Sign In

By signing in or creating an account, you agree with Associated Broadcasting Company's Terms & Conditions and Privacy Policy.

Azadi ka Amrit Mahotsav Part 9: ಭ್ರಷ್ಟಾಚಾರ ನಿಯಂತ್ರಣಕ್ಕೆ ನೋಟ್ ಬ್ಯಾನ್; ತಲಾಖ್, ಸಲಿಂಗಕಾಮದ ಬಗ್ಗೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು

75th Independence Day: ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕು 75 ವರ್ಷವಾಗಿದೆ. ಭಾರತವು ಸಾಕಷ್ಟು ಸಾಧನೆಯನ್ನು ಮಾಡಿದೆ. ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಹೊಸ ಸಾಧನೆಯ ಮೂಲಕ ಅಭಿವೃದ್ದಿಯ ಹಾದಿಯಲ್ಲಿ ದಾಪುಗಾಲು ಇಟ್ಟಿದೆ. ಸ್ವಾತಂತ್ರ್ಯ ನಂತರದ ಭಾರತದ ಪ್ರಮುಖ ಸಾಧನೆಗಳನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.

Azadi ka Amrit Mahotsav Part 9: ಭ್ರಷ್ಟಾಚಾರ ನಿಯಂತ್ರಣಕ್ಕೆ ನೋಟ್ ಬ್ಯಾನ್; ತಲಾಖ್, ಸಲಿಂಗಕಾಮದ ಬಗ್ಗೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು
ರದ್ದುಗೊಳಿಸಿದ ನೋಟುಗಳು ಮತ್ತು ಸುಪ್ರೀಂ ಕೋರ್ಟ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Aug 14, 2022 | 6:32 PM

Azadi ka Amrit Mahotsav: ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕು 75 ವರ್ಷ ಪೂರ್ಣವಾಗಿದೆ. 75 ವರ್ಷದಲ್ಲಿ ಭಾರತವು ಸಾಕಷ್ಟು ಸಾಧನೆಯನ್ನು ಮಾಡಿದೆ. ಅನೇಕ ಮೈಲಿಗಲ್ಲುಗಳನ್ನು ನಿರ್ಮಿಸಿದೆ. ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಭಾರತವು ಹೊಸ ಸಾಧನೆಯ ಮೂಲಕ ಅಭಿವೃದ್ದಿಯ ಹಾದಿಯಲ್ಲಿ ದಾಪುಗಾಲು ಇಟ್ಟಿದೆ. ಸ್ವಾತಂತ್ರ್ಯ ನಂತರದ ಭಾರತದ ಪ್ರಮುಖ ಸಾಧನೆ, ಮೈಲಿಗಲ್ಲು, ಏಳುಬೀಳುಗಳು, ಪ್ರಮುಖ ಘಟನಾವಳಿ ಅಕ್ಷರ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.

