
ಮುಂಬೈ, ನವೆಂಬರ್ 27: ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಆರಂಭದಿಂದಲೂ ಭಾರೀ ವಿರೋಧ ವ್ಯಕ್ತಪಡಿಸುತ್ತಿರುವ ಇಂಡಿಯ ಮೈತ್ರಿಕೂಟಕ್ಕೆ ದೊಡ್ಡ ಆಘಾತ ಎದುರಾಗಿದೆ. ನವೆಂಬರ್ 30ರಿಂದ ಲೋಕಸಭಾ ವಿಶೇಷ ಅಧಿವೇಶನ ಶುರುವಾಗಲಿದ್ದು, ಈ ಅಧಿವೇಶನದಲ್ಲಿ ಮತ್ತೆ ಕ್ಷೇತ್ರ ಪುನರ್ ವಿಂಗಡಣೆಯ ಬಗ್ಗೆ ಚರ್ಚೆ ನಡೆಸುವ ಬಗ್ಗೆ ಎನ್ಡಿಎ ನಿರ್ಧರಿಸಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಇಂಡಿಯ ಬಣದ ಮಿತ್ರಪಕ್ಷವಾದ ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಕೇಂದ್ರ ಸರ್ಕಾರದ ಕ್ಷೇತ್ರ ಮರುವಿಂಗಡಣೆಗೆ ತನ್ನ ಬೆಂಬಲ ಘೋಷಿಸಲು ನಿರ್ಧರಿಸಿದೆ. ಇದು ಇಂಡಿಯ ಬಣಕ್ಕೆ ದೊಡ್ಡ ಹೊಡೆತ ನೀಡಿದೆ.
ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯನ್ನು ಬೆಂಬಲಿಸಲು ನಿರ್ಧರಿಸಿದೆ ಎಂದು ಪಕ್ಷದ ನಾಯಕ ಜಿತೇಂದ್ರ ಅವ್ಹಾದ್ ಇಂದು ಮುಂಬೈನಲ್ಲಿ ಶರದ್ ಪವಾರ್ ಅವರನ್ನು ಭೇಟಿಯಾದ ಬಳಿಕ ತಿಳಿಸಿದ್ದಾರೆ. ನವೆಂಬರ್ 30ರಿಂದ ಡಿಸೆಂಬರ್ 3ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಸರ್ಕಾರವು ಉದ್ದೇಶಿತ ವಿಧೇಯಕವನ್ನು ಕೈಗೆತ್ತಿಕೊಳ್ಳುವ ನಿರೀಕ್ಷೆಯಿರುವ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ.
ಇದನ್ನೂ ಓದಿ: ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಕಾಂಗ್ರೆಸ್ ವಿರೋಧ: 3 ಪ್ರಮುಖ ಬೇಡಿಕೆ ಮುಂದಿಟ್ಟ ಪ್ರತಿಪಕ್ಷ
ಶರದ್ ಪವಾರ್ ದಾಖಲಾಗಿರುವ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿತೇಂದ್ರ ಅವ್ಹಾದ್, ಎನ್‌ಸಿಪಿ ಮುಖ್ಯಸ್ಥರೊಂದಿಗಿನ ಚರ್ಚೆಯು ನಿರ್ದಿಷ್ಟವಾಗಿ ಪಕ್ಷದ ಅಧಿಕೃತ ನಿಲುವಿನ ಬಗ್ಗೆ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕ್ಷೇತ್ರ ಪುನರ್ ವಿಂಗಡಣೆಯು ಸಾಂವಿಧಾನಿಕ ಅಗತ್ಯವಾಗಿದೆ ಮತ್ತು ಪಕ್ಷವು ಈ ಪ್ರಕ್ರಿಯೆಯನ್ನು ಬೆಂಬಲಿಸುತ್ತದೆ ಎಂಬುದು ಒಟ್ಟಾರೆ ಅಭಿಪ್ರಾಯವಾಗಿತ್ತು ಎಂದು ಅವರು ಹೇಳಿದ್ದಾರೆ.
