ಮನೆಗೆ ಮಾರಿ ಅಂದ್ರಾ ಜ್ಯೋತಿಷಿ? ಬೇಸರದಿಂದ ಮದುವೆಯಾಗಿ 8 ತಿಂಗಳಿಗೆ ಆತ್ಮಹತ್ಯೆಗೆ ಶರಣಾದ ಮಹಿಳೆ

ಡೆಹ್ರಾಡೂನ್‌ನಲ್ಲಿ ಮದುವೆಯಾದ ಎಂಟು ತಿಂಗಳಿಗೆ ಶಿಕ್ಷಕಿ ಸೃಷ್ಟಿ ಕಂದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರದಕ್ಷಿಣೆ ಕಿರುಕುಳ ಹಾಗೂ ಜ್ಯೋತಿಷಿಯ 'ಅಪಶಕುನ' ಮಾತುಗಳಿಂದ ನಿರಂತರ ಮಾನಸಿಕ ಹಿಂಸೆಗೆ ಒಳಗಾಗಿದ್ದರು. ಸಣ್ಣ ಘಟನೆಗಳಿಗೂ ಆಕೆಯನ್ನು ಹೊಣೆಗಾರರನ್ನಾಗಿ ಮಾಡಿ, ಸಾವಿಗೆ ತಳ್ಳಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪತಿ ಸೇರಿ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮೂಢನಂಬಿಕೆಗಳು ಹೇಗೆ ಅಮೂಲ್ಯ ಜೀವ ಬಲಿ ತೆಗೆದುಕೊಳ್ಳುತ್ತವೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ.

ಮನೆಗೆ ಮಾರಿ ಅಂದ್ರಾ ಜ್ಯೋತಿಷಿ? ಬೇಸರದಿಂದ ಮದುವೆಯಾಗಿ 8 ತಿಂಗಳಿಗೆ ಆತ್ಮಹತ್ಯೆಗೆ ಶರಣಾದ ಮಹಿಳೆ
ಮದುವೆ

Updated on: Jul 31, 2026 | 10:39 AM

ಡೆಹ್ರಾಡೂನ್, ಜುಲೈ 31: ವಿವಾಹವಾಗಿ ಕೇವಲ ಎಂಟು ತಿಂಗಳಲ್ಲೇ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ಡೆಹ್ರಾಡೂನ್‌ನ ದೋಯಿವಾಲಾದಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ವರದಕ್ಷಿಣೆ ಕಿರುಕುಳ(Dowry) ಮತ್ತು ಮೂಢನಂಬಿಕೆಯ ಆಧಾರದ ಮೇಲೆ ನಿರಂತರ ಮಾನಸಿಕ ಹಿಂಸೆ ನೀಡಿದ್ದರಿಂದಲೇ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅವರ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಸಾಯುವ ಮುನ್ನ ಸೃಷ್ಟಿ ಕಂದರಿ, ತಮ್ಮ ತಾಯಿಗೆ ಭಾವನಾತ್ಮಕ ವೀಡಿಯೊ ಸಂದೇಶವೊಂದನ್ನು ಕಳುಹಿಸಿದ್ದು, ಕ್ಷಮಿಸಿ ಅಮ್ಮಾ, ಇನ್ನು ಮುಂದೆ ಈ ಕಿರುಕುಳ ಸಹಿಸಿಕೊಳ್ಳಲು ನನ್ನಿಂದ ಸಾಧ್ಯವಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ. ಸೃಷ್ಟಿ ಕಂದರಿ ಅವರು ನವೆಂಬರ್ 2025 ರಲ್ಲಿ ಹರ್ರಾವಾಳ ಮೂಲದ ಸರ್ಕಾರಿ ನೌಕರ ಸೌರಭ್ ರಾಟೂರಿ ಎಂಬುವವರನ್ನು ಮದುವೆಯಾಗಿದ್ದರು.

