AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂಡವಾಳ ಯೋಜನೆಗಳ ವೆಚ್ಚಕ್ಕಾಗಿ ಕೇಂದ್ರದಿಂದ ಹೆಚ್ಚುವರಿಯಾಗಿ 15,000 ಕೋಟಿ ರೂ. ಬಿಡುಗಡೆ

ಬಂಡವಾಳ ಯೋಜನೆಗಳ ಮೇಲೆ ಹೆಚ್ಚುವರಿಯಾಗಿ ವೆಚ್ಚ ಮಾಡುವುದಕ್ಕೆ 15,000 ಕೋಟಿ ರೂಪಾಯಿಯ ಬಡ್ಡಿರಹಿತವಾದ 50 ವರ್ಷಗಳ ಸುದೀರ್ಘಾವಧಿಯ ಸಾಲವನ್ನು ರಾಜ್ಯ ಸರ್ಕಾರಗಳಿಗೆ ಕೇಂದ್ರದಿಂದ ಘೋಷಿಸಲಾಗಿದೆ.

ಬಂಡವಾಳ ಯೋಜನೆಗಳ ವೆಚ್ಚಕ್ಕಾಗಿ ಕೇಂದ್ರದಿಂದ ಹೆಚ್ಚುವರಿಯಾಗಿ 15,000 ಕೋಟಿ ರೂ. ಬಿಡುಗಡೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ (ಸಂಗ್ರಹ ಚಿತ್ರ)
Srinivas Mata
|

Updated on: Apr 30, 2021 | 3:25 PM

Share

ಬಂಡವಾಳ ಯೋಜನೆಗಳಿಗೆ ವೆಚ್ಚ ಮಾಡುವ ಸಲುವಾಗಿ 50 ವರ್ಷಗಳ ಸುದೀರ್ಘ ಅವಧಿಗೆ ಬಡ್ಡಿ ಇಲ್ಲದಂತೆ ರಾಜ್ಯ ಸರ್ಕಾರಗಳಿಗೆ 15,000 ಕೋಟಿ ರೂಪಾಯಿಯನ್ನು ಹೆಚ್ಚುವರಿಯಾಗಿ ಸಾಲ ಒದಗಿಸಲು ಕೇಂದ್ರ ಹಣಕಾಸು ಸಚಿವಾಲಯವು ನಿರ್ಧಾರ ಮಾಡಿದೆ. ವೆಚ್ಚ ಇಲಾಖೆಯು ಈ ಸಂಬಂಧವಾಗಿ ಹೊಸ ಮಾರ್ಗದರ್ಶಿ ಸೂತ್ರವನ್ನು ಬಿಡುಗಡೆ ಮಾಡಿದೆ. 2021- 22 ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ ಬಂಡವಾಳ ವೆಚ್ಚಕ್ಕೆ ನೀಡುವ ಹಣಕಾಸು ನೆರವು ಯೋಜನೆಯ ಮಾರ್ಗದರ್ಶಿ ಸೂತ್ರ ಇದಾಗಿದೆ ಎಂದು ತಿಳಿಸಿದೆ. ಕೇಂದ್ರ ಬಜೆಟ್ ಭಾಷಣದ ವೇಳೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡಿದ ಪ್ರಕಾರ, ಮೂಲಸೌಕರ್ಯದ ಮೇಲೆ ಹೆಚ್ಚು ವೆಚ್ಚ ಮಾಡಲು ಪ್ರೋತ್ಸಾಹ ನೀಡಲಾಗುತ್ತದೆ. ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳಿಂದ ಬಂಡವಾಳ ಹಿಂತೆಗೆತಕ್ಕೆ ಪ್ರೋತ್ಸಾಹಿಸಲಾಗುತ್ತದೆ.

