ಪಾದಯಾತ್ರೆ, ರೋಡ್ ಶೋಗಳಿಗೆ ನಿಷೇಧ ಮುಂದುವರಿಸಿದ ಚುನಾವಣಾ ಆಯೋಗ, ಸಭೆಗಳಿಗೆ ನಿರ್ಬಂಧ ಸಡಿಲಿಕೆ

ಹೊರಾಂಗಣ ಸಭೆ, ಒಳಾಂಗಣ ಸಭೆಗಳು, ರ್ಯಾಲಿಗಳಿಗೆ ಸಂಬಂಧಿಸಿದ ನಿರ್ಬಂಧಗಳನ್ನು ಮತ್ತಷ್ಟು ಸಡಿಲಗೊಳಿಸಲಾಗುವುದು, ಪಾಲ್ಗೊಳ್ಳುವ ವ್ಯಕ್ತಿಗಳ ಸಂಖ್ಯೆಯನ್ನು ಒಳಾಂಗಣ ಸಭಾಂಗಣಗಳ ಸಾಮರ್ಥ್ಯದ ಗರಿಷ್ಠ ಶೇಕಡಾ 50 ರಷ್ಟು ಮತ್ತು ತೆರೆದ ಮೈದಾನದ ಸಾಮರ್ಥ್ಯದ ಶೇಕಡಾ 30 ರಷ್ಟು...

ಪಾದಯಾತ್ರೆ, ರೋಡ್ ಶೋಗಳಿಗೆ ನಿಷೇಧ ಮುಂದುವರಿಸಿದ ಚುನಾವಣಾ ಆಯೋಗ, ಸಭೆಗಳಿಗೆ ನಿರ್ಬಂಧ ಸಡಿಲಿಕೆ
ಚುನಾವಣಾ ಆಯೋಗ
TV9kannada Web Team

| Edited By: Rashmi Kallakatta

Feb 06, 2022 | 12:13 PM

ದೆಹಲಿ: ಚುನಾವಣಾ ಆಯೋಗವು (Election Commission)ರೋಡ್‌ಶೋ, ಪಾದಯಾತ್ರೆ, ಸೈಕಲ್ ಮತ್ತು ವಾಹನ ರ್ಯಾಲಿಗಳ ಮೇಲಿನ ನಿಷೇಧವನ್ನು ಮುಂದುವರಿಸಿದೆ. ಆದರೆ ಐದು ರಾಜ್ಯಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳಿಗಾಗಿ ಒಳಾಂಗಣ ಮತ್ತು ಹೊರಾಂಗಣ ರಾಜಕೀಯ ಸಭೆಗಳಿಗೆ ನಿರ್ಬಂಧಗಳನ್ನು ಸಡಿಲಿಸಿದೆ. ದೇಶದಲ್ಲಿನ ಕೊರೊನಾವೈರಸ್ (Coronavirus) ಸಾಂಕ್ರಾಮಿಕ ಪರಿಸ್ಥಿತಿಯನ್ನು ನಿರ್ಣಯಿಸಲು ಸಮಿತಿಯು ಶನಿವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿಯೊಂದಿಗೆ ಸಭೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. “ಹೊರಾಂಗಣ ಸಭೆ, ಒಳಾಂಗಣ ಸಭೆಗಳು, ರ್ಯಾಲಿಗಳಿಗೆ ಸಂಬಂಧಿಸಿದ ನಿರ್ಬಂಧಗಳನ್ನು ಮತ್ತಷ್ಟು ಸಡಿಲಗೊಳಿಸಲಾಗುವುದು, ಪಾಲ್ಗೊಳ್ಳುವ ವ್ಯಕ್ತಿಗಳ ಸಂಖ್ಯೆಯನ್ನು ಒಳಾಂಗಣ ಸಭಾಂಗಣಗಳ ಸಾಮರ್ಥ್ಯದ ಗರಿಷ್ಠ ಶೇಕಡಾ 50 ರಷ್ಟು ಮತ್ತು ತೆರೆದ ಮೈದಾನದ ಸಾಮರ್ಥ್ಯದ ಶೇಕಡಾ 30 ರಷ್ಟು ಅಥವಾ ನಿಗದಿಪಡಿಸಿದಂತೆ ಸೀಮಿತಗೊಳಿಸಲಾಗುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮಗಳಿಗೆ ತಕ್ಕಂತೆ ಡಿಇಒ ಅದನ್ನು ನಿಗದಿ ಪಡಿಸಬಹುದು ಎಂದು ಚುನಾವಣಾ ಸಮಿತಿ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ.  ಭಾರತದಲ್ಲಿ ಕೊವಿಡ್-19 ಪ್ರಕರಣಗಳು ಹೆಚ್ಚಾದ ನಂತರ ಜನವರಿ 8 ರಂದು ರಾಜಕೀಯ ರ್ಯಾಲಿಗಳನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸಮಿತಿಯು ಸಾಂಕ್ರಾಮಿಕ ಪರಿಸ್ಥಿತಿಯನ್ನು ಪರಿಶೀಲಿಸುವುದನ್ನು ಮುಂದುವರೆಸುತ್ತಿರುವುದರಿಂದ ನಿರ್ಬಂಧಗಳನ್ನು ಕ್ರಮೇಣ ಸಡಿಲಿಸಲಾಗಿದೆ.

