AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಶ್ಚಿಮ ಬಂಗಾಳದ ಈ ಒಂದು ಕ್ಷೇತ್ರಕ್ಕೆ ಮಾತ್ರ ಫಲಿತಾಂಶ ಇಂದು ಇಲ್ಲ; ಮೇ 21ಕ್ಕೆ ಮರುಮತದಾನ, ಮೇ 24ಕ್ಕೆ ಮತ ಎಣಿಕೆ

ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೆರಿ ವಿಧಾನಸಭಾ ಚುನಾವಣೆಗಳ ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಆದರೆ, ಪಶ್ಚಿಮ ಬಂಗಾಳದ ಫಾಲ್ಟಾ ಕ್ಷೇತ್ರದಲ್ಲಿ ಹಿಂಸಾಚಾರದಿಂದ ಮರುಮತದಾನಕ್ಕೆ ಆದೇಶಿಸಲಾಗಿದೆ. ಮೇ 21ರಂದು ಮರುಮತದಾನ ನಡೆದು, ಮೇ 24ರಂದು ಫಲಿತಾಂಶ ಪ್ರಕಟವಾಗಲಿದೆ. ಉಳಿದ 293 ಕ್ಷೇತ್ರಗಳ ಫಲಿತಾಂಶ ಮೇ 4ರಂದೇ ಹೊರಬೀಳಲಿದೆ.

ಪಶ್ಚಿಮ ಬಂಗಾಳದ ಈ ಒಂದು ಕ್ಷೇತ್ರಕ್ಕೆ ಮಾತ್ರ ಫಲಿತಾಂಶ ಇಂದು ಇಲ್ಲ; ಮೇ 21ಕ್ಕೆ ಮರುಮತದಾನ, ಮೇ 24ಕ್ಕೆ ಮತ ಎಣಿಕೆ
ಫಾಲ್ಟಾ ಕ್ಷೇತ್ರದಲ್ಲಿ ಘರ್ಷಣೆ
ಸುಗ್ಗನಹಳ್ಳಿ ವಿಜಯಸಾರಥಿ
| Edited By: |

Updated on:May 04, 2026 | 7:30 AM

Share

ಕೋಲ್ಕತಾ, ಮೇ 3: ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಮ್ ಮತ್ತು ಪುದುಚೆರಿಯ ವಿಧಾನಸಭಾ ಚುನಾವಣೆಗಳ ಫಲಿತಾಂಶ ನಾಳೆ ಸೋಮವಾರ (ಮೇ 4) ಪ್ರಕಟವಾಗಲಿದೆ. ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಸಖತ್ ಜಿದ್ದಾಜಿದ್ದಿ ನಡೆಯಿತು. ಹಲವೆಡೆ ಹಿಂಸಾಚಾರಗಳಾದವು. ಹಲವು ಬೂತ್​ಗಳಲ್ಲಿ ಮರುಮತದಾನ ಕೂಡ ಮಾಡಲಾಗಿದೆ. ಆದರೂ ಕೂಡ ಮೇ 4ರಂದು ಪಶ್ಚಿಮ ಬಂಗಾಳದ ಎಲ್ಲಾ ಕ್ಷೇತ್ರಗಳಿಗೂ ಫಲಿತಾಂಶ ಪ್ರಕಟವಾಗುತ್ತಿಲ್ಲ. ಒಂದು ಕ್ಷೇತ್ರದ ಫಲಿತಾಂಶ ಬಾಕಿ ಉಳಿಯಲಿದೆ.

ಸೌತ್ 24 ಪರಗಣ ಜಿಲ್ಲೆಯಲ್ಲಿರುವ ಫಾಲ್ಟಾ ವಿಧಾನಸಭಾ ಕ್ಷೇತ್ರದ ಎಲ್ಲಾ 285 ಮತಗಟ್ಟೆಗಳಲ್ಲಿ ಮರುಮತದಾನ ನಡೆಸಲು ಚುನಾವಣಾ ಆಯೋಗ ಆದೇಶಿಸಿದೆ. ಮೇ 21ರಂದು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಮೇ 24ರಂದು ಫಲಿತಾಂಶ ಪ್ರಕಟವಾಗಲಿದೆ. ಬಂಗಾಳದ ಉಳಿದ 293 ಕ್ಷೇತ್ರಗಳಿಗೆ ಮೇ 4ರಂದು ಫಲಿತಾಂಶ ಪ್ರಕಟವಾಗಿ, ಮೂರು ವಾರಗಳ ನಂತರ ಫಾಲ್ಟಾದ ಫಲಿತಾಂಶ ಹೊರಬೀಳುತ್ತದೆ.