ಬಂಡವಾಳ ವೆಚ್ಚದಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ಅದರಲ್ಲೂ ಬಡವರ ಮತ್ತು ಕೌಶಲ ಇಲ್ಲದವರಿಗೆ ಸಹಾಯ ಆಗುತ್ತದೆ. ಭವಿಷ್ಯದಲ್ಲಿ ಆರ್ಥಿಕತೆಯ ಉತ್ಪಾದನಾ ಸಾಮರ್ಥ್ಯ ವಿಸ್ತರಣೆ ಆಗುತ್ತದೆ. ಇದೆಲ್ಲದರ ಫಲವಾಗಿ ಆರ್ಥಿಕತೆ ಬೆಳವಣಿಗೆ ದರ ವೃದ್ಧಿ ಆಗುತ್ತದೆ. ಕೇಂದ್ರ ಸರ್ಕಾರದ ಆರ್ಥಿಕ ಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲದಿದ್ದರೂ ಕಳೆದ ವರ್ಷ, ರಾಜ್ಯಗಳ ಬಂಡವಾಳ ವೆಚ್ಚಕ್ಕೆ ವಿಶೇಷ ಅನುದಾನ ನೀಡುವ ಯೋಜನೆ ಆರಂಭಿಸಿತು.

2020-21ನೇ ಸಾಲಿಗೆ 12,000 ಕೋಟಿ ರೂಪಾಯಿ ಈ ಯೋಜನೆ ಅಡಿಯಲ್ಲಿ ರಾಜ್ಯಗಳಿಗೆ 50 ವರ್ಷಗಳ ಅವಧಿಗೆ ಬಡ್ಡಿರಹಿತವಾದ ಸಾಲವನ್ನು ನೀಡಲಾಗುತ್ತದೆ. 12,000 ಕೋಟಿ ರೂಪಾಯಿಯನ್ನು 2020-21ನೇ ಸಾಲಿಗೆ ಅಂತ ಮೀಸಲಿಡಲಾಗಿತ್ತು. ಅದರಲ್ಲಿ 11,830.29 ಕೋಟಿಯನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲಾಯಿತು. ಇದರಿಂದಾಗಿ ಕೊರೊನಾ ಬಿಕ್ಕಟ್ಟಿನ ವರ್ಷದಲ್ಲಿ ಬಂಡವಾಳ ವೆಚ್ಚವನ್ನು ಸರಿತೂಗಿಸಲು ಸಹಾಯ ಆಗಿದೆ. ಈ ಯೋಜನೆಗೆ ಸಿಕ್ಕಿರುವ ಸಕಾರಾತ್ಮಕ ಸ್ಪಂದನೆಯ ಕಾರಣಕ್ಕೆ ಮತ್ತು ರಾಜ್ಯ ಸರ್ಕಾರಗಳ ಮನವಿ ಮೇರೆಗೆ ಕೇಂದ್ರ ಸರ್ಕಾರವು 2021-22ಕ್ಕೂ ಮುಂದುವರಿಸಲು ತೀರ್ಮಾನಿಸಿದೆ.

2021- 22ನೇ ಸಾಲಿನಲ್ಲಿ ರಾಜ್ಯಗಳಿಗೆ ಬಂಡವಾಳ ವೆಚ್ಚಕ್ಕೆ ವಿಶೇಷ ಅನುದಾನ ನೀಡುವ ಯೋಜನೆಯಲ್ಲಿ 3 ಭಾಗಗಳಿವೆ: ಭಾಗ 1: ಇದು ಈಶಾನ್ಯ ರಾಜ್ಯಗಳು ಮತ್ತು ಬೆಟ್ಟ ಪ್ರದೇಶದ ರಾಜ್ಯಗಳಿಗೆ ಇರುವಂಥದ್ದು. ಈ ಭಾಗಕ್ಕೆ 2600 ಕೋಟಿ ರೂಪಾಯಿ ಎತ್ತಿಡಲಾಗಿದೆ. ಇದರಲ್ಲಿ ಅಸ್ಸಾಂ, ಹಿಮಾಚಲ್ ಪ್ರದೇಶ್ ಮತ್ತು ಉತ್ತರಾಖಂಡ್​ಗೆ ತಲಾ 400 ಕೋಟಿ ಸಿಗುತ್ತದೆ. ಇನ್ನು ಈ ಗುಂಪಿನಲ್ಲಿ ಬಾಕಿ ಉಳಿದ ರಾಜ್ಯಗಳಿಗೆ ತಲಾ 200 ಕೋಟಿ ರೂಪಾಯಿ ಸಿಗುತ್ತದೆ.

