ಐಆರ್‌ಸಿಟಿಸಿ ಹಗರಣ; ಲಾಲು ಯಾದವ್ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಲು ದೆಹಲಿ ಕೋರ್ಟ್ ಒಪ್ಪಿಗೆ
ಐಆರ್‌ಸಿಟಿಸಿ ಹೋಟೆಲ್‌ಗಳ ಗುತ್ತಿಗೆ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಪತ್ನಿ ರಾಬ್ರಿ ದೇವಿ, ಮಗ ತೇಜಸ್ವಿ ಪ್ರಸಾದ್ ಯಾದವ್ ಸೇರಿದಂತೆ ಒಟ್ಟು 9 ಆರೋಪಿಗಳ ವಿರುದ್ಧ ಅಧಿಕೃತವಾಗಿ ದೋಷಾರೋಪ ರೂಪಿಸಲು ದೆಹಲಿಯ ರೌಸ್ ಅವೆನ್ಯೂ ವಿಶೇಷ ನ್ಯಾಯಾಲಯ ಆದೇಶಿಸಿದೆ. ದೆಹಲಿ ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರು ತೀರ್ಪು ನೀಡುತ್ತಾ, ಆರೋಪಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲವಾದ ಅನುಮಾನವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿ, ಸೆಪ್ಟೆಂಬರ್ 10: ಐಆರ್‌ಸಿಟಿಸಿ ಹೋಟೆಲ್‌ಗಳ ಗುತ್ತಿಗೆ ನೀಡಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್, ಅವರ ಪತ್ನಿ ರಾಬ್ರಿ ದೇವಿ ಹಾಗೂ ಮಗ ತೇಜಸ್ವಿ ಯಾದವ್ ಸೇರಿದಂತೆ ಒಟ್ಟು 9 ಜನರ ವಿರುದ್ಧ ಅಧಿಕೃತವಾಗಿ ಆರೋಪ ರೂಪಿಸಲು ದೆಹಲಿಯ ವಿಶೇಷ ನ್ಯಾಯಾಲಯ ಇಂದು ಹಸಿರು ನಿಶಾನೆ ನೀಡಿದೆ. ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರು ತಮ್ಮ ಮೌಖಿಕ ವೀಕ್ಷಣೆಯಲ್ಲಿ, ಲಾಲು ಪ್ರಸಾದ್ ಯಾದವ್ ಅವರು ರೈಲ್ವೇ ಸಚಿವರಾಗಿದ್ದ ಅವಧಿಯಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಮತ್ತು ಅಪರಾಧದ ಆದಾಯದ ಬಲವಾದ ಶಂಕೆ ಇದೆ. ಪಾಟ್ನಾದಲ್ಲಿರುವ ಕಲುಷಿತ ಆಸ್ತಿಯನ್ನು ರಾಬ್ರಿ ದೇವಿ ಮತ್ತು ತೇಜಸ್ವಿ ಯಾದವ್ ಇನ್ನೂ ಅನುಭವಿಸುತ್ತಿದ್ದಾರೆ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.
ಇದು ‘ರಾಜಕೀಯ ಸೇಡಿನ ತನಿಖೆ’ ಎಂಬ ರಕ್ಷಣಾ ವಕೀಲರ ವಾದವನ್ನು ತಿರಸ್ಕರಿಸಿದ ಕೋರ್ಟ್, ತನಿಖೆಯ ಸ್ವರೂಪ ಮತ್ತು ಸಮಯವು ಅಂತಹ ತೀರ್ಮಾನಕ್ಕೆ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ವಿಚಾರಣೆ ಎದುರಿಸಲಿರುವ 9 ಆರೋಪಿಗಳೆಂದರೆ, ಲಾಲು ಪ್ರಸಾದ್ ಯಾದವ್, ರಾಬ್ರಿ ದೇವಿ, ತೇಜಸ್ವಿ ಯಾದವ್, ಲಾಲು ಅವರ ಆಪ್ತ ಪ್ರೇಮ್ ಚಂದ್ ಗುಪ್ತಾ, ಅವರ ಪತ್ನಿ ಸರಳಾ ಗುಪ್ತಾ, ‘ಸುಜಾತಾ ಹೋಟೆಲ್ಸ್’ ನಿರ್ದೇಶಕರಾದ ವಿನಯ್ ಕೊಚ್ಚರ್ ಮತ್ತು ವಿಜಯ್ ಕೊಚ್ಚರ್ ಹಾಗೂ ಸಂಸ್ಥೆಗಳಾದ ‘ಲಾರಾ ಪ್ರಾಜೆಕ್ಟ್ಸ್’ ಮತ್ತು ‘ಸುಜಾತಾ ಹೋಟೆಲ್ಸ್’ ವಿರುದ್ಧ ತನಿಖೆಗೆ ಅನುಮತಿ ಸಿಕ್ಕಿದೆ.
ಇದನ್ನೂ ಓದಿ: ಬಿಹಾರದಲ್ಲಿ ಲಾಲುಪ್ರಸಾದ್ ಮಗ ತೇಜ್ ಪ್ರತಾಪ್ ಯಾದವ್ ಬಂಧನ; ರಹಸ್ಯ ಸ್ಥಳಕ್ಕೆ ಶಿಫ್ಟ್?