76. ನೋಟ್ ಬ್ಯಾನ್

ಪಾಕ್‌ ಪ್ರೇರಿತ ಭಯೋತ್ಪಾದನೆಗೆ ಹಣಕಾಸು ನೆರವನ್ನು ಸ್ಥಗಿತಗೊಳಿಸುವುದು, ನಕಲಿ ನೋಟುಗಳ ಮುದ್ರಣವನ್ನು ತಪ್ಪಿಸುವುದು, ಕಪ್ಪು ಹಣ ಮತ್ತು ಭ್ರಷ್ಟಾಚಾರ ವಿರುದ್ಧ ಸಮರ ಸಾರಿದ ಪ್ರಧಾನಿ ನರೇಂದ್ರ ಮೋದಿಯವರು, 2016ರ ನವೆಂಬರ್‌ 8ರಂದು ರಾತ್ರಿ 8 ಗಂಟೆಗೆ 500 ರೂ. ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯತೆ ಮಾಡಿ ಘೋಷಣೆ ಮಾಡಿದರು. ಆದರೆ ವಿರೋಧ ಪಕ್ಷಗಳು ಇದನ್ನು ಮೋದಿ ಸರಕಾರದ ಮಹಾ ಹಗರಣವೆಂದು ಕರೆದಿದ್ದವು. ಯಾವುದೇ ಮುನ್ಸೂಚನೆ ನೀಡದೆ ದಿಢೀರ್ ನೋಟು ನಿಷೇಧ ಮಾಡಿದ ಪರಿಣಾಮ ಜನಸಾಮಾನ್ಯರಿಂದ ಹಿಡಿದು ಶ್ರೀಮಂತರ ತನಕ ಕೋಟ್ಯಂತರ ಜನರು ಸಂಕಷ್ಟ ಅನುಭವಿಸಿದ್ದರು. ಬಡವರಂತೂ ತಾವು ಕೂಡಿಟ್ಟ ಹಣ ನಾಳೆಯಂದ‌ ಬ್ಯಾನ್ ಅಂದಾಗ ಕಂಗಾಲು ಆಗಿದ್ದರು. ಬಳಿಕ ಹೊಸ ನೋಟುಗಳನ್ನು ಪಡೆಯಲು ಜನರು ಎಟಿಎಂಗಳಲ್ಲಿ ಸಾಲು ನಿಲ್ಲುವಂತಾಗಿತ್ತು. ವಿರೋಧ ಪಕ್ಷಗಳು ಪ್ರಧಾನಿ ಮೋದಿ‌ ವಿರುದ್ಧ ಮುಗಿಬಿದ್ದಿದ್ದವು.

77. ಸರಕು ಮತ್ತು ಸೇವಾ ತೆರಿಗೆ (GST)

ದೇಶದ ತೆರಿಗೆ ವ್ಯವಸ್ಥೆ ಇತಿಹಾಸದಲ್ಲಿಯೇ ಅತಿದೊಡ್ಡ ಸುಧಾರಣೆ ತರಲು ಕೇಂದ್ರ ಸರ್ಕಾರ ಜಿಎಸ್​​ಟಿ ಜಾರಿಗೆ ತಂದಿದೆ. 2017ರ ಜುಲೈ 1ರ ಮಧ್ಯ ರಾತ್ರಿ ಹೊಸ‌ ತೆರಿಗೆ ನೀತಿಯನ್ನು ಭಾರತ ಅಳವಡಿಸಿಕೊಂಡಿತು. ಮಧ್ಯರಾತ್ರಿ ನಡೆದ ಸಂಸತ್ ವಿಶೇಷ ಅಧಿವೇಶನದಲ್ಲಿ ಕಾಯ್ದೆ ಜಾರಿ ಮಾಡಲಾಯಿತು. ದೇಶದಲ್ಲಿ ಏಕ ರೂಪದ ಏಕ ತೆರಿಗೆ ಜಾರಿಯಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸುವುದರ ಮೂಲಕ ಸಂಭ್ರಮಿಸಿದರು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಸಂಸತ್​ ಭವನ, ಇಂಡಿಯಾ ಗೇಟ್​ ಸೇರಿದಂತೆ ಬಿಜೆಪಿ ಕಚೇರಿ ಎದುರು ಕಾರ್ಯಕರ್ತರು ಕುಣಿದು ಕುಪ್ಪಳಿಸುವ ಮೂಲಕ ಜಿಎಸ್​ಟಿ​ ಸ್ವಾಗತಿಸಿದರು. ಆದರೆ ಹೊಸ ತೆರಿಗೆ ನಿಯಮವನ್ನು ವಿರೋಧಪಕ್ಷಗಳು ವಿರೋಧಿಸಿದವು. ಇದೊಂದು ಅವೈಜ್ಞಾಕ ತೆರಿಗೆ ನಿಯಮ, ಇದರಿಂದ ರಾಜ್ಯಗಳಿಗೆ ಅನಾನೂಕೂಲ ಎಂದು ದೂಷಿಸಿದ್ದವು.‌ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಜಿಎಸ್​ಟಿಯನ್ನು ಗಬ್ಬರ್‌ ಸಿಂಗ್ ಟ್ಯಾಕ್ಸ್ ಎಂದು‌ ಕರೆಯುತ್ತಿದೆ.

