WAQF Amendment Bill: ವಕ್ಫ್ ಕಾಯ್ದೆ ತಿದ್ದುಪಡಿ, ಕೇಂದ್ರದ ನಿರ್ಧಾರ ಸ್ವಾಗತಿಸಿದ ಅಯೋಧ್ಯೆ ರಾಮ ಮಂದಿರ ಪ್ರಧಾನ ಅರ್ಚಕರು
Wakf Bill 2024:ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಮುಂದಿನ ವಾರ ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ನಿರ್ಧಾರವನ್ನು ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕರು ಸ್ವಾಗತಿಸಿದ್ದಾರೆ. 1954 ರಲ್ಲಿ ಜವಾಹರಲಾಲ್ ನೆಹರು ಸರ್ಕಾರವು ಈ ಆಸ್ತಿಗಳನ್ನು ನಿರ್ವಹಿಸಲು ಮೊದಲ ವಕ್ಫ್ ಕಾಯಿದೆಯನ್ನು ತಂದಿತು. ನಂತರ 1995 ರಲ್ಲಿ, ಪಿವಿ ನರಸಿಂಹ ರಾವ್ ಸರ್ಕಾರವು ಹೊಸ ವಕ್ಫ್ ಕಾಯಿದೆಯನ್ನು ಜಾರಿಗೆ ತಂದಿತು.
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಅಯೋಧ್ಯೆಯ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಸ್ವಾಗತಿಸಿದ್ದಾರೆ. ಇದು ಉತ್ತಮ ಹೆಜ್ಜೆ, ವಕ್ಫ್ ಮಂಡಳಿಯ ಆಸ್ತಿಯಲ್ಲಿ ಮಹಿಳೆಗೆ ಯಾವುದೇ ಪಾಲಿಲ್ಲ, ಯಾವುದೇ ಮಹಿಳಾ ಸದಸ್ಯೆ ವಕ್ಫ್ ಮಂಡಳಿಯ ಭಾಗವಾಗಿಲ್ಲ. ಈಗ ವಕ್ಫ್ ಮಂಡಳಿಯ ಆಸ್ತಿಯಲ್ಲಿ ಮಹಿಳೆಯರ ಪಾಲು ಇರಲಿದೆ.
ಯಾವುದೇ ಭೂಮಿಯನ್ನು ತನ್ನ ಸ್ವಂತ ಆಸ್ತಿ ಎಂದು ಘೋಷಿಸುವ ವಕ್ಫ್ ಮಂಡಳಿಯ ಪರಮಾಧಿಕಾರವನ್ನು ಕಡಿತಗೊಳಿಸುವುದು ಸೇರಿದಂತೆ ವಕ್ಫ್ ಕಾಯ್ದೆಯಲ್ಲಿ ಹಲವಾರು ತಿದ್ದುಪಡಿಗಳನ್ನು ತರುವ ಮಸೂದೆ ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ವಕ್ಫ್ ಮಂಡಳಿಯು ಸರ್ಕಾರಿ ಭೂಮಿಯನ್ನು ಹೇಗೆ ಸ್ವಾಧೀನಪಡಿಸಿಕೊಂಡಿದೆ, ಅವರಿಗೆ ಯಾರು ಭೂಮಿ ನೀಡಿದ್ದಾರೆ ಈ ವಿಷಯಗಳನ್ನು ಪರಿಶೀಲಿಸಬೇಕೆಂದರು.
ಕರಡು ಮಸೂದೆಯು ಪ್ರಸ್ತಾಪಿಸಿದ ಪ್ರಮುಖ ತಿದ್ದುಪಡಿಗಳಲ್ಲಿ ವಕ್ಫ್ ಬೋರ್ಡ್‌ಗಳ ಪುನರ್ ರಚನೆ, ಮಂಡಳಿಗಳ ಸಂಯೋಜನೆಯನ್ನು ಬದಲಾಯಿಸುವುದು, ಮಂಡಳಿಯು ವಕ್ಫ್ ಆಸ್ತಿ ಎಂದು ಘೋಷಿಸುವ ಮೊದಲು ಭೂಮಿಯ ಪರಿಶೀಲನೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಕಾಯ್ದೆಯ ಕೆಲವು ಷರತ್ತುಗಳನ್ನು ರದ್ದುಗೊಳಿಸುವುದು ಕೂಡ ಸೇರಿದೆ.
