ಬಿಜೆಪಿಯಿಂದ ಪವರ್ ಜಿಹಾದ್; ಔರಂಗಜೇಬ್ ಅಭಿಮಾನಿಗಳ ಕ್ಲಬ್ ಎಂದ ಅಮಿತ್ ಶಾಗೆ ಉದ್ಧವ್ ಠಾಕ್ರೆ ತಿರುಗೇಟು
ಮಹಾರಾಷ್ಟ್ರದಲ್ಲಿ ಶಿವಸೇನೆ ಉದ್ಧವ್ ಠಾಕ್ರೆ ಬಣ ಹಾಗೂ ಬಿಜೆಪಿ ನಡುವೆ ಮತ್ತೆ ನೇರ ಗುದ್ದಾಟ ನಡೆದಿದೆ. ಮಹಾರಾಷ್ಟ್ರದ ಶಿವಸೇನೆ (ಉದ್ಧವ್ ಠಾಕ್ರೆ ಬಣ) ಮುಖ್ಯಸ್ಥ ಉದ್ಧವ್ ಠಾಕ್ರೆ ಇಂದು ಬಿಜೆಪಿಯು ಅಧಿಕಾರದಲ್ಲಿ ಇರಲು ರಾಜಕೀಯ ಪಕ್ಷಗಳನ್ನು ಒಡೆಯುವ ಮೂಲಕ "ಪವರ್ ಜಿಹಾದ್"ನಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ.
ಮುಂಬೈ: ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಇಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಮಹಾರಾಷ್ಟ್ರದಲ್ಲಿ ಸರ್ಕಾರದ ಮೇಲೆ ಹಿಡಿತ ಸಾಧಿಸಲು ರಾಜಕೀಯ ಪಕ್ಷಗಳನ್ನು ಒಡೆಯುವ ಮೂಲಕ “ಪವರ್ ಜಿಹಾದ್”ನಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ. “ಔರಂಗಜೇಬ್ ಅಭಿಮಾನಿಗಳ ಕ್ಲಬ್” ಮುಖ್ಯಸ್ಥರು ಎಂಬ ಕೇಂದ್ರ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು ಪಾಣಿಪತ್ ಯುದ್ಧದಲ್ಲಿ ಮರಾಠರನ್ನು ಸೋಲಿಸಿದ ಆಫ್ಘನ್ ದೊರೆ ಅಹ್ಮದ್ ಶಾ ಅಬ್ದಾಲಿಯ ‘ರಾಜಕೀಯ ವಂಶಸ್ಥರು’ ಎಂದು ಠಾಕ್ರೆ ಅಮಿತ್ ಶಾ ಅವರನ್ನು ಲೇಬಲ್ ಮಾಡಿದರು.
ಅಹ್ಮದ್ ಶಾ ಅಬ್ದಾಲಿ ಕೂಡ ಅಮಿತ್ ಶಾ ಅವರಂತೆಯೇ ಒಬ್ಬ ಶಾ. ನವಾಜ್ ಷರೀಫ್ ಅವರೊಂದಿಗೆ ಕೇಕ್ ತಿನ್ನುವವರು ನಮಗೆ ಹಿಂದುತ್ವದ ಬಗ್ಗೆ ಕಲಿಸುತ್ತಾರೆ ಎಂದು ಉದ್ಧವ್ ಠಾಕ್ರೆ ಲೇವಡಿ ಮಾಡಿದ್ದಾರೆ. ಈ ವೇಳೆ ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದ ಉದ್ಧವ್ ಠಾಕ್ರೆ, ಶಿವಸೇನೆ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ)ಯಲ್ಲಿನ ಭಿನ್ನಾಭಿಪ್ರಾಯಗಳನ್ನು ಬಳಸಿಕೊಂಡು ಬಿಜೆಪಿ ನಾಯಕರು ಪಕ್ಷಗಳೊಳಗೆ ಒಡಕು ಉಂಟುಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: Wayanad Landslide: ವಯನಾಡಿಗೆ ಒಮ್ಮೆಯೂ ರೆಡ್ ಅಲರ್ಟ್ ನೀಡಿಲ್ಲ; ಅಮಿತ್ ಶಾ ಆರೋಪಕ್ಕೆ ಕೇರಳ ಸಿಎಂ ತಿರುಗೇಟು
ಪುಣೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ, ನಾವು ನಮ್ಮ ಹಿಂದುತ್ವವನ್ನು ವಿವರಿಸಿದ ನಂತರ ಮುಸ್ಲಿಮರು ನಮ್ಮೊಂದಿಗಿದ್ದರೆ ಬಿಜೆಪಿ ಪ್ರಕಾರ ನಾವು ಔರಂಗಜೇಬ್ ಅಭಿಮಾನಿಗಳ ಸಂಘ. ಹಾಗಾದರೆ ನೀವು ಮಾಡುತ್ತಿರುವುದು ಪವರ್ ಜಿಹಾದ್ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜುಲೈ 21ರಂದು ಭಾಷಣ ಮಾಡುವಾಗ ಅಮಿತ್ ಶಾ ಅವರು ಉದ್ಧವ್ ಠಾಕ್ರೆ ವಿರುದ್ಧ ಕಟುವಾದ ವಾಗ್ದಾಳಿ ನಡೆಸಿದ್ದರು. ಅವರನ್ನು ‘ಔರಂಗಜೇಬ್ ಅಭಿಮಾನಿಗಳ ಕ್ಲಬ್’ ಎಂದು ಕರೆದಿದ್ದರು. ಪುಣೆಯಲ್ಲಿ ನಡೆದ ಬಿಜೆಪಿಯ ರಾಜ್ಯ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ, 26/11 ಉಗ್ರ ದಾಳಿಯ ಅಪರಾಧಿ ಅಜ್ಮಲ್ ಕಸಬ್‌ಗೆ ಬಿರಿಯಾನಿ ಬಡಿಸಿದವರ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕಾಗಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