78. ತ್ರಿವಳಿ ತಲಾಖ್ ರದ್ದುಪಡಿಸಿದ ಸುಪ್ರೀಂಕೋರ್ಟ್

ಮುಸ್ಲಿಂ ಸಮುದಾಯದಲ್ಲಿ ಚಾಲ್ತಿಯಲ್ಲಿದ್ದ ವಿವಾಹ ವಿಚ್ಚೇದನ ಪ್ರಕ್ರಿಯೆ ವಿವಾದಾತ್ಮಕ ತ್ರಿವಳಿ ತಲಾಖ್ ಪದ್ಧತಿಯನ್ನು ಸುಪ್ರೀಂಕೋರ್ಟ್ ಅಸಂವಿಧಾನಿಕ ಎಂದು ತೀರ್ಪು ನೀಡಿತ್ತು. 2017ರ ಆಗಸ್ಟ್ 22 ರಲ್ಲಿ ಸುಪ್ರೀಂಕೋರ್ಟ್ ಸಂವಿಧಾನಿಕ ಪೀಠ ಇಂತಹದ್ದೊಂದು ಮಹತ್ವದ ತೀರ್ಪು ನೀಡಿತ್ತು. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್, ಕೆ.ಜೋಸೆಫ್, ರೋಹಿಂಟನ್ ನಾರಿಮನ್, ಯು.ಲಲಿತ್ ಹಾಗೂ ಅಬ್ದುಲ್ ನಜೀರ್ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ಈ ಐತಿಹಾಸಿಕ ತೀರ್ಪು ನೀಡಿತ್ತು. ಐವರು ನ್ಯಾಯಮೂರ್ತಿಗಳಲ್ಲಿ ಮೂವರು ತ್ರಿವಳಿ ತಲಾಖ್ ರದ್ದುಪಡಿಸುವ ಪರ ತೀರ್ಪು ನೀಡಿದರೆ ನ್ಯಾಯಮೂರ್ತಿಗಳಾದ ಅಬ್ದುಲ್ ನಜೀರ್ ಮತ್ತು ಕುರಿಯನ್ ಜೋಸೆಫ್ ಅವರು ವಿರೋಧ ವ್ಯಕ್ತಪಡಿಸಿದರು. ಅಂತಿಮವಾಗಿ 3-2 ಬಹುಮತದ ಆಧಾರದ ಮೇಲೆ ಶತಮಾನಗಳಿಂದಲೂ ಆಚರಣೆಯಲ್ಲಿದ್ದ ಇಸ್ಲಾಂ ಧರ್ಮದ ತ್ರಿವಳಿ ತಲಾಖ್ ರದ್ದು ಮಾಡಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಅಂತಿಮ ತೀರ್ಪಿನಲ್ಲಿ ಘೋಷಿಸಿದರು. ಇಸ್ಲಾಂ ಧರ್ಮದಲ್ಲಿ ತ್ರಿವಳಿ ತಲಾಖ್ ಆಚರಣೆಯಲ್ಲಿಲ್ಲ. ಇದು ಸಂವಿಧಾನ ಬಾಹಿರ ಮತ್ತು ಇದಕ್ಕೆ ಕಾನೂನಿನ ರಕ್ಷಣೆ ನೀಡಲು ಸಾಧ್ಯವೇ ಇಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತ್ತು.