ಖುಲಾಸೆಗೊಂಡ 7 ಆರೋಪಿಗಳು:
ಲಾಲು ಪ್ರಸಾದ್ ಯಾದವ್ ಅವರ ಅಳಿಯ ರಾಹುಲ್ ಯಾದವ್, ಗೌರವ್ ಗುಪ್ತಾ, ನಾಥ್ ಮಲ್ ಕಾಂಕಾರಿಯಾ, ವಿಜಯ್ ತ್ರಿಪಾಠಿ, ದೇವಕಿ ನಂದನ್ ತುಳಸ್ಯಾನ್, ರಾಜೀವ್ ರೇಲನ್ ಮತ್ತು ‘ಅಭಿಷೇಕ್ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಗಳನ್ನು ವಿಚಾರಣೆಯಿಂದ ಖುಲಾಸೆಗೊಳಿಸಲಾಗಿದೆ.
ಲಾಲು ಯಾದವ್ ಕುಟುಂಬದ ಮೇಲಿರುವ ಪ್ರಮುಖ ಆರೋಪ:
2004ರಿಂದ 2009ರ ಅವಧಿಯಲ್ಲಿ ಲಾಲು ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದಾಗ, ರಾಂಚಿ ಮತ್ತು ಪುರಿಯಲ್ಲಿದ್ದ ಬಿಎನ್‌ಆರ್ ಹೋಟೆಲ್‌ಗಳ ನಿರ್ವಹಣಾ ಗುತ್ತಿಗೆಯನ್ನು ‘ಸುಜಾತಾ ಹೋಟೆಲ್ಸ್’ಗೆ ನಿಯಮಗಳನ್ನು ಉಲ್ಲಂಘಿಸಿ ನೀಡಲಾಗಿತ್ತು. ಅದರ ಬದಲಿಗೆ ಪಾಟ್ನಾದಲ್ಲಿರುವ ಕೋಟ್ಯಂತರ ರೂ. ಮೌಲ್ಯದ ಬೆಲೆಬಾಳುವ ಜಮೀನನ್ನು ಮಾರುಕಟ್ಟೆ ದರಕ್ಕಿಂತ ಅತ್ಯಂತ ಅಗ್ಗದ ಬೆಲೆಗೆ ಲಾಲು ಕುಟುಂಬಕ್ಕೆ ನಿಕಟವಾಗಿದ್ದ ಸಂಸ್ಥೆಗೆ ವರ್ಗಾಯಿಸಲಾಗಿತ್ತು ಎಂಬ ಆರೋಪ ಲಾಲು ಪ್ರಸಾದ್ ಯಾದವ್ ಮೇಲಿದೆ.
ಇದನ್ನೂ ಓದಿ: ಮೇವು ಹಗರಣದಲ್ಲಿ ಲಾಲು ಯಾದವ್‌ಗೆ ರಿಲೀಫ್: ಜಾಮೀನು ರದ್ದು ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿ ವಜಾ
ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಪ್ರಕಾರ, ಪ್ರೇಮ್ ಚಂದ್ ಗುಪ್ತಾರ ಪತ್ನಿ ಸರಳಾ ಗುಪ್ತಾಗೆ ಸೇರಿದ ಬೇನಾಮಿ ಕಂಪನಿಯ ಮೂಲಕ ಆಸ್ತಿಯನ್ನು ವರ್ಗಾಯಿಸಲಾಯಿತು. ನಂತರ, ಅತ್ಯಂತ ನಾಮಮಾತ್ರದ ಬೆಲೆಗೆ ಷೇರುಗಳನ್ನು ಖರೀದಿಸುವ ಮೂಲಕ ಆ ಕಂಪನಿ ಹಾಗೂ ಪಾಟ್ನಾದ ಜಮೀನನ್ನು ರಾಬ್ರಿ ದೇವಿ ಮತ್ತು ತೇಜಸ್ವಿ ಯಾದವ್ ತಮ್ಮ ಪೂರ್ಣ ನಿಯಂತ್ರಣಕ್ಕೆ ಪಡೆದುಕೊಂಡರು.
ಈ ಪ್ರಕರಣದಲ್ಲಿ ಜುಲೈ 2018ರಲ್ಲಿ ಸಿಬಿಐ ಎಫ್‌ಐಆರ್ ಆಧಾರದ ಮೇಲೆ ಇಡಿ ತನ್ನ ತನಿಖೆಯನ್ನು ನಡೆಸಿತ್ತು. ಇದೀಗ ಪ್ರಕರಣವು ವಿಚಾರಣಾ ಹಂತಕ್ಕೆ ತಲುಪಿದ್ದು, ಅಕ್ಟೋಬರ್ 3ರಂದು ಲಾಲು ಪ್ರಸಾದ್ ಯಾದವ್ ಕುಟುಂಬವು ನ್ಯಾಯಾಲಯಕ್ಕೆ ಹಾಜರಾಗಿ ಅಧಿಕೃತವಾಗಿ ದೋಷಾರೋಪಣೆ ಸ್ವೀಕರಿಸಬೇಕಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