ಭಾಗ 2: ಈ ಭಾಗದಲ್ಲಿ ಮೊದಲ ಭಾಗದಿಂದ ಹೊರಗೆ ಉಳಿದ ರಾಜ್ಯಗಳು ಬರುತ್ತವೆ. ಈ ಭಾಗಕ್ಕೆ 7400 ಕೋಟಿ ರೂಪಾಯಿ ಎತ್ತಿಡಲಾಗಿದೆ. 2021- 22ನೇ ಸಾಲಿಗೆ 15ನೇ ಹಣಕಾಸು ಆಯೋಗದ ಅನುಸಾರ ಆಯಾ ರಾಜ್ಯಗಳ ಕೇಂದ್ರ ತೆರಿಗೆಯ ಪಾಲು ಎಷ್ಟಿದೆಯೋ ಅದರಂತೆ ಹಂಚಲಾಗುತ್ತದೆ.

ಭಾಗ 3: ರಾಜ್ಯ ಸಾರ್ವಜನಿಕ ಸಂಸ್ಥೆಗಳ (SPSE’s) ಬಂಡವಾಳ ಹಿಂತೆಗೆತ ಮತ್ತು ಮೂಲಸೌಕರ್ಯ ಆಸ್ತಿಗಳನ್ನು ನಗದೀಕರಣ/ಪುನರ್​ಬಳಕೆ ಮಾಡಿಕೊಳ್ಳುವುದಕ್ಕೆ ರಾಜ್ಯಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ಈ ಯೋಜನೆಗೆ 5000 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಈ ಯೋಜನೆ ಅಡಿಯಲ್ಲಿ ಮಾರಾಟ ಮಾಡಿದ್ದರಿಂದ ಅವರು ಪಡೆಯುವ ಮೊತ್ತದ ಶೇ 33ರಿಂದ ಶೇ 100ರ ತನಕ ರಾಜ್ಯಗಳಿಗೆ ಬಡ್ಡಿ ಇಲ್ಲದಂತೆ 50 ವರ್ಷಗಳ ಅವಧಿಗೆ ಸಾಲ ನೀಡಲಾಗುತ್ತದೆ. ಅದು ಆಸ್ತಿ ಮಾರಾಟ, ಲಿಸ್ಟಿಂಗ್ ಮತ್ತು ಬಂಡವಾಳ ಹಿಂತೆಗೆತದ ಮೂಲಕ.

ಭಾರತ ಸರ್ಕಾರದಿಂದ ಬಿಡುಗಡೆ ಮಾಡುವ ಈ ಹಣವನ್ನು ಹೊಸ ಅಥವಾ ಈಗಾಗಲೇ ನಡೆಯುತ್ತಿರುವ ಬಂಡವಾಳ ಯೋಜನೆಗಳಿಗೆ ಬಳಸಬಹುದು. ಅದೂ ರಾಜ್ಯಗಳ ದೀರ್ಘಾವಧಿ ಅನುಕೂಲದ ಸಲುವಾಗಿ. ಇನ್ನು ಈಗಾಗಲೇ ನಡೆಯುತ್ತಿರುವ ಬಂಡವಾಳ ಯೋಜನೆಗಳ ಬಾಕಿ ಬಿಲ್ ಪಾವತಿಗೂ ಮೊತ್ತವನ್ನು ಬಳಕೆ ಮಾಡಬಹುದು ಎಂದು ತಿಳಿಸಲಾಗಿದೆ.

(ಮಾಹಿತಿ ಕೃಪೆ: ವಾರ್ತಾ ಇಲಾಖೆ)

ಇದನ್ನೂ ಓದಿ: Budget 2021 | ಕೇಂದ್ರ ಬಜೆಟ್ ಏಕೆ ಚೆನ್ನಾಗಿದೆ ಎನ್ನಲು ಬಿ.ಎಸ್​.ಯಡಿಯೂರಪ್ಪ ಕೊಟ್ಟಿರುವ 10 ಕಾರಣಗಳು

(Finance ministry announced additional Rs 15,000 crore for capital expenditure of states under the “Scheme of Financial Assistance to States for Capital Expenditure”)