79. ಸಲಿಂಗಕಾಮವನ್ನು ಅಪರಾಧವಲ್ಲ ಎಂದು ತೀರ್ಪು ಕೊಟ್ಟ ಸುಪ್ರೀಂಕೋರ್ಟ್

ಸಲಿಂಗಕಾಮವನ್ನು ಅಪರಾಧ ಅಲ್ಲ ಎಂದು 2018ರ ಸೆಪ್ಟೆಂಬರ್ 6 ರಂದು ಸುಪ್ರೀಂಕೋರ್ಟ್‌ ಸಾಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡಿತ್ತು. ಸಲಿಂಗಕಾಮ ಅಪರಾಧ ಎನ್ನುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ಸಂವಿಧಾನದ ಮೂಲಭೂತ ಹಕ್ಕು ನೀಡುವ ಅನುಚ್ಛೇದ 14ಕ್ಕೆ ವಿರುದ್ಧವಾಗಿದೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಆ ಮೂಲಕ ಸಲಿಂಗಕಾಮ ಅಪರಾಧವಲ್ಲ ಎಂಬ ದೆಹಲಿ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿಯಿತು. ಅದರಂತೆ 158 ವರ್ಷಗಳ ಹಿಂದಿನ ಕಾನೂನನ್ನು‌ ಸುಪ್ರೀಂಕೋರ್ಟ್ ರದ್ದುಗೊಳಿಸಿತು. ನ್ಯಾಯಮೂರ್ತಿಗಳಾದ ದೀಪಕ್​ ಮಿಶ್ರಾ, ರೋಹಿಂಟನ್​ ನಾರಿಮನ್​, ಎ.ಎಂ. ಖಾನ್ವಿಲ್ಕರ್​, ಡಿ.ವೈ. ಚಂದ್ರಚೂಡ ಮತ್ತು ಇಂದು ಮೆಲ್ಹೋತ್ರಾ ಅವರನ್ನೊಳಗೊಂಡ ಸಾಂವಿಧಾನಿಕ ಪೀಠದಿಂದ ಈ ಐತಿಹಾಸಿಕ ತೀರ್ಪು ಪ್ರಕಟಗೊಂಡಿತ್ತು. ಸರ್ವೋಚ್ಛ ನ್ಯಾಯಾಲಯ ಸಲಿಂಗಿಗಳಿಗೆ ಸಿಹಿ ಸುದ್ದಿ ನೀಡುತ್ತಿದ್ದಂತೆ ದೇಶದ ಹಲವು ಕಡೆಗಳಲ್ಲಿ ಸಲಿಂಗಕಾಮಿಗಳು ಹಾಗೂ ಮಾನವ ಹಕ್ಕು ಹೋರಾಟಗಾರರು ಸಂಭ್ರಮಾಚರಣೆ ನಡೆಸಿದ್ದರು.

80. ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಯಾವುದು ಅಸಾಧ್ಯವೋ ಅದನ್ನು ಸಾಧ್ಯವಾಗಿಸುವ ಸಾಹಸಕ್ಕೆ ಕೈಹಾಕಿತ್ತು. ಆ ಸಾಹಸವೇ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸುವುದು. ಮೋದಿ ನೇತೃತ್ವದ ಕೇಂದ್ರ ಸರಕಾರವು 2019ರ ಆಗಸ್ಟ್ 5ರಂದು ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ‌ ರದ್ದು ಮಾಡುವ ಮಸೂದೆಯನ್ನು ಸಂಸತ್​ನಲ್ಲಿ ಮಂಡಿಸಿತ್ತು. ಕಾಶ್ಮೀರ ವಿಶೇಷ ಸ್ಥಾನಮಾನ ತೆಗೆದುಹಾಕುವುದು ಅಷ್ಟು ಸಲುಭದ ಕೆಲಸವಾಗಿರಲಿಲ್ಲ. ಕಳೆದ 70 ವರ್ಷಗಳ ಅಧಿಕಾರದಲ್ಲಿ ಯಾವುದೇ ಸರಕಾರಗಳು ಮಾಡದ ನಿರ್ಧಾರವನ್ನು ಮೋದಿ‌ ಮಾಡಿತ್ತು. ಮೋದಿ ಸರಕಾರ ಮತ್ತೂಮ್ಮೆ ಅಧಿಕಾರಕ್ಕೆ ಬರುತ್ತಲೇ ತಾನು ಹಿಂದೆ ನೀಡಿದ್ದ ವಾಗ್ಧಾನವೊಂದನ್ನು ಅಧಿಕಾರಕ್ಕೆ ಬಂದ 100 ದಿನಗಳೊಳಗಾಗಿ ಪೂರೈಸಿತು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ಕಲಂ ಅನ್ನು ಗುಟ್ಟುಬಿಟ್ಟುಕೊಡದೆ ಸುಳಿವು ನೀಡದೆ ರದ್ದುಪಡಿಸಿತು. ಅಷ್ಟೇ ಅಲ್ಲದೆ ಜಮ್ಮು ಕಾಶ್ಮೀರ ರಾಜ್ಯವನ್ನು ಲಡಾಖ್‌ ಹಾಗೂ ಜಮ್ಮು ಕಾಶ್ಮೀರ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಾಗಿಸಲಾಯಿತು. ಇಂತಹದೊಂದು ನಿರ್ಧಾರ ಮಾಡುತ್ತಿದ್ದಂತೆಯೇ ಕಣಿವೆ ರಾಜ್ಯದಲ್ಲಿ ಕೋಲಾಹಲ ಸೃಷ್ಟಿಯಾಯಿತು. ಜನರು ದಂಗೆ ಎದ್ದು ಸರಕಾರದ ವಿರುದ್ಧ ಹೋರಾಟಕ್ಕೆ‌ ಇಳಿದರು. ಆದರೆ ಸರಕಾರ ಮಾತ್ರ ಎಲ್ಲವನ್ನು ಶಾಂತ ರೀತಿಯಲ್ಲೇ ನಿಭಾಯಿಸಿತು, ಇದರಿಂದ ಕಾಶ್ಮೀರಕ್ಕಾಗುವ ಲಾಭ ಏನು ಎಂದು ತಿಳಿಸಿಕೊಡುವಲ್ಲಿ ಸಫಲರಾದರು. ಅಷ್ಟೇ ಅಲ್ಲದೆ‌ ಅಂತಾರಾಷ್ಟ್ರೀಯ ಒತ್ತಡವನ್ನು ಪ್ರಧಾನಿ ಮೋದಿ‌ ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವಿಯಾದರು. ಕಣಿವೆ ರಾಜ್ಯದ ರಾಜಕೀಯ ಮುಖಂಡರನ್ನು ಗೃಹ ಬಂಧನದಲ್ಲಿಟ್ಟು ಹಿಂಸಾಚಾರಕ್ಕೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಲಾಯಿತು.

