಧ್ಯೆಯೂ ರಷ್ಯಾದಿಂದ ಇಂಧನ ಖರೀದಿಸುತ್ತಿವೆ. ಜಾಗತಿಕ ರಾಜಕೀಯದಲ್ಲಿ ಕೇವಲ ಒತ್ತಡಗಳಿಗೆ ಮಣಿಯದೆ, ಪ್ರತಿಯೊಂದು ರಾಷ್ಟ್ರವೂ ತನ್ನದೇ ಆದ ಆಯ್ಕೆಗಳನ್ನು ಹೊಂದಿರಬೇಕು. ಯಾರೂ ಇನ್ನು ಮುಂದೆ ಒಂದೇ ದೇಶ ಅಥವಾ ಮೂಲದ ಮೇಲೆ ಅವಲಂಬಿತರಾಗಲು ಸಾಧ್ಯವಿಲ್ಲ ಎಂದರು. ಐದು ವರ್ಷಗಳ ಹಿಂದೆ ಯಾರೂ ಯೋಚಿಸಿರದ ರೀತಿಯಲ್ಲಿ ಯುಕ್ರೇನ್ ಯುದ್ಧ ದೀರ್ಘಕಾಲ ಎಳೆಯುತ್ತಿದೆ. ಇಂಧನ, ಹಣಕಾಸು ಹಾಗೂ ಪೂರೈಕೆ ಸರಪಳಿಗಳಲ್ಲಿ ಅನಿಶ್ಚಿತತೆ ಹೆಚ್ಚಿದ್ದು, ಜಗತ್ತು ಒಂದು ರೀತಿಯ ಒತ್ತೆಯಾಳು ಪರಿಸ್ಥಿತಿಯಲ್ಲಿದೆ. ಇಂತಹ ಸಮಯದಲ್ಲಿ ನಮಗೆ ವಿವೇಕಯುತ ನಿರ್ಧಾರಗಳು ಅಗತ್ಯ ಎಂದು ಜೈಶಂಕರ್ ತಿಳಿಸಿದರು.

ಭಾರತ-ಯುಎಸ್ ವ್ಯಾಪಾರ ಒಪ್ಪಂದ: ಮುಗಿಯುವವರೆಗೂ ಮುಗಿದಿಲ್ಲ

ಅಮೆರಿಕದೊಂದಿಗೆ ಬಹುನಿರೀಕ್ಷಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಅಂತಿಮ ಹಂತಕ್ಕೆ ಬಂದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದಂತೆ, ನಾವು ಒಪ್ಪಂದಕ್ಕೆ ತೀರಾ ಹತ್ತಿರವಾಗಿದ್ದೇವೆ. ಆದರೆ ಮಾತುಕತೆಗಳಲ್ಲಿ ಅಂತಿಮ ಹಂತದ ಸವಾಲುಗಳು ಯಾವಾಗಲೂ ಕಠಿಣವಾಗಿರುತ್ತವೆ. ಅಧಿಕೃತವಾಗಿ ಸಹಿ ಬೀಳುವವರೆಗೂ ಒಪ್ಪಂದ ಪೂರ್ಣಗೊಂಡಿದೆ ಎಂದು ಹೇಳಲಾಗದು. ಆ ತಾಂತ್ರಿಕ ಸವಾಲುಗಳನ್ನು ಎರಡೂ ದೇಶಗಳ ಸಮಾಲೋಚನಾ ತಂಡಗಳು ಬಗೆಹರಿಸುತ್ತಿವೆ ಎಂದರು.

ಮುಂಬೈ ಭೇಟಿ ವಿವಾದ: ರಾಹುಲ್ ಗಾಂಧಿಗೆ ತಿರುಗೇಟು

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರನ್ನು ನವದೆಹಲಿ ಬದಲು ಮುಂಬೈನಲ್ಲಿ ಭೇಟಿ ಮಾಡಿದ್ದನ್ನು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಕ್ಷೇಪಿಸಿದ್ದಕ್ಕೆ ಜೈಶಂಕರ್ ತೀಕ್ಷ್ಣ ವ್ಯಂಗ್ಯವಾಡಿದರು: ಮುಂಬೈ ನಗರದ ಜೊತೆ ಅವರಿಗೆ ಏನು ಸಮಸ್ಯೆಯೋ ನನಗೆ ಅರ್ಥವಾಗುತ್ತಿಲ್ಲ. ಮುಂಬೈ ಭಾರತದ ಆರ್ಥಿಕ ರಾಜಧಾನಿ, ಬಾಲಿವುಡ್‌ನ ಕೇಂದ್ರ ಮತ್ತು ಅದ್ಭುತ ನಗರ. ಬಹುಶಃ ಮುಂಬೈಗೆ ಅವರ ಬಗ್ಗೆ ಇಷ್ಟವಿಲ್ಲವೇನೋ ಎಂದು ಲೇವಡಿ ಮಾಡಿದರು.

ಹಿಂದೆ ಇಂದಿರಾ ಗಾಂಧಿಯವರು ಪಾಕಿಸ್ತಾನದ ಜುಲ್ಫಿಕರ್ ಅಲಿ ಭುಟ್ಟೋ ಅವರನ್ನು ಶಿಮ್ಲಾದಲ್ಲಿ ಭೇಟಿಯಾಗಿದ್ದರು. ಕಾಂಗ್ರೆಸ್ ಅವಧಿಯಲ್ಲಿ ಸಲ್ಮಾನ್ ಖುರ್ಷಿದ್ ಅವರು ಪಾಕ್ ಸಚಿವರನ್ನು ಭೇಟಿ ಮಾಡಲು ಜೈಪುರಕ್ಕೆ ಹೋಗಿದ್ದರು. ವಿದೇಶಿ ಗಣ್ಯರನ್ನು ದೆಹಲಿಯಿಂದ ಹೊರಗೆ ಭೇಟಿ ಮಾಡುವುದು ರಾಜತಾಂತ್ರಿಕ ಸಂಪ್ರದಾಯದ ಭಾಗ. ರಾಜಕೀಯವಾಗಿ ಮಾತನಾಡುವ ಮುನ್ನ ಸ್ವಲ್ಪ ವಿವೇಚನೆ ಇರಲಿ ಎಂದು ಜೈಶಂಕರ್ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?