ಉತ್ತರ ಪ್ರದೇಶ, ಗೋವಾ, ಮಣಿಪುರ, ಪಂಜಾಬ್ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ, ಮಾರ್ಚ್ 10 ರಂದು ಮತಗಳ ಎಣಿಕೆಯನ್ನು ನಿಗದಿಪಡಿಸಲಾಗಿದೆ. ರಾಜಕೀಯ ಪಕ್ಷಗಳು ಮತದಾರರನ್ನು ತಲುಪಲು ಸಾಮಾಜಿಕ ಮಾಧ್ಯಮ ಮತ್ತು ವರ್ಚುವಲ್ ರ್ಯಾಲಿಗಳನ್ನು ಬಳಸುತ್ತಿವೆ.

ಚುನಾವಣೆ ನಡೆಯಲಿರುವ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಆಯೋಗಕ್ಕೆ ಪತ್ರ ಬರೆದಿದ್ದು, ಚಾಲ್ತಿಯಲ್ಲಿರುವ ಕೊವಿಡ್ ಪರಿಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ, ಧನಾತ್ಮಕ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತು ಆಸ್ಪತ್ರೆಗೆ ದಾಖಲಾದ ಪ್ರಕರಣಗಳಲ್ಲಿಯೂ ಗಣನೀಯ ಇಳಿಕೆಯಾಗಿದೆ ಎಂದು ಹೇಳಿರುವುದಾಗಿ ಚುನಾವಣಾ ಆಯೋಗ ತಿಳಿಸಿದೆ.

ವಿಶೇಷ ವೀಕ್ಷಕರು, ಚುನಾವಣೆಯ ನಿರ್ವಹಣೆಯ ಮೇಲ್ವಿಚಾರಣೆಗೆ ನೇಮಕಗೊಂಡರು, ಅಸ್ತಿತ್ವದಲ್ಲಿರುವ ಪ್ರಚಾರ ಮಾರ್ಗಸೂಚಿಗಳನ್ನು ಮರುಪರಿಶೀಲಿಸಲು ಮತ್ತು ಹೆಚ್ಚಿನ ಸಡಿಲಿಕೆಗಳನ್ನು ಅನುಮತಿಸಲು ಸಮಿತಿಗೆ ಶಿಫಾರಸು ಮಾಡಿದ್ದರು.

ಈ ಮಾಹಿತಿಗಳನ್ನು ಗಣನೆಗೆ ತೆಗೆದುಕೊಂಡು, ಆಯೋಗವು ಆರೋಗ್ಯ ಕಾರ್ಯದರ್ಶಿಯೊಂದಿಗೆ ಸಭೆ ನಡೆಸಿದ್ದು, ದೇಶದಲ್ಲಿ ಕೊವಿಡ್ ಪ್ರಕರಣಗಳು ವೇಗವಾಗಿ ಕಡಿಮೆಯಾಗುತ್ತಿವೆ ಮತ್ತು ವರದಿಯಾದ ಪ್ರಕರಣಗಳಲ್ಲಿಯೂ ಸಹ ಮತದಾನವಲ್ಲದ ರಾಜ್ಯಗಳಿಂದ ಗರಿಷ್ಠ ಪ್ರಕರಣಗಳು ವರದಿಯಾಗಿವೆ ಎಂದು ಹೇಳಿದರು. ದೇಶದಲ್ಲಿ ವರದಿಯಾದ ಒಟ್ಟು ಪ್ರಕರಣಗಳಲ್ಲಿ ಮತದಾನ ನಡೆಯಲಿರುವ ರಾಜ್ಯಗಳು ಬಹಳ ಕಡಿಮೆ ಪ್ರಮಾಣದಲ್ಲಿ ಕೊಡುಗೆ ನೀಡುತ್ತಿವೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

“ಚುನಾವಣೆ ನಡೆಯುತ್ತಿರುವ ರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾಗಳಲ್ಲಿ, ಜನವರಿ 22 ರಂದು ಗರಿಷ್ಠ 30,000 ಕ್ಕಿಂತ ಹೆಚ್ಚು ಪ್ರಕರಣಗಳ ಸಂಖ್ಯೆ ಫೆಬ್ರವರಿ 5 ರಂದು ಸುಮಾರು 7,000 ಕ್ಕೆ ಇಳಿದಿದೆ” ಎಂದು ಆಯೋಗ ತಿಳಿಸಿದೆ.

ಮನೆ-ಮನೆ ಪ್ರಚಾರಕ್ಕೆ ಅನುಮತಿಸಲಾದ ಗರಿಷ್ಠ ಸಂಖ್ಯೆ 20  ಮೊದಲಿನಂತೆಯೇ ಇರಲಿದೆ.  ರಾತ್ರಿ 8 ರಿಂದ ಬೆಳಿಗ್ಗೆ 8 ರವರೆಗೆ ಪ್ರಚಾರದ ಮೇಲಿನ ನಿಷೇಧವು ಮೊದಲಿನಂತೆಯೇ ಮುಂದುವರಿಯುತ್ತದೆ ಎಂದು ಅದು ಹೇಳಿದೆ.

ಜಿಲ್ಲಾ ಅಧಿಕಾರಿಗಳು ನಿರ್ದಿಷ್ಟವಾಗಿ ಗೊತ್ತುಪಡಿಸಿದ ಮೈದಾನಗಳಲ್ಲಿ ಮಾತ್ರ ತೆರೆದ ಮೈದಾನದ ರ್ಯಾಲಿಗಳನ್ನು ನಡೆಸಬಹುದು ಎಂದು ಚುನಾವಣಾ ಆಯೋಗ ಹೇಳಿದೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಇಂದು, ಜಾಟ್ ಸಮುದಾಯ ಪ್ರಾಬಲ್ಯವಿರುವ ಬಾಗ್‌ಪತ್‌ನಲ್ಲಿ ಅಮಿತ್ ಶಾ ರ್ಯಾಲಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada