ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಅಧಿಕಾರ ಸ್ಥಾಪನೆಯತ್ತ ಬಿಜೆಪಿ; ನಿಚ್ಚಳ ಬಹುಮತ ಬಹುತೇಕ ನಿಶ್ಚಿತ

BJP set to form govt in West Bengal: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಇಂದಿನ (ಮೇ 4, 2026) ಮತ ಎಣಿಕೆಯ ಆರಂಭಿಕ ಟ್ರೆಂಡ್‌ಗಳಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಭರ್ಜರಿ ಮುನ್ನಡೆ ಸಾಧಿಸಿದ್ದು, ಮ್ಯಾಜಿಕ್ ನಂಬರ್ ದಾಟಿ ಬಹುಮತದತ್ತ ಮುನ್ನುಗ್ಗುತ್ತಿದೆ. ಕಳೆದ ಚುನಾವಣೆಯಲ್ಲಿ 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯಭೇರಿ ಸಾಧಿಸಿದ್ದ ಟಿಎಂಸಿ ಈ ಬಾರಿ 100 ಆಸುಪಾಸು ಸಂಖ್ಯೆಗೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಅಧಿಕಾರ ಸ್ಥಾಪನೆಯತ್ತ ಬಿಜೆಪಿ; ನಿಚ್ಚಳ ಬಹುಮತ ಬಹುತೇಕ ನಿಶ್ಚಿತ
ಬಿಜೆಪಿ
Image Credit source: PTI

Updated on: May 04, 2026 | 10:56 AM

ಕೋಲ್ಕತಾ, ಮೇ 4: ಪಶ್ಚಿಮ ಬಂಗಾಳದ ಒಟ್ಟು 294 ವಿಧಾನಸಭಾ ಕ್ಷೇತ್ರಗಳ (West Bengal assembly elections) ಪೈಕಿ ಚುನಾವಣೆ ಪೂರ್ಣಗೊಂಡ 293 ಕ್ಷೇತ್ರಗಳಲ್ಲಿ ಮತ ಎಣಿಕೆ ಇಂದು ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದೆ. ಬಂಗಾಳದಲ್ಲಿ ಮೊತ್ತಮೊದಲ ಬಾರಿಗೆ ಬಿಜೆಪಿ ಅಧಿಕಾರ ಸ್ಥಾಪಿಸುವ ಸನ್ನಾಹದಲ್ಲಿದೆ. ಕಳೆದ ಎರಡು ಚುನಾವಣೆಗಳಿಂದ ಬಂಗಾಳದಲ್ಲಿ ಸಾಕಷ್ಟು ಇದ್ದ ಕೇಸರಿ ಹವಾ ಈ ಬಾರಿ ಬಿಜೆಪಿಯನ್ನು ಗದ್ದುಗೆಗೆ ಏರಿಸುತ್ತಿದೆ. ಇತ್ತೀಚಿನ ಮಾಹಿತಿ ಪ್ರಕಾರ, ಬಹುಮತಕ್ಕೆ ಬೇಕಾದ ಮ್ಯಾಜಿಕ್ ನಂಬರ್ ಆದ 148 ಅನ್ನು ಬಿಜೆಪಿ ದಾಟುವ ಸಾಧ್ಯತೆ ದಟ್ಟವಾಗಿದೆ. ಸುಮಾರು 160ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.

ದೀದಿ ನೇತೃತ್ವದ ಟಿಎಂಸಿಗೆ ಹಿನ್ನಡೆ

ಕಳೆದ ಒಂದು ದಶಕದಿಂದ ಅಧಿಕಾರದಲ್ಲಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಸದ್ಯ 100ರ ಆಸುಪಾಸಿನಲ್ಲಿ ಸ್ಥಾನಗಳಲ್ಲಿ ಮುನ್ನಡೆ ಪಡೆದು ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಭವಾನಿಪುರ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಎದುರಿಸುತ್ತಿದ್ದಾರೆ. ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದರೂ, ನಂತರದ ಸುತ್ತುಗಳಲ್ಲಿ ಅಲ್ಪ ಮುನ್ನಡೆ ಸಾಧಿಸಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಈ ಒಂದು ಕ್ಷೇತ್ರಕ್ಕೆ ಮಾತ್ರ ಫಲಿತಾಂಶ ಇಂದು ಇಲ್ಲ; ಮೇ 21ಕ್ಕೆ ಮರುಮತದಾನ, ಮೇ 24ಕ್ಕೆ ಮತ ಎಣಿಕೆ

ಬಂಗಾಳದಲ್ಲಿ ಟಿಎಂಸಿ ಅಲೆ ಎದ್ದು ದೀದಿಯನ್ನು ಮುಖ್ಯಮಂತ್ರಿ ಗದ್ದುಗೆಗೆ ಕೂರಿಸುವಂತೆ ಮಾಡಿದ ನಂದಿಗ್ರಾಮದಲ್ಲಿ ಈಗ ಬಿಜೆಪಿಯ ಸುವೇಂದು ಹವಾ ಇದೆ. ಮಾಜಿ ಟಿಎಂಸಿ ನೇತಾರರಾದ ಸುವೇಂದು ಅಧಿಕಾರಿ ಅವರು ನಂದಿಗ್ರಾಮ ಕ್ಷೇತ್ರದಲ್ಲಿ ತಮ್ಮ ಮುನ್ನಡೆಯನ್ನು ಮುಂದುವರಿಸಿದ್ದಾರೆ.