81. ರಾಮ ಮಂದಿರ ತೀರ್ಪು

ವಿವಾದಿತ ರಾಮಜನ್ಮಭೂಮಿ ಮತ್ತು ಬಾಬರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರ ನವೆಂಬರ್ 9 ರಂದು ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಪೀಠದಿಂದ ಐತಿಹಾಸಿಕ ತೀರ್ಪು ಪ್ರಕಟಿಸಿತ್ತು. ಐತಿಹಾಸಿಕ ತೀರ್ಪು ಓದಿದ ಸರ್ವೋಚ್ಚ ನ್ಯಾಯಾಲಯದ ​ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್, ಅಯೋಧ್ಯೆಯ ವಿವಾದಿತ 2.77 ಎಕರೆ ಭೂಮಿಯ ಸಂಪೂರ್ಣ ಹಕ್ಕು ರಾಮ ಲಲ್ಲಾಗೆ ಸೇರಿದ್ದು ಎಂದು ಆದೇಶ ನೀಡಿತ್ತು. ರಾಮಮಂದಿರ ನಿರ್ಮಾಣಕ್ಕೆ ಸೂಕ್ತ ಕಾನೂನು ರೂಪಿಸಲು ಕೇಂದ್ರ ಸರಕಾರಕ್ಕೆ ಆದೇಶಿಸಿದ ಸಾಂವಿಧಾನಿಕ ಪೀಠ, ಅದರ ಸಂಪೂರ್ಣ ಹೊಣೆ ಕೇಂದ್ರ ಸರ್ಕಾರಕ್ಕೆ ಸೇರಿದ್ದು ಎಂದು ತೀರ್ಪು ನೀಡಿತ್ತು. ಇದೇ ವೇಳೆ ಮಸೀದಿ ನಿರ್ಮಾಣಕ್ಕೆ ಸುನ್ನಿ ವಕ್ಫ್ ಬೋರ್ಡ್​ಗೆ ಪ್ರತ್ಯೇಕ 5 ಎಕರೆ ಜಾಗವನ್ನು ನೀಡಲು ಆದೇಶಿಸಿರುವ ಸಿಜೆಐ ನೇತೃತ್ವದ ಸಾಂವಿಧಾನಿಕ ಪೀಠ, ಸುನ್ನಿ ವಕ್ಫ್ ಬೋರ್ಡ್​​ಗೆ ಅಯೋಧ್ಯೆಯಲ್ಲೇ ಪರ್ಯಾಯ ಜಾಗವನ್ನು ನೀಡಬೇಕು ಎಂದು ನಿರ್ದೇಶನ ನೀಡಿತ್ತು. 2019ರಲ್ಲಿ ಸುಪ್ರೀಂ ಕೋರ್ಟ್‌ ಆದೇಶ ಹೊರಬೀಳುವುದಕ್ಕೂ ಮುನ್ನ ದೇಶಾದ್ಯಂತ ಯಾವುದೇ ಮತೀಯ ಗಲಭೆಗಳು ನಡೆಯದಂತೆ ಸೂಕ್ತ ವೇದಿಕೆಯನ್ನು ಸೃಷ್ಟಿಸಲಾಯಿತು. ತೀರ್ಪು ಹೊರಬೀಳಲು ಕೆಲವು ದಿನಗಳ ಮುನ್ನವೇ ದೇಶದ ಪ್ರಮುಖ ಮುಸ್ಲಿಂ ಧರ್ಮಗುರುಗಳನ್ನು ಭೇಟಿ ಮಾಡಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌, ಕೇಂದ್ರ ಗೃಹ ಸಚಿವ ಅಮಿತ್‌ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರು.

82. ಚಂದ್ರಯಾನ -2

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಚಂದ್ರಯಾನ -2 ಬಾಹ್ಯಾಕಾಶ ನೌಕೆ ಚಂದ್ರನ ಮೇಲ್ಮೈಯಲ್ಲಿ ಇಳಿಸುವ ಉದ್ದೇಶದಿಂದ 2019ರ ಜುಲೈ 22 ರಂದು ಉಡಾವಣೆ ಮಾಡಲಾಯಿತು. ಲ್ಯಾಂಡರ್ ಮೃದುವಾದ ಲ್ಯಾಂಡಿಂಗ್ ಮಾಡಲು ಸಾಧ್ಯವಾಗದ ಕಾರಣ ಮಿಷನ್ ಯಶಸ್ವಿಯಾಗಲಿಲ್ಲ. ಆದಾಗ್ಯೂ, ಆರ್ಬಿಟರ್ ಅನ್ನು 2019ರ ಆಗಸ್ಟ್ 20 ರಂದು ಯಶಸ್ವಿಯಾಗಿ ಚಂದ್ರನ ಕಕ್ಷೆಯಲ್ಲಿ ಸೇರಿಸಲಾಯಿತು. ಇಸ್ರೋ ಪ್ರಕಾರ, ಚಂದ್ರಯಾನ -2 ಮಿಷನ್ ಕೇವಲ ಚಂದ್ರನ ಒಂದು ಪ್ರದೇಶವನ್ನು ಮಾತ್ರವಲ್ಲದೆ ಭೂಗೋಳ, ಮೇಲ್ಮೈ ಮತ್ತು ಚಂದ್ರನ ಉಪ-ಮೇಲ್ಮೈಯನ್ನು ಒಂದೇ ಕಾರ್ಯಾಚರಣೆಯಲ್ಲಿ ಸಂಯೋಜಿಸುವ ಎಲ್ಲಾ ಪ್ರದೇಶಗಳನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿತ್ತು. ಚಂದ್ರಯಾನ -2 ಚಂದ್ರನ ಬಗ್ಗೆ ನಮ್ಮ ತಿಳುವಳಿಕೆಯನ್ನು ಹೆಚ್ಚಿಸುವುದು, ತಂತ್ರಜ್ಞಾನದ ಪ್ರಗತಿಯನ್ನು ಉತ್ತೇಜಿಸುವುದು, ಭವಿಷ್ಯದ ಪೀಳಿಗೆಯ ಪರಿಶೋಧಕರು ಮತ್ತು ವಿಜ್ಞಾನಿಗಳಿಗೆ ಪ್ರೇರಣೆ ನೀಡುವ ಗುರಿ ಹೊಂದಿತ್ತು.