ಮಸೂದೆಯು ವಕ್ಫ್ ಕಾಯ್ದೆಯಲ್ಲಿ ಸುಮಾರು 40 ತಿದ್ದುಪಡಿಗಳನ್ನು ಪ್ರಸ್ತಾಪಿಸುವ ಸಾಧ್ಯತೆಯಿದೆ. ಈ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ವರದಿಗಳು ತಿಳಿಸಿವೆ. ಪ್ರಸ್ತುತ, ದೇಶದ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 30 ವಕ್ಫ್ ಮಂಡಳಿಗಳಿವೆ. 1995ರಲ್ಲಿ ವಕ್ಫ್ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಅದಕ್ಕೆ 2013ರಲ್ಲಿ ಕೆಲ ತಿದ್ದುಪಡಿ ತರಲಾಗಿದೆ. ಬಿಜೆಪಿ ಮತ್ತು ಸಂಘಪರಿವಾರ ವಕ್ಫ್ ಕಾಯ್ದೆ ಮತ್ತು ಮಂಡಳಿಗಳನ್ನು ವಿರೋಧಿಸುತ್ತಾ ಬಂದಿವೆ.
ಮತ್ತಷ್ಟು ಓದಿ: ವಕ್ಫ್ ಆಸ್ತಿ ಕಬಳಿಕೆ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಕ್ರಮ, ಮುಜರಾಯಿ ದೇವಸ್ಥಾನಗಳ ಸ್ವಚ್ಛತೆ, ಮೂಲ ಸೌಕರ್ಯಕ್ಕೆ ಆದ್ಯತೆ: ಶಶಿಕಲಾ ಜೊಲ್ಲೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ತಮಿಳುನಾಡಿನ ಒಂದು ಪ್ರಕರಣ ಸಮರ್ಥಿಸುತ್ತದೆ ಎಂದಿರುವ ವರದಿಗಳು, ಸೆಪ್ಟೆಂಬರ್ 2022ರಲ್ಲಿ ತಮಿಳುನಾಡು ವಕ್ಫ್ ಮಂಡಳಿಯು ಬಹುಪಾಲು ಹಿಂದೂ ಜನಸಂಖ್ಯೆಯನ್ನು ಹೊಂದಿರುವ ತಿರುಚೆಂದೂರೈ ಎಂಬ ಸಂಪೂರ್ಣ ಗ್ರಾಮದ ಮಾಲೀಕತ್ವ ತನ್ನದೆಂದು ಹೇಳಿತ್ತು ಎಂದಿದೆ.
ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದು ವಕ್ಫ್ ಮಂಡಳಿಗಳ ಅಧಿಕಾರವನ್ನು ಕಡಿತಗೊಳಿಸುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿದೆ.
ಕೇಂದ್ರ ವಕ್ಫ್ ಕೌನ್ಸಿಲ್ ಮತ್ತು ರಾಜ್ಯ ವಕ್ಫ್ ಮಂಡಳಿಗಳ ಸಂಯೋಜನೆಯನ್ನು ಬದಲಾಯಿಸುವುದು ಮತ್ತು ಅವುಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ವಕ್ಫ್ ಕಾಯ್ದೆಯ ಸೆಕ್ಷನ್ 9 ಮತ್ತು ಸೆಕ್ಷನ್ 14ಕ್ಕೆ ತಿದ್ದುಪಡಿ ತರುವುದು ಮತ್ತು ರಾಜ್ಯ ವಕ್ಫ್ ಮಂಡಳಿಗಳು ತನ್ನದೆಂದು ಹೇಳಿಕೊಂಡಿರುವ ವಿವಾದಿತ ಭೂಮಿಯನ್ನು ಹೊಸದಾಗಿ ಪರಿಶೀಲಿಸಲು ಮಸೂದೆಯು ಪ್ರಸ್ತಾಪಿಸಿದೆ ಎಂದು ತಿಳಿದು ಬಂದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:02 pm, Mon, 5 August 24