
ನವದೆಹಲಿ, ಡಿಸೆಂಬರ್ 27: ರಾಹುಲ್ ಗಾಂಧಿ ಅವರು ಜರ್ಮನಿ ಪ್ರವಾಸಕ್ಕೆ ಹೋಗಿದ್ದಾಗ ಭಾರತ ವಿರೋಧಿ ಶಕ್ತಿಗಳ ಸಂಪರ್ಕದಲ್ಲಿದ್ದರು ಎಂದು ಬಿಜೆಪಿ ಆರೋಪಿಸಿದೆ. ಜರ್ಮನಿಯಲ್ಲಿ ನಡೆದ ಗ್ಲೋಬಲ್ ಪ್ರೋಗ್ರೆಸ್ಸಿವ್ ಅಲಾಯನ್ಸ್ ಸಭೆಯಲ್ಲಿ ರಾಹುಲ್ ಗಾಂಧಿ ಉಪಸ್ಥಿತರಿದ್ದರು. ಇದು ಭಾರತ ವಿರೋಧಿ ಧೋರಣೆಗಳಿರುವ ಸಂಘಟನೆಯಾಗಿದೆ ಎಂದು ಬಿಜೆಪಿ ಟೀಕಿಸಿದೆ. ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಈ ವಿಚಾರ ಪ್ರಸ್ತಾಪಿಸಿ, ಕಾಂಗ್ರೆಸ್ ಪಕ್ಷದ ಬಣ್ಣ ಬಯಲಾಗಿದೆ ಎಂದಿದ್ದಾರೆ.
‘ರಾಹುಲ್ ಗಾಂಧಿ ಅವರ ಸಲಹೆಗಾರ ಸ್ಯಾಮ್ ಪಿತ್ರೋಡಾ ಅವರು ಕಾಂಗ್ರೆಸ್ ಪಕ್ಷದ ನಿಜ ಮುಖವನ್ನು ತೋರಿಸಿದ್ದಾರೆ. ಕಾಂಗ್ರೆಸ್ ಗ್ಲೋಬಲ್ ಪ್ರೋಗ್ರೆಸಿವ್ ಅಲಾಯನ್ಸ್ನ ಒಂದು ಭಾಗವಾಗಿರುವುದು, ಹಾಗೂ ಅದರ ಸಭೆಯಲ್ಲಿ ಪಾಲ್ಗೊಳ್ಳಲು ರಾಹುಲ್ ಗಾಂಧಿ ಜರ್ಮನಿಗೆ ಹೋಗಿದ್ದು, ಈ ವಿಚಾರಗಳನ್ನು ಸ್ಯಾಮ್ ಪಿತ್ರೋಡಾ ನಿನ್ನೆ ಸಂದರ್ಶನದಲ್ಲಿ ತಿಳಿಸಿದ್ದಾರೆ’ ಎಂದು ಸುಧಾಂಶು ತ್ರಿವೇದಿ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಆರೆಸ್ಸೆಸ್, ಬಿಜೆಪಿಯ ಸಂಘಟನಾ ಶಕ್ತಿ ಶ್ಲಾಘಿಸಿದ ಮಾಜಿ ಸಿಎಂ ದಿಗ್ವಿಜಯ ಸಿಂಗ್; ಕಾಂಗ್ರೆಸ್ಸನ್ನು ಕಿಚಾಯಿಸಿದ ಬಿಜೆಪಿ
‘ಭಾರತ ವಿರೋಧಿ ನಿಲುವು ಹೊಂದಿರುವ ಹಲವು ಸಂಘಟನೆಗಳ ಜಾಲದ ಭಾಗವಾಗಿರುವ ಸಂಘಟನೆಗೆ ಈ ಅಲಾಯನ್ಸ್ ಸಂಪರ್ಕ ಹೊಂದಿದೆ. ಗ್ಲೋಬಲ್ ಪ್ರೋಗ್ರೆಸ್ಸಿವ್ ಅಲಾಯನ್ಸ್ ಮತ್ತು ಕಾಂಗ್ರೆಸ್ ನಡುವೆ ಸಂಪರ್ಕ ಏನು ಎಂಬುದನ್ನು ಸ್ಯಾಮ್ ಪಿತ್ರೋಡ ತಿಳಿಸಿದ್ದಾರೆ. ಈ ಸಂಘಟನೆಯಲ್ಲಿ ಪಿತ್ರೋಡಾ ಸದಸ್ಯರಾಗಿದ್ದಾರೆ. ರಾಹುಲ್ ಗಾಂಧಿ ಅವರು ಅದರ ಪ್ರೆಸಿಡಿಯಂನಲ್ಲಿ (ಕಾರ್ಯಕಾರಿ ಸಮಿತಿ) ಇದ್ದಾರೆ. ಕಾಂಗ್ರೆಸ್ ಹೇಗೆ ಭಾರತ ವಿರೋಧಿ ಶಕ್ತಿಗಳ ಜೊತೆ ಕೈಜೋಡಿಸಿದೆ?’ ಎಂದು ಬಿಜೆಪಿ ಸಂಸದ ಪ್ರಶ್ನಿಸಿದ್ದಾರೆ.