ಇದನ್ನೂ ಓದಿ: ಮಿಳುನಾಡು, ಬಂಗಾಳ ಸೇರಿ 5 ರಾಜ್ಯಗಳ ಚುನಾವಣೆ ಮತ ಎಣಿಕೆ ಯಾವಾಗ? ಫಲಿತಾಂಶ ನೋಡುವುದು ಹೇಗೆ?

ಫಾಲ್ಟಾ ಕ್ಷೇತ್ರದಲ್ಲಿ ಏಪ್ರಿಲ್ 29ರಂದು ಮತದಾನ ಆಗಿತ್ತು. ಅಂದು ಕ್ಷೇತ್ರದ ಹಲವೆಡೆ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಘರ್ಷಣೆ, ಹಿಂಸಾಚಾರಗಳಾದ ವರದಿಯಾಗಿತ್ತು. ಈ ಕ್ಷೇತ್ರದಲ್ಲಿ ಟಿಎಂಸಿಯಿಂದ ಜಹಾಂಗೀರ್ ಖಾನ್, ಬಿಜೆಪಿಯಿಂದ ದೇಬಂಗಶು ಪಾಂಡ, ಕಾಂಗ್ರೆಸ್​ನಿಂದ ಅಬ್ದುರ್ ರಜಾಕ್ ಮೊಲ್ಲಾ ಮತ್ತು ಸಿಪಿಐಎಂನಿಂದ ಸಂಭುನಾಥ್ ಕುರ್ಮಿ ಮೊದಲಾದವರು ಸ್ಪರ್ಧಿಸಿದ್ದಾರೆ. ಪರಸ್ಪರ ಆರೋಪ, ಪ್ರತ್ಯಾರೋಪಗಳು ಜೋರಾಗಿ ನಡೆದಿವೆ.

ಕ್ಷೇತ್ರದ ಕೆಲ ಮತಗಟ್ಟೆಗಳಲ್ಲಿ ಇವಿಎಂ ಮೆಷೀನ್​ಗಳಲ್ಲಿ ಬಿಜೆಪಿ ಪಕ್ಷದ ಚಿಹ್ನೆಯನ್ನು ಟೇಪ್​ನಿಂದ ಮುಚ್ಚಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಫಾಲ್ಟಾದ 144 ಮತ್ತು 189ನೇ ಮತಗಟ್ಟೆಯಲ್ಲಿ ಇದು ಆಗಿದೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಆಪಾದಿಸಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ನಡೆಯಲಿಲ್ಲ ಬಿಜೆಪಿ ಕಮಾಲ್; ಡಿಎಂಕೆ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ 

ಬಹಳ ಸೂಕ್ಷ್ಮವೆಂದು ಪರಿಗಣಿಸಲಾಗಿರುವ ಫಾಲ್ಟ ಕ್ಷೇತ್ರದಲ್ಲಿ ಮರುಮತದಾನಕ್ಕಾಗಿ ಎಲ್ಲಾ ರೀತಿಯಲ್ಲೂ ಸಜ್ಜಾಗಿರುವಂತೆ ಮತ್ತು ಅಗತ್ಯ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಚುನಾವಣಾ ಆಯೋಗ ಆದೇಶಿಸಿದೆ. ಬಂಗಾಳದ ಇನ್ನೂ ಕೆಲ ಕ್ಷೇತ್ರಗಳ ಕೆಲ ಬೂತ್​ಗಳಲ್ಲಿ ಮರುಮತದಾನಗಳಾಗಿವೆ. ಫಾಲ್ಟಾ ಹೊರತುಪಡಿಸಿ ಉಳಿದ 293 ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ನಾಳೆ ಪ್ರಕಟವಾಗುತ್ತದೆ. ಅಸ್ಸಾಂ, ತಮಿಳುನಾಡು, ಕೇರಳ, ಪುದುಚೆರಿಯ ಎಲ್ಲಾ ಕ್ಷೇತ್ರಗಳಿಗೂ ನಾಳೆಯೇ ಫಲಿತಾಂಶ ಪ್ರಕಟವಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:13 pm, Sun, 3 May 26

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More