ಹ್ಯುಮಾಯೂನ್ ಕಬೀರ್ ಅವರ ಹೊಸ ಪಕ್ಷ ಮತ್ತು ಎಡರಂಗ-ಕಾಂಗ್ರೆಸ್ ಮೈತ್ರಿಕೂಟ ಬಹುತೇಕ ನೆಲಕಚ್ಚಿವೆ. ಕಾಂಗ್ರೆಸ್ ಮೈತ್ರಿಕೂಟ ಕೇವಲ 1 ಸ್ಥಾನದಲ್ಲಿ ಮುನ್ನಡೆ ಹೊಂದಿದೆ.

ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶ ವಿವರ

ಒಟ್ಟು ವಿಧಾನಸಭಾ ಕ್ಷೇತ್ರಗಳು: 294

ಮತ ಎಣಿಕೆ ಆಗುತ್ತಿರುವುದು: 293

ಬಹುಮತಕ್ಕೆ ಬೇಕಾಗಿರುವುದು: 148 ಸ್ಥಾನ

  • ಎನ್​ಡಿಎ: 166 ಕ್ಷೇತ್ರಗಳಲ್ಲಿ ಮುನ್ನಡೆ
  • ಟಿಎಂಸಿ: 101 ಕ್ಷೇತ್ರಗಳಲ್ಲಿ ಮುನ್ನಡೆ
  • ಕಾಂಗ್ರೆಸ್-ಎಡರಂಗ: 0

ಬದಲಾವಣೆಗೆ ಕಾರಣವಾದ ಅಂಶಗಳು?

ಪಶ್ಚಿಮ ಬಂಗಾಳದಲ್ಲಿ ದೀದಿ ವಿರೋಧಿ ಅಲೆ ಏಳಲು ಮೂರು ಕಾರಣಗಳಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಮೊದಲನೆಯದು ಮತದಾರರ ಪಟ್ಟಿ ಪರಿಷ್ಕರಣೆ (SIR) ವಿಚಾರ. ಎರಡನೆಯದು ಹಿಂದೂ ಮತಗಳ ಧ್ರುವೀಕರಣ. ಮೂರನೆಯದು, ಆಡಳಿತ ವಿರೋಧಿ ಅಲೆ.

ಚುನಾವಣಾ ಆಯೋಗ ನಡೆಸಿದ ವಿಶೇಷ ತೀವ್ರ ಪರಿಷ್ಕರಣೆಯಿಂದ ಸುಮಾರು 89 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿತ್ತು. ಇದು ಚುನಾವಣಾ ಫಲಿತಾಂಶದ ಮೇಲೆ ದೊಡ್ಡ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ.

ಪಂಚರಾಜ್ಯಗಳು ಚುನಾವಣಾ ಫಲಿತಾಂಶ ನೇರ ವೀಕ್ಷಣೆ

ಸುವೇಂದು ಅಧಿಕಾರಿ ಹೇಳಿರುವಂತೆ, ಈ ಬಾರಿ ಹಿಂದೂ ಮತಗಳ ಧ್ರುವೀಕರಣ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿದೆ. ಸುದೀರ್ಘ ಕಾಲದ ಟಿಎಂಸಿ ಆಡಳಿತದ ವಿರುದ್ಧದ ಅಸಮಾಧಾನ ಮತ್ತು ಭ್ರಷ್ಟಾಚಾರದ ಆರೋಪಗಳು ಬಿಜೆಪಿಗೆ ವರದಾನವಾಗಿವೆ.

ಸಂಜೆ ವೇಳೆಗೆ ಪೂರ್ಣ ಪ್ರಮಾಣದ ಫಲಿತಾಂಶ ಹೊರಬೀಳಲಿದ್ದು, ಬಿಜೆಪಿ ಅಧಿಕೃತವಾಗಿ ಬಹುಮತ ಪಡೆದರೆ ಪಶ್ಚಿಮ ಬಂಗಾಳದ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ತಂತ್ರಗಾರಿಕೆ ಬಂಗಾಳದ ಮಣ್ಣಿನಲ್ಲಿ ಈ ಬಾರಿ ಕೆಲಸ ಮಾಡಿದಂತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us