ಶರದ್ ಪವಾರ್ ಅವರೊಂದಿಗಿನ ಚರ್ಚೆಯನ್ನು ವಿವರಿಸಿದ ಅವ್ಹಾದ್, “ಈ ಚರ್ಚೆಯು ನಮ್ಮ ಪಕ್ಷದ ಅಧಿಕೃತ ನಿಲುವಿನ ಬಗ್ಗೆ ಇರಲಿಲ್ಲ. ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯು ಸಾಂವಿಧಾನಿಕ ಅಗತ್ಯವಾಗಿದೆ ಎಂಬ ಸಾಮಾನ್ಯ ಅಂಶವನ್ನು ಪ್ರಸ್ತಾಪಿಸಲಾಯಿತು. ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯನ್ನು ಬೆಂಬಲಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಮತ್ತು ನಾವು ಖಂಡಿತವಾಗಿಯೂ ಅದನ್ನು ಬೆಂಬಲಿಸುತ್ತೇವೆ. ನಾವು ಕ್ಷೇತ್ರ ಪುನರ್ ವಿಂಗಡಣೆಯನ್ನು ಬೆಂಬಲಿಸುತ್ತೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಲೋಕಸಭೆಯಲ್ಲಿ ತಮಿಳುನಾಡಿನ ಪಾಲಿನ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ; ಸ್ಟಾಲಿನ್ ಖಡಕ್ ಸಂದೇಶ
ಈ ವಿಧೇಯಕಕ್ಕೆ ಪಕ್ಷದ ಬೆಂಬಲ ನೀಡಲು ಎನ್‌ಸಿಪಿ-ಎಸ್‌ಪಿ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಈ ಹಿಂದೆ 3 ಷರತ್ತುಗಳನ್ನು ವಿಧಿಸಿದ್ದರು.
ದೇಶಾದ್ಯಂತ ಲೋಕಸಭಾ ಸ್ಥಾನಗಳನ್ನು ಶೇ. 50ರಷ್ಟು ಹೆಚ್ಚಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಸಂಸತ್ತಿನ ವಿಸ್ತರಣೆ ಮತ್ತು ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಇಂಡಿಯ ಬಣದ ಪಕ್ಷಗಳು ಈ ಕ್ರಮವನ್ನು ವಿರೋಧಿಸಿವೆ.
ಹಾಗೇ, ಸಂಸತ್ ಅಧಿವೇಶನದಲ್ಲಿ ವಿರೋಧ ಪಕ್ಷಗಳ ಕಾರ್ಯತಂತ್ರದ ಕುರಿತು ಚರ್ಚಿಸಲು ಶನಿವಾರ ನಿಗದಿಯಾಗಿರುವ ಇಂಡಿಯ ಬಣದ ಸಭೆಯಲ್ಲಿ ಪಕ್ಷವು ಭಾಗವಹಿಸಲಿದೆ ಎಂದು ಅವ್ಹಾದ್ ಖಚಿತಪಡಿಸಿದ್ದಾರೆ. ತಮ್ಮ ತಂದೆ ಶರದ್ ಪವಾರ್ ಅವರ ಅನಾರೋಗ್ಯದ ಕಾರಣ ತಾವು ಸಭೆಗೆ ಗೈರಾಗುವುದಾಗಿ, ಆದರೆ ಪಕ್ಷವು ತನ್ನ ಸಂಸದರನ್ನು ಕಳುಹಿಸಲಿದೆ ಎಂದು ಸುಳೆ ಈ ಹಿಂದೆ ತಿಳಿಸಿದ್ದರು. ನವೆಂಬರ್ 30ರಿಂದ ಸದನದಲ್ಲಿ ಹಾಜರಿರುವಂತೆ ಸೂಚಿಸಿ ಎನ್‌ಸಿಪಿ-ಎಸ್‌ಪಿ ತನ್ನ 8 ಲೋಕಸಭಾ ಸಂಸದರಿಗೆ ವಿಪ್ ಜಾರಿ ಮಾಡಿದೆ. ಎನ್‌ಸಿಪಿ ರಾಜ್ಯಸಭೆಯಲ್ಲಿ ಒಬ್ಬರು ಸದಸ್ಯರನ್ನು ಹೊಂದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