ಸುಧಾಂಶು ತ್ರಿವೇದಿ ಮಾತನಾಡಿರುವುದು
#WATCH | Delhi: On Indian Overseas Congress Chairman Sam Pitroda’s latest statement, BJP MP Sudhanshu Trivedi says, “Rahul Gandhi’s long-time advisor, Sam Pitroda, who was also an advisor to his late father and the architect of his ideological mindset and psychology, has… pic.twitter.com/tKLnEMLTKe
— ANI (@ANI) December 27, 2025
‘ಕಾಂಗ್ರೆಸ್ ಈಗ ಮುಚ್ಚಿಡುವ ಪ್ರಯತ್ನವನ್ನೂ ಮಾಡುತ್ತಿಲ್ಲ. ಪ್ರಗತಿಪರತೆಯ ಹೆಸರಿನಲ್ಲಿ ವಿದೇಶಗಳಿಂದ ಫಂಡಿಂಗ್ ಪಡೆದ ವೈಚಾರಿಕ ಇಕೋಸಿಸ್ಟಂವೊಂದು ಭಾರತೀಯ ರಾಜಕಾರಣವನ್ನು ಇಷ್ಟು ಮುಕ್ತವಾಗಿ ಪ್ರಭಾವಿಸುತ್ತಿದೆಯಲ್ಲ. ಕಾಂಗ್ರೆಸ್ ಬಹಳ ಸಹಜವೆಂಬಂತೆ ಇದೆ. ಈ ಪ್ರಶ್ನೆಗಳಿಗೆ ರಾಹುಲ್ ಗಾಂಧಿ ಯಾವಾಗ ಉತ್ತರಿಸುತ್ತಾರೆ?’ ಎಂದು ಬಿಜೆಪಿ ನಾಯಕ ಕೇಳಿದ್ದಾರೆ.
ಇತ್ತೀಚೆಗೆ ರಾಹುಲ್ ಗಾಂಧಿ ಅವರು ಜರ್ಮನಿಗೆ ಭೇಟಿ ನೀಡಿದ್ದರು. ಅಲ್ಲಿಯ ಬಿಎಂಡಬ್ಲ್ಯು ಕಾರ್ ಘಟಕದಲ್ಲಿದ್ದ ವಿಡಿಯೋವೊಂದನ್ನು ಹಂಚಿಕೊಂಡು, ಭಾರತದಲ್ಲಿ ಉತ್ಪಾದನಾ ವಲಯ ಕುಂಠಿತಗೊಂಡಿದೆ ಎಂದು ಹೇಳಿದ್ದರು. ಇದೇ ಜರ್ಮನಿಯಲ್ಲೇ ಗ್ಲೋಬಲ್ ಪ್ರೋಗ್ರೆಸ್ಸಿವ್ ಅಲಾಯನ್ಸ್ನ ಮುಖ್ಯ ಕಚೇರಿ ಇರುವುದು.
ಇದನ್ನೂ ಓದಿ: ಭಾರತದ ತಂತ್ರಜ್ಞಾನ 2025: AI, ಸೆಮಿಕಂಡಕ್ಟರ್, ಸ್ವಾವಲಂಬನೆ & ಜಾಗತಿಕ ನಾಯಕತ್ವ
2013ರಲ್ಲಿ ಜರ್ಮನಿಯ ಲೀಪ್ಜಿಗ್ ಎಂಬಲ್ಲಿ ಮೈತಳೆದ ಇದು ಅಂತಾರಾಷ್ಟ್ರೀಯ ಪ್ರಗತಿಪರ, ಸಾಮಾಜಿಕ, ಪ್ರಜಾತಾಂತ್ರಿಕ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳ ಮೈತ್ರಿಕೂಟವಾಗಿದೆ. ಅಮೆರಿಕದ ವಿಪಕ್ಷವಾದ ಡೆಮಾಕ್ರಾಟ್, ಬ್ರಿಟನ್ನ ಲೇಬರ್ ಪಾರ್ಟಿ ಮೊದಲಾದ ರಾಜಕೀಯ ಪಕ್ಷಗಳು ಈ ಸಂಘಟನೆಯ ಭಾಗವಾಗಿವೆ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳೂ ಕೂಡ ಇದರ ಭಾಗ ಎಂದು ಹೇಳಲಾಗುತ್ತದೆ. ಸೋಷಿಯಲ್ಸ್ಟ್ ವಿಚಾರಧಾರೆ ಹೊಂದಿರುವ ಆದರೆ, ಪ್ರಜಾತಂತ್ರ ವ್ಯವಸ್ಥೆಯ ಮೇಲೆ ನಂಬಿಕೆ ಹೊಂದಿರುವ ಸಂಘಟನೆಗಳು ಈ ಅಲಾಯನ್ಸ್ನ ಭಾಗವಾಗಬಹುದು ಎಂದೆನ್ನಲಾಗುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