
ನವದೆಹಲಿ, ಜೂನ್ 13: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆಯನ್ನು ಮತ್ತೊಮ್ಮೆ ಪ್ರಶ್ನಿಸುವಂತಹ ಅಮಾನವೀಯ ಘಟನೆಯೊಂದು ನಡೆದಿದೆ. ದೆಹಲಿಯ ತ್ರಿಲೋಕಪುರಿ ಪ್ರದೇಶದಲ್ಲಿ 70 ವರ್ಷದ ಕಣ್ಣು ಕಾಣದ ವೃದ್ಧೆಯೊಬ್ಬರ ಮೇಲೆ ಭೀಕರವಾಗಿ ಹಲ್ಲೆ ನಡೆಸಿ, ಅತ್ಯಾಚಾರಕ್ಕೆ (Delhi Crime News) ಯತ್ನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯು ಮಯೂರ್ ವಿಹಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸ್ಥಳೀಯ ನಿವಾಸಿಗಳ ಪ್ರಕಾರ, ದೃಷ್ಟಿ ದೋಷ ಹಾಗೂ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ವೃದ್ಧೆ ಕಳೆದ ಸುಮಾರು 35 ವರ್ಷಗಳಿಂದ ಇದೇ ಪ್ರದೇಶದ ಬೀದಿಗಳಲ್ಲಿ ವಾಸಿಸುತ್ತಿದ್ದರು. ಸ್ಥಳೀಯರೇ ಇವರಿಗೆ ನಿಯಮಿತವಾಗಿ ಆಹಾರ ಮತ್ತು ಬಟ್ಟೆಗಳನ್ನು ನೀಡಿ ನೋಡಿಕೊಳ್ಳುತ್ತಿದ್ದರು. ಗುರುವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ. ವೃದ್ಧೆಯು ಮನೆಯ ಹೊರಗಿದ್ದಾಗ ಬಂದ ಅಪರಿಚಿತ ವ್ಯಕ್ತಿಯೊಬ್ಬ ಅವರ ಮೇಲೆ ಮುಗಿಬಿದ್ದಿದ್ದಾನೆ. ಈ ವೇಳೆ ವೃದ್ಧೆ ಆತನನ್ನು ತಳ್ಳಲು ಯತ್ನಿಸಿದಾಗ, ಆಕ್ರೋಶಗೊಂಡ ಆರೋಪಿ ಇಟ್ಟಿಗೆಯಿಂದ ಅವರ ತಲೆ ಮತ್ತು ಮುಖದ ಭಾಗಕ್ಕೆ ಭೀಕರವಾಗಿ ಜಜ್ಜಿದ್ದಾನೆ. ಇದರಿಂದ ವೃದ್ಧೆ ತೀವ್ರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಪೊಲೀಸ್ ಮೂಲಗಳ ಪ್ರಕಾರ, ವೃದ್ಧೆ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಆರೋಪಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಇಡೀ ಕೃತ್ಯವು ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿಯು ವೃದ್ಧೆಯ ಮೇಲೆ ಹಲ್ಲೆ ನಡೆಸುತ್ತಿರುವುದು ಮತ್ತು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ ಎಂದು ಹೇಳಲಾಗಿದೆ. ಗಾಯಗೊಂಡಿದ್ದ ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಆರೋಪಿಯ ಪತ್ತೆಗಾಗಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