83. ಮಹಾಮಾರಿ ಕೊರೋನಾಗೆ ವ್ಯಾಕ್ಸಿನ್

ಇಡೀ ವಿಶ್ವವೇ ಸಾಂಕ್ರಮಿಕ ರೋಗ ಕೊರೋನಾದಿಂದ ಕಂಗೆಟ್ಟಿತ್ತು. ಭಾರತದಲ್ಲೂ ಕೊರೋನಾ ವ್ಯಾಪಕವಾಗಿ ಹರಡಿತ್ತು.‌ ಕೋಟ್ಯಾಂತರ ಜನರು ಸೋಂಕಿಗೆ ಒಳಗಾದರೆ, 5 ಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಬಲಿಯಾಗಿದ್ದರು. ದೇಶದಲ್ಲಿ ಕೊರೋನಾ ಹರಡುತ್ತಲೇ ಎಚ್ಚೆತ್ತ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಆರೋಗ್ಯ ವ್ಯವಸ್ಥೆಗೆ ಚೈತನ್ಯ ನೀಡಿದರು. ಇದು ಕೊರೋನಾದ ಭೀಕರ ಪರಿಸ್ಥಿತಿಯನ್ನು ಭಾರತ ಸಮರ್ಥವಾಗಿ ಎದುರಿಸಲು ಸಹಕಾರಿಯಾಯಿತು. ಅಂದರೆ ಭಾರತವು ಸ್ವದೇಶಿ ಕೊರೋನಾ ಲಸಿಕೆಯನ್ನು ಸಂಶೋಧನೆ ಮಾಡುವಲ್ಲಿ ಯಶಸ್ವಿಯಾಯಿತು. ಹೈದರಾಬಾದ್‌ನ ಭಾರತ್ ಬಯೋಟೆಕ್ ಕಂಪನಿಯು ಕೊವ್ಯಾಕ್ಸಿನ್ ಲಸಿಕೆಯನ್ನು ಸಂಶೋಧಿಸಿತ್ತು. ಇದು ಸಂಪೂರ್ಣ ಸ್ವದೇಶಿ ಕೊರೊನಾ ಲಸಿಕೆ. ಈ ಲಸಿಕೆಯನ್ನ ಭಾರತವು ವಿದೇಶಗಳಿಗೂ ರಫ್ತು ಮಾಡಿತ್ತು. ದೇಶದಲ್ಲಿ ಕೊರೋನಾ ಲಸಿಕೆ ಹಾಕುವ ವಿಚಾರದಲ್ಲಿ ಭಾರತ ದಾಖಲೆ ಮಾಡಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ 200 ಕೋಟಿ ಡೋಸ್‌ ಕೊರೋನಾ ಲಸಿಕೆ ನೀಡಿದೆ. ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ಭಾರತವು ಕೇವಲ 18 ತಿಂಗಳಲ್ಲಿ ಈ ದಾಖಲೆಯನ್ನು ಮಾಡಿದೆ. ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನವು 2021ರ ಜನವರಿಯಲ್ಲಿ ಪ್ರಾರಂಭವಾಗಿದೆ. ಇದು ವಿಶ್ವದ ಅತಿ ದೊಡ್ಡ ಲಸಿಕೆ ಅಭಿಯಾನ ಎಂದು ಭಾರತ ಸರ್ಕಾರ ಹೇಳಿಕೊಂಡಿದೆ. ವ್ಯಾಕ್ಸಿನೇಷನ್ ವಿಷಯದಲ್ಲಿ ಚೀನಾ ನಂತರ ಭಾರತ ಎರಡನೇ ಸ್ಥಾನದಲ್ಲಿದೆ. ಈ ದಾಖಲೆಯೊಂದಿಗೆ‌ ಕೋವಿಡ್ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತವು ಸುರಕ್ಷಿತ ದೇಶಗಳ ಪಟ್ಟಿಗೆ ಸೇರಿಕೊಂಡಿತು.