ಜುಲೈ 28 ಮತ್ತು 29 ರಂದು ಸೃಷ್ಟಿ ಫೋನ್ ಕರೆ ಸ್ವೀಕರಿಸದಿದ್ದಾಗ ಗರ್ವಾಲ್‌ನ ಶ್ರೀನಗರದಲ್ಲಿದ್ದ ಕುಟುಂಬಸ್ಥರು ಸಂಶಯಗೊಂಡು ಪರಿಚಯಸ್ಥರನ್ನು ಕಳುಹಿಸಿದಾಗ ಸಾವಿನ ವಿಷಯ ಬೆಳಕಿಗೆ ಬಂದಿದೆ. ಅತ್ತೆ-ಮಾವಂದಿರು ಸೃಷ್ಟಿಯ ಸಾವು ಮತ್ತು ಕೃತ್ಯದ ಕುರಿತು ತಮಗೆ ಯಾವುದೇ ಮಾಹಿತಿ ನೀಡದೆ ಮುಚ್ಚಿಟ್ಟಿದ್ದರು ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಮದುವೆಯಾದ ಮೂರು ತಿಂಗಳಿಗೆ ಸೃಷ್ಟಿಯ ಮಾವನಿಗೆ ಹೃದಯಾಘಾತವಾಗಿತ್ತು. ಆ ವೇಳೆ ಪೂಜೆ ಮಾಡಿಸಿದ್ದ ಒಬ್ಬ ಜ್ಯೋತಿಷಿ ಹೊಸ ವಧು ಮನೆಗೆ ಬಂದ ಮೇಲೆಯೇ ಈ ದುರದೃಷ್ಟ ಪ್ರಾರಂಭವಾಗಿದೆ ಎಂದು ಹೇಳಿದ್ದನು. ಅಂದಿನಿಂದ ಆಕೆಯನ್ನು ಅಪಶಕುನ ಎಂದು ಕರೆಯಲಾಗುತ್ತಿತ್ತು. ಮನೆಯಲ್ಲಿ ಯಾವುದೇ ಸಣ್ಣ ಅಹಿತಕರ ಘಟನೆ ನಡೆದರೂ ಆಕೆಯನ್ನೇ ಹೊಣೆಗಾರರನ್ನಾಗಿ ಮಾಡಿ ಮಾನಸಿಕ ಹಿಂಸೆ ನೀಡಲಾಗುತ್ತಿತ್ತು.

ಮತ್ತಷ್ಟು ಓದಿ: ಸರ್ಕಾರಿ ನೌಕರನೇ ಬೇಕೆಂದು ಮದುವೆ ಆಗುವ ಯುವತಿಯರೇ ಜೋಕೆ: ಪತಿಯ ವರದಕ್ಷಿಣೆ ಟಾರ್ಚರ್​​ಗೆ ನಾಲೆಗೆ ಹಾರಿದ ಮಹಿಳೆ

ಇತ್ತೀಚೆಗೆ ಆಕೆಯ ಮಾವ ನಿಧನರಾದಾಗ, ಕುಟುಂಬದ ಮಾನಸಿಕ ಕಿರುಕುಳ ತೀವ್ರಗೊಂಡು ಆಕೆಯನ್ನು ಸಾವಿನ ಅಂಚಿಗೆ ತಳ್ಳಿದೆ. ಮೃತಳ ಕುಟುಂಬಸ್ಥರು ನೀಡಿದ ದೂರಿನನ್ವಯ ದೋಯಿವಾಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪತಿ ಸೌರಭ್ ರಾಟೂರಿ, ಅತ್ತೆ ಪರ್ವೀಣಾ ದೇವಿ ಹಾಗೂ ಅತ್ತಿಗೆ ಚಾರು ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 80(2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಮರಣೋತ್ತರ ಪರೀಕ್ಷೆಯ ವರದಿ, ವಿಧಿವಿಜ್ಞಾನ ಸಾಕ್ಷ್ಯಗಳು ಮತ್ತು ಸೃಷ್ಟಿ ಕಳುಹಿಸಿದ ಕೊನೆಯ ವೀಡಿಯೊ ಆಧಾರದ ಮೇಲೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಡೆಹ್ರಾಡೂನ್ ಸಿಒ (CO) ವಂದನಾ ತಿಳಿಸಿದ್ದಾರೆ.

ಹೊಸ ಭಾರತೀಯ ನ್ಯಾಯ ಸಂಹಿತೆಯಡಿ (BNS), ಮದುವೆಯಾದ 7 ವರ್ಷಗಳ ಒಳಗೆ ವಧು ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾದರೆ ಅಥವಾ ವರದಕ್ಷಿಣೆ ಕಿರುಕುಳದಿಂದ ಮೃತಪಟ್ಟರೆ ಅದನ್ನು ಗಂಭೀರ ಅಪರಾಧವೆಂದು ಪರಿಗಣಿಸಿ ಜಾಮೀನು ರಹಿತ ಪ್ರಕರಣ ದಾಖಲಿಸಲಾಗುತ್ತದೆ. ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ಅಂಧಶ್ರದ್ಧೆ ಹಾಗೂ ಮೂಢನಂಬಿಕೆಗಳು ಹೇಗೆ ಒಬ್ಬ ಶಿಕ್ಷಿತ ಹಾಗೂ ಸ್ವಾವಲಂಬಿ ಮಹಿಳೆಯ ಪ್ರಾಣವನ್ನೇ ಬಲಿ ಪಡೆಯಬಲ್ಲವು ಎಂಬುದಕ್ಕೆ ಈ ಭೀಕರ ಘಟನೆ ಉದಾಹರಣೆಯಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us