84. ಭಾರತೀಯರ ನೊಬೆಲ್ ಪ್ರಶಸ್ತಿಗಳು

ವಿಶ್ವದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ನೊಬೆಲ್ ಪ್ರಶಸ್ತಿಯೂ ಭಾರತೀಯರಿಗೂ ಸಂದಿದೆ. ಭಾರತದ ಸಾಧಕರು ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ, ಗೌರವ ಪಡೆದು ನೊಬೆಲ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ಭಾರತದ ಸಾಧಕರಿಗೆ ಈ ಮೂಲಕ ಅಂತಾರಾಷ್ಟ್ರೀಯ ಮನ್ನಣೆಗಳು ದೊರೆತಿವೆ. 1913ರಲ್ಲಿ ರವೀಂದ್ರನಾಥ್ ಟ್ಯಾಗೋರ್ ಅವರಿಗೆ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ನೊಬೆಲ್ ಪ್ರಶಸ್ತಿ ನೀಡಲಾಗಿದೆ. 1930ರಲ್ಲಿ ಭೌತಶಾಸ್ತ್ರ ಕ್ಷೇತ್ರದ ಸಂಶೋಧನೆ, ಸಾಧನೆಗಾಗಿ ಸಿ.ವಿ.ರಾಮನ್ ಅವರಿಗೆ ನೊಬೆಲ್ ಪ್ರಶಸ್ತಿ ಬಂದಿದೆ. 1979ರಲ್ಲಿ ಮದರಾ ಥೇರೇಸಾ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಮದರಾ ಥೇರೇಸಾ ಅವರು ಬಡವರು, ನಿರ್ಗತಿಕರ ನಿಸ್ವಾರ್ಥ ಸೇವೆಯನ್ನ ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 1998ರಲ್ಲಿ ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ ಅವರಿಗೆ ಅರ್ಥಶಾಸ್ತ್ರ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2014ರಲ್ಲಿ ಮಧ್ಯಪ್ರದೇಶದ ಭೋಪಾಲ್​ನ ಕೈಲಾಸ್ ಸತ್ಯಾರ್ಥಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿದೆ. ಎಳೆಯ ಮಕ್ಕಳ ರಕ್ಷಣೆ, ಭಿಕ್ಷಾಟನೆ ನಿರ್ಮೂಲನೆ, ಮಕ್ಕಳ ಹಕ್ಕುಗಳಿಗಾಗಿ ಕೈಲಾಸ್ ಸತ್ಯಾರ್ಥಿ ತಮ್ಮ ಎನ್‌ಜಿಓ ಮೂಲಕ ದುಡಿಯುತ್ತಿದ್ದಾರೆ. 2019ರಲ್ಲಿ ಅಭಿಜಿತ್ ಬ್ಯಾನರ್ಜಿ ಅವರಿಗೆ ಅರ್ಥಶಾಸ್ತ್ರ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ಆದರೆ ಮಹಾತ್ಮ ಗಾಂಧೀಜಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕೆಂಬ ಬೇಡಿಕೆ ಇತ್ತು. ಆದರೂ ಈವರೆಗೆ ಈಡೇರಿಲ್ಲ.

ವರದಿ: ಚಂದ್ರಮೋಹನ್ 

Published On - 1:04 pm, Sun, 14 August 22

ದಿನನಿತ್ಯ ತುಪ್ಪ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ? ವಿಡಿಯೋ ನೋಡಿ
ದಿನನಿತ್ಯ ತುಪ್ಪ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ? ವಿಡಿಯೋ ನೋಡಿ
Horoscope: ಸೂರ್ಯ ಮೇಷ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
Horoscope: ಸೂರ್ಯ ಮೇಷ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